ನಿಜವಾದ ಗಂಡಸು ಪಾಲಿಕೆಯ ಮೇಯರ್ ಸ್ಥಾನಕ್ಕೆ ಬಂದಿದ್ದಾರೆ!!

ಮಂಗಳೂರಿನಲ್ಲಿ ಮಳೆಗಾಲ ಕಾಲಿಟ್ಟ ಕೂಡಲೇ ಜಪ್ಪಿನಮೊಗರುವಿನಲ್ಲಿ ಕೃತಕ ನೆರೆ ಗ್ಯಾರಂಟಿ ಎನ್ನುವ ಮಾತು ಎಷ್ಟೋ ವರ್ಷಗಳಿಂದ ಚಾಲ್ತಿಯಲ್ಲಿತ್ತು. ಅದು ಈ ಮಳೆಗಾಲಕ್ಕೆ ಸುಳ್ಳಾಗಲಿದೆ. ಕೃತಕ ನೆರೆ ಆಗುವ ಪ್ರದೇಶದಲ್ಲಿ ಇದ್ದ ಒಂದು ಅಡ್ಡಿಯನ್ನು ಇವತ್ತು ಕಿತ್ತು ಬಿಸಾಡಲಾಗಿದೆ. ಇದು ನಡೆದದ್ದು ಇವತ್ತು ಬೆಳಿಗ್ಗೆ. ವಿಷಯ ಏನೆಂದರೆ ಜಪ್ಪಿನಮೊಗರುವಿನಲ್ಲಿರುವ ಒಂದು ರಾಜಕಾಲುವೆಗೆ ಎರಡು ಕಾಂಕ್ರೀಟ್ ಪೈಪುಗಳನ್ನು ಅಳವಡಿಸಿ ಅದರ ಮೇಲೆ ಮಣ್ಣು ಹಾಕಿ ನಂತರ ಸೇತುವೆ ರಸ್ತೆಯ ತರಹ ಒಂದು ವ್ಯವಸ್ಥೆಯನ್ನು ಮಾಡಲಾಗಿತ್ತು. ಯಾಕೆಂದರೆ ರಾಜಕಾಲುವೆಯ ಒಂದು ಕಡೆ ರಸ್ತೆ ಇದ್ದರೆ ಮತ್ತೊ0ದೆಡೆ ಖಾಸಗಿ ಶಾಲೆಯೊಂದು ಇದೆ. ಶಾಲೆಗೆ ಹೋಗಲು ಪ್ರತ್ಯೇಕ ದಾರಿ ಇದ್ದರೂ ಆ ಶಾಲೆಯ ಮಾಲೀಕರು ತಮ್ಮ ಪ್ರಭಾವದಿಂದ ಅನಧಿಕೃತ ರಸ್ತೆಯನ್ನು ರಾಜಕಾಲುವೆಯ ಮೇಲೆ ನಿರ್ಮಿಸಿದ್ದರು. ಇದರಿಂದ ಪ್ರತಿ ಬಾರಿ ಸ್ವಲ್ಪ ಜೋರು ಮಳೆ ಬಂದರೆ ಆ ಭಾಗವೀಡಿ ಕೃತಕ ನೆರೆಯಿಂದ ತತ್ತರಿಸುತ್ತಿತ್ತು. ಈ ಸಮಸ್ಯೆಗೆ ಕಾರಣ ಏನು ಎನ್ನುವುದು ಪಾಲಿಕೆಯ ಆಡಳಿತ ಪಕ್ಷದಿಂದ ಹಿಡಿದು ವಿರೋಧ ಪಕ್ಷದವರಿಗೂ, ಅಧಿಕಾರಿಗಳಿಗೂ ಗೊತ್ತಿತ್ತು. ಆದರೆ ಯಾರೂ ಕೂಡ ಬಾಯಿ ತೆರೆಯುತ್ತಿರಲಿಲ್ಲ. ಯಾಕೆಂದರೆ ಶಾಲೆಯ ಮಾಲೀಕರು ಎಲ್ಲರನ್ನೂ ಹೇಗೆ “ಚೆನ್ನಾಗಿ” ಇಡಬೇಕೋ ಹಾಗೆ ಇಟ್ಟಿದ್ದರು. ಆದರೆ ಇವತ್ತು ಮಂಗಳೂರಿನ ಪ್ರಥಮ ಪ್ರಜೆ ದಿವಾಕರ್ ಪಾಂಡೇಶ್ವರ್ ತಮ್ಮ ಅಧಿಕಾರದ ನಿಜವಾದ ಪವರ್ ತೋರಿಸಿದ್ದಾರೆ. ಅವರಿಗೆ ಪಾಲಿಕೆಯ ಆಯುಕ್ತರಾದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಸಾಥ್ ನೀಡಿದ್ದಾರೆ. ಜೆಸಿಬಿ ತಂದು ಆ ಅಕ್ರಮ ರಸ್ತೆಯನ್ನು ಕಿತ್ತು ಬಿಸಾಡಲಾಗಿದೆ. ಇದರಿಂದ ಆ ಭಾಗದ ಜನರಿಗೆ ಈ ಮಳೆಗಾಲದಲ್ಲಿ ಕೃತಕ ನೆರೆಯ ದರ್ಶನ ಆಗುವುದಿಲ್ಲ.
ರಾಜಕಾಲುವೆಯ ಮೇಲೆ ಅನಧಿಕೃತವಾಗಿ ರಸ್ತೆ ಅಥವಾ ಸೇತುವೆಯನ್ನು ನಿರ್ಮಿಸುವುದು ನಿಯಮ ಪ್ರಕಾರ ಅಪರಾಧ. ಆದರೆ ಕೆಲವು ಪ್ರಭಾವಿಗಳು ಮುಖ್ಯರಸ್ತೆಯಿಂದ ತಮ್ಮ ಜಮೀನಿಗೆ, ಫ್ಯಾಕ್ಟರಿಗೆ ಹೋಗಲು ಸುತ್ತುಬಳಸಿ ಹೋಗಬೇಕಾದ ಸಂದರ್ಭ ತಮಗೆ ಸುಲಭವಾಗಲು ಹೀಗೆ ಅಕ್ರಮ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ರಾಜಕಾಲುವೆಗೆ ಎರಡು ಕಾಂಕ್ರೀಟ್ ಪೈಪುಗಳನ್ನು ಹಾಕಿ ನೀರು ಹೋಗಲು ವ್ಯವಸ್ಥೆ ಮಾಡಿರುತ್ತಾರೆ. ಆದರೆ ನಿಮಗೆ ಗೊತ್ತಿರುವಂತೆ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಬೃಹತ್ ರಾಜಕಾಲುವೆಗೆ ಎರಡು ಸಣ್ಣ ಪೈಪುಗಳು ಎಲ್ಲಿಗೂ ಸಾಕಾಗುವುದಿಲ್ಲ. ಮಳೆಯ ನೀರು ಬಂದ ರಭಸಕ್ಕೆ ಪೈಪುಗಳಿಂದ ನೀರು ಪಾಸಾಗಲು ಜಾಗವಿಲ್ಲದಾಗ ಅದೇ ನೀರು ಪಕ್ಕದ ಪ್ರದೇಶಗಳಿಗೆ ದಾರಿ ಬದಲಿಸುತ್ತವೆ. ಅದರಿಂದ ಕೃತಕ ನೆರೆ ಎನ್ನುವುದು ಮಂಗಳೂರಿನಲ್ಲಿ ಸಂಪ್ರದಾಯದಂತೆ ಬೆಳೆದಿರುವುದು.
ನನಗೆ ನೆನಪಿದೆ. ಸುಮಾರು ಹತ್ತು ವರ್ಷದ ಹಿಂದಿನ ವಿಷಯ. ಪುರಂದರದಾಸ ಕುಳೂರು ಪಾಲಿಕೆಯ ಮೇಯರ್ ಆಗಿದ್ದರು. ಆಗ ಪಾಲಿಕೆಯ ಕಟ್ಟಡದ ಎದುರಿಗೆ ಇರುವ ಸೈಬೀನ್ ಕಾಂಪ್ಲೆಕ್ ನಲ್ಲಿ ಒಂದು ಚಿಕನ್ ಟಿಕ್ಕಾ ಹಲಾಲ್ ಅಂಗಡಿ ಇತ್ತು. ಅದನ್ನು ಎಲ್ಲಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಕಟ್ಟಲಾಗಿತ್ತು. ಒಂದು ದಿನ ಬೆಳಿಗ್ಗೆ 4 ಗಂಟೆಗೆ ಮಂಗಳೂರು ಮಲಗಿದ್ದಾಗ ಜೆಸಿಬಿ ತಂದು ಆ ಹೋಟೇಲಿಗೆ ಗತಿ ಕಾಣಿಸಿದ್ದು ಆಗಿನ ಮೇಯರ್ ಪುರಂದರ ದಾಸ್ ಕುಳೂರು. ಬಹುಶ: ನನ್ನ ಅನುಭವದ ಆಧಾರದಲ್ಲಿ ಕಳೆದ ಒಂದು ದಶಕದಲ್ಲಿ ಮೇಯರ್ ಎನಿಸಿಕೊಂಡವರು ತಮ್ಮ ಪೂರ್ಣ ಪವರ್ ಅನ್ನು ತೋರಿಸಿದ್ದೇ ಇಲ್ಲ. ಕೆಲವರು ಕ್ಯಾಮೆರಾದವರನ್ನು ಕರೆದುಕೊಂಡು ಹೋಗಿ ಪಬ್ಲಿಸಿಟಿ ಪಡೆದುಕೊಂಡರೆ ವಿನ: ಪ್ರಯೋಜನ ಏನೂ ಆಗಿರಲಿಲ್ಲ. ಆದರೆ ಈಗ ಮೌನದಲ್ಲಿಯೇ ಒಂದು ಕ್ರಾಂತಿಕಾರಿ ಹೆಜ್ಜೆಯನ್ನು ದಿವಾಕರ್ ಇಟ್ಟಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಇಂತಹ ಇನ್ನಷ್ಟು ಜನೋಪಯೋಗಿ ಕಾರ್ಯ ನಡೆಯಲಿದೆ. ಯಾಕೆಂದರೆ ಇವತ್ತಿನ ಅವರ ಕೆಲಸ ಸುಲಭವಾಗಿರಲಿಲ್ಲ. ಅವರದ್ದೇ ಪಕ್ಷದ ಮುಖಂಡರ ಒತ್ತಡ ಅವರಿಗೆ ಇತ್ತು. ಆದರೂ ಅದನ್ನು ಲೆಕ್ಕಿಸದೇ ದಿವಾಕರ್ ತಮ್ಮ ನಿಜವಾದ ಪೌರುಷ ತೋರಿಸಿದ್ದಾರೆ. ನಾನು ಈ ಜಾಗೃತ ಅಂಕಣ ಓದುವವರ ಬಳಿ ಮನವಿ ಮಾಡುವುದೇನೆಂದರೆ ನಿಮ್ಮ ವಾರ್ಡಿನಲ್ಲಿಯೂ ಇಂತಹ ಅಕ್ರಮ ಸೇತುವೆ, ರಸ್ತೆ ಇದ್ದು, ಅದರಿಂದ ನೀವು ಕೃತಕ ನೆರೆಯ ಸಮಸ್ಯೆ ಅನುಭವಿಸುತ್ತಿದ್ದರೆ ಅದರ ಫೋಟೋ ತೆಗೆದು ನನಗೆ ಇನ್ ಬಾಕ್ಸ್ ಮಾಡಿ ಅಥವಾ ಇಲ್ಲಿಯೇ ಕಮೆಂಟ್ ಮಾಡಿ. ನಮ್ಮೊಂದಿಗೆ ದಿವಾಕರ್ ಇದ್ದಾರೆ. ದಿವಾಕರ್ ಅವರಿಗೆ ಧೈರ್ಯ ಇದೆ!
Leave A Reply