ಅಡ್ಯಾರ್ ನಲ್ಲಿ ಕೆಣಕಿದ್ದಕ್ಕೆ ಕುಳೂರಿನಲ್ಲಿ ಸಿಕ್ಕಿದೆ ಉತ್ತರ!!
ಒಂದು ಲಕ್ಷ ಜನ ಸೇರಿದರೆ ಅದು ಗ್ರೇಟ್ ಅಂದುಕೊಂಡಿದ್ದೆ. ಆದರೆ ಅದಕ್ಕಿಂತ ಎಷ್ಟೋ ಹೆಚ್ಚು ಜನ ಸೇರಿದ್ದಾರೆ ಎಂದು ಅನಿಸುತ್ತಿದೆ. ಇದು ಬಿಜೆಪಿ ಶಕ್ತಿ. ಬಂದಿರುವುದು ಪಕ್ಕಾ ಬಿಜೆಪಿ ಕಾರ್ಯಕರ್ತರು. ಅದು ಕೂಡ ಸೋಮವಾರ ಮಧ್ಯಾಹ್ನ ಸೂರ್ಯ ಆಗಸದಲ್ಲಿ ತಕಧಿಮಿ ಕುಣಿತಾ ಇರುವಾಗ ಧೂಳು ಹಾರುವ ಮಣ್ಣನ್ನು ಹೊದ್ದು ಮಲಗಿರುವ ಗೋಲ್ಡ್ ಫಿಂಚ್ ಮೈದಾನದಲ್ಲಿ ಭಾಷಣ ಕೇಳಲು ಹೋಗೋಣ ಎಂದು ನಿರ್ಧಾರ ಮಾಡಲು ನೂರು ಸಲ ಯೋಚಿಸುವ ಕಾಲದಲ್ಲಿಯೂ ಜನ ಬಂದಿರುವುದು ನಳಿನ್ ಕುಮಾರ್ ಕಟೀಲ್ ಅದೃಷ್ಟ ಅದ್ಭುತವಾಗಿದೆ ಎನ್ನುವುದರ ಸಂಕೇತ.
ಭಾಷಣ ಮಾಡಲು ಅಮಿತ್ ಶಾ ಬರಲ್ಲವಂತೆ ಎನ್ನುವ ಸಣ್ಣ ಬೇಸರದೊಂದಿಗೆ ಕೆಲವರು ಬಂದಿದ್ದರೂ ರಾಜನಾಥ್ ಸಿಂಗ್ ತಾವೆಷ್ಟು ಪ್ರಬುದ್ಧ ಭಾಷಣಕಾರ ಎನ್ನುವುದನ್ನು ತಮ್ಮ ಮಾತಿನ ಮೂಲಕ ತೋರಿಸಿಕೊಟ್ಟರು. ಅಜಾನುಬಾಹು ದೇಹ, ಉಕ್ಕಿನ ಕಂಠ, ಇಪ್ಪತ್ತೈದರ ಹರೆಯದಲ್ಲಿಯೇ ಶಾಸಕನಾಗಿ ರಾಜಕೀಯಕ್ಕೆ, ಕೇಂದ್ರ ಮಟ್ಟದಲ್ಲಿ ಪ್ರಣಾಳಿಕೆಗಳ ಹಿಂದಿನ ತಲೆ ಮತ್ತು ಯಾವ ಕ್ಷೇತ್ರವನ್ನು ಕೊಟ್ಟರೂ ಅಲ್ಲೊಂದು ಮೈಲಿಗಲ್ಲು ಎಲ್ಲಾ ಒಟ್ಟಿಗೆ ಸೇರಿದರೆ ಅದು ರಾಜನಾಥ್ ಸಿಂಗ್. ಮೋದಿಗೆ ಸಿಕ್ಕಿದ ಇಮೇಜು ಹಾಗೂ ಅಮಿತ್ ಶಾಗೆ ಸಿಕ್ಕಿದ ಪ್ರಚಾರ ಮತ್ತು ಯೋಗಿಗೆ ಸಿಕ್ಕಿದ ಮೈಲೇಜು ರಾಜನಾಥ್ ಸಿಂಗ್ ಅವರಿಗೆ ಸಿಗಲಿಲ್ಲ ಎನ್ನುವುದು ನಿಜವಾದರೂ ಆ ಮೂವರನ್ನು ಒಟ್ಟಿಗೆ ಸೇರಿಸಿದರೆ ಒಬ್ಬ ರಾಜನಾಥ್ ಸಿಂಗ್ ಆಗುತ್ತಾರೆ ಎಂದರೆ ಅತೀಶಯೋಕ್ತಿ ಆಗಲಾರದು. ಒಂದು ವಿಷಯವನ್ನು ಬುಡದಲ್ಲಿ ಹೇಗೆ ಕಟ್ಟಿಕೊಡಬಹುದು ಎನ್ನುವುದನ್ನು ರಾಜನಾಥ್ ರಿಂದ ಕಲಿಯಬೇಕು. ಅವರು ಸೋಮವಾರ ಗೋಲ್ಡ್ ಫಿಂಚ್ ಮೈದಾನದಲ್ಲಿ ಭಾಷಣಕ್ಕೆ ನಿಂತಾಗ ಸೂರ್ಯನಿಗೆ ಮುಳುಗುವ ಅವಸರ.
ಆದರೆ ಸಿಂಗ್ ಅವರಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಗಡಿಬಿಡಿಯಲ್ಲಿ ಮಾತನಾಡುವ ಅಗತ್ಯ ಬೀಳಲಿಲ್ಲ. ಅವರು ಮೊದಲು ಜನಸಾಗರವನ್ನು ಅಭಿನಂದಿಸಿದರು. ನಂತರ 370 ಆಕ್ಟ್ ಬಗ್ಗೆ ಪ್ರಾರಂಭಿಸಿದರು. ಕಾಶ್ಮೀರವನ್ನು ಎಷ್ಟು ಅಭಿವೃದ್ಧಿ ಮಾಡುತ್ತೇವೆ ಎಂದರೆ ಪಿಒಕೆಯಲ್ಲಿ ಇರುವವರು ಜೊಲ್ಲು ಸುರಿಸಬೇಕು ಎಂದು ಲಘುಹಾಸ್ಯ ಧಾಟಿಯಲ್ಲಿ ಮಾತನಾಡಿದರು. ಒಂದೇ ದೇಶ, ಒಂದೇ ಧ್ವಜ, ಒಂದೇ ಸಂವಿಧಾನ ಎನ್ನುವುದು ನಮ್ಮ ಮೂಲಮಂತ್ರ ಎಂದು ಹೇಳುತ್ತಾ ಬಿಜೆಪಿಯ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಹೇಗೆ ಒಂದೊಂದಾಗಿ ಅಸ್ತಿತ್ವಕ್ಕೆ ತರುತ್ತಿದ್ದೇವೆ ಎಂದು ಹೇಳುತ್ತಾ ಹೋದರು. ಅದರಲ್ಲಿ ರಾಮ ಮಂದಿರವನ್ನು ಕಾನೂನಾತ್ಮಕವಾಗಿ ಗೆದ್ದಿರುವ ಬಗ್ಗೆ, ಮುಸ್ಲಿಂ ಮಹಿಳೆಯರ ಶೋಷಣೆಯ ಅಸ್ತ್ರ ತ್ರಿವಳಿ ತಲಾಖ್ ನಿಷೇಧದ ಬಗ್ಗೆ ಮಾತನಾಡುತ್ತಾ ಹೋದರು. ಈ ನಡುವೆ ವಿಶ್ವದಲ್ಲಿ ಆರ್ಥಿಕ ಕಂಪನ ಆಗುತ್ತಿರುವುದರಿಂದ ಒಂದಿಷ್ಟು ಕಾಲ ಇಲ್ಲೂ ಅದು ಇರಲಿದೆ. ಅದರೆ ಮುಂದಿನ ದಶಕದಲ್ಲಿ ನಾವು ವಿಶ್ವದ ಮೊದಲ ಮೂರು ರಾಷ್ಟ್ರಗಳಲ್ಲಿ ಒಂದಾಗಿ ಅತ್ಯಂತ ಬಲಯುತ ಆರ್ಥಿಕ ಶಕ್ತಿ ಎಂದರು.
ಇನ್ನು ಮನಮೋಹನ್ ಸಿಂಗ್ ಅವರೇ ಪಾಕಿಸ್ತಾನ, ಬಾಂಗ್ಲಾ, ಅಪಘಾನಿಸ್ತಾನದಲ್ಲಿ ದೌರ್ಜನ್ಯ ಅನುಭವಿಸುತ್ತಿರುವ ನಮ್ಮ ಹಿಂದೂ, ಸಿಖ್ ಧರ್ಮದವರ ಬಗ್ಗೆ ಕೇಂದ್ರ ಸರಕಾರ ಸಂವೇದನೆಯನ್ನು ತೋರಿಸಬೇಕು ಎಂದು ಅಟಲ್ ಪ್ರಧಾನಿಯಾಗಿದ್ದಾಗ ಹೇಳಿದ್ದ ವಾಕ್ಯಗಳನ್ನು ನೆನಪಿಸಿದ ರಾಜನಾಥ್ ಸಿಂಗ್ ಅವರು ನಾವು ಪೌರತ್ವ ಕೊಡುತ್ತಿದ್ದೇವೆ ಹೊರತು ಕಸಿಯುತ್ತಿಲ್ಲ ಎಂದರು. ಇನ್ನು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಾಡುತ್ತಿರುವ ನಮ್ಮ ಪ್ರಧಾನಿ ಮೋದಿಜಿಯವರು ಯಾವುದೇ ಧರ್ಮದವರನ್ನು ಒಡೆದು ಆಡಳಿತ ಮಾಡಿಲ್ಲ. ಆಯುಷ್ಯಮಾನ್ ಯೋಜನೆ, ಉಜ್ವಲ ಯೋಜನೆ ಮತ್ತು ಆವಾಸ್ ಯೋಜನೆಗಳಲ್ಲಿ ಧರ್ಮ ನೋಡದೆ ಸೌಲಭ್ಯ ನೀಡಿರುವಾಗ ಈಗ ಸಿಎಎ ವಿಷಯದಲ್ಲಿ, ಎನ್ ಆರ್ ಸಿಯಲ್ಲಿ ಹೇಗೆ ತಾನೆ ನಾವು ಧರ್ಮ ಒಡೆಯುವ ರಾಜಕೀಯ ಮಾಡುತ್ತೇವೆ ಎಂದು ರಕ್ಷಣಾ ಸಚಿವರು ಪ್ರಶ್ನಿಸಿದರು. ಇನ್ನು ಅದ್ನಾನ್ ಸಾಮಿಯಂತಹ ದೊಡ್ಡ ಗಾಯಕರಿಗೆ ತಾವೇ ಗೃಹ ಸಚಿವರಾಗಿದ್ದಾಗ ಭಾರತದ ಪೌರತ್ವ ಕೊಡಲಾಗಿತ್ತಲ್ಲದೆ ಮೋದಿ ಸರಕಾರ ಇಲ್ಲಿಯ ತನಕ 600 ಮುಸಲ್ಮಾನರಿಗೆ ಪೌರತ್ವ ಕೊಟ್ಟಿದೆ ಎಂದರು. ಇನ್ನು ಭಾರತದ ಯಾವುದೇ ಮುಸಲ್ಮಾನರಿಗೂ ಎನ್ ಆರ್ ಸಿಯಲ್ಲಿ ಅನ್ಯಾಯವಾದರೆ ಬಿಜೆಪಿ ಅಂತವರ ಜೊತೆ ನಿಲ್ಲಲಿದೆ ಎಂದು ಹೇಳಿದ ಸಿಂಗ್ ನಮ್ಮ ಕಾರ್ಯಕರ್ತರು ಇದನ್ನು ಮುಸಲ್ಮಾನ ಭಾಂದವರಿಗೆ ತಿಳಿಸಿಕೊಡಬೇಕು ಎಂದು ತಿಳಿಸಿದರು.
ಇನ್ನು ನಾವು ಯಾರನ್ನು ಕೆಣಕಲ್ಲ, ಕೆಣಕಿದವರನ್ನು ಸುಮ್ಮನೆ ಬಿಡಲ್ಲ ಎಂದು ಹೇಳಿದ ಕೇಂದ್ರ ಸಚಿವರು ನಾವು ನೆರೆಹೊರೆಯವರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳಬೇಕು ಎಂದು ಎಷ್ಟೇ ಪ್ರಯತ್ನಪಟ್ಟರೂ ಅವರು ಅದಕ್ಕೆ ಅರ್ಹರಲ್ಲ ಎಂದು ತಿಳಿಯುವಂತಾಯಿತು ಎಂದು ಹೇಳಿದರು.
ರಾಜನಾಥ್ ಸಿಂಗ್ ಭಾಷಣದಲ್ಲಿ ಎಲ್ಲವೂ ಇತ್ತು. ಮೋದಿ ಇದ್ರು, ಅಟಲ್ ಇದ್ರು, ಅಭಿವೃದ್ಧಿ ಯೋಜನೆ ಇತ್ತು, ಪಾಕಿಸ್ತಾನ ಇತ್ತು, ಪಿಒಕೆ ಇತ್ತು, ಕಾಶ್ಮೀರ ಇತ್ತು ಮತ್ತು ಬಿಜೆಪಿಯ ಗುರಿಗಳು ಇದ್ದವು. ಕೆಳಗೆ ಕುಳಿತ ಕಾರ್ಯಕರ್ತರಿಗೆ ಮಾತ್ರ ಅಡ್ಯಾರ್ ನಲ್ಲಿ ಸಿಎಎ ವಿರುದ್ಧ ನಡೆದ ಸಮಾವೇಶಕ್ಕೆ ತಾವು ತಕ್ಕ ಉತ್ತರ ಕೊಟ್ಟ ಖುಷಿ ಇತ್ತು!
Leave A Reply