ವೆಂಕಟಾಚಲಯ್ಯ ಹೇಳಿದ್ದು ನನ್ನ ಪಾಲಿನ ಅತೀ ದೊಡ್ಡ ಬಿರುದು!!
ಒಬ್ಬ ಅಧಿಕಾರಿ ನಿಧನರಾದಾಗ ಜಾತಿ, ಮತ, ರಾಜಕೀಯ ಭೇದವಿಲ್ಲದೆ ಭ್ರಷ್ಟಾಚಾರ ವಿರೋಧಿಗಳೆಲ್ಲರೂ ಸಮಾನವಾಗಿ ದು:ಖಿಸುತ್ತಿದ್ದಾರೆ ಎಂದರೆ ಅದು ಶ್ರೀ ವೆಂಕಟಾಚಲಯ್ಯ ಅವರ ಉಳಿಸಿ ಬೆಳೆಸಿಕೊಂಡು ಬಂದ ವ್ಯಕ್ತಿತ್ವವೇ ಕಾರಣ. ಲೋಕಾಯುಕ್ತದ ಹೆಸರನ್ನು ತುಂಬಾ ಜನ ಮೊದಲ ಸಲ ಕೇಳಿದ್ದು ವೆಂಕಟಾಚಲಯ್ಯ ಲೋಕಾಯುಕ್ತರಾದ ನಂತರವೇ. ಅಷ್ಟಕ್ಕೂ ಲೋಕಾಯುಕ್ತದ ಕೆಲಸ ಏನು ಎಂದು ಗೊತ್ತಾದದ್ದೇ ವೆಂಕಟಾಚಲಯ್ಯ ಅವರು ಆ ಕಚೇರಿಗೆ ಕಾಲಿಟ್ಟ ನಂತರ. ಅವರ ಕೆಲಸದ ವೇಗ ಎಷ್ಟಿತ್ತು ಎಂದರೆ ಯಾವುದೇ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹತ್ತು ರೂಪಾಯಿ ಲಂಚ ತೆಗೆದುಕೊಳ್ಳಲು ಹೆದರುವಂತಹ ವಾತಾವರಣ ಸೃಷ್ಟಿಯಾಗಿತ್ತು. ಲಂಚ ತೆಗೆದುಕೊಳ್ಳಲು ಕೈ ಮುಂದೆ ಮಾಡಿದರೆ ವೆಂಕಟಾಚಲಯ್ಯ ಹಿಡಿದುಬಿಡುತ್ತಾರೋ ಎಂದೇ ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ಢವ ಢವ ಅನಿಸುತ್ತಿತ್ತು. ವೆಂಕಟಾಚಲಯ್ಯ ಕೇವಲ ಜಿಲ್ಲಾ ಕೇಂದ್ರಗಳಿಗೆ ಮಾತ್ರ ದಾಳಿ ಮಾಡುತ್ತಿರಲಿಲ್ಲ. ಮಂಗಳೂರಿಗೆ ಬಂದರೆ ಬೆಳ್ತಂಗಡಿ, ಪುತ್ತೂರು ಪ್ರದೇಶಗಳಿಗೂ ಹೋಗುತ್ತಿದ್ದರು. ಅಲ್ಲಿಯೂ ಜನರ ಅಹವಾಲು ಕೇಳುತ್ತಿದ್ದರು.
ಸುಮಾರು 14-15 ವರ್ಷಗಳ ಹಿಂದೆ ಇರಬಹುದು, ಒಂದು ಘಟನೆ ವಿವರಿಸುತ್ತೇನೆ. ಮಂಗಳೂರಿನಲ್ಲಿ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಯವರ ಕಚೇರಿ ಇದೆ. ಲೋಕೋಪಯೋಗಿ ಇಲಾಖೆಯ ಕಟ್ಟಡದಲ್ಲಿಯೇ ಇದು ಕಾರ್ಯ ನಿರ್ವಹಿಸುತ್ತದೆ. ರಾಜ್ಯದಿಂದ ಎಲ್ಲಾ ಔಷಧಗಳು ಇಲ್ಲಿ ಬಂದು ನಂತರ ಇಲ್ಲಿಂದಲೇ ಜಿಲ್ಲೆಯ ಎಲ್ಲಾ ಕಡೆ ಸರಕಾರಿ ಆಸ್ಪತ್ರೆಗಳಿಗೆ, ಸಮುದಾಯ ಕೇಂದ್ರಗಳಿಗೆ, ಪ್ರಾರ್ಥಮಿಕ ಕೇಂದ್ರಗಳಿಗೆ ಪೂರೈಕೆಯಾಗುತ್ತದೆ. ವೆನ್ ಲಾಕ್ ಆಸ್ಪತ್ರೆ, ಲೇಡಿಗೋಶನ್ ಆಸ್ಪತ್ರೆ ಸಹಿತ ಎಲ್ಲಾ ಆಸ್ಪತ್ರೆಗಳಿಗೆ ಪೂರೈಕೆಯಾಗುವ ಔಷಧಗಳನ್ನು ಇಡಲು ಈ ಕಚೇರಿಗೆ ಅತ್ತಾವರದ ರೈಲ್ವೆ ನಿಲ್ದಾಣದ ಬಳಿ ಒಂದು ಗೋಡೌನ್ ಇದೆ. ಈ ವಿಷಯಗಳನ್ನು ಯಾಕೆ ಹೇಳುತ್ತಿದ್ದೇನೆ ಎನ್ನುವುದು ಈಗ ಗೊತ್ತಾಗುತ್ತದೆ
ವೆಂಕಟಾಚಲಯ್ಯ ಲೋಕಾಯುಕ್ತರಾದ ನಂತರ ಪ್ರಥಮ ಬಾರಿ ಮಂಗಳೂರಿಗೆ ಬಂದ ದಿನ ಅದು. ವೆಂಕಟಾಚಲಯ್ಯ ಕೆಲಸದ ಶೈಲಿ ಹೇಗಿತ್ತು ಎಂದರೆ ಅವರು ಯಾವುದೇ ವಿಷಯದ ಒಳಗೆ ಹೋಗಿ ಪರಿಶೀಲಿಸುತ್ತಾರೆ. ಹಾಗೆ ಆಸ್ಪತ್ರೆಯ ಸ್ಟಾಕ್ ಬುಕ್ ಚೆಕ್ ಮಾಡುತ್ತಾರೆ. ಎಲ್ಲಾ ಚೆಕ್ ಮಾಡಿ ಒಂದಿಷ್ಟು ಭ್ರಷ್ಟಾಚಾರದ ವಾಸನೆ ಬಂದರೆ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಸರಿಯಾಗಿ ಝಾಡಿಸುತ್ತಾರೆ. ಆವತ್ತು ಏನಾಯಿತು ಎಂದರೆ ಲೋಕಾಯುಕ್ತರು ವೆನ್ ಲಾಕ್ ಆಸ್ಪತ್ರೆಯ ಒಳಗೆ ಕಾಲಿಡುವ ಮೊದಲು ವೆನ್ ಲಾಕ್ ನವರು ತಮ್ಮಲ್ಲಿದ್ದ ಅಷ್ಟೂ ಔಷಧವನ್ನು ತೆಗೆದುಕೊಂಡು ಹೋಗಿ ತಮ್ಮದೇ ಆಸ್ಪತ್ರೆಯ ಆವರಣದಲ್ಲಿರುವ ಬಾವಿಯ ಒಳಗೆ ಬಿಸಾಡಿದ್ದರು. ಹಾಗೆ ಪಿಡ್ಲುಡಿ ಕಚೇರಿಯ ಕಟ್ಟಡದಲ್ಲಿದ್ದ ಡಿಸ್ಟಿಕ್ ಹೆಲ್ತ್ ಆಫೀಸರ್ ನವರು ಅತ್ತಾವರದ ಗೋಡೌನ್ ನಲ್ಲಿದ್ದ ಔಷಧಿಗಳನ್ನು ಮರೋಳಿಯ ಸೂರ್ಯನಾರಾಯಣ ದೇವಸ್ಥಾನದ ಬಳಿಯ ಒಂದು ಗೋಡೌನ್ ಮತ್ತು ಉರ್ವಾ-ಅಶೋಕನಗರದಲ್ಲಿರುವ ಖಾಸಗಿ ಗೋಡೌನ್ ನಲ್ಲಿ ಅಡಗಿಸಿಟ್ಟಿದ್ದರು. ನಾನು ಮೂರು ಕಡೆ ವೆಂಕಟಾಚಲಯ್ಯನವರನ್ನು ಕರೆದುಕೊಂಡು ಹೋಗಿ ತೋರಿಸಿದೆ. ಅವರು ಆವತ್ತು ಆಶ್ಚರ್ಯಪಟ್ಟಿದ್ದರು. ಜಿಲ್ಲಾ ಆರೋಗ್ಯಾಧಿಕಾರಿಗಳು ಎಷ್ಟು ಅಮಾನವೀಯ ಕೆಲಸ ಮಾಡಿದ್ದರು ಎಂದರೆ ವಿಶ್ವಸಂಸ್ಥೆಯ ಅಂಗ ಯೂನಿಸೆಫ್ ಅವರು ಬಡ ಮಕ್ಕಳಿಗಾಗಿ ಕಳುಹಿಸಿಕೊಡುವ ಪೌಷ್ಟಿಕ ಆಹಾರವನ್ನು, ರಗ್ಗುಗಳನ್ನು ಕೂಡ ಹಂಚದೆ ಹಾಗೆ ಅಡಗಿಸಿಟ್ಟಿದ್ದರು.
ವಿಷಯ ಏನೆಂದರೆ ಔಷಧ ಕಂಪೆನಿಯವರು ಕಮಿಷನ್ ಕೊಡುತ್ತಾರೆ ಎನ್ನುವ ಆಸೆಗೆ ತಮ್ಮ ಆಸ್ಪತ್ರೆಗಳಿಗೆ ಅಗತ್ಯ ಇರದಿದ್ದರೂ ವೈದ್ಯಾಧಿಕಾರಿಗಳು ತಮ್ಮಲ್ಲಿ ಬೇಡಿಕೆ ಇದೆ ಎಂದು ಔಷಧಗಳನ್ನು ತರಿಸಿಕೊಳ್ಳುತ್ತಾರೆ. ಈ ಮೂಲಕ ಆ ಕಂಪೆನಿಗಳಿಂದ ಹೇರಳ ಕಮಿಷನ್ ಪಡೆಯುತ್ತಾರೆ. ಇಲ್ಲಿ ಆ ಔಷಧಿಗಳು ಯಾವುದೇ ಉಪಯೋಗ ಇಲ್ಲದೆ ಡೇಟ್ ಬಾರ್ ಆಗುತ್ತದೆ. ಅದನ್ನು ಇವರು ಬಿಸಾಡುತ್ತಾರೆ. ಉಪಯೋಗ ಇಲ್ಲ ಎಂದು ಗೊತ್ತಿದ್ದರೂ ಕಮೀಷನ್ ಆಸೆಯಿಂದ ಮತ್ತೆ ಇಂಟೆಂಡ್ ಕಳುಹಿಸಿ ತರಿಸಿಕೊಳ್ಳುತ್ತಾರೆ. ನಿಜವಾಗಿಯೂ ಯಾವ ಔಷಧ ಹೆಚ್ಚು ಅಗತ್ಯ ಇದೆಯೋ ಅದಕ್ಕೆ ಕಮೀಷನ್ ಸಿಗದಿದ್ದರೆ ಇವರು ತರಿಸುವುದಿಲ್ಲ. ಆವತ್ತು ಸಂಜೆ ಈ ಭ್ರಹ್ಮಾಂಡ ಭ್ರಷ್ಟಾಚಾರದ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ವೆಂಕಟಾಚಲಯ್ಯ ಅವರು ಹೇಳಿದ್ದ ಒಂದು ಮಾತು ಇವತ್ತಿಗೂ ನನಗೆ ಸಿಕ್ಕಿದ ಅತೀ ದೊಡ್ಡ ಬಿರುದು ಎಂದು ಅಂದುಕೊಂಡಿದ್ದೇನೆ. “ಹನುಮಂತ ಕಾಮತ್ ಅವರಂತವರು ಪ್ರತಿ ಜಿಲ್ಲೆಗೆ ಒಬ್ಬರಾದರೂ ಇರಬೇಕು”. ಈಗ ನಮ್ಮ ಜೊತೆ ವೆಂಕಟಾಚಲಯ್ಯನವರು ಇಲ್ಲ. ಅದೇ ರೀತಿಯಲ್ಲಿ ಲೋಕಾಯುಕ್ತ ಕೂಡ ಆ ಪ್ರಮಾಣದಲ್ಲಿ ಶಕ್ತಿ ಹೊಂದಿಲ್ಲ. ಬಿಜೆಪಿ ಸರಕಾರ ಕೂಡ ಆವತ್ತು ಎರಡನೇ ಅವಧಿಗೆ ವೆಂಕಟಾಚಲಯ್ಯನವರನ್ನು ಮುಂದುವರೆಸಿರಲಿಲ್ಲ. ನಂತರ ಬಂದದ್ದು ಸಂತೋಷ್ ಹೆಗ್ಡೆ. ಉಳಿದ ಕಥೆ ನಿಮಗೆ ಗೊತ್ತೆ ಇದೆ!
Leave A Reply