ಯಡಿಯೂರಪ್ಪ ಈ ಬಾರಿಯೂ 100 ಕೋಟಿ ಪ್ರತಿ ವರ್ಷ ಕೊಡ್ತಾರಾ!!
ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ಮಂಗಳೂರಿಗೆ ಏನು ಲಾಭ ಎನ್ನುವ ಪ್ರಶ್ನೆ ಉದ್ಭವಿಸಿದರೆ ಅದಕ್ಕೆ ಉತ್ತರ ನೂರು ಕೋಟಿ ಸಿಗಬಹುದು ಎನ್ನುವುದು. ಅದು ಹೇಗೆ? ಬಿಎಸ್ ವೈ ಕಳೆದ ಬಾರಿ ಮುಖ್ಯಮಂತ್ರಿಯಾಗಿ ಮೂರು ವರ್ಷ ಇದ್ದರಲ್ಲ, ಆಗ ಅವರು ಎರಡು ವರ್ಷ ತಲಾ ನೂರು ಕೋಟಿ ರೂಪಾಯಿ ಕೊಟ್ಟಿದ್ದಾರೆ. ಮಂಗಳೂರಿನ ಹೆಚ್ಚಿನ ರಸ್ತೆಗಳು ಕಾಂಕ್ರೀಟ್ ಎಂದರೆ ಏನು ಎನ್ನುವುದನ್ನು ನೋಡಿದ್ದು ಅದೇ ಅನುದಾನದಿಂದ. ಅಂತಹುದೊಂದು ಪ್ರೀತಿ ಯಡಿಯೂರಪ್ಪನವರಿಗೆ ಮಂಗಳೂರಿನ ಮೇಲೆ ಇತ್ತು. ಅಂತಹ ಪ್ರೀತಿ ಸ್ವತ: ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಡಿವಿ ಸದಾನಂದ ಗೌಡರಿಗೂ ಇರಲಿಲ್ಲ ಎನ್ನುವುದು ನಮಗೆ ನೆನಪಿದೆ. ಡಿವಿ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿಗರಿಗೆ ಸ್ವಂತ ಕಚೇರಿ ಕಟ್ಟಲು ಜಾಗದ ವ್ಯವಸ್ಥೆ ಮಾಡಿದರೆ ವಿನ: ನನ್ನದೇ ಜಿಲ್ಲೆ, ಈ ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆಗೆ ನೂರು ಕೋಟಿ ವಿಶೇಷ ಅನುದಾನ ಕೋಡೋಣ ಎಂದು ಯೋಚಿಸಿರಲಿಲ್ಲ. ಆ ವಿಷಯದಲ್ಲಿ ನಾನು ಯಡಿಯೂರಪ್ಪನವರನ್ನು ಮೆಚ್ಚಲೇಬೇಕು. ಬಿಎಸ್ ವೈಯವರಿಗೆ ಆ ಪ್ರೀತಿ ಈ ಬಾರಿ ಇನ್ನಷ್ಟು ಜಾಸ್ತಿಯಾಗಬೇಕು. ಏಕೆಂದರೆ ಇಡೀ ಜಿಲ್ಲೆಯನ್ನು ಸಾರಿಸಿ ಒರೆಸಿ ಬಿಜೆಪಿಯ ಕೈಯಲ್ಲಿ ಇಲ್ಲಿನ ಜನ ಕೊಟ್ಟುಬಿಟ್ಟಿದ್ದಾರೆ. ಸಂಸದರನ್ನು ದಾಖಲೆಯ ಮತಗಳಿಂದ ಗೆಲ್ಲಿಸಿದ್ದಾರೆ. ಈ ಬಾರಿ ಮಂಗಳೂರು ಮಹಾನಗರ ಪಾಲಿಕೆಗೆ ಯಾವಾಗ ಚುನಾವಣೆ ನಡೆದರೂ ಭಾರತೀಯ ಜನತಾ ಪಾರ್ಟಿ ಬಹುಮತದಲ್ಲಿ ಗೆಲ್ಲಲಿದೆ. ಇಷ್ಟೆಲ್ಲಾ ಇರುವಾಗ ಮಂಗಳೂರಿಗೆ ಇನ್ನೂರು ಕೋಟಿ ವಿಶೇಷ ಪ್ಯಾಕೇಜ್ ಕೊಟ್ಟರೆ ಬಚಾವ್, ಇಲ್ಲದಿದ್ದರೆ ಮುಂದಿನ ಬಾರಿ ನೋಡ್ಕೋತ್ತೀವಿ ಎಂದು ಜನ ಹೇಳಿಯಾರು. ಕೊಡಬಹುದು ಎನ್ನುವ ನಿರೀಕ್ಷೆ ಇದೆ.
ಹಾಗಂತ ನೂರು ಕೋಟಿ ಬಂದ ಕೂಡಲೇ ಏನು ಮಾಡಬೇಕು…
ಈ ಗೊಂದಲಕ್ಕೆ ಈಗಲೇ ಉತ್ತರ ಹುಡುಕಬೇಕು. ಹತ್ತು ವರ್ಷದ ಹಿಂದೆ ಯಡ್ಯೂರಪ್ಪ ನೂರು ಕೋಟಿ ಕೊಟ್ಟಾಗ ಅದು ತುಂಬಾ ದೊಡ್ಡ ಮೊತ್ತವಾಗಿ ಕಂಡಿತ್ತು. ಇದ್ದಬದ್ದ ರಸ್ತೆಯನ್ನೆಲ್ಲಾ ಕಾಂಕ್ರೀಟ್ ಮಾಡಲಾಯಿತು. ಹಾಗಂತ ರಸ್ತೆಗಳನ್ನು ಕಾಂಕ್ರೀಟ್ ಮಾಡಿದರೆ ಸಾಕಾ, ಫುಟ್ ಪಾತ್, ಒಳಚರಂಡಿ ವ್ಯವಸ್ಥೆ, ಆ ರಸ್ತೆಗಳ ನೀರಿನ ಪೈಪುಗಳ ಅವ್ಯವಸ್ಥೆ ಯಾವುದನ್ನು ಪಾಲಿಕೆಯಲ್ಲಿ ಆಡಳಿತ ಮಾಡುತ್ತಿದ್ದವರಾಗಲಿ, ಆಗಿನ ಜನಪ್ರತಿನಿಧಿಗಳಾಗಲೀ ನೋಡಲೇ ಇಲ್ಲ. ರಸ್ತೆಗೆ ಕಾಂಕ್ರೀಟ್ ಬಿತ್ತು ಎನ್ನುವ ಖುಷಿಯಲ್ಲಿಯೇ ನೂರು ಕೋಟಿ ಖರ್ಚಾಯಿತು. ಆಯಿತು, ಈಗ ಆಗಿ ಹೋದದ್ದನ್ನು ವಿಶ್ಲೇಷಿಸಿ ಪ್ರಯೋಜನವಿಲ್ಲ. ಈಗ ನೂರು ಕೋಟಿ ಬರುವಾಗ ಏನು ಮಾಡಬೇಕು ಎನ್ನುವ ಲೆಕ್ಕಾಚಾರವನ್ನು ಪಾಲಿಕೆ ವ್ಯಾಪ್ತಿಯ ಇಬ್ಬರೂ ಶಾಸಕರಾದ ಡಿ ವೇದವ್ಯಾಸ ಕಾಮತ್ ಹಾಗೂ ಡಾ|ಭರತ್ ಶೆಟ್ಟಿ ನೋಡಬೇಕು. ಈಗ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಸರಕಾರವೂ ಇಲ್ಲ. ಹಿಂದೆ ಆದರೆ ಬಿಲ್ಡರ್ ಗಳಿಗಾಗಿಯೇ ಈ ಭೂಮಿ ಮೇಲೆ ಜನ್ಮ ತಾಳಿದಂತೆ ಇದ್ದ ಮನಪಾ ಸದಸ್ಯರು ತಮ್ಮ ಬಿಲ್ಡರ್ ಗಳು ಎಲ್ಲಿ ವಸತಿ ಸಮುಚ್ಚಯ ಕಟ್ಟುತ್ತಾರೋ ಅದೇ ರಸ್ತೆಗೆ ಕಾಂಕ್ರೀಟ್ ಹಾಕಿಸಲು ಶ್ರಮಿಸುತ್ತಿದ್ದರು. ಹಿಂದಿನ ನೂರು ಕೋಟಿಯಲ್ಲಿ ಕಾಂಕ್ರೀಟ್ ಹಾಕಲ್ಪಟ್ಟ ರಸ್ತೆಗಳನ್ನು ನಂತರ ಡ್ರೈನೇಜ್ ಮತ್ತು ನೀರಿನ ಪೈಪು ದುರಸ್ತಿಗಾಗಿ ಎಷ್ಟು ಸಲ ಭರ್ತಡೇ ಕೇಕ್ ಕಟ್ ಮಾಡಿದಂತೆ ಒಡೆದಿದ್ದನ್ನು ನೀವು ನೋಡಿರಬಹುದು ಅಥವಾ ನನ್ನ ಜಾಗೃತ ಅಂಕಣದಲ್ಲಿ ಓದಿರಬಹುದು.
ಹೇಗೆ ಖರ್ಚು ಮಾಡುತ್ತಿರಿ ಎನ್ನುವುದು ಮುಖ್ಯ..
ಸರಿಯಾಗಿ ನೋಡಿದರೆ ಹತ್ತು ವರ್ಷಗಳ ಹಿಂದೆ ಬಂದಿದ್ದ ನೂರು ಕೋಟಿಯಲ್ಲಿ ಕಾಮಗಾರಿಗಳಲ್ಲೇ ಎಲ್ಲವೂ ಸರಿಯಾಗಿ ಮುಗಿದಿಲ್ಲ. ಅದಕ್ಕಾಗಿ ನಾನು ಈಗ ಏನು ಹೇಳುವುದು ಏನೆಂದರೆ ಈಗ ಬರುವ ಹಣದಿಂದ (ಬಂದಿಲ್ಲ, ಬರಬಹುದು ಎನ್ನುವ ನಿರೀಕ್ಷೆ) ನೀವು ಹತ್ತು ರಸ್ತೆಗೆ ಕಾಂಕ್ರೀಟ್ ಮಾಡಿಸುವ ಬದಲು ಐದೇ ರಸ್ತೆಗೆ ಕಾಂಕ್ರೀಟ್ ಹಾಕಿದರೂ ಪರವಾಗಿಲ್ಲ. ಕಾಮಗಾರಿ ಮಾಡುವಾಗ ರಸ್ತೆಗೆ ಕಾಂಕ್ರೀಟಿನೊಂದಿಗೆ ಡ್ರೈನೇಜ್ ಲೈನ್ ಕೂಡ ಹೊಸದಾಗಿ ನಿರ್ಮಿಸಿಬಿಡಿ. ಅದರೊಂದಿಗೆ ರಸ್ತೆಯ ಮಧ್ಯದಲ್ಲಿ ಕೆಳಭಾಗದಲ್ಲಿ ಇರುವ ನೀರಿನ ಪೈಪುಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಎರಡೂ ಕಡೆ ಹಾಕಿಸಿ, ಪೈಪು ಲೈನ್ ಹೊಸದಾಗಿರಲಿ. ಫೂಟ್ ಪಾತ್ ಕೂಡ ಆಗಿ ಹೋಗಲಿ. ಇದರಿಂದ ರಸ್ತೆ ಸಂಪೂರ್ಣವಾಗಿ ಸಿದ್ಧವಾಗುತ್ತದೆ. ಹೊಸ ಡ್ರೈನೇಜ್, ಹೊಸ ನೀರಿನ ಪೈಪು ಮತ್ತು ಫೂಟ್ ಪಾತ್ ಕಂಪ್ಲೀಟ್ ಆದರೆ ಆಗ ರಸ್ತೆಯ ಕಿರಿಕಿರಿ ಮುಂದಿನ 30-40 ವರ್ಷಕ್ಕೆ (ಕಾಮಗಾರಿ ಕಳಪೆಯಾಗದೇ ಇದ್ದರೆ) ಇರುವುದಿಲ್ಲ. ಅದರೊಂದಿಗೆ ಯಡಿಯೂಪ್ಪ ಮುಂದಿನ ಮೂರು ವರ್ಷವೂ ಸಿಎಂ ಆಗಿದ್ದು, ಮುನ್ನೂರು ಕೋಟಿ ಬಂತು ಎಂದಾದರೆ ಹಣ ಪೋಲು ಮಾಡಬೇಡಿ. ಯಾಕೆಂದರೆ ಕಂಕನಾಡಿಯಿಂದ ಮಾರ್ನಮಿಕಟ್ಟೆಯ ತನಕ ಲೈಟ್ ಕಂಬಗಳ ಹೊಸ ಅವತಾರ ನೋಡಿದರೆ ಗೊತ್ತಾಗುತ್ತದೆ, ನಮಗೆ ಹಣ ಪೋಲು ಮಾಡಲು ಚೆನ್ನಾಗಿ ಗೊತ್ತಿದೆ ಎಂದು!
Leave A Reply