ವೆನಲಾಕ್ ನ ಹೊರರೋಗಿ ವಿಭಾಗದ ಕಟ್ಟಡ ಬಂದ್ ಯಾಕೆ?ಕೊರೊನಾಗೆ ಬಳಸಬಹುದಲ್ಲ!!

ಮಂಗಳೂರಿನಲ್ಲಿ ಒಂದು ಸರಕಾರಿ ಆಸ್ಪತ್ರೆ ಇದೆ. ಅದನ್ನು ಕೊರೊನಾ ಆಸ್ಪತ್ರೆ ಮಾಡುವಾಗಲೇ ಅಲ್ಲಿದ್ದ ಒಳರೋಗಿಗಳನ್ನು ಅಲ್ಲಿಂದ ಶಿಫ್ಟ್ ಮಾಡಲಾಗಿತ್ತು. ನಂತರ ವೆನಲಾಕ್ ಆಸ್ಪತ್ರೆಯ ಬ್ರಿಟಿಷರು ಕಟ್ಟಿದ್ದ ಕಟ್ಟಡವನ್ನು ಮುಚ್ಚಲಾಯಿತು. ಈ ಆಸ್ಪತ್ರೆಯ ಮುಖ್ಯ ಕಟ್ಟಡದ ಹಿಂದೆ ಒಂದು ರಸ್ತೆ ಇದೆ. ಆ ರಸ್ತೆಯ ಇನ್ನೊಂದು ಬದಿಯಲ್ಲಿ ವೆನಲಾಕ್ ಆಸ್ಪತ್ರೆಯ ಹೊಸ ಕಟ್ಟಡ ಇದೆ. ಅಲ್ಲಿ ಕೊರೊನಾ ರೋಗಿಗಳನ್ನು ದಾಖಲಿಸಲಾಯಿತು. ಉಳಿದ ಕಟ್ಟಡಗಳು ಆವತ್ತು ಬಂದ್ ಆದ್ದದ್ದು ಇವತ್ತಿಗೂ ಬಂದ್ ಆಗಿಯೇ ಇದೆ. ಅದರ ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ 19 ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ ನೀಡಲು ಅವಕಾಶ ನೀಡಲಾಯಿತು. ಅಲ್ಲಿ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲಿ ಒಂದು ಕಟ್ಟಡದಲ್ಲಿಯೇ ಕೋವಿಡ್ 19 ಮತ್ತು ಸಾಮಾನ್ಯ ಚಿಕಿತ್ಸೆಯ ರೋಗಿಗಳು ಇರುತ್ತಾರೆ. ಹಾಗಾದರೆ ಇದು ಏನು ಕಥೆ. ವೆನಲಾಕ್ ನಲ್ಲಿ ಯಾವುದೇ ಕಾರಣಕ್ಕೂ ಒಂದೇ ಏರಿಯಾದಲ್ಲಿಯೂ ಹಾಗೇ ಆಗಬಾರದು ಎನ್ನುವ ಕಾರಣಕ್ಕೆ ಒಂದು ಕಟ್ಟಡಕ್ಕೆ ಕಟ್ಟಡವನ್ನೇ ಮುಚ್ಚಲಾಗಿದೆ. ವೆನಲಾಕ್ ಆಸ್ಪತ್ರೆಯ ಹೊರರೋಗಿಗಳ ಚಿಕಿತ್ಸಾ ಕಟ್ಟಡಕ್ಕೂ ಕೋವಿಡ್ 19 ಚಿಕಿತ್ಸೆ ನೀಡುವ ಕಟ್ಟಡಕ್ಕೂ ಸಾಕಷ್ಟು ಅಂತರವಿದೆ. ಯಾಕೆಂದರೆ ಕಟ್ಟಡಗಳೇ ಬೇರೆ ಬೇರೆ. ಒಂದು ವೇಳೆ ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳಿಗೆ ಒಂದೇ ಕಟ್ಟಡದಲ್ಲಿ ಕೋವಿಡ್ 19 ಮತ್ತು ಇತರ ರೋಗಿಗಳಿಗೆ ಚಿಕಿತ್ಸೆ ನೀಡಲು ಅವಕಾಶ ನೀಡಿದೆ ಎಂದಾದರೆ ವೆನಲಾಕ್ ಆಸ್ಪತ್ರೆಗೂ ನೀಡಿ. ಇದೆಲ್ಲಾ ಜನಪ್ರತಿನಿಧಿಗಳಿಗೆ ಗೊತ್ತಿಲ್ವಾ? ಕೆಲವು ದಿನಗಳ ಹಿಂದೆ ಫ್ರೀ ಇದ್ದಾಗೆಲ್ಲಾ ಜನಪ್ರತಿನಿಧಿಗಳ ಪಟಾಲಾಂ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ಕುಳಿತು ಚಾ ಕುಡಿದು, ಬಿಸ್ಕಿಟ್ ತಿಂದು ಬಂದದ್ದು ಇದಕ್ಕೆನಾ?
ಇದೆಲ್ಲಾ ನೋಡುವಾಗ ನನ್ನ ಬಳಿ ಒಂದು ಪರಿಹಾರ ಇದೆ. ಖಾಸಗಿ ಆಸ್ಪತ್ರೆಗಳಿಗೆ ಕೊರೊನಾ ಚಿಕಿತ್ಸೆ ಅಥವಾ ಟೆಸ್ಟ್ ಮಾಡುವ ಅನುಮತಿಯನ್ನು ಜಿಲ್ಲಾಡಳಿತ ಹಿಂದಕ್ಕೆ ಪಡೆದುಕೊಳ್ಳಬೇಕು. ಚಿಕಿತ್ಸೆ ನೀವು ಮಾಡಬೇಡಿ ಎಂದರೆ ಸಹಜವಾಗಿ ಕೋವಿಡ್ 19 ಪಾಸಿಟಿವ್ ಸಂಖ್ಯೆ ಕಡಿಮೆಯಾಗಲಿದೆ. ಯಾಕೆಂದರೆ ಟೆಸ್ಟ್ ಮಾಡಿಸಿ ಪಾಸಿಟಿವ್ ಎಂದು ತಾವೇ ಬರೆದು ವರದಿ ತಯಾರಿಸಿದರೆ ಹೇಗಾದರೂ ಖಾಸಗಿ ಆಸ್ಪತ್ರೆಗೆ ಹಣ ಬಂದೇ ಬರುತ್ತದೆ. ಆಯುಷ್ಮಾನ್ ಕಾರ್ಡ್ ಇದ್ದವರಿಗಂತೂ ಸರಕಾರವೇ ಹಣ ಕೊಡುತ್ತದೆ. ಹೇಗೂ ಮೂರ್ನಾಕು ತಿಂಗಳುಗಳಿಂದ ಆದಾಯ ಇಲ್ಲದೇ ನುಸಿಗಳನ್ನು ಹುಡುಕಿ ಹುಡುಕಿ ಹೊಡೆಯುತ್ತಿದ್ದ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳಿಗೆ ಇದೊಂದು ಹಬ್ಬ ಆಗಿದೆ. ಅದರ ಬದಲು ಒಂದು ಮಾಡೋಣ. ಮಾತನಾಡಿದರೆ ವೈದ್ಯರು ತಾವು ಹರಿಯ ಅವತಾರ ಎಂದು ಅಂದುಕೊಂಡಿದ್ದಾರಲ್ಲ, ಅವರು ಇಷ್ಟು ವರ್ಷ ಹೇಗೂ ಮನಸ್ಸಿಗೆ ಬಂದಂತೆ ದುಡಿದಿದ್ದಾರೆ. ಈಗ ಸರದಿಯಂತೆ ವೆನಲಾಕ್ ನಲ್ಲಿ ಸೇವೆ ಸಲ್ಲಿಸಲಿ. ಖಾಸಗಿ ಆಸ್ಪತ್ರೆಗಳು ಜನಸೇವೆಗಾಗಿ ಕೆಲಸ ಮಾಡುತ್ತವೆ ಎನ್ನುವುದನ್ನು ಯಾರೂ ನಂಬುವ ಪರಿಸ್ಥಿತಿಯಲ್ಲಂತೂ ಇಲ್ಲವೇ ಇಲ್ಲ. ವೆನಲಾಕ್ ಆಸ್ಪತ್ರೆಯ ಹೊರರೋಗಿಗಳ ಕಟ್ಟಡ ತೆರೆಯಲಿ. ಈಗ ವೆನಲಾಕ್ ನಲ್ಲಿ ಜಾಗ ಇಲ್ಲ ಎನ್ನುವ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಿದ್ದು ತಾನೇ. ಅದರ ಬದಲಿಗೆ ವಿಶಾಲವಾಗಿರುವ ವೆನಲಾಕ್ ಒಪಿಡಿ ಕಟ್ಟಡದಲ್ಲಿ ಎಷ್ಟು ಬೇಕಾದರೂ ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಬಹುದಲ್ಲ. ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಅವಕಾಶ ನೀಡುವ ಮೊದಲು ಪಾಸಿಟಿವ್ ಸಂಖ್ಯೆಗಳು ಕಡಿಮೆ ಇತ್ತು. ಆಗ ನೀವು ನೋಡಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಜನಪ್ರತಿನಿಧಿಗಳು ಇವತ್ತು ಇಬ್ಬರು ಪಾಸಿಟಿವ್, ಇವತ್ತು ಒಂದೇ ಪಾಸಿಟಿವ್, ಹೆದರಬೇಡಿ, ಮನೆಯಲ್ಲಿಯೇ ಇರಿ ಎಂದು ಬರೆಯುತ್ತಿದ್ದರು. ನಂತರ ಯಾವಾಗ ಖಾಸಗಿ ಆಸ್ಪತ್ರೆಗೆ ಅನುಮತಿ ಕೊಡಲಾಯಿತೋ ನಂತರ ಫೇಸ್ ಬುಕ್ ನಲ್ಲಿ ಅಂತವರು ಬರೆಯುವುದನ್ನೇ ಬಿಟ್ಟರು. ಯಾವ ಮುಖ ಇಟ್ಟು ಬರೆಯುವುದು. ಇವತ್ತು ಇನ್ನೂರೈವತ್ತು ಆಗಿದೆ, ಮೊನ್ನೆ ಮುನ್ನೂರು ಆಗಿದೆ ಎಂದು ಬರೆಯಲು ಆಗುತ್ತಾ? ಅದರೊಂದಿಗೆ ಜನಸಾಮಾನ್ಯರು ಕೂಡ ಖಾಸಗಿ ಆಸ್ಪತ್ರೆಗೆ ಹೋಗಲು ಹೆದರುವಂತಹ ವಾತಾವರಣ ಇದೆ. ಜನರಿಗೆ ಅಲ್ಲಿ ನಿಜಕ್ಕೂ ಕೋವಿಡ್ ನೆಗೆಟಿವ್ ಇದ್ದರೂ ಪಾಸಿಟಿವ್ ಎಂದು ಸುಳ್ಳು ಹೇಳಿ ಬಿಲ್ ಮಾಡುತ್ತಾರೆ ಎನ್ನುವ ಅನುಮಾನವನ್ನು ಕೂಡ ಹೋಗಲಾಡಿಸಬಹುದು. ಇನ್ನು ಈಗೀಗ ಹೆಣಗಳು ಕೂಡ ಬದಲಾಗುತ್ತಿವೆ. ನಮ್ಮ ಮೇಲೆ ವಿಪರೀತ ಕೆಲಸದ ಒತ್ತಡ ಎಂದು ಸರಕಾರಿ ಆಸ್ಪತ್ರೆಯ ವೈದ್ಯರು ಹೇಳುತ್ತಾರೆ. ಅವರಿಗೆ ಖಾಸಗಿ ಆಸ್ಪತ್ರೆಯ ವೈದ್ಯರು ಸಹಾಯ ಮಾಡುವುದಕ್ಕೆ ಇದೇ ಸರಿಯಾದ ಸಮಯವೂ ಹೌದು. ಇನ್ನು ನಿತ್ಯ ಮಾಧ್ಯಮಗಳಲ್ಲಿ ಇಷ್ಟು ಜನರು ಕೊರೊನಾದಿಂದ ಸತ್ತರು, ಅಷ್ಟು ಜನ ಸತ್ತರು ಎಂದು ಹೇಳಲಾಗುತ್ತಿದೆ. ಯಾರು ಕೊರೊನಾದಿಂದಲೇ ಸತ್ತರಾ ಅಥವಾ ಅದಕ್ಕೆ ಬೇರೆ ಕಾರಣ ಉಂಟಾ? ಬಿಲ್ ಸರಕಾರದಿಂದ ಮಂಜೂರಾಗಲೂ ಕೊರೊನಾ ಬಳಕೆಯಾಗುತ್ತಿದೆಯಾ? ಒಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಅವಕಾಶ ಕೊಟ್ಟಿದ್ದು ತುಂಬಾ ಆಯಿತು. ಇನ್ನು ಅವರನ್ನು ಸರಕಾರಿ ಆಸ್ಪತ್ರೆಗೆ ಕರೆಸಿ. ಚಿಕಿತ್ಸೆಗೆ ಚಿಕಿತ್ಸೆನೂ ಆಯಿತು. ಜನರ ಸಂಶಯವೂ ನಿವಾರಣೆ ಆಯಿತು!
Leave A Reply