ಪಾಲಿಕೆ ಜಾಗ ಅಡವಿಟ್ಟು ಸಂತ್ರಸ್ತರಿಗೆ ಪರಿಹಾರ ನೀಡುವ ಪರಿಸ್ಥಿತಿ ಇದೆ!!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಸರಕಾರ ಇದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ. ಕೇಂದ್ರದಲ್ಲಿ ಬಿಜೆಪಿ ಆಡಳಿತ ಇದೆ. ಇನ್ನೆಲ್ಲಿ ಬರಲು ಮಂದಾರ ಜನ ಕಾಯಬೇಕು. ಕೇಂದ್ರದಲ್ಲಿ ಕುಳಿತು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಉದ್ದಿಮೆ ಚೇತರಿಸಲು ಕ್ಯಾಲ್ಕುಲೇಟರ್ ನಲ್ಲಿ ಬರದಷ್ಟು ಸಂಖ್ಯೆಗಳನ್ನು ಪರಿಹಾರವಾಗಿ ಘೋಷಿಸುತ್ತಿದ್ದಾರೆ. ರಾಜ್ಯದಲ್ಲಿ ಬಡವರ, ರೈತರ ಬಂಧು ಯಡಿಯೂರಪ್ಪನವರಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಕಾಮಧೇನು ಶಾಸಕರಿದ್ದಾರೆ. ಇನ್ನೆಷ್ಟು ದಿನ ಕಾದರೆ ಪಚ್ಚನಾಡಿ ತ್ಯಾಜ್ಯದ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವುದನ್ನು ಯಾರಾದರೂ ಹೇಳಬೇಕು. ಇವರು ಹೇಳುವುದಿಲ್ಲ ಎಂದು ಗೊತ್ತಾದ ಕಾರಣ ರಾಜ್ಯದ ಉಚ್ಚ ನ್ಯಾಯಾಲಯವೇ ಸರಕಾರದ ಬಾಯಿಗೆ ಕೋಲು ಹಾಕಿ ಕೇಳಿದೆ. ಆದರೆ ಪಾಪ ಪಾಲಿಕೆಯ ಬಳಿ ಹಣವಿಲ್ಲ. ಇಷ್ಟು ದಿನ ಅದು ರಾಜ್ಯ ಸರಕಾರದತ್ತ ಮುಖ ಮಾಡಿ ಕುಳಿತಿತ್ತು. ಒಟ್ಟು ಬೇಕಾಗಿದ್ದ ಹಣ 22 ಕೋಟಿ. ಸರಕಾರ ಪಾಲಿಕೆಯ ಗೋಳು ಕಂಡು 8 ಕೋಟಿ ನೀಡಿತ್ತು. ಅಷ್ಟಕ್ಕೂ ಆ 22 ಕೋಟಿ ಯಾವುದಕ್ಕೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರುತ್ತೇನೆ. ಪಚ್ಚನಾಡಿಯ ತ್ಯಾಜ್ಯ ಭಾರೀ ಮಳೆಗೆ ಜಾರಿ ಹೋಗಿ ಕೆಳಗೆ ಮಂದಾರ ಎನ್ನುವ ಪ್ರದೇಶದ ಅನೇಕ ಕುಟುಂಬಗಳ ಕೃಷಿ ಭೂಮಿಗೆ ಹಾನಿ ಮಾಡಿದೆ. ಅವರ ಮನೆಗಳಿಗೆ ಹಾನಿ ಮಾಡಿದೆ. ಅವರ ಬೆಳೆಗಳಿಗೆ ಹಾನಿ ಮಾಡಿರುವುದು, ಕೃಷಿ ಭೂಮಿಗೆ ಹಾನಿ ಮಾಡಿರುವುದು, ಅವರಿಗೆ ಅಲ್ಲಿಂದ ಬೇರೆ ಸ್ವಂತ ಮನೆಗಳಿಗೆ ಸ್ಥಳಾಂತರ ಮಾಡುವುದು ಅಥವಾ ಅವರ ಜಾಗವನ್ನು ಖರೀದಿ ಮಾಡಿ ಯೋಗ್ಯ ಬೆಲೆ ಕೊಡುವುದು ಹಾಗೂ ಅಂತಿಮವಾಗಿ ಅಲ್ಲೊಂದು ಬೃಹತ್ ತಡೆಗೋಡೆ ಕಟ್ಟುವುದು ಸೇರಿದಂತೆ ಎಲ್ಲಾ ಕೆಲಸಗಳಿಗೆ ಒಟ್ಟು 22 ಕೋಟಿ ರೂಪಾಯಿ ಹಣ ಬೇಕಾಗಲಿದೆ. ಪಾಲಿಕೆಗೆ ರಾಜ್ಯ ಸರಕಾರ ಬಿಡುಗಡೆ ಮಾಡಿದ್ದು 8 ಕೋಟಿ.
Leave A Reply