ಕಾಟಾಚಾರಕ್ಕೆ ಹೊಂಡ ಮುಚ್ಚುವ ಗುತ್ತಿಗೆದಾರರೇ ಪಾಲಿಕೆಯ ಮೊದಲ ವಿಲನ್!!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿರುವ ಸಂಖ್ಯೆ ಗಮನಿಸಿದರೆ ಮೇಯರ್ ಆಯ್ಕೆಗೆ ಯಾವ ಮೀಸಲಾತಿ ಬಂದರೂ ಕನಿಷ್ಟ 2-3 ಜನ ಅದಕ್ಕೆ ಪೈಪೋಟಿ ನೀಡಲಿದ್ದಾರೆ. ಮೊದಲ ಅವಧಿಯಲ್ಲಿ ಮೇಯರ್ ಸ್ಥಾನ ಹಿಂದುಳಿದ ವರ್ಗ (ಎ) ಇದಕ್ಕೆ ಸಿಕ್ಕಿರುವುದರಿಂದ ಹಿರಿತನದ ಆಧಾರದ ಮೇಲೆ ನೋಡಿದರೆ ಇಬ್ಬರ ಹೆಸರು ಎದ್ದು ಕಾಣುತ್ತದೆ. ಸಿನಿಯಾರಿಟಿಯನ್ನೇ ತೆಗೆದುಕೊಳ್ಳುವುದಾದರೆ ದಿವಾಕರ್ ಪಾಂಡೇಶ್ವರ ಅವರು ಮೂರನೇ ಬಾರಿ ಗೆದ್ದಿರುವ ಕಾರ್ಪೋರೇಟರ್ ಆಗಿದ್ದಾರೆ. ಸದ್ಯ ಶುದ್ಧಹಸ್ತ ಕಾರ್ಪೋರೇಟರ್ ಆಗಿರುವುದರಿಂದ ಮಂಗಳೂರು ನಗರ ದಕ್ಷಿಣಕ್ಕೆ ಮೇಯರ್ ಸ್ಥಾನ ಹೋಗುವುದಾದರೆ ದಿವಾಕರ್ ಅವರಿಗೆ ಆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ಮಂಗಳೂರು ಉತ್ತರಕ್ಕೆ ಮೇಯರ್ ಸ್ಥಾನ ಕೊಡುವುದಾದರೆ ಎರಡನೇ ಬಾರಿ ಗೆದ್ದಿರುವ ಜಯಾನಂದ ಅಂಚನ್ ಅವರಿಗೆ ಮೇಯರ್ ಸ್ಥಾನ ಕೊಡಬಹುದು. ಅವರು ಈ ಹಿಂದೆ ಒಮ್ಮೆ ಗೆದ್ದು, ಒಮ್ಮೆ ಸೋತಿದ್ದಾರೆ. ಹಾಗೆ ಮೊದಲ ಬಾರಿ ಗೆದ್ದಿರುವ ಕೆಲವು ಕಾರ್ಪೋರೇಟರ್ ಗಳು ಕೂಡ ಮೇಯರ್ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಅಂತಿಮವಾಗಿ ಬಿಜೆಪಿಯ ಜಿಲ್ಲೆ ಮತ್ತು ರಾಜ್ಯದ ವರಿಷ್ಟರು ಯಾರನ್ನು ಆಯ್ಕೆ ಮಾಡುತ್ತಾರೆ ಎಂದು ನೋಡಬೇಕು.
ಆದರೆ ನನಗೆ ಅದಕ್ಕಿಂತಲೂ ಮುಖ್ಯವಾಗಿರುವುದು ಈಗ ಗಡಿಬಿಡಿಯಲ್ಲಿ ಆಗುತ್ತಿರುವ ರಸ್ತೆಯ ಹೊಂಡಗುಂಡಿ ಮುಚ್ಚುವ ಕಾಮಗಾರಿ. ಪಾಲಿಕೆ ವ್ಯಾಪ್ತಿಯ ರಸ್ತೆಗಳ ಹೊಂಡಗಳನ್ನು ಮುಚ್ಚುವ ಕೆಲಸ ಆರಂಭವಾಗಿದೆ. ಆದರೆ ಮುಚ್ಚುತ್ತಿರುವ ರೀತಿಯೇ ಅನುಮಾನಗಳಿಗೆ ಕಾರಣವಾಗಿದೆ. ತಾಂತ್ರಿಕವಾಗಿ ಹೊಂಡವನ್ನು ಮುಚ್ಚುವುದು ಹೇಗೆ ಎನ್ನುವುದನ್ನು ನಿಮಗೆ ಹೇಳಿಕೊಡುತ್ತೇನೆ. ಮೊದಲಿಗೆ ಹೊಂಡದಲ್ಲಿರುವ ಡಸ್ಟ್ ಅನ್ನು ತೆಗೆದು ಸ್ವಚ್ಚಮಾಡಬೇಕು. ನಂತರ ಡಸ್ಟ್ ತೆಗೆಯಲ್ಪಟ್ಟ ಹೊಂಡಕ್ಕೆ ಡಾಮರ್ ಸ್ಪ್ರೇ ಮಾಡಬೇಕು. ಆ ಬಳಿಕ ಜಲ್ಲಿ ಹಾಕಬೇಕು. ನಂತರ ಪುನ: ಡಾಮರ್ ಸ್ಪ್ರೇ ಮಾಡಬೇಕು. ನಂತರ ಸೀಲ್ ಕೋಟ್ ಮಾಡಬೇಕು. ಅದರ ಮೊದಲು ಒಮ್ಮೆ ರೋಲರ್ ಹಾಯಿಸಬೇಕು. ಆದರೆ ಕೆಲವು ಕಡೆ ಗುತ್ತಿಗೆದಾರರು ಡಸ್ಟ್ ತೆಗೆದ ಹೊಂಡಕ್ಕೆ ಡಾಮರ್ ಸ್ಪ್ರೇ ಮಾಡದೇ ನೇರವಾಗಿ ಜಲ್ಲಿ ಹಾಕುತ್ತಿದ್ದಾರೆ. ಇವರು ಹೀಗೆ ಮಾಡುವುದರಿಂದ ಒಂದೇ ವಾರದೊಳಗೆ ಆ ಭಾಗ ಮತ್ತೆ ಯಥಾಸ್ಥಿತಿಗೆ ಬಂದು ತಲುಪುತ್ತದೆ. ಇವತ್ತು ಗುತ್ತಿಗೆದಾರರು ಹಾಗೇ ಕಾಟಾಚಾರಕ್ಕೆ ಮಾಡಿರುವ ಕೆಲವು ತೇಪೆಕಾರ್ಯದಲ್ಲಿ ಒಂದರ ಫೋಟೋ ಹಾಕುತ್ತಿದ್ದೇನೆ.
ಇದು ಕಂಬ್ಳದ ವಾರ್ಡಿನ ಫೋಟೋ. ನನ್ನ ಗಮನಕ್ಕೆ ಬಂದ ಕೂಡಲೇ ನಾನು ಪಾಲಿಕೆಗೆ ಈ ಬಗ್ಗೆ ದೂರು ನೀಡಿದ್ದೇನೆ. ನಂತರ ಅವರು ಬಂದು ಅದನ್ನು ಸರಿ ಮಾಡಿದ್ದಾರೆ. ನೀವು ಕೂಡ ಪಾಲಿಕೆಯ ವ್ಯಾಪ್ತಿಯಲ್ಲಿ ವಾಸಿಸುವವರಾದರೆ ಅಥವಾ ಕಲಿಕೆಗೋ, ಉದ್ಯೋಗಕ್ಕೋ, ವ್ಯಾಪಾರಕ್ಕೋ ಪಾಲಿಕೆಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದರೆ ನಿಮಗೆ ಹೊಂಡಗುಂಡಿ ಮುಚ್ಚಿದ ದೃಶ್ಯ ಕಂಡುಬಂದರೆ ಅಥವಾ ಮುಚ್ಚುವ ಕಾಮಗಾರಿ ಕಂಡುಬಂದರೆ ಅಲ್ಲಿ ಕೆಲವೇ ನಿಮಿಷ ನಿಂತು ಕಾಮಗಾರಿ ಗಮನಿಸಿ. ನೀವು ವಾಸಿಸುವ ಮನೆ ಇರುವ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತಿದ್ದರೆ ಸ್ವಲ್ಪ ಎಚ್ಚರಿಕೆಯಿಂದಲೇ ಗಮನಿಸಿ. ನಾನು ಮೇಲಿದ ರೀತಿಯಲ್ಲಿ ಕೆಲಸ ಮಾಡದೇ ಇದ್ದರೆ ಕಾಮಗಾರಿ ಕಳಪೆ ಆಗುತ್ತದೆ ಎನ್ನುವುದು ನಿಮ್ಮ ಗಮನದಲ್ಲಿ ಇರಲಿ. ಇನ್ನು ನೂತನವಾಗಿ ಗೆದ್ದಿರುವ ಕಾರ್ಪೋರೇಟರ್ ಗಳು ಇದನ್ನು ಖಂಡಿತ ಗಮನಿಸಲೇಬೇಕು. ಯಾಕೆಂದರೆ ಅದು ನಿಮ್ಮ ಕರ್ತವ್ಯ. ಕಳಪೆ ಕಾಮಗಾರಿಯ ಕಾರಣದಿಂದ ರಸ್ತೆ ಮತ್ತೆ ಹೊಂಡ ಬಿದ್ದರೆ ಶಾಪ ವಾರದೊಳಗೆ ಹಾಕಲು ಜನ ತಯಾರಾಗಿ ನಿಂತಿರುತ್ತಾರೆ!!
Leave A Reply