ನಾವು ತಲಪಾಡಿ ಟೆನ್ಷನ್ ನಲ್ಲಿದ್ವಿ, ಊರಲ್ಲೇ ಕೊರೊನಾ ಬಾಂಬ್ ಸ್ಫೋಟ ಗೊತ್ತೆ ಆಗಲಿಲ್ಲ!!

ತಬ್ಲೀಘಿಗಳ ರಂಪಾಟ ನೋಡಿದಾಯ್ತು. ಅವರು ಮಾಡಿದ ಕರ್ಮದಿಂದ ದೇಶ ಅನುಭವಿಸಿದ್ದನ್ನು ಕಂಡಿದ್ದು ಆಯಿತು. ಆ ಮುಸ್ಲಿಂ ಸಮಾವೇಶದಲ್ಲಿ ಭಾಗವಹಿಸಿದವರನ್ನು ಹುಡುಕಿ ಒಬ್ಬೊಬ್ಬರನ್ನೇ ಹಿಡಿದು ಪರೀಕ್ಷೆ ಮಾಡಿ ಅವರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಿ ಮೊದಲ ಮತ್ತು ದ್ವೀತಿಯ ಸಂಪರ್ಕದಲ್ಲಿ ಇರುವವರನ್ನು ಗುರುತಿಸಿ ಕ್ವಾರಂಟೈನ್ ಮಾಡಿಸಿ ಉಸಿರು ಬಿಡುವಷ್ಟರಲ್ಲಿ ನಂಜನಗೂಡು ಸಹಿತ ಇನ್ನೊಂದು ಮತ್ತೊಂದು ಆಯಿತು. ಅದೆಲ್ಲವು ಒಂದು ಕಡೆ ಆದರೆ ದಕ್ಷಿಣ ಕನ್ನಡದವರಿಗೆ ಮೊದಲ ಆತಂಕ ಇದ್ದದ್ದು ಕೇರಳದ ಕಾಸರಗೋಡು ಜಿಲ್ಲೆಯ ಬಗ್ಗೆ. ಯಾಕೆಂದರೆ ಮೊದಲಿಗೆ ಮಂಗಳೂರಿನಲ್ಲಿ ಕೊರೊನಾ ಕಾಲಿಟ್ಟಿದ್ದು ದುಬೈಯಿಂದ ಕಾಸರಗೋಡುವಿಗೆ ಬಂದ ವ್ಯಕ್ತಿ ಮಂಗಳೂರು ಆಸ್ಪತ್ರೆಗೆ ಸೇರಿದಾಗ. ಆದ್ದರಿಂದ ನಾವು ಕೆಂಗೆಣ್ಣಿನಿಂದ ನೋಡಿದ್ದು ಕಾಸರಗೋಡು ಜಿಲ್ಲೆಯನ್ನು. ತಕ್ಷಣ ಗಡಿ ಮುಚ್ಚಿಬಿಟ್ವಿ. ಯಾವ ಒತ್ತಡ ಬಂದರೂ ಗಡಿ ತೆರೆಯಲಿಲ್ಲ. ಅವರು ಸುಪ್ರೀಂಕೋರ್ಟ್ ಗೆ ಹೋದರು. ನಾವೂ ಹೋದ್ವಿ. ಕೊನೆಗೆ ನಾನ್ ಕೊರೊನಾ ರೋಗಿಗಳನ್ನು ಬಿಡಲು ಸೂಚನೆ ಬಂತು. ನಾವು ಸದ್ಯ ಒಂದು ಕಣ್ಣು ಅತ್ತ ಇಟ್ಟುಕೊಂಡೆ ನಮ್ಮವರ ಸುರಕ್ಷತೆ ಬಗ್ಗೆ ಸಮಾಧಾನ ಪಡುತ್ತಿದ್ದಂತೆ ಹಿಂದಿನಿಂದ ಊರಿನಲ್ಲಿಯೇ ಕೊರೊನಾ ಬಾಂಬ್ ಸ್ಫೋಟಗೊಂಡದ್ದು ಗೊತ್ತೆ ಆಗಲಿಲ್ಲ.
ಅದು ಫಸ್ಟ್ ನ್ಯೂರೋ ಆಸ್ಪತ್ರೆ. ಅಲ್ಲಿಗೆ ಯಾವಾಗ ಕೊರೊನಾ ಕಾಲಿಟ್ಟಿದ್ದು ಎನ್ನುವುದು ತನಿಖೆ ನಡೆಯುತ್ತಿದೆ. ಆದರೆ ಅಷ್ಟರೊಳಗೆ ನಮ್ಮ ಜಿಲ್ಲೆಯ ಮೂವರು ಅಮಾಯಕರುಪರಲೋಕ ಯಾತ್ರೆಗೆ ತೆರಳಿ ಆಗಿದೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಐದು ಮಂದಿಗೂ ನೇರ ಸಂಪರ್ಕ ಇರುವುದು ಫಸ್ಟ್ ನ್ಯೂರೋ ಆಸ್ಪತ್ರೆಯಿಂದ. ಆಸ್ಪತ್ರೆಯಲ್ಲಿ 35 ದಿನಗಳಿಂದ ಬೇರೆ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ ಹಿರಿಯ ಜೀವವೊಂದು ಅಲ್ಲಿಯೇ ಕೋವಿಡ್ 19 ರ ಸಂಪರ್ಕಕ್ಕೆ ಬಂದಿತ್ತು. ಅತ್ತೆಯನ್ನು ನೋಡಲು ಕೆಲವು ಸಲ ಬಂದಿದ್ದ ಸೊಸೆಗೆ ಸಹಜವಾಗಿ ಕೋವಿಡ್ 19 ಅಂಟಿಕೊಂಡಿತ್ತು. ಅವರಿಂದಲೇ ಅದು ನೆರೆಮನೆಯ ಹೆಂಗಸಿಗೆ ಹೋಯಿತಾ? ಒಟ್ಟಿನಲ್ಲಿ ಮೂವರು ಅನಾವಶ್ಯಕವಾಗಿ ಪ್ರಾಣ ಕಳೆದುಕೊಂಡು ಬಿಟ್ಟರು. ಅಷ್ಟೊತ್ತಿಗೆ ಕೋವಿಡ್ 19 ಫ್ಯಾಕ್ಟರಿ ನಮ್ಮ ನಗರದಲ್ಲಿಯೇ ಇರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಾಗಿತ್ತು. ಅದನ್ನು ಸೀಲ್ ಡೌನ್ ಮಾಡಿ ಒಳಗಿದ್ದವರಿಗೆ ಕ್ವಾರಂಟೈನ್ ಮಾಡಿದಾಗ ರೂಂ ಸ್ವಚ್ಚ ಮಾಡುತ್ತಿದ್ದ ಸಹಾಯಕಿಯೊಬ್ಬರಿಗೆ ಇದು ತಗುಲಿದ್ದು ಗೊತ್ತಾಗಿದೆ. ಇನ್ನು ಉಳಿದವರ ಪರೀಕ್ಷೆ ವರದಿ ಬರಬೇಕು. ಎಷ್ಟೋ ಮಂದಿ ರೋಗಿಗಳು ಇತ್ತೀಚೆಗೆ ಆಸ್ಪತ್ರೆ ಸೀಲ್ ಡೌನ್ ಆಗುವ ಮೊದಲು ಅಲ್ಲಿಂದ ಬಿಡುಗಡೆಗೊಂಡು ಹೋಗಿದ್ದಾರೆ, ಆಸ್ಪತ್ರೆಗಳ ಸಿಬ್ಬಂದಿಗಳು ನಿತ್ಯ ಮನೆಗೆ ಹೋಗಿ ಬಂದಿದ್ದಾರೆ. ಈಗ ಪಾಸಿಟಿವ್ ಬಂದವರ ಮನೆಯವರು ಯಾರು? ಅವರೆಲ್ಲರ ಪರೀಕ್ಷೆ ಮಾಡಬೇಕು. ರೋಗಿಗಳ ಮನೆಯವರ ಪರೀಕ್ಷೆ ಮಾಡಬೇಕು. ಅವರು ಯಾರ ಸಂಪರ್ಕದಲ್ಲಿ ಇದ್ದರು ಎಂದು ನೋಡಬೇಕು. ಇದು ಮತ್ತೊಂದು ತಬ್ಲಿಘಿ ಆಗುತ್ತಿದೆಯಾ ಎನ್ನುವ ಆತಂಕ ಇದೆ. ಬೋಳಾರದ ಸ್ಮಶಾನದ ಪಕ್ಕದ ರಸ್ತೆಯಲ್ಲಿರುವ ಮನೆಯೊಂದರ ಇನ್ನಿಬ್ಬರಿಗೆ ಕೋವಿಡ್ 19 ಇರುವುದು ಪಕ್ಕಾ ಆದರೆ ಕೊರೊನಾ ನಮ್ಮ ನಿಮ್ಮ ಮನೆಯ ಅಂಗಳಕ್ಕೆ ಬಂದಿರುವುದು ಗ್ಯಾರಂಟಿ.
ನಾವು ಕಳೆದ ಬಾರಿ ತಲಪಾಡಿ ಸಹಿತ ಕರ್ನಾಟಕ-ಕೇರಳದ ಇತರ 12 ಸಂಪರ್ಕ ರಸ್ತೆಗಳನ್ನು ಮುಚ್ಚಿ ಯಾವುದೇ ಕಾರಣಕ್ಕೆ ಬಿಡಲ್ಲ ಎಂದು ಹಟ ಮಾಡಿದ್ದು ಯಾಕೆಂದರೆ ಒಂದು ವೇಳೆ ಅಲ್ಲಿಂದ ರೋಗಿಗಳು ಬಂದರೆ ನಮ್ಮ ಖಾಸಗಿ ಆಸ್ಪತ್ರೆಗಳು ರತ್ನಕಂಬಳಿಗಳು ಹಾಸಿ ಅಲ್ಲಿನ ರೋಗಿಗಳನ್ನು ಸ್ವಾಗತಿಸುತ್ತವೆ. ನಮ್ಮ ಮಂಗಳೂರಿನ ಹೆಚ್ಚಿನ ಖ್ಯಾತ ಆಸ್ಪತ್ರೆಗಳು ಕೇರಳ ಗಡಿಯಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿವೆ. ಇನ್ನು ಬಹುತೇಕ ಆಸ್ಪತ್ರೆಗಳ ಆದಾಯದಲ್ಲಿ 70% ಕೇರಳ ರೋಗಿಗಳಿಂದಲೇ ಬರುವುದು. ಲಾಕ್ ಡೌನ್ ಆಗಿ ಯಾವಾಗ ಗಡಿ ಬಂದಾಯಿತೋ ಮೊದಲು ಒದ್ದಾಡಿದ್ದು ಇದೇ ಖಾಸಗಿ ಆಸ್ಪತ್ರೆಗಳು. ನಂತರ ನಾನ್ ಕೋವಿಡ್ ರೋಗಿಗಳು ಮಂಗಳೂರಿಗೆ ಬರಬಹುದು ಎಂದು ನಿಯಮ ಸಡಿಲಿಕೆ ಆದಾಗ ನಮ್ಮ ಆಸ್ಪತ್ರೆಗೂ ಕಳುಹಿಸಿಕೊಡಿ. ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಮಾತ್ರ ಯಾಕೆ ಎಂದು ಜಿಲ್ಲಾಡಳಿತದ ಮೇಲೆ ಒತ್ತಡ ತರಲಾಗಿತ್ತು. ಒಂದು ವೇಳೆ ಬೇಕಾಬಿಟ್ಟಿ ತಲಪಾಡಿಯಲ್ಲಿ ಬಿಟ್ಟು ಎಲ್ಲಾ ಖಾಸಗಿ ಆಸ್ಪತ್ರೆಗೂ ಹೋಗಬಹುದು ಎಂದಿದ್ದರೆ ದಿನಕ್ಕೆ ಹತ್ತು ಕೋವಿಡ್ 19 ರೋಗಿಗಳು ಹುಟ್ಟಿಕೊಳ್ಳುತ್ತಿದ್ದರು. ಹಣದ ದಾಹದ ಆಸ್ಪತ್ರೆಗಳು ಅಪ್ಪಟ ವ್ಯಾಪಾರಕ್ಕೆ ಕುಳಿತುಕೊಂಡಿರುವಾಗ ಅವರಿಗೆ ಯಾರಿಗೆ ಸಾಂಕ್ರಾಮಿಕ ರೋಗ ಕೋವಿಡ್ 19 ತಗುಲಿದರೆಷ್ಟು, ಬಿಟ್ಟರೆಷ್ಟು, ತಮ್ಮ ಖಜಾನೆ ತುಂಬಿದರಾಯಿತು. ಹೋದವರು ಹೋದರು. ಇನ್ನು ಟೆನ್ಷನ್ ನಮಗೆ!
Leave A Reply