ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಆಡಳಿತ ಪಕ್ಷದ ಸದಸ್ಯರ ಮುಂದೆ ನಿಜವಾದ ಸವಾಲು ಇನ್ನು ಶುರುವಾಗುತ್ತದೆ. ಗಂಭೀರವಾಗಿ ಯೋಚಿಸಿ ಮಾತನಾಡಲು ಕಲಿತರೆ ಈ ಬಾರಿಯ ಬೇಸಿಗೆಯನ್ನು ಯಾವುದೇ ತೊಂದರೆ ಇಲ್ಲದೆ ಕಳೆಯಬಹುದು. ಎಡಬಿಡಂಗಿಗಳಂತೆ ದಿನಕ್ಕೊಂದು ಜನಪ್ರಿಯ ಹೇಳಿಕೆ ಕೊಟ್ಟರೆ ಎಪ್ರಿಲ್ ಒಂದರಿಂದ ಇವರ ಬಣ್ಣ ಕಳಚುತ್ತದೆ. ಮೊನ್ನೆ ತುಂಬೆಯಲ್ಲಿ ನೇತ್ರಾವತಿಗೆ ಬಾಗಿನ ಅರ್ಪಿಸಲು ಹೋದ ಮೇಯರ್ ಏನು ಹೇಳಿದ್ದರು ಎನ್ನುವುದನ್ನು ಮರುದಿನ ಪತ್ರಿಕೆ ತೆಗೆದು ನೋಡಿದವರಿಗೆ ಗೊತ್ತಿದೆ. ” ಈ ಬಾರಿ ನೀರಿನ ಸಮಸ್ಯೆ ಇಲ್ಲ” ಅದನ್ನು ಓದಿದ ಮಂಗಳೂರಿನ ಜನರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ಅವರಿಗೆ ದಿವಾಕರ್ ಪಾಂಡೇಶ್ವರ್ ಅವರಲ್ಲಿ ಮೇಯರ್ ಅಲ್ಲ ಸಾಕ್ಷಾತ್ ಭಗೀರಥ ಕಂಡಿದ್ದ. ಆದರೆ ಬೆರಳೆಣಿಕೆಯ ದಿನಗಳ ಒಳಗೆ ಮೇಯರ್, ಪಾಲಿಕೆಯ ಕಮೀಷನರ್ ಮತ್ತು ಆಡಳಿತ ಪಕ್ಷದ ಮುಖಂಡರು ಯೂಟರ್ನ್ ಹೊಡೆಯುತ್ತಿರುವಂತೆ ಕಾಣುತ್ತಿದೆ. ಮೊನ್ನೆ ಇವರನ್ನು ಹೊಗಳಿದ್ದ ಜನ ಇನ್ನು “ಎಂಚಿನ ಅವಸ್ಥೆ ಮಾರ್ರೆ ಪಾಲಿಕೆದ” ಎಂದು ಹೇಳಲಿದ್ದಾರೆ. ಅಷ್ಟಕ್ಕೂ ವಿಷಯ ಏನು?
ತುಂಬೆಯ ಹೊಸ ಡ್ಯಾಂನಲ್ಲಿ ಸದ್ಯ 5.90 ಮೀಟರ್ ನೀರು ನಿಂತಿದೆ. ಸದ್ಯ ಒಳಹರಿವು ಇಲ್ಲ. ಮೊನ್ನೆ ಈ ನೀರನ್ನು ಕಣ್ತುಂಬಿ ನೋಡಿದ ಮೇಯರ್ ಹಾಗೂ ಇತರ ಅನುಭವಿಗಳು ಮಾಧ್ಯಮದವರ ಮುಂದೆ “ದಾಲಾ ಪ್ರಾಬ್ಲಂ ಇಜ್ಜಿ ಮಾರ್ರೆ, ಈ ಸಲ ಬಚಾವ್ ಆಯಾ” ಎಂದಿದ್ದಾರೆ. ಅವರ ಪ್ರಕಾರ ಈಗ ಇರುವ ನೀರು ಮಂಗಳೂರಿಗೆ 50 ದಿನ ಸಾಕು. ಸಾಮಾನ್ಯ ಜ್ಞಾನ ಏನೆಂದರೆ ಮೇಲಿರುವ ಸೂರ್ಯನನ್ನು ಇವರು ಕಣ್ಣೆತ್ತಿ ನೋಡಲೇ ಇಲ್ಲ. ಸದ್ಯ ಓವರ್ ಡ್ಯೂಟಿ ಮಾಡುತ್ತಿರುವಂತೆ ಕಾಣುತ್ತಿರುವ ಸೂರ್ಯ ಸ್ಟ್ರೋ ಹಾಕಿ ತುಂಬೆಯಲ್ಲಿರುವ ನೀರನ್ನು ಕುಡಿಯಲು ಕುಳಿತರೆ ನಾವು ಎಪ್ರಿಲ್ ಮೂರನೇ ವಾರಕ್ಕೆ ಕಾಲಿಡುವಾಗಲೇ ನಮ್ಮ ಪಾಡು ಯಾರಿಗೂ ಬೇಡಾ ಎನ್ನುವ ಪರಿಸ್ಥಿತಿ ಬರಲಿದೆ.
ಇನ್ನು ನಾವು ತುಂಬೆಗಿಂತಲೂ ಹೆಚ್ಚು ನಂಬಿರುವ ಎಎಂಆರ್ ಡ್ಯಾಂ ಕಥೆಗೆ ಬರುತ್ತೇನೆ. ಅಲ್ಲಿಗೂ ಹೋಗಿ ನೋಡಿಕೊಂಡು ಬಂದಿರುವ ಮೇಯರ್ ಮತ್ತು ಪಟಾಲಾಂ ಹೋ ಇಷ್ಟು ನೀರು ಇಲ್ಲಿದೆಯಾ, ಮಂಗಳೂರಿನವರು ದಿನಕ್ಕೆ ಮೂರು ಸಲ ಸ್ನಾನ ಮಾಡಿದರೂ ಏನೂ ಸಮಸ್ಯೆ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಂತೆ ಕಾಣುತ್ತದೆ. ಆದರೆ ಒಂದು ವಿಷಯ ಇವರಿಗೆ ಗೊತ್ತಿಲ್ಲ. ಎಎಂಆರ್ ಡ್ಯಾಂ 19.80 ಮೀಟರ್ ಎತ್ತರ ಇರಬಹುದು. ಆದರೆ ಇಲ್ಲಿ ಕನಿಷ್ಟ 12 ಮೀಟರ್ ನೀರಿಗಿಂತ ಕೆಳಗೆ ಹೋಗುವಂತೆ ಇಲ್ಲ. ಅದರ್ಥ ಹೆಚ್ಚೆಂದರೆ 7.80 ಮೀಟರ್ ನಷ್ಟು ನೀರನ್ನು ಮಾತ್ರ ಬಳಸಬಹುದು. ಅದರಲ್ಲಿ ಈಗಲೇ ಖಾಸಗಿ ಕಂಪೆನಿಗಳಿಗೆ ನಿತ್ಯ 18 ಎಂಜಿಡಿ ನೀರು ಪಂಪ್ ಮಾಡಿದರೆ ನಮಗೆಷ್ಟು ಉಳಿಯುತ್ತೆ. ಇನ್ನು ಪಾಲಿಕೆ ಕಡೆಯಿಂದ ಎಎಂಆರ್ ಡ್ಯಾಂನಲ್ಲಿ ಈಗ ಇರುವ ನೀರಿನ ಪ್ರಮಾಣದ ಬಗ್ಗೆ ಯಾವುದೇ ಲಿಖಿತ ಒಡಂಬಡಿಕೆ ಅಥವಾ ವಿಡಿಯೋ ಫೂಟೆಜ್ ಇಲ್ಲ. ಒಂದು ವೇಳೆ ನೀರಿನ ಕೊರತೆ ಅತಿರೇಕಕ್ಕೆ ಹೋಗಿ ಇಲ್ಲಿ ಮೇಯರ್, ಇಬ್ಬರು ಶಾಸಕರು ಕಾರು ಹತ್ತುವಷ್ಟರಲ್ಲಿ ಎಎಂಆರ್ ನವರು ಇರುವ ನೀರನ್ನು ಬೇರೆ ಕಡೆ ಸಾಗಿಸುವುದಕ್ಕೂ ಹೇಸುವುದಿಲ್ಲ. ಅದನ್ನು ಅವರು ಹಿಂದೆನೂ ಮಾಡಿ ತೋರಿಸಿದ್ದಾರೆ.
ಒಟ್ಟಿನಲ್ಲಿ ಪಾಲಿಕೆಯ ಆಡಳಿತ ಮತ್ತು ವಿಪಕ್ಷದ ಕೆಲವು ಸದಸ್ಯರು ಮತ್ತು ಅಧಿಕಾರಿಗಳಿಗೆ ನಿಜವಾದ ಹಬ್ಬ ಶುರುವಾಗುವುದು ಎಪ್ರಿಲ್ ನಿಂದ. ಈ ವಿಷಯದಲ್ಲಿ ಎಲ್ಲರೂ ಒಂದೇ. ನೀರಿನ ಕೊರತೆ ಇದೆ ಎನ್ನುವ ಹೇಳಿಕೆ ಕೊಟ್ಟು ಟ್ಯಾಂಕರ್ ಗಳ ಓಡಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರೆ ಎಲ್ಲರೂ ದಂಡಿಯಾಗಿ ಊಟಕ್ಕೆ ಕುಳಿತು ಮೃಷ್ಟಾನ್ನ ಬಾರಿಸಬಹುದು. ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಈ ಬಾರಿ ಟ್ಯಾಂಕರ್ ಒಳಗೆ ಕುಳಿತು ಎರಡೂ ಕೈಯಲ್ಲಿ ತಿನ್ನಲು ಶುರು ಮಾಡಿದರೆ ಯಾವುದೇ ಮುಲಾಜಿಲ್ಲದೆ ಈ ಜಾಗೃತ ಅಂಕಣದಲ್ಲಿ ಗೋಲ್ ಮಾಲ್ ಮಾಡುವವರ ಛದ್ಮವೇಷ ಕಳಚಲಿದ್ದೇನೆ. ದಿವಾಕರ್ ಪಾಂಡೇಶ್ವರ್ ಮೇಯರ್ ಆಗುವುದಕ್ಕಿಂತ ಮೊದಲೇ ನನಗೆ ಪರಿಚಯವಿದೆ. ಹಾಗಂತ ತಪ್ಪು ಮಾಡಿದರೆ ಇದೇ ಅಂಕಣದಲ್ಲಿ ಎಚ್ಚರಿಕೆ ಗಂಟೆ ಬಾರಿಸಲಿದೆ. ಟ್ಯಾಂಕರ್ ಲಾಬಿ ಅವರನ್ನು ಏಳುಸುತ್ತಿನ ಕೋಟೆಯಂತೆ ಸುತ್ತುವರಿದರೂ ಅವರು ಅದರಿಂದ ಹೊರಬಲ್ಲರು. ಅವರ ಕೈಗೆ ಭ್ರಷ್ಟಾಚಾರದ ಕಳಂಕ ಮೆತ್ತದಿರಲಿ. ಉತ್ತಮ ಪಾರದರ್ಶಕ ಬೇಸಿಗೆಯನ್ನು ಅವರು ನಮಗೆ ನೀಡಲಿ ಎಂದು ಸದ್ಯ ಹಾರೈಕೆ!
Leave A Reply