ನಿವೃತ್ತಿ ಹೊಂದಿ 10 ವರ್ಷ ಆದ್ರೂ ಪಾಲಿಕೆಯಲ್ಲಿ ಅಧಿಕಾರಿಯಾಗಿರಬಹುದು!!
ಶನಿವಾರ ನಮ್ಮ ರಾಜ್ಯದ ಮಾನ್ಯ ಕಂದಾಯ ಸಚಿವರಾಗಿರುವ ಆರ್. ಅಶೋಕ್ ಅವರು ಮಂಗಳೂರಿಗೆ ಬಂದಿದ್ರು. ಇಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಸೂಚನೆ ಕೊಟ್ಟು ಹೋದ್ರು. ಆದರೆ ಅಪ್ಪಿತಪ್ಪಿ ಕೂಡ ಅವರು ಇಲ್ಲಿ ನಮ್ಮದು ಪಾಲಿಕೆ ಇದೆಯಲ್ಲ, ಅಲ್ಲಿ ಕಂದಾಯ ಆಯುಕ್ತರು ಯಾರ್ರೀ ಎಂದು ಕೇಳಿರಲಿಕ್ಕಿಲ್ಲ. ಕೇಳಿದ್ರೆ ಅವರಿಗೆ ಭವ್ಯ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪೂರ್ಣಾವಧಿಗೆ ಒಬ್ಬರು ಕಂದಾಯ ಆಯುಕ್ತರು ಇಲ್ಲ ಎನ್ನುವುದು ಗೊತ್ತಾಗುತ್ತಿತ್ತು. ಇದನ್ನು ನಗರಾಭಿವೃದ್ಧಿ ಇಲಾಖೆ ತಕ್ಷಣ ಪರಿಶೀಲಿಸಬೇಕು ಎಂದು ಅವರು ಸಚಿವ ಸೋಮಶೇಖರ್ ಅವರಿಗೆ ಇಲ್ಲಿಂದಲೇ ಒಂದು ಫೋನ್ ಮಾಡಿ ಹೇಳಿದ್ದರೆ ಏನೋ ಸಚಿವರು ಇಲ್ಲಿಗೆ ಬಂದದ್ದಕ್ಕೂ ಸಾರ್ಥಕವಾಗುತ್ತಿತ್ತು. ಒಂದು ವೇಳೆ ನಗರಾಭಿವೃದ್ಧಿ ಸಚಿವರು ಯಾರನ್ನಾದರೂ ನೇಮಕ ಮಾಡುವುದಿದ್ದರೂ ಸೂಕ್ತವಾದ ಧೃಡ ಮನಸ್ಸಿನ, ಇಚ್ಚಾಶಕ್ತಿಯ ಅಧಿಕಾರಿಯನ್ನೇ ನೇಮಿಸಲಿ ಎಂದೇ ನಮ್ಮ ಆಶಯ. ಆದರೆ ಅದು ಯಾವಾಗ ಈಡೇರುತ್ತದೆ ಎನ್ನುವುದು ಬರುವ ಅಧಿಕಾರಿಯ ಇಚ್ಚಾಶಕ್ತಿಗಿಂತ ಕಿಸೆ ಗಟ್ಟಿ ಇದೆ ಎನ್ನುವುದರ ಮೇಲೆ ಅವಲಂಬಿತವಾಗಿದೆಯಾ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.
ಇನ್ನು ಪಾಲಿಕೆಯ ಆರೋಗ್ಯಾಧಿಕಾರಿಯ ವಿಷಯವನ್ನು ತೆಗೆದುಕೊಳ್ಳಿ. ನನಗೆ ಯಾರೊಂದಿಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಮಂಗಳೂರಿನ ಹಲವು ಹಿರಿಯ ಪತ್ರಕರ್ತರನ್ನೇ ಕೇಳಿ ನೋಡಿ. ನಿವೃತ್ತಿಯಾಗಿ ಹತ್ತು ವರುಷಗಳಾದ ಬಳಿಕವೂ ಒಬ್ಬ ಆರೋಗ್ಯಾಧಿಕಾರಿ ನಮ್ಮ ಪಾಲಿಕೆಯಲ್ಲಿಯೇ ಇರುತ್ತಾರೆ ಎಂದಾದರೆ ಅವರೇನು ಧನ್ವಂತರಿ ದೇವರಾ? ಮೊಮ್ಮೊಕ್ಕಳೊಡನೆ ಕಾಲ ಕಳೆದು ನಮಸ್ತೆ “ಮಂಜು”ನಾಥ ಎಂದು ಕಾಲ ಕಳೆಯಬೇಕಿದ್ದ ವ್ಯಕ್ತಿಗಳನ್ನು ಇನ್ನು ಕೂಡ ಪಾಲಿಕೆಯಲ್ಲಿಯೇ ಉಳಿಸಿಕೊಂಡಿರುವುದು ಯಾಕೋ? ಒಂದು ಕಡೆ ಕೊರೊನಾ, ಇನ್ನೊಂದೆಡೆ ಸಾಂಕ್ರಾಮಿಕ ರೋಗಗಳು ಮತ್ತೊಂದೆಡೆ ನಿತ್ಯದ ಕೆಲಸಕಾರ್ಯಗಳನ್ನು ನಡೆಸಲು ಆರೋಗ್ಯ ವಿಭಾಗದಲ್ಲಿ ಯುವ ಅಧಿಕಾರಿಯ ಅವಶ್ಯಕತೆ ಇದೆ. ಆದರೆ ಪಾಲಿಕೆಗೆ ಅಂತವರು ಸಿಗುತ್ತಿಲ್ಲವೇ?
ಈಗ ಪಾಲಿಕೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಆಡಳಿತ ಇದೆ. ವರ್ಷದ ಹಿಂದಿನ ತನಕ ಕಾಂಗ್ರೆಸ್ ಇತ್ತು. ಆದರೆ ನಮ್ಮ ದುರಾದೃಷ್ಟಕ್ಕೆ ಯಾವ ಪಕ್ಷದ ಆಡಳಿತವೇ ಇರಲಿ ಕೆಲವು ಆಯಕಟ್ಟಿನ ಜಾಗಗಳು ಖಾಲಿಯಾಗುವುದಿಲ್ಲ. ಅವುಗಳಲ್ಲಿ ಉದಾಹರಣೆಗೆ ಜ್ಯೂನಿಯರ್ ಇಂಜಿನಿಯರ್ ಇರಬಹುದು, ಎಇಇ ಇರಬಹುದು, ಇಇ ಅಥವಾ ಇಂತಹ ಇಂಜಿನಿಯರ್ ವಿಭಾಗದ ಪೋಸ್ಟ್ ಗಳು ಮತ್ತು ಲಾಭದಾಯಕ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಗ ನೇಮಕವಾಗುತ್ತಾರೆ. ಕಾರಣ ಎಲ್ಲವೂ ನಿಗೂಢ. ಬಹುಶ: ಅವು ಪೇಮೆಂಟ್ ಸೀಟುಗಳು ಎನ್ನುವ ಕಾರಣಕ್ಕೆ ಬೇಗ ಭರ್ತಿಯಾಗುತ್ತವೆ. ಆದರೆ ಇನ್ನು ಕೆಲವು ಹುದ್ದೆಗಳಿವೆ. ಸೂಪರಿಟೆಂಡೆಂಟ್, ಕ್ಲಾಕ್ಕ್ ಇನ್ನು ಕೆಲವು ಕೆಳಸ್ತರದ ಹುದ್ದೆಗಳು, ಅವುಗಳಿಗೆ ಹಣ ಕೊಟ್ಟು ಯಾರೂ ಕೂಡ ಬರುವುದಿಲ್ಲ. ಅವು ಯಾವಾಗಲೂ ಖಾಲಿಯೇ. ಹಾಗಾದರೆ ಈ ಸಮಸ್ಯೆ ಯಾವಾಗ ಕೊನೆಗೊಳ್ಳುವುದು. ಕಾಂಗ್ರೆಸ್ಸಿಗರು ಆಡಳಿತ ಮಾಡುವಾಗಲೂ ನಾನು ಈ ವಿಷಯವನ್ನು ಜಾಗೃತ ಅಂಕಣದಲ್ಲಿ ಬರೆಯಬೇಕಾಗಿ ಬಂದಿತ್ತು. ಈಗ ಕೆಳಗಿನಿಂದ ಮೇಲಿನ ತನಕ ಬಿಜೆಪಿ ಆಡಳಿತ. ನಾನು ಈಗ ಕೂಡ ಈ ಬಗ್ಗೆ ಬರೆಯಬೇಕಾಗಿ ಬಂದದ್ದು ಬೇಸರದ ವಿಷಯ. ಬಿಜೆಪಿ ಪಾರ್ಟಿ ವಿದ್ ಡಿಫರೆನ್ಸ್ ಎಂದು ಹಿಂದೆ ಒಮ್ಮೆ ಅವರು ಘೋಷಣೆ ಕೂಗುತ್ತಿದ್ದರು. ಅದು ಏನು ಎಂದು ಈಗ ಅವರು ಸಾಬೀತುಪಡಿಸಿ ತೋರಿಸಬೇಕಾಗಿದೆ. ಪಾಲಿಕೆಯ ಮೇಯರ್ ಮತ್ತು ಇಬ್ಬರು ಯುವ ಶಾಸಕರು ಬಿಜೆಪಿಯವರೇ ಆಗಿದ್ದಾರೆ. ಉಸ್ತುವಾರಿ ಸಚಿವರು ಸಜ್ಜನತೆಯ ಸಾಕ್ಷಾತ್ ರೂಪ. ಎಲ್ಲರೂ ಯಾವುದ್ಯಾವುದೋ ಸಭೆಗಳನ್ನು ಮಾಡುತ್ತಿರಿ. ಪಾಲಿಕೆಯ ಅವಸ್ಥೆಯನ್ನು ಸ್ವಲ್ಪ ಹೊತ್ತು ದೂರ ಕುಳಿತು ಗಮನಿಸಿ. ಆಗಬೇಕಾದ ಒಳಗಿನ ರಿಪೇರಿಯನ್ನು ಪರಿಶೀಲಿಸಿ. ನೀವು ಆಡಳಿತ ಹಿಡಿದು ಒಂದು ವರ್ಷ ಆಗಿ ಹೋಗಿದೆ. ನೆರೆ, ಕೊರೊನಾ ಇಲ್ಲಿಯ ತನಕ ಇತ್ತು. ಇನ್ನು ಅವುಗಳೊಂದಿಗೆ ಜೀವಿಸುತ್ತಾ ಪಾಲಿಕೆಗೆ ಹೊಸ ಕಾಯಕಲ್ಪ ಕೊಡಿ. ನಿಮ್ಮ ಮೇಲೆ ವಿಶ್ವಾಸವಿದೆ. ಇನ್ನೊಂದೆರಡು ತಿಂಗಳ ಬಳಿಕವೂ ಆರೋಗ್ಯಾಧಿಕಾರಿಯವರು ಸೂಪರ್ ನಿವೃತ್ತಿಯಾಗದೇ ಇದ್ದರೆ ನಿಮ್ಮ ಮೇಲೆ ಸಂಶಯ ಬರುತ್ತದೆ. ಆಗ ನಾನು ಕೊಡುವ ಹೆಡ್ಡಿಂಗ್ ಬೇರೆನೆ ಇರಲಿದೆ!
Leave A Reply