ರಾಮ ಮಂದಿರ ಶಿಲಾನ್ಯಾಸ ಆಯಿತು, ಇನ್ನು ಭವ್ಯ ಮಂದಿರದ ಜಪ!!
ರಾಮಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಸಾಧುಸಂತರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಶಿಲಾನ್ಯಾಸ ನಡೆಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿಲಾನ್ಯಾಸ ನಡೆಸಬೇಕಿತ್ತು. ಆದರೆ ಅವರು ಬಿಝಿ ಇದ್ದ ಕಾರಣ ಭಾಗವಹಿಸಿಲ್ಲ. ಜುಲೈ 2 ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಈ ನಡುವೆ ಬಹುಸಂಖ್ಯಾತ ಹಿಂದೂಗಳು ಶತಮಾನದಿಂದ ಕಾತರಿಸುತ್ತಿದ್ದ ಶ್ರೀರಾಮಚಂದ್ರ ದೇವಸ್ಥಾನದಲ್ಲಿ ವಿರಾಜಮಾನವಾಗಿ ಪೂಜೆಯನ್ನು ಸ್ವೀಕರಿಸಿ ಭಕ್ತರನ್ನು ಆರ್ಶೀವದಿಸಲಿದ್ದಾನೆ. ಬ್ರಿಟಿಷರ ಕಾಲದಿಂದಲೂ ಈ ಪ್ರಕರಣ ಸುಪ್ರೀಂ ಅಂಗಳದಲ್ಲಿತ್ತು. ಕೊನೆಗೆ ಅದಕ್ಕೆ ಸೂಕ್ತ ಅಂತ್ಯ ಸಿಗಲು ಮೋದಿ ಸರಕಾರವೇ ಬರಬೇಕಾಯಿತು. ತೀರ್ಪು ಕೊಟ್ಟಿರುವುದು ನ್ಯಾಯಾಲಯವಾದರೂ ಅದರ ಹಿಂದೆ ಸೂಕ್ತ ದಾಖಲೆಗಳನ್ನು ಒದಗಿಸಿ ಕೇಸಿನ ಬಗ್ಗೆ ಕಾಂಗ್ರೆಸ್ಸಿನ ನಿರಾಸಕ್ತಿ ಮತ್ತು ಪ್ರತಿವಾದದ ನಡುವೆ ಈ ಕೇಸನ್ನು ದಡ ಮುಟ್ಟಿಸಿದವರು ಮೋದಿ. ಅದೆಲ್ಲವೂ ಆಗಿ ಅದಕ್ಕೆ ಸೂಕ್ತ ಸಮಿತಿಗಳನ್ನು ರಚಿಸಿ ಅದರಲ್ಲಿ ನಮ್ಮ ಉಡುಪಿಯ ಈಗಿನ ಪೇಜಾವರ ಶ್ರೀಗಳನ್ನು ಸೇರಿಸಿ ಅಂತಿಮ ಹಂತಕ್ಕೆ ಹೋಗಲು ಸೂಕ್ತ ವ್ಯವಸ್ಥೆ ಮಾಡಿದ್ದು ಕೇಂದ್ರ ಸರಕಾರ. ಇನ್ನು ಮೂರು ವರ್ಷ ಕಳೆದರೆ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ. ಅಲ್ಲಿಯೇ ಸಮೀಪ ಇರುವ ಶಿವ ದೇವಸ್ಥಾನದಲ್ಲಿ ಲಿಂಗಾಭೀಷೇಕ ಮಾಡುವ ಮೂಲಕ ಶಿಲಾನ್ಯಾಸ ನೆರವೇರಿದೆ.
ಸದ್ಯ ಈಗ ಪ್ರಕರಣ ಇತ್ಯರ್ಥವಾಗಿರುವುದರಿಂದ ಇನ್ನು ಸಾಕ್ಷಿ ಏನಿದೆ ಎಂದು ಕೇಳುವ ವಿಷಯ ಬರುವುದಿಲ್ಲ. ಇದೆಲ್ಲವೂ ನಮ್ಮ ವಿಶ್ವಾಸದ ಪ್ರತೀಕ. ಮಗು ಬೆಳೆದು ನಿಂತಾಗ ತಾಯಿ ನಿನ್ನ ತಂದೆ ಇವರೇ ಎಂದು ಹೇಳಿದಾಗ ತಾಯಿ ಹೇಳಿದ ವಿಶ್ವಾಸದ ಮೇಲೆನೆ ಮಗು ಆ ವ್ಯಕ್ತಿಯನ್ನು ಅಪ್ಪ ಎಂದು ಕರೆಯುತ್ತದೆ. ಇದು ಕೂಡ ಅಪ್ಪಟ ವಿಶ್ವಾಸದ ಪ್ರಶ್ನೆ. ರಾಮನ ಜನ್ಮ ಅಯೋಧ್ಯೆಯಲ್ಲಿ ಆಯಿತು, ಶ್ರೀಕೃಷ್ಣನ ಜನ್ಮ ಮಥುರಾದಲ್ಲಿ ಆಯಿತು ಎನ್ನುವ ವಿಶ್ವಾಸದ ಮೇಲೆ ನಾವು ಆರಾಧಿಸಿಕೊಂಡು ಬಂದಿದ್ದೇವೆ. ಇದು ತಲೆತಲಾಂತರದಿಂದ ನಡೆದುಕೊಂಡು ಬಂದಿರುವಂತದ್ದು. ಇದು ಹಿಂದೂಗಳಲ್ಲಿ ಮಾತ್ರವಲ್ಲ, ತಲೆತಲಾಂತರಗಳಿಂದ ಕ್ರೈಸ್ತರಲ್ಲಿ ಮತ್ತು ಮುಸಲ್ಮಾನರಲ್ಲಿಯೂ ಇದೇ ಪದ್ಧತಿ ನಡೆದುಕೊಂಡು ಬಂದಿದೆ. ಯಾರೂ ದೇವರನ್ನು ನೋಡಿಲ್ಲ. ಆದರೆ ಆ ವಿಶ್ವಾಸ ಮಾತ್ರ ಹಾಗೇ ಸುಲಭವಾಗಿ ಹೋಗುವುದಿಲ್ಲ.
ಈಗಾಗಲೇ ಅಯೋಧ್ಯೆಯಲ್ಲಿ 70% ನಿರ್ಮಾಣಕ್ಕೆ ಬೇಕಾದ ಕಂಬಗಳ ರಚನೆ ಆಗಿದೆ. ಎರಡು ಅಂತಸ್ತಿನ ಕಟ್ಟಡದಲ್ಲಿ ಲೋಹಗಳ ಬಳಕೆ ಇಲ್ಲ ಎನ್ನಲಾಗುತ್ತದೆ. ಮೂವತ್ತು ವರ್ಷಗಳಿಂದ ಅಯೋಧ್ಯೆಯಲ್ಲಿ ಮಂದಿರದ ಕೆಲಸಗಳು ನಡೆಯುತ್ತಿವೆ. ಈಗ ದೇವಸ್ಥಾನದ ಕಾಮಗಾರಿ ಆರಂಭವಾಗಲಿರುವುದರಿಂದ ಉಳಿದ 30% ಕಂಬಗಳ ಬಾಕಿ ಉಳಿದಿರುವ ಕೆಲಸ ಎರಡು ವರ್ಷಗಳಲ್ಲಿ ಮುಗಿಯಲಿದೆ. ನಂತರ ಭವ್ಯ ಮಂದಿರ ನಿರ್ಮಾಣವಾಗುತ್ತದೆ!
Leave A Reply