ತುಂಬೆಯಲ್ಲಿ 7 ಮೀಟರ್ ನೀರು ನಿಲ್ಲಬೇಕಾದರೆ ಬಿಜೆಪಿ ಇಲ್ಲಿ ದಡ ಸೇರಬೇಕು!!
ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ ಉತ್ತರ ಶಾಸಕ ಡಾ|ಭರತ್ ಶೆಟ್ಟಿಯವರಿಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಕೂಡಲೇ ತಲಾ 25 ಕೋಟಿಯನ್ನು ವಿಶೇಷ ಅನುದಾನವಾಗಿ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದಾರೆ ಎನ್ನುವುದನ್ನು ಇಬ್ಬರು ಶಾಸಕರು ಹೇಳುತ್ತಿದ್ದಾರೆ. ಸಂತೋಷ, ಆ ಹಣವನ್ನು ಅವರು ಕ್ಷೇತ್ರದ ಅಭಿವೃದ್ಧಿಗೆ ಬಳಸಲಿ ಎನ್ನುವುದು ಹಾರೈಕೆ.
ಬಹುಶ: ಈ ಇಬ್ಬರು ಶಾಸಕರು ಇದೇ ವೇಗದಲ್ಲಿ ತುಂಬೆ ಡ್ಯಾಂನಲ್ಲಿ ಏಳು ಮೀಟರ್ ನೀರು ನಿಲ್ಲಿಸಿದರೆ ಮುಳುಗಡೆಯಾಗುವ ಭೂಮಾಲೀಕರ ಭೂಮಿಗೆ ಕೊಡಬೇಕಾದ ಪರಿಹಾರವನ್ನು ಕೂಡ ತರಿಸಬೇಕು. ಬಿಜೆಪಿಗೆ ಮತ ಕೊಡಲು ಹೊರಡುವ ಪ್ರತಿ ಮತದಾರನಿಗೂ ಮುಂದಿನ ವರ್ಷಗಳಲ್ಲಿ ನೀರಿನ ಸಮಸ್ಯೆ ಬರದಂತೆ ಬಿಜೆಪಿ ನೋಡಿಕೊಳ್ಳಬಹುದು ಎನ್ನುವ ಧೈರ್ಯ ಬರಬೇಕಾದರೆ ಶಾಸಕರಿಬ್ಬರು ಮತದಾರರಿಗೆ ಆ ನಂಬಿಕೆಯನ್ನು ತರಬೇಕು. ತುಂಬೆಯಲ್ಲಿ ಜಾಗ ಕಳೆದುಕೊಳ್ಳುವವರಿಗೆ ಅಂದಾಜು 120 ಕೋಟಿಯಷ್ಟು ಹಣ ಪರಿಹಾರವಾಗಿ ಕೊಡಬೇಕಿದೆ. ಒಮ್ಮೆಲ್ಲೆ ಒಂದು ಯೋಜನೆಗೆ ಅಷ್ಟು ಫಂಡ್ ಇಲ್ಲದಿದ್ದಲ್ಲಿ ನಾಲ್ಕೈದು ಹಂತಗಳಲ್ಲಿ ಬಿಡುಗಡೆ ಮಾಡಿಬಿಟ್ಟರೆ ಬರುವ 2026 ರ ತನಕ ನಾವು ಯಾವುದೇ ತೊಂದರೆ ಇಲ್ಲದೆ ಪ್ರತಿ ಬೇಸಿಗೆಯನ್ನು ಕಳೆಯಲು ಸಾಧ್ಯವಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಇದ್ದ ಸರಕಾರಗಳಲ್ಲಿ ಈ ಬಗ್ಗೆ ಯಾವುದೇ ಸುಧಾರಣೆ ಮಾಡಲೇ ಇಲ್ಲ. ಕಳೆದ ಬಾರಿ ರಾಜ್ಯದಲ್ಲಿ ಮತ್ತು ಪಾಲಿಕೆ ಎರಡರಲ್ಲಿಯೂ ಕಾಂಗ್ರೆಸ್ ಇದ್ದಾಗ ಸಹಜವಾಗಿ ನಿರೀಕ್ಷೆ ಇತ್ತು. ಅವರು ಮಾಡದೇ ಇದ್ದಾಗ ಮುಂದಿನ ಆಯ್ಕೆ ಯಾರು? ಬಿಜೆಪಿ. ಈಗ ಎರಡೂ ಕಡೆ ಬಿಜೆಪಿ ಬಂದರೆ ಯಾಕೆ ಈ ಕೆಲಸ ಮೊದಲಿಗೆ ಆಗುತ್ತೆ ಎನ್ನುವ ಭರವಸೆ ಇದೆ ಎಂದರೆ ಕಾಮತ್ ಮತ್ತು ಭರತ್ ಗೆ ಅಂತಹ ಒಂದು ಶಕ್ತಿ ಪಾಲಿಕೆ ಲೆವೆಲ್ಲಿನಲ್ಲಿ ಬಂದಿರುತ್ತದೆ. ಇಬ್ಬರೂ ತಮ್ಮ ತಮ್ಮ ನೆಟ್ ವರ್ಕ್ ಬಳಸಿ ಅನುದಾನ ತರುವಲ್ಲಿ ಸಮರ್ಥರಿದ್ದಾರೆ. ಅದು ಯಶಸ್ವಿಯಾದರೆ ಬಹುಶ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಅದು ಇವರಿಬ್ಬರಿಗೆ ಲಾಭವಾಗುತ್ತದೆ. ಹೇಗೂ ಸಿಎಂ ಆದ ವಾರದೊಳಗೆ 25 ಕೋಟಿ ಒಬ್ಬೊಬ್ಬ ಶಾಸಕರಿಗೆ ಯಡ್ಯೂರಪ್ಪ ಕೊಡುತ್ತಾರೆ ಎಂದರೆ ತುಂಬೆ ಡ್ಯಾಂ ಸಂತ್ರಸ್ತರು ಇನ್ನು ನಿರೀಕ್ಷೆ ಇಡುವುದು ತಪ್ಪಲ್ಲ. ಆಗಲಿ ಆದ್ಯತೆ ಮೇರೆ ಆಗಲಿ ಎನ್ನುವ ಅಪೇಕ್ಷೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವ ಎಲ್ಲರಿಗೂ ಇದೆ. ಬಹುಶ: ತುಂಬೆಯಲ್ಲಿ ಏಳು ಮೀಟರ್ ನೀರು ನಿಲ್ಲಬೇಕಾದರೆ ಇಲ್ಲಿ ಪಾಲಿಕೆಯಲ್ಲಿ ಬಿಜೆಪಿ ಸಲೀಸಾಗಿ ಬಹುಮತಕ್ಕೆ ಬರಬೇಕು. ಬರುತ್ತಾ? ನಮಗೆ ನೀರು ತೊಂದರೆ ಇಲ್ಲದೆ ಸಿಗುತ್ತಾ ?
Leave A Reply