ತಲೆಯಲ್ಲಿ ಕೊಬ್ಬನ್ನೇ ತುಂಬಿಕೊಂಡಿರುವ ಅಮೇರಿಕಾ ರಾಷ್ಟ್ರಪತಿ ಭಾರತವನ್ನು ಹೊಗಳಿದ್ದು ಸಣ್ಣ ವಿಷಯವಲ್ಲ!!
ಅಮೇರಿಕಾದಿಂದ ಅಲ್ಲಿನ ರಾಷ್ಟ್ರಪತಿಯೊಬ್ಬರು ಭಾರತಕ್ಕೆ ಬಂದು ಹೋಗಿರುವುದು ಇದು ಮೊದಲನೇಯದ್ದು ಅಲ್ಲ. ಕೊನೆಯದ್ದೂ ಅಲ್ಲ. ಅಮೇರಿಕಾವನ್ನು ಇಲ್ಲಿಯ ತನಕ ಆಳಿದ ಅನೇಕ ರಾಷ್ಟ್ರಪತಿಗಳಲ್ಲಿ ಆರು ರಾಷ್ಟ್ರಪತಿಗಳು ಇಲ್ಲಿ ಬಂದು ಹೋಗಿದ್ದಾರೆ. ಆದರೆ ಆ ದೇಶದ ರಾಷ್ಟ್ರಪತಿಯೊಬ್ಬರು ನಮ್ಮ ನೆಲದ ಮೇಲೆ ನಿಂತು ನಮ್ಮನ್ನು ಈ ಪರಿ ಹೊಗಳಿದ್ದು ಮಾತ್ರ ಅಕ್ಷರಶ: ಮೊದಲ ಬಾರಿ. ಅದು ಈಗಿನ ಭಾರತದ ನಿಜವಾದ ವರ್ಚಸ್ಸು. ಅಮೇರಿಕಾದ ರಾಷ್ಟ್ರಪತಿಯವರು ಬೇರೆ ದೇಶಗಳಿಗೆ ಹೋಗುವಾಗ ಅದೊಂದು ಸಾಮಾನ್ಯ ವಿಷಯ ಆಗಿರುವುದೇ ಇಲ್ಲ. ಅವರು ಅಮೇರಿಕಾದಲ್ಲಿ ವಿಮಾನ ಹತ್ತುವುದರಿಂದ ಹಿಡಿದು ಇಲ್ಲಿಂದ ಮತ್ತೆ ಅಮೇರಿಕಾದಲ್ಲಿ ಇಳಿಯುವ ತನಕ ಮತ್ತು ಅಲ್ಲಿ ಇಳಿದ ಕೂಡಲೇ ಅಮೇರಿಕಾದ ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಭೇಟಿಯ ಫಲಪ್ರದವನ್ನು ಹೇಳುವ ತನಕ ಪ್ರತಿ ಇಂಚಿಂಚನ್ನು ಪ್ರಪಂಚ ಗಮನಿಸುತ್ತಲೇ ಇರುತ್ತದೆ. ಅದು ಅಮೇರಿಕಾದ ರಾಷ್ಟ್ರಪತಿ ಎನಿಸಿದವರಿಗೆ ಗೊತ್ತೆ ಇದೆ. ತಾವು ರಸ್ತೆಯ ಬದಿ ಹೋಗುವ ಸಾಮಾನ್ಯ ವ್ಯಕ್ತಿ ಅಲ್ಲ, ಯಾವುದೋ ಗಾಳಿಯಲ್ಲಿ ತೇಲಿ ಮಾಯಾವಾಗುವ ಹೇಳಿಕೆಯನ್ನು ಕೊಡಲು ಸಾಧ್ಯವೇ ಇಲ್ಲ ಎಂದು ಅವರಿಗೆ ತಿಳಿದಿದೆ. ಅಷ್ಟಿದ್ದ ಮೇಲೆಯೂ ಟ್ರಂಪ್ ನಮ್ಮ ನೆಲದ ಮೇಲೆ ನಿಂತು ನಮ್ಮನ್ನು ಹೊಗಳಲು ತಮ್ಮ ಶಬ್ದ ಭಂಡಾರವನ್ನು ಬಳಸುತ್ತಾರೆ ಎಂದರೆ ಅದು ಸಾಮಾನ್ಯ ಸಂಗತಿಯೇ ಅಲ್ಲ. ಇನ್ನು ಅಮೇರಿಕಾದ ಅಧ್ಯಕ್ಷರೂ ಬಂದು ಹೋಗುವ ಖರ್ಚಿನ ವಿಷಯಕ್ಕೆ ಬರೋಣ.
ಈ ಹಿಂದೆ ಅಮೇರಿಕಾದ ಆರು ರಾಷ್ಟ್ರಪತಿಗಳು ಭಾರತಕ್ಕೆ ಬಂದು ಹೋಗುವಾಗ ಇಲ್ಲದ ಖರ್ಚುವೆಚ್ಚದ ಮಾತುಗಳು ಈಗ ಯಾಕೆ ಬರುತ್ತಿದೆ ಎನ್ನುವುದೇ ಆಶ್ಚರ್ಯದ ವಿಷಯ. ಹಿಂದೆ ವಿದೇಶಿ ಪ್ರಧಾನಿ, ರಾಷ್ಟ್ರಪತಿಗಳು ಬಂದಾಗ ಹಾವಾಡಿಗರನ್ನು ತೋರಿಸಿ ಇದು ಭಾರತ ಎಂದು ಹೇಳುತ್ತಿದ್ದಾಗ ಮತ್ತು ಈಗಿನ ಭಾರತವನ್ನು ತೋರಿಸುವಾಗ ಒಂದಿಷ್ಟು ಹೆಚ್ಚು ಖರ್ಚಾಗುವುದು ಸಹಜ. ಸಾಬರಮತಿ ಆಶ್ರಮದ ಹೊರಗೆ ಸಂದರ್ಶಕರ ಡೈರಿಯಲ್ಲಿ ಡೋನಾಲ್ಡ್ ಟ್ರಂಪ್ ಈ ದೇಶದ ಬಗ್ಗೆ ಹೆಮ್ಮೆಯಿಂದ ಬರೆದಿದ್ದಾರೆ. ಅವರಿಗೆ ತಮ್ಮ ಅಕ್ಷರಗಳು ದಾಖಲೆಯಾಗಿ ಉಳಿಯಲಿವೆ ಎಂದು ಗೊತ್ತಿದೆ. ಹಿಂದಿನ ಅಮೇರಿಕಾದ ಅಧ್ಯಕ್ಷರು ಭಾರತದ ಬಗ್ಗೆ ಒಂದು ಅಕ್ಷಶರವನ್ನು ಕೂಡ ಹೊಗಳಿ ಮಾತನಾಡಲು ಹೋಗುತ್ತಿರಲಿಲ್ಲ. ಯಾಕೆಂದರೆ ತಾವು ವಿಶ್ವದ ದೊಡ್ಡಣ್ಣ. ನಾವು ಹೊಗಳಿದರೆ ಸಣ್ಣವರಾಗುತ್ತೇವೆ ಎನ್ನುವ ಅಂಜಿಕೆ ಅವರನ್ನು ಕಾಡುತ್ತಿತ್ತು. ಆದರೆ ಈಗ ಅಮೇರಿಕಾಕ್ಕೆ ಭಾರತದ ಶಕ್ತಿಯ ಪರಿಚಯ ಇದೆ. ಭಾರತದ ರಾಜತಾಂತ್ರಿಕ ಮಹತ್ವದ ಅರಿವು ಆಗಿದೆ. ಆದ್ದರಿಂದ ಮನಸ್ಸಿನಲ್ಲಿ ಏನೇ ಇದ್ದರೂ ವಿಶ್ವದ ಎದುರು ನಾವು ಭಾರತದ ನಂಬಿಕಸ್ಥ ಸ್ನೇಹಿತರು ಎಂದು ಟ್ರಂಪ್ ವಿಶ್ವಾಸದಿಂದ ಹೇಳುತ್ತಾರೆ.
ಸರಿಯಾಗಿ ನೋಡಿದರೆ ಜವಾಹರಲಾಲ್ ನೆಹರೂ ಕಾಲದಲ್ಲಿ ಭಾರತ ಮತ್ತು ಅಮೇರಿಕಾ ಸಂಬಂಧ ಅಷ್ಟು ಚೆನ್ನಾಗಿರಲಿಲ್ಲ. ನೆಹರೂ ಅಮೇರಿಕಾಗಿಂತ ರಷ್ಯಾದೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದರು. ಅದಕ್ಕೆ ಕಾರಣ ನೆಹರೂ ಒಳಗಿದ್ದ ಎಡಪರ ಚಿಂತನೆ. ನೆಹರೂ ತಮ್ಮ ಎಡಚಿಂತನೆಗಳಿಗೆ ರಷ್ಯಾ ಸೂಕ್ತ ಎಂದು ನಂಬಿದ್ದ ಕಾರಣ ಅಮೇರಿಕಾವನ್ನು ದೂರವೇ ಇಟ್ಟಿದ್ದರು. ಅದನ್ನು ನಂತರ ಅವರ ಮಗಳು (!) ಪ್ರಿಯದರ್ಶಿನಿ ಅರ್ಥಾತ್ ಇಂದಿರಾ ಗಾಂಧಿ(!) ಮುಂದುವರೆಸಿಕೊಂಡು ಹೋದರು. ಇದರಿಂದ ಅಮೇರಿಕಾ ಒಂದಿಷ್ಟು ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಲು ತನ್ನ ಜಾಣ್ಮೆಯನ್ನು ಪ್ರದರ್ಶಿಸಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಅಷ್ಟೂ ಯುದ್ಧಗಳಲ್ಲಿ ಅಮೇರಿಕಾ ಪರೋಕ್ಷವಾಗಿ ತನ್ನ ಧನ, ಧಾನ್ಯ, ಸಂಪತ್ತನ್ನು ಪಾಕಿಸ್ತಾನಕ್ಕೆ ಹಿಂದಿನ ಬಾಗಿಲಿನಿಂದ ಕಳುಹಿಸಿಕೊಟ್ಟು ಭಾರತಕ್ಕೆ ಹಿನ್ನಡೆಯಾಗುವಂತೆ ಪ್ರಯತ್ನಿಸಿತ್ತು. ಅಂತಹ ಅಮೇರಿಕಾ ಇವತ್ತು ಭಾರತ ತನ್ನ ಉತ್ತಮ ಮಿತ್ರ ಎಂದು ಹೇಳುತ್ತಿದೆ. ಅದರ ಅರ್ಥ ಅದಕ್ಕೂ ಗೊತ್ತಿದೆ. ನಾವು ಹಿಂದೆಂದಿಗಿಂತ ಹೆಚ್ಚು ಸ್ಟ್ರಾಂಗ್ ಆಗಿದ್ದೇವೆ.
ಅದಕ್ಕೆ ಸರಿಯಾಗಿ ಟ್ರಂಪ್ ಬಳಿ ಭಾರತವನ್ನು ಹೊಗಳಲು ಅಂಶಗಳು ಕೂಡ ಇದ್ದವು. ನಾವು ಗ್ರಾಮೀಣ ಭಾಗಗಳಲ್ಲಿಯೂ ಅಡುಗೆಗೆ ಗ್ಯಾಸ್ ಬಳಸಲು ಶುರು ಮಾಡಿದ್ದು, ಬಡತನ ನಿರ್ಮೂಲನೆಯಿಂದ ಹಿಡಿದು ಅನೇಕ ಅಂಶಗಳನ್ನು ಟ್ರಂಪ್ ಒತ್ತಿ ಹೇಳಿದ್ದರು. ಇದೆಲ್ಲವೂ ಸಹಜವಾಗಿ ಭಾರತದ ಆಡಳಿತ ಚುಕ್ಕಾಣಿ ಹಿಡಿದವರಿಗೆ ಪ್ರಯೋಜನವಾಗಲಿದೆ. ಇದರಿಂದಲೇ ಗಲಿಬಿಲಿಗೊಂಡಿರುವ ಕಾಂಗ್ರೆಸ್ ಭಾರತವನ್ನು ಟ್ರಂಪ್ ಹೊಗಳಿದ್ದನ್ನೇ ಟೀಕಿಸುತ್ತಿವೆ. ನಾನು ಕೊನೆಯದಾಗಿ ಹೇಳುವುದಿಷ್ಟೇ. ಮೋದಿ ಮತ್ತು ನಿಮ್ಮ ನಡುವೆ ರಾಜಕೀಯ ಏನೇ ಇರಲಿ, ದೇಶದ ವಿಷಯಕ್ಕೆ ಬಂದಾಗ ಟ್ರಂಪ್ ಹೇಳಿದ್ದನ್ನು ಎರಡೂ ಕೈಗಳಿಂದ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿ. ಯಾಕೆಂದರೆ ಟ್ರಂಪ್ ಹೇಳಿದ ತಕ್ಷಣ 2024ರಲ್ಲಿ ಎಲ್ಲರೂ ಮೂರನೇ ಬಾರಿ ಮೋದಿಯವರನ್ನೇ ಪ್ರಧಾನಿಯಾಗಿ ಮುಂದುವರೆಸಲು ಜೈ ಎನ್ನುತ್ತಾರೆ ಎನ್ನುವ ಹೆದರಿಕೆಯನ್ನು ಮನಸ್ಸಿನಲ್ಲಿಟ್ಟು ಭಾರತದ ಬಗ್ಗೆ ಲಘುವಾಗಿ ಮಾತನಾಡಬೇಡಿ. ಯಾಕೆಂದರೆ ಅಂತಿಮವಾಗಿ ದೇಶ ಗೆಲ್ಲಬೇಕು. ಮೋದಿ ಅದಕ್ಕೆ ನೆಪ ಮಾತ್ರ!
Leave A Reply