ಅರಬಿ ಹಾಗೂ ಖಾನ್ ಕನಸಿನಲ್ಲಿಯೂ ಹೆಣ್ಣು ಮಕ್ಕಳಿಗೆ ಕೇಡು ಬಗೆಯಬಾರದು!!
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರೋ ಅರಬಿಯವರು ಹೇಸಿಗೆ ತಿನ್ನುವ ಕೆಲಸ ಮಾಡಿದ್ದು ಈಗಾಗಲೇ ನಮ್ಮ ಜಾಗೃತ ಅಂಕಣದ ಓದುಗರಿಗೆ ಗೊತ್ತೆ ಇದೆ. ವಿದ್ಯಾ ದೇಗುಲದಲ್ಲಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ಪೀಡಿಸಿದ ಕಾರಣಕ್ಕೆ ಅರಬಿ ಶಿಕ್ಷಕ ಕುಲಕ್ಕೆ ಕಳಂಕರಾಗಿದ್ದರು. ಆ ಹೆಣ್ಣು ಮಗಳು ಧೈರ್ಯವಂತಳಾದ ಕಾರಣ ತನ್ನ ಮೇಲೆ ಆದ ದೌರ್ಜನ್ಯವನ್ನು ಸುಮ್ಮನೆ ಬಿಡಬಾರದು ಎಂದು ನಿರ್ಧರಿಸಿಬಿಟ್ಟಿದ್ದಳು. ಆಕೆ ಆಗಿನ ಕುಲಸಚಿವ ಅಂದರೆ ರಿಜಿಸ್ಟ್ರಾರ್ ಆಗಿದ್ದ ಎಎಂ ಖಾನ್ ಅವರಿಗೆ ದೂರು ನೀಡಿದಳು. ಎಎಂ ಖಾನ್ ಒಂದು ರೀತಿಯಲ್ಲಿ ಅರಬಿಯಂತಹ ಹೊಲಗಳಿಗೆ ಬೇಲಿ ಇದ್ದಂತೆ. ಹೌದಾ, ತನಿಖೆ ಮಾಡುತ್ತೇನೆ, ನಿಮ್ಮ ಕಂಪ್ಲೇಟ್ ಕೊಡಿ ಎಂದು ಆಕೆಯಿಂದ ಲಿಖಿತ ದೂರು ತೆಗೆದುಕೊಂಡರೇ ವಿನ: ಆ ವಿಷಯದಲ್ಲಿ ಒಂದು ಸಣ್ಣ ತನಿಖೆ ಕೂಡ ಮಾಡಲಿಲ್ಲ. ಆ ಯುವತಿಗೆ ಖಾನ್ ಅವರಂತವರಿಗೆ ಹೇಳುವುದೂ ಒಂದೇ, ಸುಮ್ಮನೆ ಕಲ್ಲಿನ ಮೇಲೆ ನೀರು ಸುರಿಯುವುದೂ ಒಂದೇ ಎಂದು ಅನಿಸಿತು. ಅದಕ್ಕಾಗಿ ಆ ವಿದ್ಯಾರ್ಥಿನಿ ನೇರವಾಗಿ ಸರಕಾರದ ಮಹಿಳಾ ಆಯೋಗಕ್ಕೆ ದೂರು ನೀಡಿದಳು. ಮಹಿಳಾ ಆಯೋಗ ಈ ವಿಷಯದಲ್ಲಿ ತಕ್ಷಣ ಹೆಜ್ಜೆ ಇಟ್ಟಿತು. ಇದಕ್ಕಾಗಿ ವಿಶ್ವವಿದ್ಯಾನಿಲಯದಲ್ಲಿ ಒಂದು ಸಮಿತಿ ರಚಿಸಿ, ಅದರ ವರದಿಯ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲು ರಿಜಿಸ್ಟ್ರಾರ್ ಅವರಿಗೆ ಸೂಚನೆ ನೀಡಿತು. ಆ ಸಮಿತಿ ಸಾಕಷ್ಟು ಸಾಕ್ಷ್ಯಾಧಾರಗಳೊಂದಿಗೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಖಾನ್ ಅವರಿಗೆ ನೀಡಿತು.
ಈ ಖಾನ್ ಎಂತಹ ಅಸಾಮಿ ಎಂದರೆ ಆ ಲಕೋಟೆಯನ್ನು ತೆರೆಯಲು ಕೂಡ ಹೋಗಿಲ್ಲ. ಆಯಿತು, ನೋಡ್ತೀನಿ ಎಂದವರೇ, ಸೀದಾ ಅದನ್ನು ಕಪಾಟಿನಲ್ಲಿ ಇಟ್ಟು ಬಾಗಿಲು ಮುಚ್ಚಿಬಿಟ್ಟರು. ಇದೆಲ್ಲಾ ಆಗಿ ಎರಡು ವರ್ಷಗಳಾಗಿವೆ. ಆ ವರದಿ ಕಪಾಟಿನೊಳಗೆ ಧೂಳು ತಿನ್ನುತ್ತಿತ್ತೆ ವಿನ: ಆ ವಿದ್ಯಾರ್ಥಿನಿಗೆ ನ್ಯಾಯ ಸಿಗಲಿಲ್ಲ. ಇತ್ತೀಚೆಗೆ ವಿವಿಯಲ್ಲಿ ಹೊಸ ಸಿಂಡಿಕೇಟ್ ಅಸ್ತಿತ್ವಕ್ಕೆ ಬಂತಲ್ಲ, ಈ ವಿಷಯ ಚರ್ಚೆಗೆ ಬಂದಿದೆ. ಆಗಲೇ ಆ ವರದಿಯ ಮೇಲೆ ಅರಬಿ ವಿರುದ್ಧ ಏನಾದರೂ ತನಿಖೆ ಆಗಿದೆಯಾ ಎಂದು ನೋಡಿದಾಗ ವರದಿಯೇ ಮಂಡನೆ ಆಗಿಲ್ಲ ಎಂದು ತಿಳಿದುಬಂದಿದೆ. ಆ ಬಳಿಕ ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಎಲ್ಲರ ಸಮ್ಮುಖದಲ್ಲಿ ವರದಿಯನ್ನು ಈಗಿನ ರಿಜಿಸ್ಟ್ರಾರ್ ರಾಜು ಮೊಗವೀರ ಅವರು ಲಕೋಟೆಯನ್ನು ಒಡೆದು ಹೊರಗೆ ತೆಗೆದು ಓದಿದ್ದಾರೆ. ಆಗ ಅದರಲ್ಲಿ ಸ್ಪಷ್ಟವಾದ ಮಾತಿನಲ್ಲಿ ಪ್ರೋ. ಅರಬಿ ತಪ್ಪು ಮಾಡಿದ್ದು ದಾಖಲಾಗಿದೆ.
ಆದರೆ ಖಾನ್ ಆವತ್ತಿನಿಂದ ಇವತ್ತಿನ ತನಕ ಆ ಪ್ರಕರಣವನ್ನು ನಿರ್ಲಕ್ಷಿಸಿರುವುದು ಎಲ್ಲರಿಗೂ ಗೊತ್ತಾಗಿದೆ. ಇಲ್ಲಿ ಕಂಡು ಬರುವ ಪ್ರಶ್ನೆ ಎಂದರೆ ಹಾಗಾದರೆ ಪ್ರೋಫೆಸರ್ ಗಳು ವಿದ್ಯಾರ್ಥಿನಿಯರ ಮೇಲೆ ಏನೇ ಮಾಡಿದರೂ ತನ್ನ ಬೆಂಬಲ ಇದೆ ಎಂದು ಖಾನ್ ತೋರಿಸಿಕೊಟ್ಟಂತೆ ಆಗಿಲ್ಲವೆ? ಒಂದು ವೇಳೆ ಆ ವಿದ್ಯಾರ್ಥಿನಿ ಖಾನ್ ಅವರ ಮಗಳೋ, ತಂಗಿಯೋ, ಹೆಂಡತಿಯೋ ಆಗಿದ್ದರೆ ಖಾನ್ ಹೀಗೆ ಸುಮ್ಮನೆ ಬಿಡುತ್ತಿದ್ದರಾ? ಬೇರೆ ಮನೆಯ ಹೆಣ್ಣುಮಕ್ಕಳಾದರೆ ಅರಬಿಗೂ ಇರಲಿ, ಸಿಕ್ಕಿದರೆ ತನಗೂ ಇರಲಿ ಎನ್ನುವ ಮನಸ್ಥಿತಿಯಾ? ಒಂದು ಹೆಣ್ಣುಮಗು ಎಷ್ಟೋ ದೂರದಿಂದ ತಂದೆ ತಾಯಿ ಕಷ್ಟಪಟ್ಟು ದುಡಿದ ಹಣ ವೇಸ್ಟ್ ಆಗಬಾರದು ಎಂದು ಕಷ್ಟಪಟ್ಟು ಕಲಿಯಲು ವಿಶ್ವವಿದ್ಯಾನಿಲಯಕ್ಕೆ ಬಂದರೆ ಅವರನ್ನು ಪೀಡಿಸುವ ಅರಬಿಗಳಿಗೆ ಘೋರ ಶಿಕ್ಷೆ ಆದರೆ ಮಾತ್ರ ವಿವಿ ಸ್ವಚ್ಚವಾಗುತ್ತದೆ. ಆದರೆ ಎರಡು ವರ್ಷಗಳಿಂದ ಆ ವರದಿ ಮೂಲೆಗೆ ಬಿದ್ದ ಕಾರಣ ಅರಬಿ ಆರಾಮವಾಗಿ ಎಲ್ಲೋ ಹುಲ್ಲು ಮೇಯುತ್ತಾ ಕಣ್ಣುಮುಚ್ಚಿ ಹಾಲು ಕುಡಿಯುತ್ತಿದ್ದರು. ಈಗ ಹೊಸ ಸಿಂಡಿಕೇಟ್ ಬಂದು ಅವರ ಗ್ರಹಚಾರದ ಕೊಡ ತುಂಬಿದೆ. ಇನ್ನು ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಮೇಲೆ ಏನೂ ಕ್ರಮ ತೆಗೆದುಕೊಳ್ಳದೇ ಬಿಟ್ಟದ್ದಾಗಿ ಖಾನ್ ಕೂಡ ತಪ್ಪಿತಸ್ಥರು.
ಈ ಕಾನೂನಿನಲ್ಲಿ ಒಂದು ಮಾತಿದೆ. ಕೊಲೆ ಮಾಡಿದವ ಮಾತ್ರ ಅಪರಾಧಿಯಲ್ಲ. ಅದಕ್ಕೆ ಸಹಕರಿಸಿದವ ಕೂಡ ಅಪರಾಧಿಯೇ. ಇಲ್ಲಿ ಕೂಡ ಹಾಗೆ. ಅರಬಿ ಎಷ್ಟು ಅಪರಾಧಿಯೋ ಈ ಖಾನ್ ಕೂಡ ಅಷ್ಟೇ ತಪ್ಪಿತಸ್ಥ. ಅರಬಿಯನ್ನು ಕೆಲಸದಿಂದಲೇ ವಜಾ ಮಾಡಬೇಕು. ಆ ಮೂಲಕ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದು ಮಾಡುವುದಿರಲಿ, ಯೋಚಿಸಲು ಕೂಡ ವಿವಿಯ ಆವರಣದಲ್ಲಿರುವ ನರಿನಾಯಿಗಳು ಹೆದರಬೇಕು. ಖಾನ್ ಕೂಡ ಶಿಕ್ಷೆಗೆ ಗುರಿಯಾಗಬೇಕು. ನನ್ನ ಪ್ರಕಾರ ಇವರಿಬ್ಬರನ್ನು ಕೇವಲ ವಜಾ ಮಾಡಿದರೆ ಇಲ್ಲಿಯತನಕ ಮಾಡಿರುವ ದುಡ್ಡಿನಿಂದಲೇ ಮೋಜು ಮಸ್ತಿಯಲ್ಲಿ ಇವು ತೊಡಗುತ್ತವೆ. ಅದರ ಬದಲಿಗೆ ಒಂದಿಷ್ಟು ದಿನ ಜೈಲು ಕಂಬಿಗಳ ಹಿಂದೆ ಇದ್ದರೆ ಅರಬಿಗೆ ಅಲ್ಲಿಂದಲೇ ಅರಬ್ಬಿ ಸಮುದ್ರ ಕಾಣುವಂತಾಗಬೇಕು. ವಿವಿಯಲ್ಲಿ ಇರುವ ಹೆಗ್ಗಣಗಳಿಗೆ ಈ ಪ್ರಕರಣದಿಂದ ಒಂದಿಷ್ಟು ಬಿಸಿ ಮುಟ್ಟಬೇಕಾಗಿದೆ. ಇನ್ನು ವಿವಿಯಲ್ಲಿ ಹೆಣ್ಣು ಮಕ್ಕಳು ಧೈರ್ಯದಿಂದ ಕಲಿಯುವಂತಾಗಬೇಕಿದೆ. ಈ ಕುರಿತು ತುಳುನಾಡು ಸರಣಿ ಲೇಖನಗಳನ್ನು ಬರೆದಿತ್ತು. ಎಲ್ಲರ ಪ್ರಯತ್ನದಿಂದ ಆ ಹೆಣ್ಣುಮಗಳಿಗೆ ನ್ಯಾಯ ಸಿಕ್ಕಿದರೆ ಎಲ್ಲರ ಶ್ರಮ ಸಾರ್ಥಕ..
Leave A Reply