ನಳಿನ್ ಎರಡೂವರೆ-ಮೂರು ಲಕ್ಷ ಅಂತರದಲ್ಲಿ ಗೆಲ್ತಾರೆ ಎಂದು ಬರೆದಾಗ ನನಗೆ ಹುಚ್ಚು ಎಂದಿದ್ದರು!!
ಭರ್ತಿ ಒಂದು ತಿಂಗಳು ಐದು ದಿನಗಳ ಮೊದಲು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆದಿತ್ತು. ಆವತ್ತು ಸಂಜೆ ನಾನು ತುಳುನಾಡು ನ್ಯೂಸ್ ಗೆ ಅಂಕಣ ಬರೆದಿದ್ದೆ. ನನ್ನ ಹೆಡ್ಡಿಂಗ್ ಏನಿತ್ತು ಅಂದರೆ ಎರಡೂವರೆಯಿಂದ ಮೂರು ಲಕ್ಷ ಅಂತರದಲ್ಲಿ ಸೋಲಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿಗರು ಮಾನಸಿಕವಾಗಿ ತಯಾರಾಗಿ ಎನ್ನುವುದೇ ಆಗಿತ್ತು. ಆವತ್ತು ಆ ಅಂಕಣವನ್ನು ಓದಿದವರು ಅಥವಾ ಹೆಡ್ಡಿಂಗ್ ಅನ್ನು ನೋಡಿದವರು ನನಗೆ ಹುಚ್ಚು ಎಂದೇ ಅಂದುಕೊಂಡಿದ್ದರು.
ಕೆಲವು ಹಿತೈಷಿಗಳಂತೂ ನೀವು ಬರೆದದ್ದು ಸಾಧ್ಯವೇ ಇಲ್ಲ ಎಂದು ಹೇಳಿಕೊಂಡಿದ್ದರು. ಅಷ್ಟು ದೊಡ್ಡ ಅಂತರದಲ್ಲಿ ಗೆಲ್ಲಲು ನಳಿನ್ ಕುಮಾರ್ ಕಟೀಲ್ ಅವರಿಗೆ ಸಾಧ್ಯವೇ ಇಲ್ಲ ಎಂದೇ ಹೇಳಿದ್ರು. ಆದರೆ ನಾನು ಅಂಕಣವನ್ನು ಊಹೆ ಮಾಡಿ ಬರೆದಿದ್ದಲ್ಲ. ಅಲ್ಲಿ ವಿಶ್ಲೇಷಣೆ ಇತ್ತು. ಯಾಕೆ ಮಿಥುನ್ ರೈ ಬಹಳ ಹೀನಾಯವಾಗಿ ಸೋಲುತ್ತಾರೆ ಎನ್ನುವುದಕ್ಕೆ ನನ್ನದೇ ಆಗಿರುವ ತರ್ಕಗಳಿದ್ದವು. ಇನ್ನು ಹಿರಿಯ ಕಾಂಗ್ರೆಸ್ಸಿಗರು ಹೇಗೆ ಬಾವಿಯ ಆಳವನ್ನು ನೋಡಲು ಮಿಥುನ್ ರೈಯನ್ನು ಬಳಸಿದ್ದರು ಎನ್ನುವುದರ ಬಗ್ಗೆ ವಾದ ಇತ್ತು. ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರು ಹೇಳಿದ ಹಾಗೆ ನಾನು ಕೂಡ ಮಿಥುನ್ ರೈ ಅವರನ್ನು ರಾಜಕೀಯ ಎಂಬ ವಿಶಾಲ ಸಾಗರದ ಬಚ್ಚಾ ಎಂದೇ ಹೇಳುತ್ತೇನೆ. ಮಿಥುನ್ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಿರಬಹುದು. ಆದರೆ ಅವರು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದ ತಕ್ಷಣ ಒಂದು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎನ್ನುವುದು ಸಾಧ್ಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಹಣಬಲ, ತೋಳ್ಬಲದಿಂದ ಗೆಲ್ಲಲು ಆಗುವುದಿಲ್ಲ. ಆದರೆ ಕಾಂಗ್ರೆಸ್ಸಿಗರಿಗೆ ದಕ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲು ಆಗಲ್ಲ ಎನ್ನುವುದು ಮೊದಲೇ ಗೊತ್ತಿದ್ದ ಕಾರಣ ಖರ್ಚು ಮಾಡಲು ಒಬ್ಬ ವ್ಯಕ್ತಿ ಬೇಕಿತ್ತು. ಮಿಥುನ್ ರೈ ಮೂಡಬಿದ್ರೆಯಲ್ಲಿ ವಿಧಾನಸಭಾ ಚುನಾವಣೆಗೆ ಟಿಕೆಟ್ ಸಿಕ್ಕಿಲ್ಲ ಎಂದು ಬೇಸರದಲ್ಲಿ ಇದ್ದರು. ಅವರನ್ನು ದೆಹಲಿಗೆ ಕರೆದುಕೊಂಡು ಹೋಗಿ ತಲೆ ಸವರಿ ಲೋಕಸಭೆಯಲ್ಲಿ ಟಿಕೆಟ್ ಕೊಡಿಸಿ ಸಮಾಧಾನ ಮಾಡಲಾಯಿತು. ಮಿಥುನ್ ಧಂಡಿಯಲ್ಲಿ ಹಣ ಸುರಿದರು. ಇತಿಹಾಸದಲ್ಲಿ ಯಾವತ್ತೂ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಲದಷ್ಟು ಅಂತರದಲ್ಲಿ ಸೋತರು.
ಹಾಗಾದರೆ ನಳಿನ್ ತಮ್ಮ ಸ್ವ ಇಮೇಜ್ ನಲ್ಲಿ ಅಷ್ಟು ಮತಗಳನ್ನು ಪಡೆದರು ಎಂದು ಹೇಳಲು ನಾನು ತಯಾರಿಲ್ಲ. ಮೋದಿಯ ಸುನಾಮಿಯ ಎದುರು ರಾಹುಲ್ ಗಾಂಧಿಯೇ ಅಮೇಠಿಯಲ್ಲಿ ಗೆಲ್ಲಲು ಆಗಿಲ್ಲ ಎಂದ ಮೇಲೆ ಮಿಥುನ್ ಯಾವ ಲೆಕ್ಕ? ನಳಿನ್ ಗೆ ಇಷ್ಟು ಬೃಹತ್ ಅಂತರದ ಗೆಲುವು ಸಿಗುವಲ್ಲಿ ಎಪ್ಪತ್ತು ಶೇಕಡಾ ಮೋದಿಯ ಪ್ರಭಾವ ಇದೆ. ಉಳಿದ ಮೂವತ್ತರಲ್ಲಿ ಹತ್ತು ಶೇಕಡಾ ಯಾವುದೇ ಭ್ರಷ್ಟಾಚಾರ ಮಾಡದೇ ಕೈ ಬಾಯಿ ಕ್ಲೀನ್ ಇಟ್ಟುಕೊಂಡ ಇಮೇಜ್ ಗೆ ಜನರ ಒಲಿದಿದ್ದಾರೆ. ಇನ್ನು ಹತ್ತು ಶೇಕಡಾ ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ ತಂದ ಹದಿನಾರು ಸಾವಿರ ಕೋಟಿ ಅನುದಾನದ ಛಾಯೆ ಇದೆ. ಇನ್ನು ಹತ್ತು ಶೇಕಡಾ ಯಾವುದೋ ಅವ್ಯಕ್ತ ಶಕ್ತಿ ನಳಿನ್ ಅವರನ್ನು ನಿರಂತರ ರಕ್ಷಿಸುತ್ತಾ ಇದೆ. ಇದೆಲ್ಲಾ ಸೇರಿದ ಕಾರಣ ನಳಿನ್ ಕುಮಾರ್ ಕಟೀಲ್ ಎನ್ನುವ ಶ್ರಮಜೀವಿ ಮೂರನೇ ಬಾರಿ ಸಂಸತ್ತಿನಲ್ಲಿ ಕುಳಿತುಕೊಳ್ಳಲಿದ್ದಾರೆ. ಹಾಗಾದರೆ ನಳಿನ್ ಅವರಿಗೆ ವಿರೋಧ ಇರಲಿಲ್ವಾ? ಟಿಕೆಟ್ ಆಕಾಂಕ್ಷಿಗಳಾಗಿದ್ದ ಕೆಲವರು ತಮ್ಮ ಬೆಂಬಲಿಗರ ಮೂಲಕ ಹರಡಿಸುತ್ತಿದ್ದ ಸುದ್ದಿ ಮತ್ತು ವೈಯಕ್ತಿಕ ಹೊಟ್ಟೆಕಿಚ್ಚಿನಿಂದ ನಳಿನ್ ವಿರುದ್ಧ ನಡೆದ ಸಂಚನ್ನೇ ನೋಡಿದವರು ನಳಿನ್ ಈ ಬಾರಿ ಗೆದ್ದರೂ ಸಣ್ಣ ಅಂತರದಲ್ಲಿ ಎಂದೇ ಅಂದುಕೊಂಡಿದ್ದರು. ಆದರೆ 13 ಲಕ್ಷಕ್ಕಿಂತಲೂ ಹೆಚ್ಚು ಮತ ಚಲಾವಣೆಯಾಗಿರುವ ಸಂದರ್ಭದಲ್ಲಿ ಬೆರಳೆಣಿಕೆಯ ಷಡ್ಯಂತ್ರ ಎಲ್ಲಿ ನಿಲ್ಲುವುದು. ಅದರಲ್ಲಿಯೂ ಈ ಪರಿ ಸುನಾಮಿ ಬೀಸುತ್ತಿರುವಾಗ!
Leave A Reply