• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೇವಲ ಅಧಿಕೃತ ಹೋರ್ಡಿಂಗ್ಸ್ ನಲ್ಲಿಯೇ ಇಷ್ಟು ಕೋಟಿ ಆದಾಯ ಇದ್ದರೆ ಅನಧಿಕೃತ ಫಲಕಗಳಿಂದ ಬರುವ ಕೋಟಿ ಎಷ್ಟು? ಅದು ಯಾರ ಜೇಬಿಗೆ?

Hanumantha Kamath Posted On August 27, 2020


  • Share On Facebook
  • Tweet It

9-3-15 ವಿಧಾನಪರಿಷತ್ತಿನಲ್ಲಿ ಎಂಎಲ್ ಸಿ ಐವನ್ ಡಿಸೋಜಾ ಅವರು ಒಂದು ಲಿಖಿತ ಪ್ರಶ್ನೆ ಕೇಳುತ್ತಾರೆ. ಅವರು ಕೇಳಿದ ಪ್ರಶ್ನೆಗಳು ಮೊದಲು ನಿಮಗೆ ಗೊತ್ತಾಗಬೇಕು ಬಳಿಕ ಆ ಪ್ರಶ್ನೆಗಳಿಗೆ ನಮ್ಮ ಸರಕಾರ ಎಷ್ಟು ಸುಳ್ಳು ಮಾಹಿತಿ ಕೊಟ್ಟಿದೆ ಎಂದು ನಾನು ನಿಮಗೆ ತಿಳಿಸುತ್ತೇನೆ. ಏಕೆಂದರೆ ಹೋರ್ಡಿಂಗ್ಸ್ ಗೋಲ್ ಮಾಲ್ ನ ಹಿಂದೆ ಸರಕಾರದ ಮಟ್ಟದಿಂದಲೇ ಎಷ್ಟರ ಪ್ರಮಾಣದಲ್ಲಿ ಗೋಲ್ ಮಾಲ್ ನಡೆಯುತ್ತದೆ ಎಂದು ನಿಮಗೆ ತಿಳಿಸುವ ಉದ್ದೇಶ ನನ್ನದು. ಐವನ್ ಡಿಸೋಜಾ ಒಟ್ಟು ನಾಲ್ಕು ಪ್ರಶ್ನೆಗಳನ್ನು ಅವತ್ತು ಕೇಳಿದ್ದಾರೆ. ನಾಲ್ಕು ಕೂಡ ಒಂದಕ್ಕೊಂದು ಸಂಬಂಧ ಇರುವಂತಹುದು. ಆದರೆ ಸರಕಾರಕ್ಕೆ ಸರಕಾರವೇ ಹೇಗೆ ಹೋರ್ಡಿಂಗ್ಸ್ ಮಾಫಿಯದ ಎದುರು ಮಂಡಿಯೂರಿದೆ ಎಂದು ನಿಮಗೆ ವಿವರಿಸುತ್ತಾ ಹೋದ ಹಾಗೆ ನಿಮಗೆ ಮುಂದಿನ ಬಾರಿ ಈ ಜಾಹೀರಾತು ಏಜೆನ್ಸಿಯವರು ಮಾಡಿರುವ ಕಪ್ಪು ಹಣದ ಪರಿಚಯ ಆಗುತ್ತಾ ಹೋಗುತ್ತದೆ. ಅಂತಹ ಹಣದಿಂದಲೇ ಇವತ್ತು ಸಮಾಜದಲ್ಲಿ ದೊಡ್ಡ ದೊಡ್ಡ ಸ್ಥಾನಗಳನ್ನು ಪಡೆದುಕೊಂಡು ಮೆರೆಯುತ್ತಿರುವವರು ಪಾಲಿಕೆಗೆ, ಸರಕಾರಕ್ಕೆ ಹೇಗೆ ಉಂಡೆನಾಮ ತಿಕ್ಕುತ್ತಾ ಬಂದಿದ್ದಾರೆ ಎನ್ನುವ ಪರಿಚಯ ನಿಮಗೆ ಮಾಡಿಸುತ್ತಾ ಹೋಗುತ್ತೆನೆ.
ಐವನ್ ಡಿಸೋಜಾ ಅವರು ಕೇಳಿದ ಮೊದಲ ಪ್ರಶ್ನೆ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಅಧಿಕೃತ ಜಾಹೀರಾತು ನಾಮಫಲಕಗಳ ಸಂಖ್ಯೆ ಎಷ್ಟು ಹಾಗೂ ಅನಧಿಕೃತ ಜಾಹೀರಾತು ನಾಮಫಲಕಗಳ ಸಂಖ್ಯೆ ಎಷ್ಟು? ಇದಕ್ಕೆ ಅವರಿಗೆ ಸಿಕ್ಕಿದ ಲಿಖಿತ ಉತ್ತರ- ಅಧಿಕೃತ 1594. ಅನಧಿಕೃತ 19. ಇದನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಿ. ಅನಧಿಕೃತ ಕೇವಲ 19 ಎಂದು ಬರೆದು ಕೊಟ್ಟಿದ್ದಾರೆ. ಅದು ಎಷ್ಟರ ಮಟ್ಟಿಗೆ ಡೊಂಗಿ ಎಂದು ನಾನು ದಾಖಲೆ ಸಮೇತ ನಿಮಗೆ ತೋರಿಸಲಿದ್ದೇನೆ. ಏಕೆಂದರೆ ನಾನು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಆ ಬಗ್ಗೆ ಮಾಹಿತಿ ತರಿಸಿ ಇಟ್ಟುಕೊಂಡಿದ್ದೇನೆ. ಇನ್ನೂ ಅದೇ ಉತ್ತರದಲ್ಲಿ ಸರಕಾರದ ಅಧಿಕಾರಿಗಳು ಬರೆಯುತ್ತಾರೆ. ಅನಧಿಕೃತ 19 ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದು ಅವರು ಉತ್ತರ ಕೊಟ್ಟ ದಿನಾಂಕ 12.3.15. ಈ ದಿನವನ್ನು ಕೂಡ ನೋಟ್ ಮಾಡಿಟ್ಟುಕೊಳ್ಳಿ. ಏಕೆಂದರೆ ಇವತ್ತಿಗೆ ಆ ಉತ್ತರಕ್ಕೆ ಐದೂವರೆ ವರ್ಷ ಆಗುತ್ತಾ ಬಂದಿದೆ.
ರೈಟ್, ಮುಂದಿನ ಪ್ರಶ್ನೆಗೆ ಹೋಗೋಣ. 2012-13, 2013-14 ರಿಂದ 2014-15 ನೇ ಸಾಲಿನಲ್ಲಿ ನಾಮಫಲಕಗಳಿಂದ ಸಂಗ್ರಹಿಸಿದ ಆದಾಯ ಎಷ್ಟು? ಅನಧಿಕೃತ ನಾಮಫಲಕಗಳನ್ನು ತೆರವುಗೊಳಿಸಿದ ಪ್ರಕರಣಗಳೆಷ್ಟು? ತೆರವುಗೊಳಿಸಿ ದಂಡ ವಿಧಿಸಿದ ಪ್ರಕರಣಗಳೆಷ್ಟು? ಬಂದ ಉತ್ತರ ಓದಿದ ಬಳಿಕ ಒಂದು ವಿಷಯ ಸ್ಪಷ್ಟ. ಹೋರ್ಡಿಂಗ್ ಗಳಿಂದ ಪಾಲಿಕೆಗೆ ಬರುವ ಆದಾಯ ಸಣ್ಣದಲ್ಲ. 2012-13 ನೇ ಸಾಲಿನ ವರ್ಷದಲ್ಲಿ ರೂಪಾಯಿ 81,05,031 ಮತ್ತು 2013-14 ನೇ ಸಾಲಿನ ವರ್ಷದಲ್ಲಿ ರೂಪಾಯಿ 1,76,27,492 ಮತ್ತು 2014-15 ಈವರೆಗೆ -1,87,43,966 ಹಣ ಪಾಲಿಕೆಗೆ ಬಂದಿದೆ. ಈ ಮೊತ್ತವನ್ನು ಸರಿಯಾಗಿ ಮತ್ತೆ ಮತ್ತೆ ನೋಡಿ. ಇವರು ಹೇಳುತ್ತಿರುವುದು ಅಧಿಕೃತ ಜಾಹೀರಾತು ಫಲಕಗಳಿಂದ ಮಂಗಳೂರು ಮಹಾನಗರ ಪಾಲಿಕೆಗೆ ಹರಿದು ಬಂದ ಹಣ. ಯಾಕೆಂದರೆ ಅಧಿಕೃತ 1594 ಫಲಕಗಳಿಂದಲೇ ಇಷ್ಟು ಹಣ ಬರುವುದಾದರೆ ನನ್ನ ಬಳಿ ಇರುವ ಅನಧಿಕೃತ ಜಾಹೀರಾತು ಫಲಕಗಳ ಸಂಖ್ಯೆಯನ್ನು ನೀವು ಅಂದಾಜು ಮಾಡಿಕೊಂಡರೆ ಕ್ಯಾಲ್ಕುಲೇಟರ್ ಕೂಡ ಕಡಿಮೆಯಾಗಬಹುದು. ಇವರು ಅಧಿಕೃತ ಫಲಕಗಳು 1594 ಎಂದು ಬರೆದುಕೊಟ್ಟಿದ್ದಾರೆ, ನಾನು ಅನಧಿಕೃತ ಫಲಕಗಳು ಎಷ್ಟಿವೆ ಎಂದು ನಿಮಗೆ ಹೇಳಲಿದ್ದೇನೆ. ಆದರೆ ಅದಕ್ಕಿಂತ ಮೊದಲು ಐವನ್ ಡಿಸೋಜಾ ಅವರು ಪರಿಷತ್ತಿನಲ್ಲಿ ಕೇಳಿರುವ ಇನ್ನೆರಡು ಪ್ರಶ್ನೆಗಳನ್ನು ನೋಡಿ ಬರೋಣ. ಮೂರನೇ ಪ್ರಶ್ನೆ- ಅನಧಿಕೃತ ನಾಮಫಲಕದಿಂದ ನಗರಪಾಲಿಕೆ ಬೊಕ್ಕಸಕ್ಕೆ ಉಂಟಾದ ಆದಾಯ ನಷ್ಟವೆಷ್ಟು? ಅದಕ್ಕೆ ಉತ್ತರ ಬರುತ್ತದೆ- ಅನಧಿಕೃತ ನಾಮಫಲಕ ಹಾಕಿರುವುದು ಕಂಡು ಬಂದ ತಕ್ಷಣ ಮಹಾನಗರ ಪಾಲಿಕೆ ವತಿಯಿಂದ ತೆರವುಗೊಳಿಸುವುದರಿಂದ ಮಹಾನಗರ ಪಾಲಿಕೆ ಆದಾಯಕ್ಕೆ ನಷ್ಟ ಉಂಟಾಗಿರುವುದಿಲ್ಲ. ಅಲ್ಲಾ ಸ್ವಾಮಿ, ಅನಧಿಕೃತ ನಾಮಫಲಕಗಳನ್ನು ತೆರವುಗೊಳಿಸಲು ಬರುವ ಕೂಲಿಯವರು ಅಥವಾ ಲಾರಿಯವರು ಏನೂ ಧರ್ಮಕ್ಕೆ ಬಂದು ಕೆಲಸ ಮಾಡಿ ಹೋಗಲು ಅವರಿಗೇನಾದರೂ ಹೊಟ್ಟೆ ಬಂದಿದೆಯಾ ಅಥವಾ ಅವರು ಮನಪಾದ ಅಧಿಕಾರಿಗಳ ಸಂಬಂಧಿಗಳಾ ಅಥವಾ ಈ ಜಾಹೀರಾತು ಏಜೆನ್ಸಿಗಳ ದತ್ತು ಮಕ್ಕಳಾ. ಉಚಿತವಾಗಿ ಅನಧಿಕೃತ ಹೋರ್ಡಿಂಗ್ಸ್ ಅಥವಾ ನಾಮಫಲಕಗಳನ್ನು ತೆಗೆಯಲು ಬರಲಿಕ್ಕೆ. ಸುಳ್ಳು ಹೇಳುವಾಗ ಒಂದೂ ಚೂರಾದರೂ ಯೋಚಿಸುವುದು ಬೇಡವೇ?


ಈ ವಿಷಯದ ಬಗ್ಗೆ ಐವನ್ ಡಿಸೋಜಾ ಅವರು ಕೇಳಿದ ನಾಲ್ಕನೇ ಮತ್ತು ಕೊನೆಯ ಪ್ರಶ್ನೆ- ಅನಧಿಕೃತ ನಾಮಫಲಕಗಳನ್ನು ಅಳವಡಿಸಿದ ಜಾಹೀರಾತು ಕಂಪೆನಿಗಳ ಮೇಲೆ ನಗರ ಪಾಲಿಕೆ ಕೈಗೊಂಡ ಕ್ರಮಗಳೇನು? ಯಾವ ಜಾಹೀರಾತು ನಾಮಫಲಕ ಏಜೆನ್ಸಿ ಮೇಲೆ ಕೈಗೊಂಡಿದೆ ಸಂಪೂರ್ಣ ವಿವರ ನೀಡುವುದು? ಅದಕ್ಕೆ ಬಂದ ಉತ್ತರ- ಅನಧಿಕೃತ ನಾಮಫಲಕಗಳ ಜಾಹೀರಾತು ಏಜೆನ್ಸಿದಾರರಿಗೆ ನೋಟೀಸು ನೀಡಲಾಗಿದೆ. ನೋಟಿಸಿಗೆ ಉತ್ತರ ದೊರಕಿದ ನಂತರ ದಂಡ ವಿಧಿಸಿ ಸಕ್ರಮಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ನನ್ನ ಪ್ರಶ್ನೆ ಏನೆಂದರೆ ಯಾವ ಜಾಹೀರಾತು ಏಜೆನ್ಸಿಯವರಿಗೆ ನೋಟಿಸು ನೀಡಲಾಗಿದೆ ಎಂದು ಆ ಲಿಖಿತ ಉತ್ತರದಲ್ಲಿ ಹೇಳಲಾಗಿಲ್ಲ. ಬೇಕಾದರೆ ಐವನ್ ಡಿಸೋಜಾ ಅವರು ಕೇಳಿದ ಪ್ರಶ್ನೆಯನ್ನು ಮತ್ತೊಮ್ಮೆ ಓದಿಕೊಳ್ಳಿ. ಅವರು ಸ್ಪಷ್ಟವಾಗಿ ಕೇಳಿದ್ದಾರೆ. ಯಾವ ಜಾಹೀರಾತು ಏಜೆನ್ಸಿಯವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಬಂದ ಉತ್ತರದಲ್ಲಿ ಅದರ ಸುಳಿವೇ ಇಲ್ಲ. ಇದು ಏನು ಸ್ಪಷ್ಟಪಡಿಸುತ್ತದೆ ಎಂದರೆ ತಪ್ಪು ಮಾಡಿದ ಜಾಹೀರಾತು ಏಜೆನ್ಸಿಗಳನ್ನು ಉಳಿಸುವ ಪ್ರಯತ್ನ ಮಾಡಲಾಗಿದೆ. ಅದಲ್ಲದೆ ಯಾವ ಏಜೆನ್ಸಿಗಳಿಗೆ ನೋಟಿಸು ನೀಡಲಾಗಿದೆ ಎಂದು ಹೇಳಿಯೇ ಇಲ್ಲದಿರುವುದರಿಂದ ನೋಟಿಸು ನೀಡಿರುವುದೇ ಸುಳ್ಳು ಎಂದೇ ಅಂದುಕೊಳ್ಳಬೇಕಾಗುತ್ತದೆ. ಇನ್ನೂ ದಂಡ ವಿಧಿಸಿರುವುದು ದೂರದ ಮಾತು. ಒಂದು ವೇಳೆ ದಂಡ ವಿಧಿಸಿರುವುದೇ ನಿಜವಾಗಿದ್ದಲ್ಲಿ ದಂಡ ಹಾಕಿ ಇಷ್ಟರ ವರೆಗೆ ಎಷ್ಟು ಹಣ ಪಾಲಿಕೆಗೆ ಬಂದಿದೆ ಎಂದು ಗೊತ್ತಾಗಬೇಕಲ್ಲ? ಸುಳ್ಳಿನ ಹಾರವನ್ನು ಪೋಣಿಸಿ ಮಾನ್ಯ ವಿಧಾನ ಪರಿಷತ್ ಸದಸ್ಯರ ಕುತ್ತಿಗೆಗೆ ಹಾಕಿ ಮನಪಾ ಜನರನ್ನು ಮೂರ್ಖರನ್ನಾಗಿಸುವ ಕೆಲಸ ಯಶಸ್ವಿಯಾಗಿ ನಡೆದಿದೆ. ಐವನ್ ಡಿಸೋಜಾ ಅವರು ತಮಗೆ ಸಿಕ್ಕಿದ ಉತ್ತರಗಳನ್ನು ನಂಬಿದರೋ, ಬಿಟ್ಟಿದಾರೋ ಅವರಿಗೆ ಬಿಟ್ಟಿದ್ದು, ಆದರೆ ನಾನಂತೂ ಖಡಾಖಂಡಿತವಾಗಿ ನಂಬುವುದಿಲ್ಲ. ಯಾಕೆಂದರೆ ನನ್ನ ಬಳಿ ಆ ಉತ್ತರಗಳು ಸುಳ್ಳು ಎನ್ನುವುದಕ್ಕೆ ದಾಖಲೆ ಇದೆ. ಇವತ್ತಿನ ದಾಖಲೆಯನ್ನು ಬಿಡುಗಡೆ ಮಾಡಿದ್ದೇನೆ. ನಾಳೆ ಅನಧಿಕೃತ ಜಾಹೀರಾತು ಫಲಕಗಳು ಎಷ್ಟಿವೆ, ಎಲ್ಲೆಲ್ಲಿವೆ ಆ ದಾಖಲೆ ಬಿಡುಗಡೆ ಮಾಡುತ್ತೇನೆ.

  • Share On Facebook
  • Tweet It


- Advertisement -


Trending Now
ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
Hanumantha Kamath March 29, 2023
ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
Hanumantha Kamath March 27, 2023
Leave A Reply

  • Recent Posts

    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
  • Popular Posts

    • 1
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 2
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 3
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 4
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 5
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search