ವೈದ್ಯರಿಗೂ, ಕಾರ್ ಮೆಕ್ಯಾನಿಕಲ್ ಗೂ ವ್ಯತ್ಯಾಸ ಗೊತ್ತಿಲ್ಲದೇ ಹೊಡೆಯುತ್ತಾರೆ!!
ನನಗೆ ವೈದ್ಯರ ಮೇಲೆ ಹಲ್ಲೆ ಮಾಡುತ್ತಿರುವ ಸಂಸ್ಕೃತಿ ಕಂಡು ಆಶ್ಚರ್ಯವಾಗುತ್ತಿದೆ. ವೈದ್ಯರನ್ನು ಯಾಕೆ ಹೊಡೆಯುತ್ತಾರೆ? ವೈದ್ಯರನ್ನು ಹೊಡೆಯುವುದರಿಂದ ಆಗುವ ಸಾರ್ಥಕತೆ ಏನು? ಯಾವುದೂ ಅರ್ಥವಾಗುವುದಿಲ್ಲ. ಒಂದು ರಸ್ತೆಯನ್ನು ಒಬ್ಬ ಗುತ್ತಿಗೆದಾರ ಕಳಪೆಯಾಗಿ ಮಾಡಿಕೊಡುತ್ತಾನೆ ಎಂದು ಇಟ್ಟುಕೊಳ್ಳೋಣ. ಅದರಿಂದ ವರ್ಷದೊಳಗೆ ಹೊಂಡಗುಂಡಿಗಳು ಉದ್ಭವವಾಗುತ್ತವೆ ಎಂದೇ ಅಂದುಕೊಳ್ಳೋಣ. ಅದರಲ್ಲಿ ಸಂಚರಿಸುವ ಒಬ್ಬ ಸವಾರ ಅದೇ ಹೊಂಡಗುಂಡಿಯಲ್ಲಿ ಬಿದ್ದು ಕೈಕಾಲು ಮುರಿದುಕೊಂಡರೆ ಆತನ ಮನೆಯವರು, ಗೆಳೆಯರು ಸೀದಾ ಗುತ್ತಿಗೆದಾರರನ್ನು ಹುಡುಕಿಕೊಂಡು ಹೋಗಿ ಕಪಾಲಕ್ಕೆ ನಾಲ್ಕು ಬಾರಿಸಿ ಬರುತ್ತಾರಾ? ಇಲ್ಲವಲ್ಲ. ಹಾಗಾದ್ರೆ ಆಸ್ಪತ್ರೆಯಲ್ಲಿ ಯಾಕೆ ವೈದ್ಯರಿಗೆ ಹೊಡೆಯುವುದು?
ನಾನು ನೂರಕ್ಕೆ ನೂರು ಎಲ್ಲಾ ವೈದ್ಯರು ಒಳ್ಳೆಯವರು ಅಥವಾ ನಾರಾಯಣೋ ಹರಿ ಎಂದು ಹೇಳಲು ಬಯಸುವುದಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಇದ್ದಂತೆ ಇಲ್ಲಿಯೂ ನಿರ್ಲಕ್ಷ್ಯ ವೈದ್ಯರು ಹಿಂದೆ ಇದ್ದರು, ಈಗ ಇದ್ದಾರೆ, ಹಾಗೆ ಮುಂದೇನೂ ಇರುತ್ತಾರೆ. ಹಾಗಂತ ಅವರನ್ನು ತೆಗೆದು ನಾಲ್ಕು ಬಾರಿಸುವುದಲ್ಲ. ಬೇಕಾದರೆ ನಿಮಗೆ ಒಂದು ಉದಾಹರಣೆ ಕೊಡುತ್ತೇನೆ. ಒಬ್ಬ ವೈದ್ಯ ಮತ್ತು ಒಬ್ಬ ಕಾರ್ ಮೆಕ್ಯಾನಿಕಲ್ ನಡುವೆ ಚರ್ಚೆ ನಡೆಯುತ್ತದೆ. ಆಗ ಮೆಕ್ಯಾನಿಕಲ್ ಹೇಳುತ್ತಾನೆ. ನಾನು ಮತ್ತು ನೀವು ಇಬ್ಬರು ರಿಪೇರಿ ಮಾಡುವವರೇ. ನಾನು ಕಾರಿನ ಹೃದಯದಂತಿರುವ ಇಂಜಿನ್ ರಿಪೇರಿ ಮಾಡಿದರೆ ನೀವು ಮನುಷ್ಯನ ಇಂಜಿನ್ ನಂತಿರುವ ಹೃದಯವನ್ನು ರಿಪೇರಿ ಮಾಡುತ್ತೀರಿ. ಆದರೂ ನನಗೆ ಒಂದು ರಿಪೇರಿಗೆ ಸಾವಿರದಲ್ಲಿ ಕೊಟ್ಟರೆ ನಿಮಗೆ ಲಕ್ಷದಲ್ಲಿ ಸಿಗುತ್ತದೆ. ಯಾಕೆ? ಅದಕ್ಕೆ ವೈದ್ಯ ಹೇಳಿದನಂತೆ. ನೀನು ಬಂದ್ ಆಗಿರುವ ಹೃದಯವನ್ನು ರಿಪೇರಿ ಮಾಡುತ್ತಿಯಾ. ನಾನು ರನ್ನಿಂಗ್ ನಲ್ಲಿರುವ ಇಂಜಿನ್ ರಿಪೇರಿ ಮಾಡುತ್ತೇನೆ. ನೀನು ಅಷ್ಟಿದ್ದರೆ ರನ್ನಿಂಗ್ ನಲ್ಲಿರುವ ಇಂಜಿನ್ ರಿಪೇರಿ ಮಾಡಿ ತೋರಿಸು ಎಂದರಂತೆ. ಅದೇ ವ್ಯತ್ಯಾಸ. ಒಬ್ಬ ವೈದ್ಯ ಡಬ್ ಡಬ್ ಎಂದು ಬಡಿದುಕೊಳ್ಳುವ ಹೃದಯಕ್ಕೆ ಕೈ ಹಾಕುತ್ತಾನೆ. ಆ ಹೃದಯಕ್ಕೆ ಏನೋ ಕಾಯಿಲೆ ಬಂದಿರುತ್ತದೆ. ನಿಜ ಹೇಳಬೇಕೆಂದರೆ ಈಗ ಉದ್ಭವವಾಗುತ್ತಿರುವ ಹೆಚ್ಚಿನ ಕಾಯಿಲೆಗಳಿಗೆ ಯಾವ ಚಿಕಿತ್ಸೆ ಕೊಟ್ಟರೆ ವಾಸಿಯಾಗುತ್ತದೆ ಎನ್ನುವುದೇ ಹಲವು ಬಾರಿ ವೈದ್ಯರ ತಲೆಗೆ ಹತ್ತುವುದಿಲ್ಲ. ಅದು ಇದು ಕೊಟ್ಟು ಗುಣವಾದರೆ ಬಚಾವ್, ಆಗಲಿಲ್ಲವೋ “ಪೋನಾಗಾ ಸರಿ ಇತ್ತೇ, ಡಾಕ್ಟ್ರು ದಾಲಾ ಮಾಲ್ತೆರ್ ಪಂಡ್ ಗೊತ್ತಿಜಿ, ಹುಶಾರಿಜ್ಜಿ” ಎಂದು ಹೇಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ವೈದ್ಯರು ತಾವು ಎಂಬಿಬಿಎಸ್ ಕಲಿಯುವಾಗ ಓದಿದ ಕಾಯಿಲೆ ಮತ್ತು ಅದರ ಚಿಕಿತ್ಸೆ ಮತ್ತು ನಿನ್ನೆ, ಮೊನ್ನೆ ಮತ್ತು ನಾಳೆ ಹುಟ್ಟಿಕೊಳ್ಳಲಿರುವ ಕಾಯಿಲೆ ಮತ್ತು ಚಿಕಿತ್ಸೆಗೆ ಅಜಗಜಾಂತರ ವ್ಯತ್ಯಾಸವಿದೆ.
ಡಾಕ್ಟರೇ, ಏನು ಅಂತ ಗೊತ್ತಾಗುತ್ತಿಲ್ಲ, ಲೈಟ್ ಆಗಿ ಕೆಮ್ಮು, ರಾತ್ರಿ ತಲೆ ಸುತ್ತಿಬರುತ್ತದೆ, ಬೆಳಿಗ್ಗೆ ಜ್ವರ, ಗಂಟಲಲ್ಲಿ ಪಸೆ, ಕಾಲಿನಲ್ಲಿ ಸಣ್ಣಗೆ ನಡುಕ ಎಂದು ನಾವು ವೈದ್ಯರ ಬಳಿ ಹೇಳಿ ಇದು ನಾಳೆಯೇ ಗುಣವಾಗಬೇಕು ಎಂದು ಬಯಸುತ್ತೇವೆ. ಆದರೆ ವೈದ್ಯರು ಅದು ಮಲೇರಿಯಾವೋ, ಡೆಂಗ್ಯೂ, ಜಾಂಡೀಸ್, ಮಂಗನ ಕಾಯಿಲೆ, ಬಾವಲಿ ರೋಗ ಅಥವಾ ಇನ್ನೊಂದೋ, ಮತ್ತೊಂದೋ ಎಂದು ಪರೀಕ್ಷಿಸಿ ಮದ್ದು ಕೊಡುವುದು ಬೇಡ್ವಾ? ನಿಮ್ಮನ್ನು ಸರಿಯಾಗಿ ಪರೀಕ್ಷಿಸಬೇಕು. ಎಡ್ಮಿಟ್ ಆಗುತ್ತೀರಾ ಎಂದು ವೈದ್ಯರು ಹೇಳಿದರೆ ನೀವು ಆಚೆ ಬಂದು ಫೋನಿನಲ್ಲಿ ” ಮಾರಾಯ್ತಿ, ಸಣ್ಣ ಕೆಮ್ಮು ಎಂದು ಹೇಳಿದ್ದು, ಈ ಡಾಕ್ಟರು ಎಡ್ಮಿಟ್ ಆಗಲು ಹೇಳಿದ್ದಾರೆ ಕಣೇ, ಏನು ಮಾಡುವುದು” ಎಂದು ಹೆಂಡತಿಗೆ ಕೇಳುತ್ತೀರಿ. ಅತ್ತಲಿಂದ ಆಕೆ “ನನಗೆ ಗೊತ್ತಿಲ್ಲವಾ, ಪಕ್ಕದ ಬೀದಿಯಲ್ಲಿ ಇನ್ನೊಬ್ಬರು ಇದ್ದಾರೆ, ಅಲ್ಲಿ ಹೋಗಿ ಬನ್ನಿ” ಎಂದು ಹೇಳಿದರೆ ನೀವು ಮುಂದಿನದ್ದಕ್ಕೆ ಶೀಫ್ಟ್ ಆಗುತ್ತಿರಿ. ಅಲ್ಲಿ ವೈದ್ಯರು ಈ ಕೆಂಪು ಗುಳಿಗೆ ಕೊಡುತ್ತೇನೆ, ಎರಡು ದಿನ ಬಿಟ್ಟು ಬನ್ನಿ ಎನ್ನುತ್ತಾರೆ. ನಿಮಗೆ ಆ ಮದ್ದಿನಲ್ಲಿ ಕಾಯಿಲೆ ಗುಣವಾದರೆ ವೈದ್ಯರಿಗೆ ನೀವು ಕೊಟ್ಟ ನೂರೈವತ್ತು ರೂಪಾಯಿ ಬಗ್ಗೆ ಮೌನವಾಗುತ್ತೀರಿ. ಗುಣವಾಗದಿದ್ದರೆ ” ಅವನದ್ದು ಎಂತಹ ಔಷಧ ಮಾರಾಯ್ರೆ, ಗುಣವೇ ಆಗಿಲ್ಲ, ನೂರೈವತ್ತು ವೇಸ್ಟ್” ಎನ್ನುತ್ತೀರಿ. ಅದೇ ನಿಮಗೆ ಹೆಚ್ಚು ಕಡಿಮೆ ಆಗಿ ನೀವು ಗೊಟಕ್ ಎಂದರೆ ನಿಮ್ಮ ಮನೆಯವರು ಸೇರಿ ಆ ವೈದ್ಯನ ತಿಥಿ ಮಾಡಿಬಿಡುತ್ತಾರೆ. ಈಗ ಹೇಳಿ, ಸರಿಯಾಗಿ ಪರೀಕ್ಷೆ ಮಾಡೋಣ. ಒಂದು ದಿನ ಎಡ್ಮಿಟ್ ಆಗಿ ಎಂದು ಹೇಳಿದ ಮೊದಲ ವೈದ್ಯನ ಮಾತು ಕೇಳದ್ದು ನಿಮ್ಮ ತಪ್ಪಾ? ಅಥವಾ ನಿಮ್ಮ ಒತ್ತಾಯಕ್ಕೆ ಯವುದಾದರೂ ಮಾತ್ರೆ ಕೊಟ್ಟು ಸಾಗ ಹಾಕಿದ್ದ ಎರಡನೇ ವೈದ್ಯನ ತಪ್ಪಾ?!
Leave A Reply