ಬಿಜೆಪಿ ಬಂದು ಒಂದೂವರೆ ವರ್ಷ ಆದರೂ ವಿಶ್ವವಿದ್ಯಾನಿಲಯದ ಭ್ರಷ್ಟರಿಗೆ ಶಿಕ್ಷೆ ಆಗಿಲ್ಲ!!
ವಿಶ್ವವಿದ್ಯಾನಿಲಯ ಎಂದರೆ ಅದು ದೊಡ್ಡ ದೇವಸ್ಥಾನ ಇದ್ದಂತೆ. ಅಲ್ಲಿ ಇರುವವರು ದೇವಸ್ಥಾನಗಳಲ್ಲಿ ಹೇಗೆ ಇರುತ್ತೇವೆಯೋ ಹಾಗೇ ಇರಬೇಕು. ಆದರೆ ಕೆಲವೊಮ್ಮೆ ಕಾಡುಮೃಗಗಳಿಗಿಂತಲೂ ಭಯಂಕರ ಮನಸ್ಸಿನ ಪ್ರಾಣಿಗಳು ಅಲ್ಲಿ ನುಗ್ಗಿ ಬಿಡುತ್ತವೆ. ಕಾಡುಪ್ರಾಣಿಗಳಾದರೂ ಹೊಟ್ಟೆ ತುಂಬಿದರೆ ಬೇಟೆಯಾಡುವುದಿಲ್ಲ. ಆದರೆ ಕೆಟ್ಟ ಮನಸ್ಸಿನ ಮನುಷ್ಯರಿಗೆ ಕಾಮದ ರೋಗ ಅಂಟಿಕೊಂಡರೆ ಅಂತವರು ಇಡೀ ಪರಿಸರಕ್ಕೆ ಕಪ್ಪುಚುಕ್ಕೆಯಾಗಿರುತ್ತಾರೆ.
ಮೂರು ವರ್ಷಗಳ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರೋ.ಅರಬಿ ಎಂಬುವರು ತರಗತಿ ಕೊಠಡಿಯಲ್ಲಿ ಯಾರೂ ಇಲ್ಲದ ಸಂದರ್ಭ ವಿದ್ಯಾರ್ಥಿನಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಈ ಬಗ್ಗೆ ವಿದ್ಯಾರ್ಥಿನಿ ವಿಶ್ವವಿದ್ಯಾನಿಲಯಕ್ಕೆ ದೂರು ನೀಡಿದ್ದಳು. ಆದರೆ ದೂರಿನ ಬಗ್ಗೆ ವಿಚಾರಣೆ ನಡೆಸುವ ಬದಲು ಅಂದಿನ ಕುಲಸಚಿವ ಡಾ.ಎ.ಎಂ.ಖಾನ್ ಘಟನೆಯನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದರು. ಎಎಂ ಖಾನ್ ಗೆ ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಆಗಿನ ಸಚಿವರಿಂದ ಅಭಯಹಸ್ತ ಇತ್ತು.
ಖಾನ್ ಹಾಗೂ ಆಗಿನ ಕುಲಪತಿ ಭೈರಪ್ಪನವರು ಮಾಡಿದ ಭ್ರಷ್ಟಾಚಾರದ ಬಗ್ಗೆ ನಾನು ಇದೇ ಜಾಗೃತ ಅಂಕಣದಲ್ಲಿ ಸರಣಿ ಲೇಖನಗಳನ್ನು ಬರೆದಿದ್ದೇನೆ. ಅವರಿಬ್ಬರ ಹಗರಣ ಒಂದೆರಡಲ್ಲ. ವಿವಿಗೆ ಬಂದ ಪ್ರತಿ ಯೋಜನೆಯಲ್ಲಿ ಇವರಿಬ್ಬರು ಹಣ ಹೊಡೆದಿದ್ದರು. ಅದು ವಿದೇಶಿ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣ ಇರಬಹುದು, ಸೋಲಾರ್ ಲೈಟ್ಸ್ ಅಳವಡಿಕೆ ಇರಬಹುದು, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಇರಬಹುದು, ಇವರಿಬ್ಬರು ಹಣ ಹೊಡೆಯದ ಕಾಮಗಾರಿ ವಿವಿಯಲ್ಲಿ ಇರಲೇಇಲ್ಲ. ರಾಜ್ಯ ಮಟ್ಟದ ವಾಹಿನಿಗಳಲ್ಲಿಯೂ ಇವರ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ವಿವರ ಬಂದಿತ್ತು. ಈ ವಿಷಯವನ್ನು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ ವಿಧಾನಪರಿಷತ್ ಸದಸ್ಯರಾದ ರವಿಕುಮಾರ್ ಕ್ರಮವಾಗಿ ವಿಧಾನಸಭೆ ಮತ್ತು ವಿಧಾನಪರಿಷತ್ ನಲ್ಲಿ ಪ್ರಸ್ತಾಪಿಸಿದ್ದರು. ಆ ಸಮಯದಲ್ಲಿ ಇದು ಎಲ್ಲಾ ಪತ್ರಿಕೆ, ಟಿವಿಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಆಗ ರಾಜ್ಯದಲ್ಲಿ ಇದ್ದ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಜಿಟಿ ದೇವೆಗೌಡರು ಮೂರು ತಿಂಗಳ ಒಳಗೆ ಖಾನ್ ಮತ್ತು ಭೈರಪ್ಪನವರ ಸಮಗ್ರ ಭ್ರಷ್ಟಾಚಾರದ ಬಗ್ಗೆ ವಿವರ ನೀಡುವಂತೆ ಆದೇಶಿಸಿದ್ದರು.
ಇದೆಲ್ಲ ಆಗಿ ರಾಜ್ಯ ಸರಕಾರ ಬಿದ್ದು ಹೋಗಿ ಭಾರತೀಯ ಜನತಾ ಪಾರ್ಟಿಯ ಸರಕಾರ ಬಂತು. ಕುಲಪತಿಯಾಗಿದ್ದ ಭೈರಪ್ಪ ನಿವೃತ್ತಿಯಾದರು. ಖಾನ್ ವರ್ಗಾವಣೆಯಾಗಿದ್ದಾರೆ. ಖಾನ್ ಮೇಲೆ ಭ್ರಷ್ಟಾಚಾರದ ಹಗರಣ ಮಾತ್ರವಲ್ಲ, ತಮ್ಮ ಅಧಿಕಾರ ದುರುಪಯೋಗಪಡಿಸಿ ಪತ್ನಿಗೆ ಪ್ರಮೋಶನ್ ನೀಡಿದ್ದು, ತಮಗೆ ಬೇಕಾದವರನ್ನೇ ಆಯಕಟ್ಟಿನ ಜಾಗದಲ್ಲಿ ನೇಮಿಸಿದ್ದು ಸಹಿತ ಅನೇಕ ಆರೋಪಗಳಿವೆ. ಈ ಬಗ್ಗೆ ಎಬಿವಿಪಿ ಕಾರ್ಯಕರ್ತರು ರಾಜ್ಯಪಾಲರಿಗೂ ಮನವಿ ಮಾಡಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.
ಇನ್ನು ಮಂಗಳೂರು ವಿವಿಯಲ್ಲಿ ಎಂತೆಂತಹ ಮನಸ್ಥಿತಿಯ ಪ್ರೋಫೆಸರ್ ಗಳಿದ್ದಾರೆ ಎಂದರೆ ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆ ತರುವಾಗ ಆ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿಸುವ ಕಾರ್ಯ ಮಾಡಿದ್ದಾರೆ. ಅಂತಹ ಒಂದು ಸ್ಕ್ರೀನ್ ಶಾಟ್ ನಾನು ಇವತ್ತು ಪೋಸ್ಟ್ ಮಾಡುತ್ತಿದ್ದೇನೆ. ಬಿಜೆಪಿ ಕಾರ್ಯಕರ್ತರು ಮನೆಮನೆಗೆ ಬಂದಾಗ ಅವರು ಕೊಡುವ ಯಾವುದೇ ದಾಖಲೆಗಳಿಗೆ ಸಹಿ ಹಾಕದಂತೆ ಒಂದು ವಾಟ್ಸಪ್ ಮೇಸೆಜ್ ಇಲ್ಲಿನ ಪ್ರೋಫೆಸರ್ ಒಬ್ಬರು ಬರೆದು ಕ್ಯಾಂಪೇನ್ ಮಾಡಿದ್ದಾರೆ. ಈ ವಿಷಯ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ ಮೂಡಬಿದಿರೆಯವರು ಸೂಕ್ತ ಕ್ರಮ ಕೈಗೊಳ್ಳಲು ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರ ಗಮನಕ್ಕೆ ತಂದಿದ್ದರು.
ಎಬಿವಿಪಿ ಯುವಕರು ರಾಜ್ಯದ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರಿಗೂ ಮನವಿ ಮಾಡಿದ್ದರು. ಇನ್ನೇನೂ ಆ ಪ್ರೋಫೆಸರ್ ಅವರ ಮೇಲೆ ಕ್ರಮ ಆಗಿಯೇ ಆಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅಷ್ಟರಲ್ಲಿ ಆ ಪ್ರೋಫೆಸರ್ ದೆಹಲಿಯ ಜೆಎನ್ ಯುವಿನಲ್ಲಿರುವ ಕರ್ನಾಟಕದವರೊಬ್ಬರಿಂದ ಸಚಿವರ ಮೇಲೆ ಒತ್ತಡ ಹಾಕಿ ಏನೂ ಶಿಸ್ತುಕ್ರಮ ಆಗದಂತೆ ನೋಡಿಕೊಂಡರು. ಅಲ್ಲಿಗೆ ಒಂದು ವಿಷಯ ಸ್ಪಷ್ಟವಾಗಿದೆ. ಅದೇನೆಂದರೆ ಯಾವ ಪಕ್ಷದ ಸರಕಾರವೇ ಬರಲಿ ಭ್ರಷ್ಟರಿಗೆ ಏನೂ ಆಗುವುದಿಲ್ಲ. ಅದಕ್ಕೆ ಎಎಂ ಖಾನ್ ಮತ್ತು ಭೈರಪ್ಪನವರ ವಿರುದ್ಧ ಏನೂ ಕ್ರಮ ಆಗದೇ ಇರುವುದೇ ಸಾಕ್ಷಿ. ಇನ್ನು ಮೋದಿ ಸರಕಾರದ ಸಿಎಎ ವಿರುದ್ಧ ಅಪಪ್ರಚಾರ ಮಾಡಿದ ಪ್ರೋಫೆಸರ್ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಒಂದು ಜಿಲ್ಲೆಯ ಬಿಜೆಪಿ ಪಕ್ಷಾಧ್ಯಕ್ಷರೇ ಹೇಳಿದ ಮೇಲೆಯೂ ಅಂತವರಿಗೆ ಏನೂ ಆಗುವುದಿಲ್ಲ ಎಂದರೆ ಏನರ್ಥ. ಆ ಪ್ರೋಫೆಸರ್ ಈಗ ಸುಳ್ಯ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದಾರೆ. ಕಾಂಗ್ರೆಸ್ ಸರಕಾರ ಇದ್ದಾಗ ಏನು ಭ್ರಷ್ಟಾಚಾರ ಮಾಡಿದ್ರೂ ನಡೆಯುತ್ತದೆ ಎನ್ನುವ ವಿಶ್ವಾಸ ಕೆಲವು ಹೆಗ್ಗಣಗಳಿಗ ಇರುತ್ತದೆ. ಅಂತವರ ಹಗರಣಗಳಿಂದ ಬೇಸತ್ತು ಹೋದ ಎಬಿವಿಪಿ, ಬಿಜೆಪಿ ಕಾರ್ಯಕರ್ತರು ನಮ್ಮ ಸರಕಾರ ಬಂದ ಮೇಲೆ ಭ್ರಷ್ಟರಿಗೆ ಉಳಿಗಾಲವಿಲ್ಲ ಎಂದು ವಿಶ್ವಾಸವಿರಿಸಿಕೊಂಡಿರುತ್ತಾರೆ. ಆದರೆ ಈಗ ಬಿಜೆಪಿ ಸರಕಾರ ಬಂದು ಒಂದು ವರ್ಷ ಮೂರು ತಿಂಗಳಾಗಿವೆ. ವಿವಿಯಲ್ಲಿ ಹಗರಣಗಳ ಮಧ್ಯೆ ಹೂತು ಹೋಗಿದ್ದವರಿಗೂ ಏನೂ ಆಗಿಲ್ಲ. ಅದೇ ರೀತಿಯಲ್ಲಿ ಕೇಂದ್ರ ಸರಕಾರ ವಿರುದ್ಧ ಅಪಪ್ರಚಾರ ಮಾಡಿದವರಿಗೂ ಏನೂ ಆಗಿಲ್ಲ. ಯಾಕೋ ಜನರಿಗೆ ಭ್ರಮನಿರಸನವಾಗುವುದು ಇಂತಹ ವಿಷಯಗಳಿಂದಲೇ!
Leave A Reply