ಅಯೋಧ್ಯ ಪ್ರಕರಣ ಶಾಂತಿ ಸಭೆಯಲ್ಲಿ ಸಮಾಧಾನ!
ಗುರುವಾರ ಸಂಜೆ ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಪಾಲನಾ ಸಭೆ ನಡೆಯಿತು. ಈಗ ಅಚಾನಕ್ ಆಗಿ ಶಾಂತಿ ಪಾಲನಾ ಸಭೆ ಯಾಕೆ ಎಂದು ಅಂದುಕೊಳ್ಳಬೇಡಿ. ಹಿಂದೆಂದಿಗಿಂತ ಈ ಸಮಯದಲ್ಲಿ ಶಾಂತಿ ಪಾಲನಾ ಸಭೆಯ ಅಗತ್ಯ ಹೆಚ್ಚಿದೆ. ಯಾಕೆಂದರೆ ಶತಮಾನದ ಇತಿಹಾಸ ಇರುವ ಅಯೋಧ್ಯೆ ರಾಮಜನ್ಮಭೂಮಿಯ ಅಂತಿಮ ತೀರ್ಪು ಹೊರಗೆ ಬರಲಿದೆ. ಯಾವಾಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ತೀರ್ಪನ್ನು ಓದಿ ಹೇಳುತ್ತಾರೆ ಎನ್ನುವುದಕ್ಕೆ ದಿನಗಣನೆ ಆರಂಭವಾಗಿದೆ. ಆ ನಿಟ್ಟಿನಲ್ಲಿ ಬಹಳ ಕಾತರದಿಂದ ಇಡೀ ಭಾರತ ತೀರ್ಪನ್ನು ಕಾಯುತ್ತಿದೆ. ತೀರ್ಪು ಯಾವ ರೀತಿಯಲ್ಲಿ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಯಾವ ಪರವಾಗಿ ಬಂದರೂ ದೇಶದ ಆಂತರಿಕ ಭದ್ರತೆಗೆ ದಕ್ಕೆ ಬರಬಹುದು ಎನ್ನುವ ಆತಂಕದಿಂದ ಇಂತಹ ಶಾಂತಿಪಾಲನಾ ಸಭೆ ನಡೆಯುತ್ತಿದೆ.
ವಿವಿಧ ಸರ್ಕಾರೇತರ ಸಂಘಟನೆಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಪೊಲೀಸ್ ಕಮೀಷನರ್, ವಿವಿಧ ಅಧಿಕಾರಿಗಳನ್ನು ಕುಳ್ಳಿರಿಸಿ ಜಿಲ್ಲಾಧಿಕಾರಿಯವರು ಮಾತನಾಡಿದರು. ಅವರ ಆತಂಕ ಇರುವುದು ಜಿಲ್ಲೆಯಲ್ಲಿ ತೀರ್ಪು ಬಂದ ದಿನ ಉದ್ರೇಕಕಾರಿ ವಾತಾವರಣ ನಿರ್ಮಾಣವಾಗದಂತೆ ನೋಡಿಕೊಳ್ಳುವುದು. ಯಾಕೆಂದರೆ ಹೆಚ್ಚು ಕಡಿಮೆ ಇದೇ ಹೊತ್ತಿಗೆ ಈದ್ ಮಿಲಾದ್ ಮತ್ತು ಟಿಪ್ಪು ಜಯಂತಿ ಬರುತ್ತದೆ. ಜಿಲ್ಲಾಧಿಕಾರಿ ಸ್ಪಷ್ಟವಾಗಿ ಹೇಳಿದ್ರು “ಸರಕಾರದ ವತಿಯಿಂದ ಟಿಪ್ಪು ಜಯಂತಿ ಮಾಡುವುದಿಲ್ಲ. ಒಂದು ವೇಳೆ ಖಾಸಗಿ ಸಂಘಟನೆಗಳು ಟಿಪ್ಪು ಜಯಂತಿ ಆಚರಿಸುವುದಾದರೆ ಇಲೆಕ್ಷನ್ ರಿಟರ್ನಿಂಗ್ ಆಫೀಸರ್ ಅವರಿಂದ ಅನುಮತಿ ಪಡೆಯಬೇಕು. ಏನೇ ಆದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಬೇಕು” ಎಂದು ಹೇಳಿದರು.
ಸಭೆಯಲ್ಲಿದ್ದ ಇಬ್ಬರು ಮುಸ್ಲಿಂ ಸಮಾಜದವರು ಪೊಲೀಸ್ ಕಾರ್ಯವೈಖರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಗಲಾಟೆಯ ಸಂದರ್ಭದಲ್ಲಿ ಪೊಲೀಸರು ಏಕಪಕ್ಷೀಯವಾಗಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ನಾನು ಈ ಸಭೆಯಲ್ಲಿ ನನ್ನ ನಿಲುವು ವ್ಯಕ್ತಪಡಿಸುವ ಅವಕಾಶ ಸಿಕ್ಕಿದಾಗ ಕೆಲವು ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಿದೆ. “ನಮ್ಮಲ್ಲಿ ಶಾಂತಿ ಪಾಲನಾ ಸಭೆಗಳು ಕೇವಲ ಉಭಯ ಧರ್ಮದವರ ಹಬ್ಬಗಳು ಎದುರುಬದುರಾದಾಗ ಮಾತ್ರ ಕರೆಯುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಅದರ ಬದಲು ಪ್ರತಿ ಮೂರು ತಿಂಗಳಿಗೊಮ್ಮೆ ಇಂತಹ ಸಭೆಯನ್ನು ಆಯಾ ಪೊಲೀಸ್ ಸ್ಟೇಶನ್ ಲಿಮಿಟ್ ನಲ್ಲಿಯೂ ಮಾಡಬೇಕು. ನೀವು ವಿವಿಧ ಸಂಘಟನೆಯ ಹಿರಿಯರನ್ನು ಕರೆಯುತ್ತೀರಿ. ಅದರ ಬದಲು ಪೊಲೀಸ್ ಸ್ಟೇಶನ್ ಗಳಲ್ಲಿ ಮಾಡುವಾಗ ಎಲ್ಲಾ ಧರ್ಮದ ಯುವಕರನ್ನು ಕರೆಯಿರಿ. ಪರಸ್ಪರ ಪ್ರೀತಿ, ವಿಶ್ವಾಸ, ಮುಖ ಪರಿಚಯ, ಗೆಳೆತನ ಮೂಡಲಿ. ಇನ್ನು ಪೊಲೀಸರು ಯಾವುದೇ ಸಮಾಜವನ್ನು ಸುಮ್ಮನೆ ಟಾರ್ಗೆಟ್ ಮಾಡುವುದಿಲ್ಲ. ಯಾರನ್ನು ಬೇಕಂತಲೇ ಬಂಧಿಸುವುದಿಲ್ಲ. ಇನ್ನು ಒಂದು ವೇಳೆ ಒಬ್ಬ ವ್ಯಕ್ತಿ ತಪ್ಪು ಮಾಡಿದ ಮೇಲೆಯೂ ಬಂಧಿಸದೇ ಇದ್ದರೆ ಅಥವಾ ಬಂಧಿಸಿದ್ದಕ್ಕೆ ಯಾವುದೇ ಶಾಸಕ, ಸಚಿವರ, ಸಂಸದರ ಫೋನ್ ಬಂದ ಕೂಡಲೇ ಬಿಟ್ಟು ಬಿಟ್ಟರೆ ಅದು ತಪ್ಪಾಗುತ್ತದೆ. ಒಬ್ಬ ಶಾಸಕ ನಿವೃತ್ತಿಯಾಗುವ ತನಕ ಅಧಿಕಾರದಲ್ಲಿ ಇರುವುದಿಲ್ಲ. ನ್ಯಾಯಯುತವಾಗಿ ನಡೆದರೆ ಕೆಲವು ಅವಧಿ ಹೆಚ್ಚೆ ಬಾಳಿಕೆ ಬರಬಹುದು. ಇಲ್ಲದಿದ್ದರೆ ಒಂದೇ ಅವಧಿಗೆ ರೈಟ್ ಹೇಳಬಹುದು. ಆದರೆ ನೀವು ಅರವತ್ತು ವರ್ಷ ಅಧಿಕಾರದಲ್ಲಿ ಇರುತ್ತೀರಿ. ನಿಮ್ಮ ಮೇಲೆ ಯಾವ ಒತ್ತಡ ಬಂದರೂ ಬಗ್ಗಬೇಡಿ. ಹೆಚ್ಚೆಂದರೆ ಟ್ರಾನ್ಸಫರ್ ಮಾಡಬಹುದೇ ವಿನ: ಇನ್ನು ಏನೂ ಕಿತ್ತುಕೊಳ್ಳಲು ಆಗುವುದಿಲ್ಲ” ಎಂದೆ.
ಶಾಂತಿ ಪಾಲನಾ ಸಭೆ ಚೆನ್ನಾಗಿ ನಡೆಯಿತು. ಮನಸ್ಸು ಒಂದೇ ವಿಷಯವನ್ನು ಒತ್ತಿ ಒತ್ತಿ ಹೇಳುತ್ತಿತ್ತು ” ದೇವರ ದಯೆಯಿಂದ ತೀರ್ಪಿನ ನಂತರ ಯಾವುದೇ ಅಹಿತಕರ ಘಟನೆ ಭಾರತದ ಯಾವುದೇ ಮೂಲೆಯಲ್ಲಿಯೂ ನಡೆಯದಿರಲಿ, ಶ್ರೀರಾಮಚಂದ್ರ ನಮ್ಮನ್ನು ರಕ್ಷಿಸಲಿ “
Leave A Reply