ಗೆದ್ದ ಮೇಲೆ ಕೊಂಕಣಿಗರು ಯಾಕೆ ಅಲ್ವಾ ಯಡಿಯೂರಪ್ಪನವರೇ?
ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ 78 ನೇ ಹರೆಯದಲ್ಲಿ ಏಳನೇ ಬಜೆಟ್ ಮಂಡಿಸಿದ್ದಾರೆ. ಇನ್ನು ಉಳಿದ 3 ವರ್ಷಗಳನ್ನು ಸೇರಿಸಿದರೆ ಅವರು ತಮ್ಮ ರಾಜಕೀಯ ಜೀವನದ ಒಟ್ಟು ಹತ್ತು ಬಜೆಟ್ ಮಂಡಿಸಿದಂತೆ ಆಗುತ್ತದೆ. ಆ ನಿಟ್ಟಿನಲ್ಲಿ ಅದು ಅವರ ಮಟ್ಟಿಗಿನ ದಾಖಲೆಯೇ. ಆದರೆ ಅವರು ಇನ್ನೊಂದು ದಾಖಲೆ ಬರೆದದ್ದು ಕ್ರೈಸ್ತ ಸಮುದಾಯಕ್ಕೆ ಇನ್ನೂರು ಕೋಟಿ ಕೊಡುವ ಮೂಲಕ.
ಈ ವಿಷಯದಲ್ಲಿ ಯಡಿಯೂರಪ್ಪನವರು ಸಿದ್ಧರಾಮಯ್ಯನವರಿಗೂ ನಾಚಿಕೆ ಆಗುವಷ್ಟು ವೇಗದಲ್ಲಿ ಮುಂದಕ್ಕೆ ಹೋಗಿದ್ದಾರೆ. ಕ್ರೈಸ್ತ ಸಮುದಾಯದವರಿಗೂ ಆಶ್ಚರ್ಯವಾಗುವ ಮಟ್ಟಿಗೆ ಅವರಿಗೆ ಅನುದಾನ ಸಿಕ್ಕಿದೆ. ಸಾಮಾನ್ಯವಾಗಿ ಬಿಜೆಪಿ ಸರಕಾರ ಇದ್ದಾಗ ಯಾವ ಕ್ರೈಸ್ತನೂ ತಮ್ಮ ಸಮುದಾಯಕ್ಕೆ ಮೂರು ಅಂಕೆಯಷ್ಟು ಕೋಟಿ ಮೊತ್ತ ಸಿಗುತ್ತದೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿರುವುದಿಲ್ಲ. ಯಾಕೆಂದರೆ ಕಾಂಗ್ರೆಸ್ಸಿನ ಮತಬ್ಯಾಂಕೊಂದಕ್ಕೆ ಈ ಪರಿ ಅನುದಾನ ಇಡುವುದಕ್ಕೆ ಬೇರೆ ಪಕ್ಷಗಳು ಕೂಡ ಹೋಗುವುದಿಲ್ಲ. ಆದರೆ ಬಿಎಸ್ ವೈ ಸ್ಪರ್ದೇಗೆ ಬಿದ್ದವರಂತೆ 200 ಕೋಟಿ ಇಟ್ಟಿದ್ದಾರೆ. ಇರಲಿ, ಅವರು ಮತ ಬ್ಯಾಂಕ್ ನೋಡಿಲ್ಲ, ಒಳ್ಳೆಯ ಭಾವನೆಯಿಂದ ಹಣ ನೀಡಿದ್ದಾರೆ ಎಂದೇ ಭಾವಿಸೋಣ. ಆದರೆ ವಿಷಯ ಏನೆಂದರೆ ಯಾರು ನಿಜವಾಗಿಯೂ ಭಾರತೀಯ ಜನತಾ ಪಾರ್ಟಿಯ ಮತಬ್ಯಾಂಕಾಗಿದ್ದಾರೋ ಅವರನ್ನು ಯಡಿಯೂರಪ್ಪನವರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರು ಎಷ್ಟೋ ದಶಕಗಳಿಂದ ಬಿಜೆಪಿಗೆ ಮತ ನೀಡಿಯೇ ಬರುತ್ತಿದ್ದಾರೆ. ಯುಎಸ್ ಮಲ್ಯ ಕಾಲದಲ್ಲಿ ಜಿಎಸ್ ಬಿಗಳು ಕಾಂಗ್ರೆಸ್ಸಿನಲ್ಲಿ ಇದ್ದಿರಬಹುದು. ನಂತರ ಕಾಂಗ್ರೆಸ್ಸಿನ ವಿಪರೀತ ಅಲ್ಪಸಂಖ್ಯಾತ ತುಷ್ಟೀಕರಣದಿಂದ ಹೈರಾಣಾದ ಜಿಎಸ್ ಬಿಗಳು ಕಾಂಗ್ರೆಸ್ ಬಿಟ್ಟು ಬಿಜೆಪಿ ಬಂದಾಗಿದೆ. ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಸೇರಿ ಅತೀ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದದ್ದು ನಮ್ಮಿಂದಲೇ ಎಂದು ಹೇಳಲಿಕ್ಕೆ ಆಗದಿದ್ದರೂ ಕೊಂಕಣಿಗರನ್ನು ಕಡೆಗಣಿಸಿದ ಸಂದರ್ಭ ಕಾರ್ಕಳದಲ್ಲಿ ಒಮ್ಮೆ ಏನಾಗಿತ್ತು ಎನ್ನುವುದನ್ನು ಅಲ್ಲಿನ ಬಿಜೆಪಿ ಮುಖಂಡರು ಮರೆತಿರಲಿಕ್ಕಿಲ್ಲ. ಆದ್ದರಿಂದ ಕೊಂಕಣಿಗರು ಎಂದು ಬೇರೆಯವರಿಂದ ಕರೆಸಲ್ಪಡುವ ಜಿಎಸ್ ಬಿ ಮತ್ತು ಇತರ 40 ಪಂಗಡಗಳು ಕರಾವಳಿಯ ಬಹುತೇಕ ಕಡೆ ಸೋಲು-ಗೆಲುವಿನ ನಡುವೆ ನಿರ್ಣಾಯಕವಾಗಿ ನಿಲ್ಲುವ ಸಾಮರ್ತ್ಯ ಹೊಂದಿದ್ದಾರೆ. ಆದ್ದರಿಂದ ಸಾಮಾನ್ಯವಾಗಿ ಇವತ್ತಿನ ದಿನಗಳಲ್ಲಿ ಕೊಂಕಣಿಗರನ್ನು ದೂರ ಇಟ್ಟು ರಾಜಕೀಯ ಮಾಡಲು ಯಾವುದೇ ಪಕ್ಷದ ಶಾಸಕರು, ಸಂಸದರು ಹೋಗುವುದಿಲ್ಲ. ಆದರೆ ಇದೆಲ್ಲ ಯಡಿಯೂರಪ್ಪನವರಿಗೆ ಬಿದ್ದು ಹೋಗಿಲ್ಲ. ಅವರು ಕೊಂಕಣಿಗರು ಹೇಗಾದರೂ ಬಿಜೆಪಿಗೆ ಮತ ಕೊಟ್ಟೇ ಕೊಡುತ್ತಾರೆ. ನಾವು ಕ್ರೈಸ್ತರಿಗೆ ಬಕೆಟ್ ಹಿಡಿಯೋಣ ಎಂದು ನಿರ್ಧರಿಸಿದ್ದಂತೆ ಕಾಣುತ್ತದೆ. ರಾಜ್ಯ ಸರಕಾರದ ಈ ಧೋರಣೆಗೆ ಸ್ವತ: ಪದ್ಮಶ್ರೀ ಟಿ ವಿ ಮೋಹನದಾಸ್ ಪೈ ಅವರೇ ತಮ್ಮ ಟ್ವಿಟರ್ ನಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವ ಕೊಂಕಣಿ ಕೇಂದ್ರದ ಪರವಾಗಿ ಕೆಲವು ಗಣ್ಯಾತೀಗಣ್ಯರು ಕೊಂಕಣಿ ಭಾಷೆಯ ಅಭಿವೃದ್ಧಿಗೆ 15 ಕೋಟಿ ಕೇಳಿದ್ದರೂ ಅದನ್ನು ಬಜೆಟಿನಲ್ಲಿ ನೀಡದೇ ಇರುವುದು ಕೊಂಕಣಿಗರಿಗೆ ಬೇಸರ ತಂದಿದೆ. ಹಿಂದೆ 50 ಕೋಟಿ ಅನುದಾನ ಇದ್ದ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಈ ಬಾರಿ 200 ಕೋಟಿ ಕೊಡುವಾಗ ಉಳಿದ ಧರ್ಮದ ಕೊಂಕಣಿಗರು ಯಾವ ತಪ್ಪು ಮಾಡಿದ್ದಾರೆ ಸಿಎಂ? ಹಾಗಾದರೆ ನಾವು ಮತ ನೀಡುವುದಕ್ಕೆ ಸೀಮಿತನಾ? ನಾವು ಬಿಜೆಪಿ ಶಾಸಕರನ್ನು ಗೆಲ್ಲಿಸುವುದಕ್ಕೆ ತನು, ಮನ, ಧನ ಸುರಿಯಬೇಕಾ? ಗೆದ್ದ ಮೇಲೆ ನಮ್ಮನ್ನು ನೀವು ಮರೆಯುವುದಾದರೆ ನಿಮಗೂ, ಕಾಂಗ್ರೆಸ್ಸಿಗೂ ಅಥವಾ ಬೇರೆ ಪಕ್ಷಗಳಿಗೆ ವ್ಯತ್ಯಾಸವೇನು?
ಕಳೆದ ವರ್ಷ ಆರ್ಥಿಕ ಹಿಂದುಳಿದ ಬ್ರಾಹ್ಮಣರ ಪಟ್ಟಿಯಿಂದ ಜಿಎಸ್ ಬಿಗಳನ್ನು ಹೊರಗೆ ಇಡಲಾಗಿತ್ತು. ಇದು ಜಾಣ ಮರೆವೋ ಅಥವಾ ಕಣ್ತಪ್ಪಿನಿಂದ ಆದದ್ದೋ ಎಂದು ಇವತ್ತಿಗೂ ಗೊತ್ತಾಗಿಲ್ಲ. ನಾವು ನಿರಂತರ ಪ್ರಯತ್ನ ಪಟ್ಟರೂ ನಮ್ಮನ್ನು ಆ ಪಟ್ಟಿಯಲ್ಲಿ ಸೇರಿಸಿಲ್ಲ. ಹೀಗಿರುವಾಗ ಮತ್ತೆ ಅನ್ಯಾಯ. ಅಷ್ಟಕ್ಕೂ ವಿಶ್ವ ಕೊಂಕಣಿ ಕೇಂದ್ರದವರು ತಮಗೊಸ್ಕರ ಒಂದು ಪೈಸೆ ಕೇಳಿಲ್ಲ. ಅವರು ಕೊಂಕಣಿ ಭಾಷೆಗೆ ಸಲ್ಲಿಸುತ್ತಿರುವ ಸೇವೆಗೆ ಸರಕಾರ ಕೈ ಜೋಡಿಸಿದ್ದರೆ ಬಿಜೆಪಿಗೂ ಗೌರವ ಸಿಗುತ್ತಿತ್ತು. ಬಿಜೆಪಿ ಹೀಗೆ ಕೊಂಕಣಿಗರನ್ನು ನಿರ್ಲಕ್ಷ್ಯ ಮಾಡಿದರೆ ಕೊಂಕಣಿಗರು ಮತದಾನದ ಸಮಯದಲ್ಲಿ ತಟಸ್ಥರಾದರೂ ಸಾಕು, ಉಳಿದದ್ದು ಬುದ್ಧಿವಂತರಿಗೆ ಹೇಳಬೇಕಾಗಿಲ್ಲ!
Leave A Reply