80 ಕೋಟಿ ಜನರಿಗೆ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ!!
ದೇಶ ಸಂಕಷ್ಟದಲ್ಲಿರುವಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಜನರ ಸಂಕಷ್ಟಕ್ಕೆ ಧಾವಿಸಿದ್ದಾರೆ. ತುರ್ತು ಸೇವೆಯಲ್ಲಿರುವ ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆಯರಿಗೆ, ಪೌರ ಕಾರ್ಮಿಕರಿಗೆ ತಲಾ 50 ಲಕ್ಷದವರೆಗೆ ಜೀವವಿಮೆ ನೀಡಲಾಗಿದೆ. ಇನ್ನು ದೇಶದಲ್ಲಿರುವ 8.69 ಕೋಟಿ ರೈತರಿಗೆ ಮೂರು ತಿಂಗಳು ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಅವರ ಬ್ಯಾಂಕು ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಇನ್ನು ಎರಡು ಕೋಟಿ ಹಿರಿಯ ನಾಗರಿಕರಿಗೆ, ದಿವ್ಯಾಂಗರಿಗೆ ಮತ್ತು ವಿಧವೆಯರಿಗೆ ತಿಂಗಳಿಗೆ ಒಂದು ಸಾವಿರದಂತೆ ಮೂರು ತಿಂಗಳು ಹಣ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಜನಧನ್ ಯೋಜನೆಯಡಿ ಬ್ಯಾಂಕ್ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 500 ರೂಪಾಯಿ ಜಮಾ ಮಾಡಲಾಗುವುದು. ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದಿರುವ ಎಂಟು ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ತಲಾ ಒಂದು ಅಡುಗೆ ಅನಿಲ ಸಿಲಿಂಡರ್ ಪ್ರಕಾರ ಮೂರು ತಿಂಗಳು ಉಚಿತ ವಿತರಣೆ, ದೀನದಯಾಳ್ ರೋಜ್ ಗಾರ್ ಯೋಜನೆಯಡಿ ಯಾವುದೇ ಭದ್ರತೆ ಇಲ್ಲದೆ ಹತ್ತು ಲಕ್ಷ ರೂಪಾಯಿ ಸ್ವ ಉದ್ಯೋಗಕ್ಕೆ ಕೊಡುತ್ತಿದ್ದ ಸಾಲವನ್ನು ಇನ್ನು 20 ಲಕ್ಷಕ್ಕೆ ಹೆಚ್ಚಿಸಲಾಗುವುದು, 63 ಮಹಿಳಾ ಸ್ವಸಹಾಯ ಸಂಘಗಳಿಗೆ ಹಣಕಾಸು ನೆರವು ಘೋಷಣೆ ಅದೇನೆಂದರೆ ಯಾವುದೇ ಗ್ಯಾರಂಟಿ ಇಲ್ಲದೆ 20 ಲಕ್ಷ ಸಾಲ ಸೌಲಭ್ಯ ನೀಡಲಾಗುವುದು, ನರೇಗಾ ಕಾರ್ಮಿಕರ ವೇತನ ತಲಾ 183 ರೂಪಾಯಿ ಹೆಚ್ಚಳ ಮಾಡಲಾಗಿದೆ ಮತ್ತು 15 ಸಾವಿರ ರೂಪಾಯಿಗಿಂತಲೂ ಕಡಿಮೆ ವೇತನ ಇರುವ ಸಂಘಟಿತ ವಲಯದ, ನೂರಕ್ಕೂ ಕಡಿಮೆ ಕಾರ್ಮಿಕರಿರುವ ಕಂಪೆನಿಗಳಿಗೆ ಕಾರ್ಮಿಕರ ಇಪಿಎಫ್ ಹಣವನ್ನು ಮುಂದಿನ ಮೂರು ತಿಂಗಳ ತನಕ ಸರಕಾರವೇ ಭರಿಸಲಿದೆ.
ಇದನ್ನೆಲ್ಲಾ ಪೂರೈಸಲು ಕೇಂದ್ರ ಸರಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮೂಲಕ 1,75,000 ಕೋಟಿ ರೂಪಾಯಿ ಅನುದಾನವನ್ನು ನಾಗರಿಕರ ಕಲ್ಯಾಣ ಕಾರ್ಯಕ್ರಮಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪರವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇವತ್ತು ಘೋಷಿಸಿದ್ದಾರೆ. ಇನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಕೇಂದ್ರ ಸರಕಾರ ಘೋಷಿಸಿದೆ. ಅದು ದೇಶದ 80 ಕೋಟಿ ಜನರಿಗೆ ನೇರ ಉಪಯೋಗವಾಗಲಿದೆ. ಈ ಯೋಜನೆಗಾಗಿ 40000 ಕೋಟಿ ರೂಪಾಯಿಯನ್ನು ಸರಕಾರ ನಿಗದಿಗೊಳಿಸಲಾಗಿದೆ. ಅದರಲ್ಲಿ 80 ಕೋಟಿ ಜನರಿಗೆ ತಿಂಗಳಿಗೆ 5 ಕಿ.ಲೋ ಅಕ್ಕಿ, 5 ಕಿ.ಲೋ ಗೋಧಿ, ಹಾಗೆ ಒಂದು ಕಿ.ಲೋ ಪ್ರೋಟೀನ್ ಭರಿತ ಬೇಳೆಗಳನ್ನು ನೀಡಲು ಸರಕಾರ ನಿರ್ಧರಿಸಿದೆ.
ನನ್ನ ಪ್ರಕಾರ ಕೇಂದ್ರ ಸರಕಾರ ಅತ್ಯುತ್ತಮ ಯೋಜನೆಗಳಲ್ಲಿ ಇದು ಒಂದಾಗಿದೆ. ಅದರೊಂದಿಗೆ ಪ್ರಧಾನ ಮಂತ್ರಿಗಳು ಮಾಡಬೇಕಾದ ಇನ್ನೊಂದು ಬಹುಮುಖ್ಯ ಕಾರ್ಯ ಎಂದರೆ ಬ್ಯಾಂಕುಗಳಿಂದ ಜನಸಾಮಾನ್ಯರು ಪಡೆದುಕೊಂಡ ಸಾಲದ ಕಂತುಗಳನ್ನು ಕಟ್ಟುವ ಬಗ್ಗೆ. ನಮ್ಮ ದೇಶದಲ್ಲಿ ಯಾವನೇ ಒಬ್ಬ ನಾಗರಿಕ ತನ್ನ ಅಗತ್ಯಗಳಿಗಾಗಿ ಒಂದಲ್ಲ ಒಂದು ಸಾಲವನ್ನು ಪಡೆದುಕೊಂಡಿರುತ್ತಾನೆ. ಅದು ಗೃಹ ಸಾಲ, ವಾಹನ ಸಾಲ, ಮದುವೆ ಸಹಿತ ಶುಭ ಸಮಾರಂಭಗಳಿಗೆ ಸಾಲ ಇರಬಹುದು. ಕಿರು ಉದ್ದಿಮೆ ಪ್ರಾರಂಭಿಸುವುದರಿಂದ ಹಿಡಿದು ವಿವಿಧ ಕಾರಣಗಳಿಗೆ ಸಾಲ ಪಡೆದುಕೊಳ್ಳುವುದು ಮಾಮೂಲಿ. ಈಗ ಏಕಾಏಕಿ ದೇಶದಲ್ಲಿ ಮೂರು ವಾರ ಎಲ್ಲವೂ ಬಂದ್ ಆಗಿರುವುದರಿಂದ ಸಂಬಳ ಅಥವಾ ವ್ಯವಹಾರದಿಂದ ಬರುವ ಲಾಭವನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಜನರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ. ಇನ್ನು ನಮ್ಮ ಜೀವನ ಸಹಜ ಸ್ಥಿತಿಗೆ ಯಾವಾಗ ಮರಳುವುದು ಎನ್ನುವುದನ್ನು ಯಾವ ಜ್ಯೋತಿಷಿಗೂ ಹೇಳುವುದು ಅಸಾಧ್ಯವಾಗಿದೆ. ನಮ್ಮ ಬದುಕು ಮುಖ್ಯ ವಾಹಿನಿಗೆ ಬಂದು ಉದ್ಯೋಗ, ವ್ಯವಹಾರಗಳು ಪ್ರಾರಂಭವಾಗಿ ಅದರಿಂದ ಸಂಬಳ, ಲಾಭ ಕಾಣುವಾಗ ಇನ್ನೆಷ್ಟು ಕಾಲ ಇದೆಯೋ, ಭಗವಂತನಿಗೆ ಗೊತ್ತು. ಹೆಚ್ಚಿನ ಸಣ್ಣಪುಟ್ಟ ವ್ಯವಹಾರ ಸಂಸ್ಥೆಗಳಲ್ಲಿ ಮಾಲೀಕರು ನಾಡಿದ್ದು ಒಂದನೇ ತಾರೀಕು ಸರಿಯಾಗಿ ಸಂಬಳ ಕೊಡುವುದು ಡೌಟು. ಇನ್ನು ಜಾಹೀರಾತು ನಂಬಿರುವ ವ್ಯವಹಾರ ಸಂಸ್ಥೆಗಳಿಂದ ಹಿಡಿದು ಹೋಟೇಲಿನ ತನಕ ಸಿಬ್ಬಂದಿಗಳಿಗೆ ಸಂಬಳ ಸದ್ಯ ಕಷ್ಟಕಷ್ಟ. ಆದ್ದರಿಂದ ಅವರೆಲ್ಲರೂ ತೆಗೆದುಕೊಂಡಿರುವ ಸಾಲವನ್ನು ತೀರಿಸಲು ಕಷ್ಟಸಾಧ್ಯವಾಗಲಿದೆ. ಅದನ್ನು ಮನಗಂಡು ಮೋದಿಯವರು ಸಾಲ ತುಂಬುವ ದಿನವನ್ನು ಕನಿಷ್ಟ ಮೂರು ತಿಂಗಳು ದೂಡಬೇಕಾಗಿ ವಿನಂತಿ. ಅದಕ್ಕಾಗಿ ಅವರು ಸಾಲ ಮರುಪಾವತಿಗೆ ಕನಿಷ್ಟ ಮೂರು ತಿಂಗಳು ಗ್ರಾಹಕರ ಮೇಲೆ ಯಾವುದೇ ಒತ್ತಡ ಹಾಕಬಾರದು ಎನ್ನುವ ಸೂಚನೆ ಬ್ಯಾಂಕುಗಳಿಗೆ ನೀಡಬೇಕು.
Leave A Reply