45 ವರ್ಷದ ಮಾರ್ಕೆಟ್ ಮತ್ತು 65 ವರ್ಷದ ಪಿವಿಎಸ್ ಬಿಲ್ಡಿಂಗ್ ಯಾವುದು ಸ್ಟ್ರಾಂಗ್!!
![](https://tulunadunews.com/wp-content/uploads/2020/10/MLR-CENTRALMARKET-TNN-960x640.jpg)
ಮಂಗಳೂರಿನಿಂದ ಸುರತ್ಕಲ್ ಕಡೆಗೆ ಹೋಗುವಾಗ ಕುಳೂರು ಸೇತುವೆ ಸಿಗುತ್ತದೆ. ಒಂದು ಇಲ್ಲಿಂದ ಅತ್ತ ಹೋಗಲು ಮತ್ತೊಂದು ಆ ಕಡೆಯಿಂದ ಈ ಕಡೆ ಬರಲು. ಅದರಲ್ಲಿ ಒಂದು ಬ್ರಿಟಿಷರು ಕಟ್ಟಿಸಿದ್ದು. ಇನ್ನೊಂದು ನಮ್ಮ ಯಾವುದೋ ಸರಕಾರ ಕಟ್ಟಿಸಿದ್ದು. ಅದರಲ್ಲಿ ಬ್ರಿಟಿಷರು ಕಟ್ಟಿಸಿದ್ದು ಗಟ್ಟಿ ಇದೆ. ನಾವು ಕಟ್ಟಿಸಿದ್ದು ಜೀರ್ಣಾವಸ್ಥೆಯಲ್ಲಿದೆ. ನಾವು ಕಟ್ಟಿಸಿದ್ದ ಸೇತುವೆಗೆ ಇತ್ತೀಚೆಗೆ 36 ಲಕ್ಷ ರೂಪಾಯಿ ವ್ಯಯಿಸಿ ರಿಪೇರಿ ಮಾಡಲಾಗಿದೆ. ಅದರಲ್ಲಿ ಮತ್ತೆ ಹೊಂಡಗಳು ಬಿದ್ದಿವೆ. ಅದಕ್ಕೆ ಮತ್ತೆ ತೇಪೆ ಹಾಕಲಾಗಿದೆ. ನಾನು ಇದನ್ನು ಯಾಕೆ ಹೇಳುತ್ತಿದ್ದೆನೆ ಎಂದ್ರೆ ನಮ್ಮ ಸರಕಾರಿ ವ್ಯವಸ್ಥೆಯಲ್ಲಿ ಕಟ್ಟುವ ಕಟ್ಟಡಗಳು ಅದು ಯಾವುದೇ ಸರಕಾರ ಕಟ್ಟಿರಲಿ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಬೇಕಾದರೆ ಸೆಂಟ್ರಲ್ ಮಾರ್ಕೆಟ್ ತೆಗೆದುಕೊಳ್ಳಿ. ಅದಕ್ಕೆ ಹೆಚ್ಚೆಂದರೆ 45 ವರ್ಷಗಳಾಗಿವೆ. ಅದನ್ನು ನೋಡಿದರೆ 250 ವರ್ಷಗಳಾಗಿರುವಂತೆ ಕಾಣುತ್ತದೆ. ಎನ್ ಐಟಿಕೆಯ ತಜ್ಞರ ತಂಡ ಅದರ ಆಯುಷ್ಯ ಮುಗಿದಿದೆ ಎಂದು ಘೋಷಿಸಿದ್ದಾರೆ. ಸದ್ಯ ಮುದುಕಿಗೆ ಮೇಕಪ್ ಮಾಡಿ ಐಸಿಯುನಲ್ಲಿ ಮಲಗಿಸಲಾಗಿದೆ. ಅದೇ ಈ ಕಟ್ಟಡಗಳಿಗಿಂತ ಎಷ್ಟೋ ಹಳೆಯದಾದ ಖಾಸಗಿ ಕಟ್ಟಡಗಳು ಇನ್ನು ಗಟ್ಟಿಮುಟ್ಟಾಗಿ ನಮ್ಮಲ್ಲಿ ನಿಂತಿವೆ. ಉದಾಹರಣೆಗೆ ಮಂಗಳೂರಿನ ಪ್ರಪ್ರಥಮ ಬಹುಮಹಡಿ ಕಟ್ಟಡವಾಗಿರುವ ಪಿವಿಎಸ್ ಬಿಲ್ಡಿಂಗ್. ಅದಕ್ಕೆ ಅಂದಾಜು 65 ವರ್ಷಗಳ ಮೇಲಾಗಿದೆ. ಸೆಂಟ್ರಲ್ ಮಾರ್ಕೆಟ್ ಗಿಂತ ಎಷ್ಟೋ ಸ್ಟ್ರಾಂಗ್ ಆಗಿ ಇವತ್ತಿಗೂ ನಿಂತಿರುವ ಇನ್ನೊಂದು ಕಟ್ಟಡ ಬಾವುಟಗುಡ್ಡೆಯ ಬಳಿಯ ಕೆಎಂಸಿ ಕಾಲೇಜು ಕಟ್ಟಡ. ಅದಕ್ಕೂ 50 ವರ್ಷ ದಾಟಿದೆ. ಆದರೆ ನಮ್ಮ ಸರಕಾರಿ ಹಣದಲ್ಲಿ ಕಟ್ಟಿದ ಕಟ್ಟಡಗಳು ಮಾತ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಸೊರಗಿದ ಮಕ್ಕಳಂತೆ ಕಾಣುತ್ತವೆ. ಹಾಗಂತ ಯಾವುದೇ ಸರಕಾರಿ ಕಾಮಗಾರಿ ಮುಗಿದ ಬಳಿಕ ಅದಕ್ಕೆ ಕಣ್ಣು ಮುಚ್ಚಿ ಹಣ ಬಿಡುಗಡೆಯಾಗುವುದಿಲ್ಲ. ಮೂರನೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಕಾಮಗಾರಿಯ ಗುಣಮಟ್ಟ ವೀಕ್ಷಣೆ ಇರುತ್ತದೆ. ಅದನ್ನು ಥರ್ಡ್ ಪಾರ್ಟಿ ಇನ್ಸಫೇಕ್ಷನ್ ಎಂದು ಕರೆಯಲಾಗುತ್ತದೆ. ಅವರು ಬಂದು ನೋಡಿ ಓಕೆ ಮಾಡಿ ವರದಿ ಕೊಟ್ಟ ನಂತರ ಗುತ್ತಿಗೆದಾರರಿಗೆ ಹಣ ಮಂಜೂರಾಗುತ್ತದೆ.
ಆದರೆ ನಮ್ಮಲ್ಲಿ ಮೂರನೇ ಕಣ್ಣು ನೋಡಿ ಪಾಸಾಗಬೇಕೆನ್ನುವುದು ಕೇವಲ ಕಾಟಾಚಾರಕ್ಕೆ ಮಾಡಿದಂತಹ ಸಂಪ್ರದಾಯವಾಗಿದೆ. ಎಷ್ಟೋ ಬಾರಿ ಮೂರನೇ ವ್ಯಕ್ತಿ/ಸಂಸ್ಥೆ ಕಾಮಗಾರಿಯ ಸ್ಥಳಕ್ಕೆ ಬರದೇ ತಮ್ಮ ಎಸಿ ಕೋಣೆಯಲ್ಲಿ ಕುಳಿತು ಗುತ್ತಿಗೆದಾರರೊಂದಿಗೆ ಹಿತವಾಗಿ ಮಾತನಾಡುತ್ತಾ ಅಲ್ಲಿಯೇ ಸಹಿ ಹಾಕಿ ಕಳುಹಿಸುತ್ತಾರೆ. ಇನ್ನು ಒಂದು ವೇಳೆ ಬಂದು ನೋಡಿದರೂ ಅನೇಕ ಬಾರಿ ಅವರಿಗೆ ಕಾಮಗಾರಿಯ ತಲೆಬುಡ ಅರ್ಥವಾಗುವುದೇ ಇಲ್ಲ. ಹೇಗೆಂದರೆ ಕಾಮಗಾರಿಯ ಅಂದಾಜು ಪಟ್ಟಿಯಲ್ಲಿ “ಎಂ” ಗುಣಮಟ್ಟದ ಉತ್ತಮ ದರ್ಜೆಯ ಇಷ್ಟೇ ಇಂಚು ದಪ್ಪದ ಪೈಪನ್ನು ಹಾಕಬೇಕೆಂದು ನಿಯಮ ಇರುತ್ತದೆ. ಇನ್ನು ಆ ಪೈಪನ್ನು ನೆಲದ ಕೆಳಗೆ ಒಂದು ಮೀಟರ್ ಮತ್ತು ಒಂದು ಅಡಿ ಆಳದಲ್ಲಿ ಹಾಕಿರಬೇಕೆಂದು ಸ್ಪಷ್ಟವಾಗಿ ಹೇಳಲಾಗಿರುತ್ತದೆ. ಯಾಕೆಂದರೆ ಮೇಲಿಂದ ಮೇಲೆ ಹಾಕಿದರೆ ಹೆವಿ ವಾಹನಗಳು ಹೋಗುವಾಗ ಪೈಪು ಡ್ಯಾಮೇಜ್ ಆಗುತ್ತದೆ. ಇಷ್ಟು ಆಳದಲ್ಲಿ ಇಷ್ಟು ದಪ್ಪದ ಇಷ್ಟು ಗುಣಮಟ್ಟದ ಪೈಪನ್ನು ಹಾಕಲು ಇಷ್ಟು ಖರ್ಚಾಗುತ್ತದೆ ಎಂದು ನೋಡಿಕೊಂಡು ಪಾಲಿಕೆಯೋ, ಜಿಲ್ಲಾ ಪಂಚಾಯತೋ ಗುತ್ತಿಗೆದಾರರಿಗೆ ಅರ್ತ್ ವರ್ಕ್ ಹಣ ನಿಗದಿಪಡಿಸಿರುತ್ತದೆ. ಆದರೆ ಹಣ ಉಳಿಸುವ ದೃಷ್ಟಿಯಿಂದ ಗುತ್ತಿಗೆದಾರರು ಯಾವುದೋ ಕಡಿಮೆ ಗುಣಮಟ್ಟದ ಪೈಪನ್ನು ಒಂದು ಅಡಿ ತಪ್ಪಿದರೆ ಎರಡು ಅಡಿ ಆಳಕ್ಕೆ ಮಾತ್ರ ಅಗೆದು ಹಾಕಿ ಮಣ್ಣು ಮುಚ್ಚಿರುತ್ತಾರೆ. ಒಂದು ವೇಳೆ ಯಾವುದಾದರೂ ಥರ್ಡ್ ಪಾರ್ಟಿ ಪರೀಕ್ಷಿಸಲು ದೊಡ್ಡ ಮನಸ್ಸು ಮಾಡಿ ತನ್ನ ಎಸಿ ಕೋಣೆ ಬಿಟ್ಟು ಹೊರಗೆ ಬಂದು ನೋಡಿದರೂ ಅವರಿಗೆ ಎಷ್ಟು ಆಳಕ್ಕೆ ಅಗೆದು ಯಾವ ಪೈಪು ಹಾಕಿದ್ದಾರೆ ಎಂದು ಗೊತ್ತಾಗುವುದೇ ಇಲ್ಲ. ಅದರಿಂದ ಎಷ್ಟೋ ಬಾರಿ ಕಾಮಗಾರಿಗಳು ತಮ್ಮ ಗುಣಮಟ್ಟವನ್ನು ಕಳೆದುಕೊಂಡು ಬಿಡಲು ಕಾರಣವಾಗಿದೆ. ಸಿಮೆಂಟಿಗೆ ಎಷ್ಟು ಮರಳು, ನೀರು ಹಾಕಬೇಕೆಂದು ಗುತ್ತಿಗೆದಾರ ಮನಸ್ಸಿನಲ್ಲಿಯೇ ಲೆಕ್ಕ ಹಾಕಿಕೊಂಡಿರುತ್ತಾನೆ. ಯಾಕೆಂದರೆ ಕಟ್ಟಡ ತುಂಬಾ ವರ್ಷ ಚೆನ್ನಾಗಿ ಬಾಳಿಕೆ ಬಂದರೆ ತನಗೆನೆ ಲಾಸ್ ಎಂದು ಅವನಿಗೆ ಗೊತ್ತಿದೆ. ಯಾರು ಕೂಡ ತನ್ನ ಹೆಸರು ಹೇಳುವುದಿಲ್ಲ. ಎಲ್ಲರೂ ಸಂಸದರನ್ನೋ, ಶಾಸಕರನ್ನೋ ಹೊಗಳುತ್ತಾರೆ. ಅಷ್ಟೇ ಅಲ್ಲದೆ ತಾನು ವ್ಯಾಪಾರಕ್ಕೆ ಕುಳಿತುಕೊಂಡಿರುವವನು. ಯಾರ್ಯಾರಿಗೆ ಎಷ್ಟು ಕೊಟ್ಟು ಎಷ್ಟು ಉಳಿಯುತ್ತದೆ ಎಂದು ಗೊತ್ತಿರುವಾಗ ತಾನು ಸಮಾಜಸೇವೆಗೆ ಬಂದವನಲ್ಲ ಎಂದು ಗುತ್ತಿಗೆದಾರನೇ ಹೇಳಿಕೊಂಡಿರುತ್ತಾನೆ.
ಹಾಗಂತ ಮಾರ್ಕೆಟ್ ಅನ್ನು ಬೇಗ ಕೆಡವಿ ಹೊಸತ್ತನ್ನು ಕಟ್ಟೋಣ ಎಂದರೆ ವ್ಯಾಪಾರಿಗಳ ಸಂಘ, ಪಾಲಿಕೆಯಲ್ಲಿ ವಿಪಕ್ಷ ಮತ್ತು ಆಡಳಿತ ಪಕ್ಷ ಮೂರು ಸೇರಿ ಹೊಡೆದಾಡಿಕೊಳ್ಳುವುದನ್ನು ನಿಲ್ಲಿಸುತ್ತಿಲ್ಲ. ಕೋರ್ಟಿಗೆ ಹೋಗಿ ಸರಿ ಮಾಡಿಕೊಂಡು ಬರೋಣ ಎಂದು ಪಾಲಿಕೆ ಹೊರಟರೂ ತಮ್ಮದೇ ವಕೀಲರಿಗೆ ಸರಿಯಾದ ಮಾಹಿತಿ ಮತ್ತು ದಾಖಲೆಯನ್ನು ಪಾಲಿಕೆಯೇ ಕೊಡುವುದಿಲ್ಲ. ಇದರಿಂದ ಪಾಲಿಕೆಗೆ ಜಯ ಅನೇಕ ಬಾರಿ ಮರೀಚಿಕೆಯಾಗಿಯೇ ಉಳಿಯುತ್ತದೆ. ಉದಾಹರಣೆಗೆ ಕೇಂದ್ರ ನಮಗೆ 21 ನರ್ಮ್ ಬಸ್ಸುಗಳನ್ನು ಕೊಟ್ಟರೂ ಇವತ್ತಿಗೂ ಎಲ್ಲಾ ಬಸ್ಸುಗಳು ರಸ್ತೆಯನ್ನು ನೋಡಿಲ್ಲ. ಕೋರ್ಟ್ ನಲ್ಲಿ ಐದು ವರ್ಷದಿಂದ ಕೇಸ್ ನಡೆಯುತ್ತಿದೆ. ಇವತ್ತಿಗೂ ನಮಗೆ ಜಯ ಸಿಕ್ಕಿಲ್ಲ. ಯಾಕೆಂದರೆ ನಮ್ಮವರಿಗೆ ಇಚ್ಚಾಶಕ್ತಿಯ ಕೊರತೆ ಯಾವತ್ತೂ ಸರಿಯಾಗುವುದೇ ಇಲ್ಲ!!
Leave A Reply