ಅಮರನಾಥ ಯಾತ್ರೆ ನಮ್ಮ ಹಕ್ಕು ಉಮರ್ ಅಬ್ದುಲ್ಲಾ ಅವರೇ!!
ಅದ್ಯಾವನೋ ಬುರ್ಹಾನ್ ವಾನಿಯಂತೆ. ಕಾಶ್ಮೀರದಲ್ಲಿ ಯುವಕರ ತಲೆಯಲ್ಲಿ ವಿಷ ಬೀಜ ಬಿತ್ತಿ ಓಡಾಡ್ತಿದ್ದ. ಕಳೆದ ವರ್ಷ ಇದೇ ಸಮಯಕ್ಕೆ ಅವನ ಗ್ರಹಚಾರ ಕೆಟ್ಟಿತ್ತು. ನಮ್ಮ ಯೋಧರ ಮೇಲೆ ಫೈರಿಂಗ್ ಮಾಡಲು ಗನ್ ತೆಗೆದಿದ್ದ. ನಮ್ಮ ವೀರ ಸೈನಿಕರು ಅವನನ್ನು ಶಾಶ್ವತವಾಗಿ ಮಲಗಿಸಿಬಿಟ್ರು. ಈಗ ಅವನ ತಿಥಿ ಹತ್ತಿರ ಬರುತ್ತಿದೆಯಲ್ಲ, ದೇಶದ್ರೋಹವೆಂಬ ಅಪರೂಪದ ಬ್ಲಡ್ ಗ್ರೂಪ್ ಹೊಂದಿರುವ ಕಾಶ್ಮೀರದ ಕೆಲವು ರಾಜಕಾರಣಿಗಳು ಅವನ ಸಾವಿಗೆ ಮೊಸಳೆ ಕಣ್ಣೀರು ಸುರಿಸಿ ತಮ್ಮ ಪೈಜಾಮ ಒದ್ದೆ ಮಾಡಿಕೊಳ್ಳುತ್ತಿದ್ದಾರೆ. ಪ್ರತ್ಯೇಕತಾವಾದಿಗಳು ಕಾಶ್ಮೀರ್ ಬಂದ್ ಗೆ ಕರೆಕೊಟ್ಟಿದ್ದಾರೆ. ಈ ನಡುವೆ ಹತ್ತಿರದಲ್ಲಿಯೇ ಅಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದ ಉಮರ್ ಅಬ್ದುಲ್ಲಾ ಮತ್ತು ಅವರ ತಂದೆ ಫಾರೂಕ್ ಅಬ್ದುಲ್ಲಾ ತಮ್ಮದೇ ಮನೆಮಗ ಹೋಗಿ ಒಂದು ವರ್ಷ ಆದವರಂತೆ ಗೋಳು ಎಂದು ಅಳುತ್ತಿದ್ದಾರೆ. ಅಷ್ಟೇ ಆಗಿದ್ದರೆ ಅದು ಅವರ ಕರ್ಮ ಎಂದು ಸುಮ್ಮನೆ ಬಿಡಬಹುದಿತ್ತು. ಆದರೆ ಉಮರ್ ಅಲ್ಲಿನ ಬಹುಸಂಖ್ಯಾತ ಮುಸ್ಲಿಮರನ್ನು ಖುಷಿಪಡಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.
ಹಿಂದೂಗಳು ಕೈಗೊಳ್ಳುವ ಅಮರನಾಥ ಯಾತ್ರೆಯಿಂದ ಕಾಶ್ಮೀರಿಗಳಿಗೆ ಕಷ್ಟವಾಗುತ್ತದೆ ಎಂದಿದ್ದಾರೆ. ಈ ಮೂಲಕ ಕಾಶ್ಮೀರ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಇದು ಅಪ್ಪಟ ಒಲೈಕೆ ರಾಜಕಾರಣ ಎನ್ನುವುದು ಕಾಶ್ಮೀರದ ಮುಸಲ್ಮಾನರಿಗೆ ಕೂಡ ಗೊತ್ತು. ಹೇಗೆ ಎನ್ನುವುದನ್ನು ವಿವರಿಸುತ್ತೇನೆ.
ಮೊದಲನೇಯದಾಗಿ ಅಮರನಾಥ ಯಾತ್ರೆ 42 ದಿನಗಳದ್ದು. ಆ ಒಂದು ಯಾತ್ರೆಗಾಗಿಯೇ ಕಾಶ್ಮೀರದ ವ್ಯಾಪಾರಿಗಳು ಕಾದು ಕುಳಿತುಕೊಳ್ಳುತ್ತಾರೆ. ಅದು ಅವರಿಗೆ ಸೀಸನ್. ಇಡೀ ವರ್ಷದ ಗಳಿಕೆಯನ್ನು ಅವರು ಹೆಚ್ಚುಕಡಿಮೆ ಇದೇ ಹೊತ್ತಿನಲ್ಲಿಯೇ ಗಳಿಸಿ ಇಡುತ್ತಾರೆ. ನಿಮಗೆ ಗೊತ್ತಿರುವಂತೆ ಕಾಶ್ಮೀರದ ಮುಖ್ಯ ಉದ್ಯೋಗ ಪ್ರವಾಸೋದ್ಯಮ. ಅದು ಬಂದಾದರೆ ಅಲ್ಲಿನ ಜನ ಗಂಟು ಮೂಟೆ ಕಟ್ಟಿ ಹೊರಡಬೇಕು. ಅವರಿಗೆ ಅಮರನಾಥ ಯಾತ್ರೆಗೆ ಬರುವ ಹಿಂದೂ ಭಕ್ತರೇ ಮುಖ್ಯ ಆದಾಯದ ಸೆಲೆ. ಈಗಾಗಲೇ 42 ದಿನಗಳ ಪ್ರವಾಸದ ಒಟ್ಟು ಅವಧಿಯಲ್ಲಿ ಏಳು ದಿನಗಳು ಕಳೆದು ಹೋಗಿದೆ. ಏಳು ದಿನಗಳಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬಂದಿದ್ದಾರೆ. ಇನ್ನೂ 35 ದಿನಗಳು ಉಳಿದಿವೆ. ಅದೆಷ್ಟೂ ಲಕ್ಷ ಪ್ರವಾಸಿಗರು ಬರಬಹುದು ಎನ್ನುವುದನ್ನು ನೀವು ಲೆಕ್ಕ ಹಾಕಬಹುದು. ಭಾರತದ ಸ್ವರ್ಗ ಕಾಶ್ಮೀರದಲ್ಲಿ ಒಂದು ವೇಳೆ ಉಗ್ರಗಾಮಿಗಳ ಉಪಟಳ ಇಲ್ಲದಿದ್ದಲ್ಲಿ ಅದು ಭಾರತದ ಸಿಂಗಾಪುರವಾಗುತ್ತಿತ್ತು. ಎಲ್ಲಿಯೂ ಇಲ್ಲದ ಅಪರೂಪದ ನಿಸರ್ಗ ಸೌಂದರ್ಯ ಅಲ್ಲಿದೆ. ಇದರ ಎದುರು ಸಿಂಗಾಪುರ ಕೂಡ ಚಪ್ಪೆ. ಆದರೆ ಭಯೋತ್ಪಾದಕರ ಕಿರಿಕಿರಿಯಿಂದ ಕಾಶ್ಮೀರದ ವ್ಯಾಪಾರಿಗಳು ಸಿಕ್ಕಿದಷ್ಟೇ ಪುಣ್ಯ ಎಂದು ಅಂದುಕೊಂಡು ಅಮರನಾಥ ಯಾತ್ರೆಯ ಸಮಯಕ್ಕಾಗಿ ಕಾದು ಕುಳಿತುಕೊಂಡಿರುತ್ತಾರೆ. ಈಗ ಅದನ್ನೇ ಕಾಶ್ಮೀರದ ಜನರಿಗೆ ಕಷ್ಟ ಎನ್ನುವ ಮೂಲಕ ಉಮರ್ ವ್ಯಾಪಾರಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ನಾನು ಉಮರ್ ಅಬ್ದುಲ್ಲಾ ಹೇಳಿಕೆಯನ್ನು ಕೇವಲ ವ್ಯವಹಾರಿಕ ದೃಷ್ಟಿಯಿಂದ ಮಾತ್ರ ನೋಡುವುದಿಲ್ಲ. ಇಲ್ಲಿ ಕಾಶ್ಮೀರಿ ಮುಸಲ್ಮಾನರನ್ನು ಒಲೈಸುವ ಉದ್ದೇಶವಿದೆ.
ಹೇಳಿಕೇಳಿ ಕಾಶ್ಮೀರದಲ್ಲಿ ಯಾವಾಗ ಉಗ್ರರ ಚಟುವಟಿಕೆ ನಡೆದು ರಾಜ್ಯ ಬಂದ್ ಆಗುತ್ತೆ ಎಂದು ನಿಖರವಾಗಿ ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಸೈನಿಕರ ಮೇಲೆ ಕಲ್ಲು ಬಿಸಾಡುವ ಮತಾಂಧರ ನಡೆ ನೋಡುವಾಗ ಉಮರ್ ಗೆ ಕಷ್ಟವಾಗುವುದಿಲ್ಲ. ಅದೇ ಹಿಂದೂಗಳು ಅಮರನಾಥ, ವೈಷ್ಣವದೇವಿ ಮಂದಿರಕ್ಕೆ ಹೋದರೆ ಇವರಿಗೆ ಕಷ್ಟವಾಗುತ್ತದೆ ಎನ್ನುವ ಹೇಳಿಕೆ. ಉಮರ್ ಹೇಳಿಕೆ ಕೇವಲ ಮತಬ್ಯಾಂಕ್ ರಾಜಕೀಯ ಎನ್ನುವುದನ್ನು ಅಲ್ಲಿನವರು ಅರ್ಥ ಮಾಡಿಕೊಳ್ಳುತ್ತಾರೆ. ಈಗಾಗಲೇ ಕಣಿವೆ ರಾಜ್ಯದ ರಾಜ್ಯಪಾಲರು ಉಮರ್ ಹೇಳಿಕೆಯಲ್ಲಿ ಅರ್ಥವೇ ಇಲ್ಲ ಎಂದಿದ್ದಾರೆ. ಆದರೆ ಏನು ಮಾಡುವುದು, ಬಂಗ್ಲೆಯ ಒಳಗೆ ಬೆಚ್ಚಗೆ ಮಲಗಿ ಹೇಳಿಕೆ ಕೊಡುವವರಿಗೆ ಹೊರಗೆ ಚಳಿಯಲ್ಲಿ ಕುದುರೆಗಳನ್ನು ನಿಲ್ಲಿಸಿ ಯಾರಾದರೂ ಪ್ರವಾಸಿ ಬಂದು ಹತ್ತು ರೂಪಾಯಿ ಕೊಡುತ್ತಾರಾ ಎನ್ನುವ ಆಸೆಗಣ್ಣಿನಿಂದ ನೋಡುವ ಕಾಶ್ಮೀರದ ಶ್ರಮಿಕರು ಎಲ್ಲಿ ಕಾಣಬೇಕು??
Leave A Reply