ಸಿದ್ಧರಾಮಯ್ಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದೆ ಕಾಂಗ್ರೆಸ್ಸಿನ ಮೊದಲ ಮೈನಸ್!!
ಒಂದಂತೂ ನಿಜ. ಕಾಂಗ್ರೆಸ್ ಪಕ್ಷ ಮಂಗಳೂರು ಮಹಾನಗರ ಪಾಲಿಕೆಯಲ್ಲಿಯೂ ಅಧಿಕಾರ ಕಳೆದುಕೊಂಡರೆ ನಂತರ ಅದರ ಪಾಲಿಗೆ ಜಿಲ್ಲೆಯಲ್ಲಿ ಏನೂ ಉಳಿಯುವುದಿಲ್ಲ. ಆದ್ದರಿಂದ ಜನರನ್ನು ಹೇಗಾದರೂ ಮಾಡಿ ಒಲಿಸಬೇಕೆಂಬ ತುಡಿತದಿಂದ ನಿರೀಕ್ಷೆಗಿಂತ ದೊಡ್ಡ ಪ್ರಣಾಳಿಕೆ ಪುಸ್ತಕವನ್ನೇ ಜಿಲ್ಲಾ ಕಾಂಗ್ರೆಸ್ ಹೊರ ತಂದಿದೆ. ಉಡುಪಿಗೆ ಬಂದು ಕಾಪುವಿನ ರೆಸಾರ್ಟ್ ಒಂದರಲ್ಲಿ ರೆಸ್ಟ್ ಮಾಡಿದ್ದ ಸಿದ್ಧರಾಮಯ್ಯನವರ ಫ್ರೀ ಸಮಯವನ್ನು ಬಳಸಿ ಮಂಗಳೂರಿಗೆ ಕರೆಸಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮೀನು ತಿಂದು ದೇವಸ್ಥಾನಕ್ಕೆ ಹೋಗ್ತೀನಿ, ಏನಿವಾಗ? ಎಂದು ಪ್ರಶ್ನೆ ಮಾಡಿ ದಕ್ಷಿಣ ಕನ್ನಡದ ಏಳು ಕಾಂಗ್ರೆಸ್ ಶಾಸಕರನ್ನು ಫ್ರೀ ಮಾಡಿ ರೆಸ್ಟ್ ಗೆ ನೂಕಿರುವ ಸಿದ್ಧರಾಮಯ್ಯನವರಿಗೆ ಈ ಜಿಲ್ಲೆಯಲ್ಲಿ ಅತಂಹ ವರ್ಚಸ್ಸು ಇಲ್ಲ. ಅವರು ಬಂದು ಪ್ರಣಾಳಿಕೆ ಬಿಡುಗಡೆ ಮಾಡಿರುವುದರಿಂದ ಕಾಂಗ್ರೆಸ್ಸು ಕಳೆದುಕೊಂಡಿರುವುದೇ ಹೆಚ್ಚು. ಬಿಜೆಪಿ ತನ್ನ ಸ್ಥಳೀಯ ಜನಪ್ರಿಯ ಶಾಸಕರುಗಳನ್ನೇ ಬಳಸಿ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ನಾನು ಹೇಳುವುದೇನೆಂದರೆ ಕಾಂಗ್ರೆಸ್ ಆಗಲಿ ಬಿಜೆಪಿ ಆಗಲಿ ಯಾರಿಂದ ಪ್ರಣಾಳಿಕೆ ಬಿಡುಗಡೆ ಮಾಡಿದರೂ ನೀವು ನಿಮ್ಮ ಮನೆ ಬಾಗಿಲಿಗೆ ಬಂದ ಯಾವುದೇ ಪಕ್ಷದ ಅಭ್ಯರ್ಥಿಗೆ ಮೊದಲು ಕೇಳಬೇಕಾಗಿರುವ ಪ್ರಶ್ನೆಗಳನ್ನು ಮನಸ್ಸಿನಲ್ಲಿಯೇ ತಯಾರು ಮಾಡಿಟ್ಟುಕೊಳ್ಳಿ.
1) ನಮಗೆ ಕಳೆದ ಐದು ವರ್ಷಗಳಲ್ಲಿ ಪ್ರತಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ನೀವು ಗೆದ್ದ ಬಳಿಕ ಫ್ಲಾಟ್ ಗಳಿಗೆ, ದೊಡ್ಡ ದೊಡ್ಡ ವಸತಿ ಸಂಕೀರ್ಣಗಳಿಗೆ ಟ್ಯಾಂಕರ್ ಕಳುಹಿಸಿ ನೀರಿನ ಸಂಪುಗಳನ್ನು ತುಂಬಿಸಿ ಬರುತ್ತೀರಿ. ಆದರೆ ನಾವು ಮಧ್ಯಮ ವರ್ಗದವರು ವಠಾರದಲ್ಲಿ ಇರುವವರು, ಕಾಲೋನಿಗಳಲ್ಲಿ ಆಶ್ರಯ ಪಡೆದಿರುವವರು ನೀರನ್ನು ಎಲ್ಲಿ ತುಂಬಿಸಿ ಇಡುವುದು ಎಂದು ಕೇಳಿ. ಅದರ ಬದಲು ನೀರಿನ ಸಮಸ್ಯೆ ಉದ್ಭವಿಸದಂತೆ ಏನಾದರೂ ಶಾಶ್ವತ ವ್ಯವಸ್ಥೆ ಕಳೆದ ಐದು ವರ್ಷಗಳಲ್ಲಿ ಯಾಕೆ ಮಾಡಿಲ್ಲ ಎಂದು ಕೇಳಿ. 24*7 ನೀರು ಕೊಡುವ ಭರವಸೆ ಕೊಟ್ಟೆ ನಿಮ್ಮ ಕೈಯಲ್ಲಿ 308 ಕೋಟಿ ಕೊಟ್ಟಿದ್ದೇವು. ಅದನ್ನು ಏನು ಮಾಡಿದ್ದೀರಿ ಎಂದು ನಿಮ್ಮ ನಾಯಕರುಗಳಿಗೆ ಕೇಳಿ ಎಂದು ಹೇಳಿ. ಒಂದು ವೇಳೆ ಬಂದವರು ನಾವು ಬಿಜೆಪಿಯವರು, ಕಾಂಗ್ರೆಸ್ಸಿನವರು ಅಲ್ಲ ಎಂದರೆ ನೀವು ಅಧಿಕಾರಕ್ಕೆ ಬಂದರೆ ಯುಜಿಡಿಯಲ್ಲಿ ಗೋಲ್ ಮಾಲ್ ಆಗಿದೆ. ಸಿಐಡಿ ತನಿಖೆಗೆ ಕೊಡುತ್ತೇನೆ ಎಂದು ಆಗ ರೋಶನ್ ಬೇಗ್ ಹೇಳಿ ಹೋಗಿದ್ದರು. ಅವರು ಮಾಡಲಿಲ್ಲ. ನಿಮ್ಮ ನಾಯಕರ ಮೇಲೆ ಒತ್ತಡ ತಂದು ನೀವು ಮಾಡಬಹುದಾ ಎಂದು ಕೇಳಿ ನೋಡಿ.
2) ಒಳಚರಂಡಿ ವಿಷಯದ ಬಗ್ಗೆ ನಿಮ್ಮ ಮನೆಗೆ ಬಂದ ಅಭ್ಯರ್ಥಿಗೆ ಏನು ಗೊತ್ತಿದೆ ಎಂದು ಪರೀಕ್ಷಿಸಲು ನಾವು ಇವತ್ತಿಗೂ ಪಿಟ್ ನಲ್ಲಿಯೇ ಇದ್ದೇವೆ. ಆಧುನಿಕತೆ ಮುಂದೆ ಹೋಗಿದೆ. ನೀವು ಏನು ಮಾಡಲು ಸಾಧ್ಯವಿದೆ ಎಂದು ಕೇಳಿ. ಇವತ್ತಿಗೂ ವರ್ಷಕ್ಕೆ 5-6 ಖರ್ಚು ಮಾಡಿ ಸೆಲ್ ಪೋಲ್ ಬಳಸಿ ಕ್ಲೀನ್ ಮಾಡುವ ಅಗತ್ಯ ನಮಗೆ ಇರುವುದು ನಿಮಗೆ ಬೇಸರ ತರುವುದಿಲ್ಲವೇ ಎಂದು ಕೇಳಿ.
3) ಇನ್ನು ಕಾಂಕ್ರೀಟ್ ರಸ್ತೆಯ ವಿಷಯಕ್ಕೆ ಬಂದರೆ ನಮ್ಮ ಉತ್ತಮ ಕಾಂಕ್ರೀಟ್ ರಸ್ತೆಗಳನ್ನು ಭರ್ತಡೇ ಕೇಕ್ ತರಹ ಕಟ್ ಮಾಡಿ ನಮ್ಮ ತೆರಿಗೆಯ ನಾಲ್ಕು ಕೋಟಿ ಪೋಲು ಮಾಡಿದ್ದಿರಲ್ಲ. ಅದರ ಬದಲಿಗೆ ರಸ್ತೆ ನಿರ್ಮಿಸುವಾಗಲೇ ಅದರ ಎರಡೂ ಬದಿ ಕುಡಿಯುವ ನೀರಿನ ಪೈಪುಗಳನ್ನು ನೆಲದ ಕೆಳಗೆ ಅಳವಡಿಸಿದರೆ ಆಗ ನೀರು ಸೋರುವುದು ತಪ್ಪುತ್ತಿತ್ತಲ್ವಾ ಎಂದು ಕೇಳಿ. ಹೀಗೆ ನೀವು ಕೇಳಬೇಕಾಗಿರುವುದು ಸಾಕಷ್ಟು ಇದೆ. ಯಾಕೆಂದರೆ ಚುನಾವಣೆ ನಡೆಯುತ್ತಿರುವುದು ರಸ್ತೆ, ಸ್ವಚ್ಚತೆ, ನೀರು, ಚರಂಡಿ, ದಾರಿದೀಪಕ್ಕಾಗಿ ವಿನ: ಅಂತರಾಷ್ಟ್ರೀಯ ಒಪ್ಪಂದವನ್ನು ಮೋದಿ ನಿರಾಕರಿಸಿರುವುದರಿಂದ ನಮಗೇನೂ ಪ್ರಯೋಜನ ಎನ್ನುವ ಸಬ್ಜೆಕ್ಟ್ ಆಗಲಿ ರಾಹುಲ್ ಗಾಂಧಿ ಜನಿವಾರ ಹಾಕಿ ದೇವಸ್ಥಾನದ ಪ್ರದಕ್ಷಿಣೆ ಹಾಕಿದರೆ ಹಿಂದುತ್ವ ಒಪ್ಪಿಕೊಂಡ ಹಾಗೆ ಎನ್ನುವ ವಿಷಯಾಧರಿತವಾಗಿ ಅಲ್ಲ!!
Leave A Reply