ಒಂದು ಹುಡುಗಿ, ಐದು ಹುಡುಗರು ಮತ್ತು ಒಂದು ವಿಡಿಯೋ!!
ವಿಶೇಷ ಎಂದರೆ ಅವಳ ಅತ್ಯಾಚಾರದ ವಿಡಿಯೋ ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿದ್ದ ದಿನ ಅವಳು ಕ್ಲಾಸಿಗೆ ಬಂದಿದ್ದಾಳೆ. ಕ್ಲಾಸಿನಲ್ಲಿ ಮೇಸ್ಟ್ರು ಹೇಳುತ್ತಿದ್ದ ಪಾಠ ಕೇಳಿದ್ದಾಳೆ. ಕಾಲೇಜಿನ ಎಲ್ಲಾ ವಿದ್ಯಾರ್ಥಿ ಸಮೂಹ ಗುಸುಗುಸು ಮಾತನಾಡುತ್ತಾ ವಿಡಿಯೋ ನೋಡುತ್ತಿದ್ದರೆ ಈಕೆಗೆ ಅದ್ಯಾವುದೋ ಗೊತ್ತೆ ಆಗಿರಲಿಲ್ಲ. ನಂತರ ಪ್ರಿನ್ಸಿಪಾಲ್ ಕ್ಲಾಸಿಗೆ ಬಂದು ಅವಳನ್ನು ಕರೆದುಕೊಂಡು ಹೋಗಿದ್ದಾರೆ. ಅದರ ನಂತರವೇ ತನ್ನ ಹಿಂದೆ ಇಷ್ಟು ದೊಡ್ಡ ಕಥೆ ನಡೆಯುತ್ತಿತ್ತು ಎನ್ನುವುದು ಅವಳ ಗಮನಕ್ಕೆ ಬಂದಿದೆ. ನಂತರ ಪೊಲೀಸರು ತಮ್ಮ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ತನ್ನ ಮೇಲೆ ಆವತ್ತು ನಡೆದದ್ದು ಸಾಮೂಹಿಕ ಅತ್ಯಾಚಾರ ಎಂದು ಆ ಯುವತಿ ಹೇಳಿದ್ದಾಳೆ. ಅಲ್ಲಿಗೆ ಮೂರ್ನಾಕು ತಿಂಗಳ ಬಳಿಕ ವಿಡಿಯೋ ಒಂದು ವೈರಲ್ ಆಗುವ ಮೂಲಕ ಒಟ್ಟಿಗೆ ಆರು ಕುಟುಂಬಗಳನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ.
ನಾವು ಸಣ್ಣವರಿದ್ದಾಗ ಬೇಸಿಗೆ ರಜೆಯ ಸಮಯದಲ್ಲಿ ಯಾರದ್ದೋ ಮಾವಿನ ಹಣ್ಣಿನ ಮರಕ್ಕೆ ಕಲ್ಲು ಹೊಡೆದು ಮಾವಿನ ಕಾಯಿಗಳು ಕೆಳಗೆ ಬಿದ್ದರೆ ಹೆಕ್ಕಿಕೊಂಡು ಓಡಿ ಹೋಗುತ್ತಿದ್ದೆವು. ಆ ಮಾವಿನ ಮರದವರು ನಮ್ಮ ತಂದೆಗೋ, ತಾಯಿಗೋ ದೂರು ಕೊಟ್ಟರೆ ಆಗ ಪೊರಕೆ, ಬೆತ್ತದ ಸೇವೆ ನಮ್ಮ ಮೇಲೆ ನಡೆಯುತ್ತಿತ್ತು. ನಮ್ಮ ಪಾಲಿಗೆ ಮಾವಿನ ಮರಕ್ಕೆ ಕಲ್ಲು ಹೊಡೆಯುವುದೇ ಆಗ ದೊಡ್ಡ ಅಪರಾಧ. ಅದರ ನಂತರ ಒಂದಿಷ್ಟು ದೊಡ್ಡವರಾದ ನಂತರ ಕ್ರಿಕೆಟ್ ಆಡಲು ಶುರು ಮಾಡಿಕೊಂಡಾಗ ನಾವು ಹೊಡೆದ ಚೆಂಡು ಬೇರೆಯವರ ಮನೆಯ ಕಿಟಕಿಯ ಗಾಜಿಗೆ ತಾಗಿ ಅದು ಒಡೆದು ಹೋದರೆ ನಾವು ಗಲ್ಲು ಶಿಕ್ಷೆಗೆ ಸಮಾನಾದ ತಪ್ಪು ಮಾಡಿದ್ದೇವೊ ಎನ್ನುವಷ್ಟು ಹೆದರಿ ಅಡಗಿ ಕುಳಿತುಕೊಳ್ಳುತ್ತಿದ್ದೆವು. ನಂತರ ಒಂದಿಷ್ಟು ದೊಡ್ಡವರಾದ ಬಳಿಕ ಕದ್ದು ಮುಚ್ಚಿ ಎಳೆದ ಒಂದು ಸಿಗರೇಟು, ಒಂದು ಬಿಯರ್ ನಮ್ಮ ಪಾಲಿಗೆ ದೇಶದ್ರೋಹದಷ್ಟೇ ಸಮಾನವಾದ ತಪ್ಪಿನಂತೆ ಅನಿಸುತ್ತಿತ್ತು. ಆದರೆ ಕಾಲ ಬದಲಾಗಿದೆ ಎಂದು ಗೊತ್ತಾಗುವುದು ಪುತ್ತೂರಿನ ಆ ವಿಡಿಯೋ ನೋಡಿದ ಬಳಿಕ. ಪ್ರೈಮರಿ ತರಗತಿಯಲ್ಲಿ ಪಕ್ಕದಲ್ಲಿಯೇ ಸಹಪಾಠಿಯೊಬ್ಬಳು ಕುಳಿತಿದ್ದರೂ ನಾಚಿಕೊಳ್ಳುತ್ತಿರುವ ಆ ದಿನಗಳಿಗೂ, ನಂತರ ಕಾಲೇಜಿನಲ್ಲಿ ಹುಡುಗಿಯರು ಇದ್ದರೂ ಅವರನ್ನು ಹತ್ತಿರದಿಂದ ಮಾತನಾಡಿಸಿದರೆ ಯಾರಾದರೂ ನೋಡಿ ಮನೆಯಲ್ಲಿ ಹೇಳುತ್ತಾರೋ ಎಂದು ಅಂದುಕೊಳ್ಳುತ್ತಿದ್ದ ಆ ದಿನಗಳಿಗೂ ಇವತ್ತಿಗೂ ಸಾಕಷ್ಟು ಬದಲಾವಣೆ ಆಗಿದೆ ಎಂದು ಈಗ ಗೊತ್ತಾಗುತ್ತಿದೆ. ಒಂದೇ ಬಸ್ಸಿನಲ್ಲಿ ನಮ್ಮದೇ ಕ್ಲಾಸಿನ ಹುಡುಗಿ ಎದುರಿನ ಬಾಗಿಲ ಬಳಿ ನಿಂತಿದ್ದರೆ ನಾವು ಹಿಂದಿನ ಬಾಗಿಲಿನ ಬಳಿ ನಿಲ್ಲುತ್ತಿದ್ದ ಆ ದಿನಗಳು ಎಲ್ಲಿ, ಅಪ್ಪ, ಅಮ್ಮನಿಗೆ ಗೊತ್ತಿಲ್ಲದೆ ಒಂದು ಬಸ್ಸಿನಲ್ಲಿ ಅಕ್ಕಪಕ್ಕ ಕುಳಿತು ಯಾವುದೋ ಸ್ಟಾಪಿನಲ್ಲಿ ಇಳಿದು ಮರೆಯಾಗುವ ಇವತ್ತಿನ ಸಹಪಾಠಿಗಳು ಎಲ್ಲಿ ಎಂದು ಯೋಚಿಸುವಾಗ ಮನಸ್ಸು ದಿಗಿಲಾಗುತ್ತದೆ.
ಆ ಹುಡುಗಿಯೇ ಹಾಗೆ, ಅವಳ ನೆಚರ್ಸೆ ಹಾಗಂತೆ ಎಂದು ಇವತ್ತಿಗೆ ಸುದ್ದಿ ಹಬ್ಬಿಸುವವರು ಎಷ್ಟೋ ಜನರಿರಬಹುದು. ಆದರೆ ಅವಳ ಮೈಮೇಲೆ ಸವಾರಿ ಮಾಡಿ ಅದನ್ನು ಚಿತ್ರೀಕರಿಸಿ ಅವಳನ್ನು ಬ್ಲಾಕ್ ಮೇಲ್ ಮಾಡಿದ್ದರಲ್ಲ ಆ ಹುಡುಗರು ಅವರದ್ದು ಎಂತಹ ಪುರುಷಾರ್ಥ. ಆ ವಿಡಿಯೋ ಮಾಡಿದ್ದೇ ಬೇರೆ ಕ್ಲಾಸ್ ಮೇಟ್ ಗಳ ಮುಂದೆ ದರ್ಪ ಮೆರೆಯಲು ಎನ್ನಲು ಬೇರೆ ಸಾಕ್ಷಿ ಬೇಕಾ? ಹಾಗಾದರೆ ಕಾಲ ಅಷ್ಟು ಹಾಳಾಗಿ ಹೋಯ್ತಾ? ಮಾವಿನ ಮರಕ್ಕೆ ಕಲ್ಲು ಹೊಡೆಯುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದ ನಮ್ಮ ಕಾಲದಿಂದ ಒಂದು ಹುಡುಗಿಯನ್ನು ಅನಾಯಾಸವಾಗಿ ಕಾರಿನಲ್ಲಿ ಹಾಕಿ ನಿರ್ಜನ ಪ್ರದೇಶದಲ್ಲಿ ಕಾಡುಪ್ರಾಣಿಗಳು ನಾಚುವಂತೆ ವಿಕೃತಿ ಮೆರೆಯಲು ಹಿಂದೆ ಮುಂದೆ ನೋಡದ ಈಗಿನ ತಲೆಮಾರು ಎತ್ತ ಸಾಗುತ್ತಿದೆ. ನಮ್ಮ ಮಕ್ಕಳು ಬೇರೆಯವರ ಮಕ್ಕಳ ಎದುರು ಸಣ್ಣವರಾಗಬಾರದು ಎಂದು ತಂದೆಯೊಬ್ಬ ಹಗಲು ರಾತ್ರಿ ದುಡಿದು ತಾನು ಒಂದು ಸಾವಿರದ ಐನೂರು ರೂಪಾಯಿಯ ಜಿಯೋ ಹ್ಯಾಂಡ್ ಸೆಟ್ ಫೋನ್ ಬಳಸಿದರೂ ಮಗನಿಗೆ, ಮಗಳಿಗೆ ಅಂಡ್ರಾಯ್ಡ್ ಫೋನ್ ಅನ್ನೇ ತೆಗೆಸಿಕೊಡುತ್ತಾನೆ. ತಾಯಿ ಮಗ, ಮಗಳು ತಿಂಗಳಿಗೆ ಐನೂರು ರೂಪಾಯಿ ಕರೆನ್ಸಿಗೆ ಬೇಕು ಎಂದರೂ ತಂದೆಗೆ ಗೊತ್ತಾಗದೇ ಕದ್ದು ಮುಚ್ಚಿ ಕೊಟ್ಟು ಮೊಬೈಲಿನಲ್ಲಿ ಬರುವ ನೋಟ್ಸ್ ಓದಿ ದೊಡ್ಡ ವಿದ್ಯಾವಂತನಾಗು ಎಂದು ಹರಸುತ್ತಾಳೆ. ಆದರೆ ಇವತ್ತಿನ ಸಮಾಜದ ಮುಂದಿನ ಪೀಳಿಗೆ ಮಾಡುತ್ತಿರುವುದೇನು? ನಾವು ಈಗ ತಕ್ಷಣ ಮೊದಲು ಮಾಡಬೇಕಾಗಿರುವುದು ನಮ್ಮ ಮಕ್ಕಳು ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಹೋಗುತ್ತಿದ್ದಾರೋ ಅಥವಾ ಯಾವುದಾದರೂ ಸಂದಿಗೊಂದಿಯಲ್ಲಿ ನುಸುಳುತಿದ್ದಾರೋ ಎನ್ನುವುದನ್ನು. ಅಷ್ಟಾದರೂ ಸಮಯ ನಾವು ನಮ್ಮ ಮಕ್ಕಳಿಗಾಗಿ ಎತ್ತಿಡುತ್ತಿದ್ದೇವಾ ಅಥವಾ ಅವರನ್ನು ಹುಟ್ಟಿಸಿದ ನಂತರ ಅವರ ಪಾಡಿಗೆ ಬಿಟ್ಟು ಮತ್ತೊಂದು ವಿಡಿಯೋ ಬಂದ ನಂತರ ತಲೆ ಮೇಲೆ ಕೈ ಹಿಡಿದು ಕುಳಿತುಕೊಂಡು ಬಿಡ್ತೇವಾ. ಆಯ್ಕೆ ನಮ್ಮ ಮುಂದೆನೆ ಇದೆ ಪೋಷಕರೇ!
Leave A Reply