ಅಮಿತಾಬ್ ನಾನಾವತಿ ಸೇರಿದ್ದು ಯಾಕೆ?
ಕೊರೊನಾ ಏಳು ದಿನಗಳ ಮಗುವಿನಿಂದ ಹಿಡಿದು ಗಡಿಯಲ್ಲಿ ನಮ್ಮನ್ನು ಕಾಯುತ್ತಿರುವ ನಮ್ಮ ವೀರ ಯೋಧರಿಗೂ ಬಂದಿದೆ. ರಸ್ತೆಯಲ್ಲಿ ಕಸ ಗುಡಿಸಿ ನಗರ ಸ್ವಚ್ಚ ಇಡುವ ಸ್ಥಳೀಯ ಸಂಸ್ಥೆಗಳ ಕಾರ್ಮಿಕರಿಂದ ಹಿಡಿದು ಪಾಲಿಕೆಯ ಕಮೀಷನರ್ ಅವರ ತನಕವೂ ಬಂದಿದೆ. ಶಾಸಕರ ಗನ್ ಮ್ಯಾನ್ ನಿಂದ ಹಿಡಿದು ಪೊಲೀಸ್ ವರಿಷ್ಠಾಧಿಕಾರಿಗಳ ತನಕವೂ ಬಂದಿದೆ. ಆಸ್ಪತ್ರೆಯ ರಿಸೆಪ್ಷನೆಸ್ಟ್ ನಿಂದ ಹಿಡಿದು ಆಸ್ಪತ್ರೆಯ ಉನ್ನತ ವೈದ್ಯರಿಗೂ ಬಂದಿದೆ. ನಮ್ಮನ್ನು ಆರೈಕೆ ಮಾಡಿ ಆರೋಗ್ಯವಾಗಿಸಿ ಮನೆಗೆ ಕಳುಹಿಸಿದ ವೈದ್ಯೆ ಅಥವಾ ವೈದ್ಯ ಅದೇ ದಿನ ಮತ್ತೊರ್ವ ಕೋವಿಡ್ 19 ಸೊಂಕೀತನ ಚಿಕಿತ್ಸೆಗೆ ಅಷ್ಟೇ ಕ್ಯಾರ್ ಫುಲ್ ಆಗಿ ಹೋಗಬೇಕು. ವೈದ್ಯರು ನಮಗಾಗಿ ಹಗಲು ರಾತ್ರಿ ಪಿಪಿಇ ಕಿಟ್ ಧರಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಪೊಲೀಸರು ನಮ್ಮ ಸುರಕ್ಷತೆಗಾಗಿ ಇದ್ದಾರೆ. ಅವರಿಗೆ ಕೊರೊನಾ ಬಂದಾಗ ದು:ಖಿಸದ ಎಷ್ಟೋ ಜನ ಅಮಿತಾಬ್ ಬಚ್ಚನ್ ಮತ್ತು ಅವರ ಮಗನಿಗೆ ಬಂದಾಗ ಸ್ವತ: ತಮಗೆ ಬಂದಂತೆ ಒದ್ದಾಡಿಬಿಟ್ಟರು. ಅಮಿತಾಬ್ ಗಾಗಿ ಹರಕೆ ಹೊತ್ತ ಜನರೆಷ್ಟೋ, ಹೋಮ ಮಾಡಿಸಿದವರೆಷ್ಟೋ, ಪೂಜೆ ಮಾಡಿಸಿದವರೆಷ್ಟೋ. ಒಟ್ಟಿನಲ್ಲಿ ಅಮಿತಾಬ್ ಬಚ್ಚನ್ ಶೀಘ್ರ ಗುಣಮುಖರಾಗಿ ಬರಲಿ ಎಂದು ಅಸಂಖ್ಯಾತ ಜನ ಏನೇನೋ ಮಾಡುತ್ತಿದ್ದಾರೆ.
ನನಗೆ ಅಮಿತಾಬ್ ಬಚ್ಚನ್ ಬಗ್ಗೆ ದ್ವೇಷವಿಲ್ಲ. ಹಲವು ದಶಕಗಳ ತನಕ ನಮಗೆ ಮನೋರಂಜನೆ ನೀಡುತ್ತಾ ಬಂದಿರುವ ಉತ್ತಮ ನಟ. ಅಷ್ಟೇ. ದೇಶದ ಕೋಟ್ಯಾಂತರ ಜನರಲ್ಲಿ ಅವರಿಗೆ ಮಾತ್ರ ಕೊರೊನಾ ಬಂದಿಲ್ಲ. ಅವರ ಮಗನಿಗೆ ಮಾತ್ರ ಈ ಕಾಯಿಲೆ ಬಂದಿರುವುದು ಅಲ್ಲ. ಆದರೆ ನಮ್ಮ ಜನ ತಮ್ಮ ಸಂಬಂಧಿಕರಿಗೆ ಕೊರೊನಾ ಬಂದಿರುವುದಕ್ಕಿಂತ ಹೆಚ್ಚಾಗಿ ಅಮಿತಾಬ್ ಗೆ ಬಂದಾಗ ಪ್ರಾರ್ಥಿಸುತ್ತಿದ್ದಾರೆ. ಅಷ್ಟಕ್ಕೂ ಅಮಿತಾಬ್ ಆಗಲಿ ಅಭಿಷೇಕ್ ಆಗಲಿ ಜನಸೇವೆಗಾಗಿ ಹೋದಾಗ ಕೊರೊನಾ ಬಂದದ್ದಲ್ಲ. ಅವರು ಆಸ್ಪತ್ರೆಯಲ್ಲಿ ಎಷ್ಟೋ ರೋಗಿಗಳ ಪ್ರಾಣ ಉಳಿಸಲು ಕೆಲಸ ಮಾಡುವಾಗ ಕೊರೊನಾ ಪಾಸಿಟಿವ್ ಆಗಿರುವುದಲ್ಲ. ಅವರು ಗಡಿಯಲ್ಲಿ ಬಿಡಿ, ಮನೆಯ ಕಂಪೌಂಡ್ ಹೊರಗೆ ಬಂದು ಭಿಕ್ಷುಕನಿಗೆ ಹಣ ಕೊಡಲು ಬಂದಿರುವವರಲ್ಲ. ಆದರೂ ಅವರಿಗೆ ಬಂದಿದೆ. ಅಭಿಷೇಕ್ ಶೂಟಿಂಗ್ ಗಾಗಿ ಯಾವುದೋ ಸ್ಟುಡಿಯೋಗೆ ಹೋದಾಗ ಬಂದಿರಬಹುದಂತೆ. ಆದರೂ ಅವರಿಗೆ ಬಂದಿರುವಾಗ ನಾವು ಸಲ್ಲಿಸುವ ಪ್ರಾರ್ಥನೆಯ ಅರ್ಧದಷ್ಟು ಗಡಿಯಲ್ಲಿ, ಆಸ್ಪತ್ರೆಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ, ಪೊಲೀಸ್ ಠಾಣೆಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ನಮಗಾಗಿ ಶ್ರಮಿಸುತ್ತಿರುವವರಿಗೆ ಕೊರೊನಾ ಬರದಂತೆ ಪ್ರಾರ್ಥಿಸಿದರೆ ದೇವರು ಕೂಡ ಮೆಚ್ಚಬಹುದು. ಅಮಿತಾಬ್ ತನ್ನದೇ ಮೂರು ಐಷಾರಾಮಿ ಬಂಗ್ಲೆಗಳಲ್ಲಿ ಒಂದು ಬಂಗ್ಲೆಯಲ್ಲಿ ಆರಾಮದಾಯಕವಾಗಿ ಹೆಂಡತಿ, ಮಗ, ಸೊಸೆ, ಮೊಮ್ಮೊಕ್ಕಳೊಂದಿಗೆ ಆಡುತ್ತಾ, ತಿನ್ನುತ್ತಾ, ಮಲಗುತ್ತಾ, ಗಮ್ಮತ್ ಮಾಡುವಾಗ ಅವರಿಗೆ ತಗಲಿರಬಹುದು. ಆದರೆ ಯೋಚಿಸಿ, ಒಬ್ಬ ಯೋಧ, ತನ್ನ ಊರಿನಿಂದ ಸಾವಿರಾರು ಕಿಲೋ ಮೀಟರ್ ದೂರ, ಹೆಂಡತಿ, ಮಕ್ಕಳು, ಅಪ್ಪ, ಅಮ್ಮ, ಕುಟುಂಬದವರಿಂದ ದೂರ ದೇಶಕ್ಕಾಗಿ ಸೇವೆ ಸಲ್ಲಿಸುವಾಗ ಕೊರೊನಾ ಬರುತ್ತದೆ. ವೈದ್ಯರಿಗೆ ಎಷ್ಟೋ ದಿನ ಹೆಂಡತಿ, ಮಕ್ಕಳನ್ನು ನೋಡಲಾಗದೇ ಇರುವ ಸಂದರ್ಭಗಳಲ್ಲಿ ಅವರಿಗೆ ಬರುತ್ತಿದೆ. ಅವರು ಮನುಷ್ಯರಲ್ವಾ, ಅವರಿಗೆ ಪ್ರಾರ್ಥನೆ ಮಾಡಲು ದೊಡ್ಡ ಮನಸ್ಸು, ಹೋಮ ಮಾಡಿಸಲು ವಿಶಾಲ ಹೃದಯ, ಪೂಜೆ ಮಾಡಿಸಲು ಸೂಕ್ಷ್ಮ ಮನ ನಮ್ಮಲ್ಲಿ ಇಲ್ಲವೇ?
ಇನ್ನು ಕೆಲವರು ಹೇಳುವ ಪ್ರಕಾರ, ಅಮಿತಾಬ್ ಹಾಗೂ ಅಭಿಷೇಕ್ ಅವರಿಗೆ ತಮ್ಮ ವೈಭವೋಪೇತ ಬಂಗ್ಲೆಯ ಯಾವುದಾದರೂ ವಿಶಾಲ ಕೋಣೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಿತ್ತು. ಅವರಿಗೆ ಖಾಸಾ ವೈದ್ಯಕೀಯ ಸಿಬ್ಬಂದಿ ಇಟ್ಟುಕೊಳ್ಳುವುದು ಕಷ್ಟವೇನಲ್ಲ. ಆದರೂ ಇವರಿಬ್ಬರು ಮುಂಬೈಯ ಪ್ರತಿಷ್ಠಿತ ನಾನಾವತಿ ಆಸ್ಪತ್ರೆಗೆ ದಾಖಲಾಗಿರುವುದು ಆಸ್ಪತ್ರೆಗೆ ಪಬ್ಲಿಸಿಟಿ ನೀಡಲು ಎನ್ನುವ ಮಾತಿದೆ. ನಿಮಗೆ ಗೊತ್ತಿರಬಹುದು. ಐಶ್ವರ್ಯ ರೈ ಹೆರಿಗೆಗೆ ಬರುತ್ತಾರೆ ಎಂದರೆ ಮುಂಬೈಯ ಪ್ರತಿಷ್ಠಿತ ಆಸ್ಪತ್ರೆಗಳು ತಾವೇ ಕೋಟ್ಯಾಂತರ ರೂಪಾಯಿ ನೀಡಿ ತಮ್ಮ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಿ ಎಂದು ದಂಬಾಲು ಬೀಳುತ್ತವೆ. ಯಾಕೆಂದರೆ ಐಶ್ಚರ್ಯ ರೈಗೆ ಹೆರಿಗೆ ಆದ ಆಸ್ಪತ್ರೆ ಎನ್ನುವ ಪ್ರಚಾರ ಆ ಆಸ್ಪತ್ರೆಯ ಬೆಳವಣಿಗೆಗೆ ಹೆಚ್ಚು ಸಹಕಾರಿ. ಇದೇ ರೀತಿಯ ಟಿಕ್ಸ್ ನಾನಾವತಿ ಆಸ್ಪತ್ರೆಯವರು ಕೂಡ ಮಾಡಿದರಾ? ಅಮಿತಾಬ್ ಬಚ್ಚನ್ ಅವರೇ, ನೀವು ಕೆಲವು ದಿನ ಕೋವಿಡ್ ಪಾಸಿಟಿವ್ ಎಂದು ಬಂದು ನಮ್ಮಲ್ಲಿ ದಾಖಲಾಗಿ ಎಂದು ದಂಬಾಲು ಬಿದ್ದವಾ? ಆದರೆ ಈ ರೀತಿ ಗಾಳಿ ಸುದ್ದಿ ಹಬ್ಬಿರುವುದು ನಿಜ. ಇದು ನಿಜವೇ ಆಗಬೇಕಾಗಿಲ್ಲ. ಆದರೆ ನಮ್ಮ ಸಿನೆಮಾ ನಟರನ್ನು ಪ್ರಚಾರಕ್ಕೆ ವಿವಿಧ ರೀತಿಯಲ್ಲಿ ಬಳಸುವ ಪಿಆರ್ ಒಗಳು ಹೀಗೆ ನಾಟಕ ಆಡಿದರೆ ಆಶ್ಚರ್ಯವೇನಿಲ್ಲ. ನಾನು ಇಷ್ಟೇ ಹೇಳುವುದು. ನಾಳೆಯಿಂದ ಲಾಕ್ ಡೌನ್. ನಿಮ್ಮ ಸುರಕ್ಷೆ ನಿಮ್ಮ ಕೈಯಲ್ಲಿ. ಕೈಯಲ್ಲಿ ಆಧಾರ್ ಕಾರ್ಡ್ ಇದೆ, ಕೋಟಾ ಹೇಳಿದ್ದಾರೆ ಎಂದು ಭಂಡ ಧೈರ್ಯದಲ್ಲಿ ರಸ್ತೆಗೆ ಇಳಿದು ಕೋವಿಡ್ 19 ಆದರೆ ನಾಳೆ ಆಧಾರ್ ಕಾರ್ಡ್ ಕೂಡ ಇಲ್ಲ, ನಿಲ್ಲಲೂ ಆಧಾರವೂ ಇಲ್ಲ ಎನ್ನುವ ಪರಿಸ್ಥಿತಿ ಬರಬಹುದು!!
Leave A Reply