ನಿಮ್ಮ ಮೀನು…ಬೀದಿ ನಾಯಿ…ರಂಗೋಲಿ… ವಾಸನೆ !
Posted On November 2, 2020
ನೀವು ಮನೆಗೆ ಮೀನು, ಮಾಂಸ ತಂದಿರುತ್ತೀರಿ. ಮಂಗಳೂರು ಅಂತೂ ಮೀನು ಇಲ್ಲದೆ ಎಷ್ಟೋ ಮನೆಗಳಲ್ಲಿ ಊಟವೇ ಸೇರುವುದಿಲ್ಲ. ಒಂದಿಷ್ಟು ಬ್ರಾಹ್ಮಣರ ಮನೆಗಳಲ್ಲಿ (!) ಬಿಟ್ಟರೆ ಹೆಚ್ಚಿನ ಮನೆಗಳಲ್ಲಿ ಮೀನು ಮನೆಯವರಂತೆ ಖಾಯಂ ಸದಸ್ಯ. ಕೆಲವರು ಬೆಳಿಗ್ಗೆ ಮೀನು ಮಾರುಕಟ್ಟೆ, ದಕ್ಕೆ ಅಥವಾ ಈಗ ಕೆಲವು ಮೀನು ಮಾರುವುದಕ್ಕೆ ಎಂದೇ ಇರುವ ರಸ್ತೆ ಬದಿ ತೆರೆದಿರುವ ಹೊಸ ಹೊಸ ಅಂಗಡಿಗಳಲ್ಲಿ ತೆಗೆದುಕೊಂಡರೆ ಅನೇಕರು ಮನೆಯ ಹೊರಗೆ horn ಬಾರಿಸುತ್ತಾ ಬರುವ ಸೈಕಲಿನವನೊ ಅಥವಾ ಟೆಂಪೊ, ರಿಕ್ಷಾದಲ್ಲಿ ಮೀನು ಖರೀದಿಸುತ್ತಾರೆ. ಮೀನು ತೊಳೆದು ಅದರ ಸಿಪ್ಪೆ, ಅದು, ಇದು ತೆಗೆದು ಒಂದು ತೊಟ್ಟೆಯಲ್ಲಿ ಹಾಕಿ ಇಡುತ್ತಾರೆ. ನಂತರ ಊಟವಾದ ನಂತರ ಬಿಟ್ಟ ಮೀನಿನ ಮೂಳೆ, ಅದು ಇದು ತೆಗೆದು ಮತ್ತೆ ಅದೇ ತೊಟ್ಟೆಯಲ್ಲಿ ಹಾಕುತ್ತಾರೆ. ಎಲ್ಲವೂ ಆಗುವಾಗ ಮಧ್ಯಾಹ್ನ 3 ಗಂಟೆ ಆಗುತ್ತದೆ. ಬಳಿಕ ಆ ತೊಟ್ಟೆಯನ್ನು ಮನೆಯಲ್ಲಿ ಇಟ್ಟರೆ ಇಡೀ ಮನೆ ವಾಸನೆ ಹೊಡೆಯುತ್ತದೆ. ನಾವು ಎಷ್ಟೇ ಮೀನು ಪ್ರಿಯರೆನಿಸಿದರೂ ಊಟವಾದ ನಂತರ ಆ ಉಳಿದ ಸಿಪ್ಪೆ, ಮೂಳೆ ಮನೆಯೊಳಗೆ ಇಟ್ಟುಕೊಂಡರೆ ಅದಕ್ಕಿಂತ ನರಕ ಬೇರೆ ಇಲ್ಲ. ಸಿಗಡಿ (ಎಟ್ಟಿ) ಜೆಂಜಿ ಇದರಿಂದ ಬರುವ ವಾಸನೆ ಬಹಳ ಗಬ್ಬು ಆದ್ದರಿಂದ ಏನು ಮಾಡುತ್ತೆವೆ ಎಂದರೆ ಆ ತೊಟ್ಟೆಯಲ್ಲಿ ಎಲ್ಲವನ್ನು ಹಾಕಿ ಮನೆಯ ಕಂಪೌಂಡ್ ಹೊರಗೆ ಇಟ್ಟು ಬರುತ್ತೆವೆ. ನಮ್ಮ ಕೆಲಸ ಅಲ್ಲಿಗೆ ಮುಗಿಯಿತು.
ನಂತರ ಪ್ರಾರಂಭವಾಗುವುದು ಬೀದಿ ನಾಯಿಗಳ ಕ್ರಿಯೇಟಿವಿಟಿ. ಮೊದಲೇ ಮೀನಿನ ಮೂಳೆ, ಸಿಪ್ಪೆ, ಪರಿಮಳ, ನೀವು ಪಾಪ, ಅದು ಹೊರಗೆ ಬೀಳಬಾರದು ಎಂದು ತುಂಬಾ ಗಟ್ಟಿ ಕಟ್ಟಿರುತ್ತೀರಿ. ತೊಟ್ಟೆಯ ಹತ್ತಿರ ಬರುವ ನಾಯಿಗೆ ಅದು ಕನ್ನಡಿಯೊಳಗಿನ ಗಂಟಿನಂತೆ ಕಾಣುತ್ತದೆ. ಅದನ್ನು ತಿನ್ನದೆ ಅಲ್ಲಿಂದ ಕದಲುವುದಿಲ್ಲ ಎಂದು ಅದು ಧೃಡ ನಿಶ್ಚಯ ಮಾಡುತ್ತದೆ. ತೊಟ್ಟೆಗೆ ಮೊದಲು ತನ್ನ ಚೂಪಾದ ಉಗುರಿನಿಂದ ಆದಷ್ಟು ದೊಡ್ಡ ರಂಧ್ರ ಮಾಡುತ್ತದೆ. ಅಲ್ಲಿಗೆ ತೊಟ್ಟೆಯ ಒಳಗಿನಿಂದ ರಸ ನಿಧಾನವಾಗಿ ದಾರಿ ಮಾಡಿ ಹೊರಗೆ ಬರುತ್ತದೆ. ಆದರೆ ಮೂಳೆ, ಸಿಪ್ಪೆ ಹೊರಗೆ ಬರಲು ಜಾಗ ಸಾಕಾಗುವುದಿಲ್ಲ. ಮತ್ತೆ ನಾಯಿ ತನ್ನ ಪ್ರಯತ್ನ ಮುಂದುವರೆಸುತ್ತದೆ. ಅಷ್ಟೊತ್ತಿಗೆ ಅದರ ಕೆಲವು ಸ್ನೇಹಿತರು ಅಲ್ಲಿ ಒಟ್ಟು ಸೇರುತ್ತಾರೆ. ಎಲ್ಲರೂ ಸೇರಿ ನಿಮ್ಮ ತೊಟ್ಟೆಗೆ ಒಂದು ಗತಿ ಕಾಣಿಸುತ್ತವೆ. ನೀವು ಒಂದು ಬೊಟ್ಟು ಕೂಡ ಹೊರಗೆ ಬೀಳಬಾರದು ಎಂದು ಕಟ್ಟಿ ಇಟ್ಟು ಬಂದದ್ದು ಕೆಲವು ಸಮಯದ ಬಳಿಕ ಇಟ್ಟ ಕಡೆಯಲ್ಲಿ ರಂಗೋಲಿಯಂತೆ ಹರಡಿರುತ್ತದೆ.
ಮರುದಿನ ಅಥವಾ ಆ ಸಂಜೆ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರು ನೇಮಿಸಿರುವ ಗುತ್ತಿಗೆದಾರರ ವಾಹನ ಮೈಕ್ ನಲ್ಲಿ ಮುದ್ರಿತ ಧ್ವನಿ ವರ್ಧಕ ಹಾಕಿ ತುಳು, ಕನ್ನಡದಲ್ಲಿ ಕೂಗುತ್ತಾ ಬರುತ್ತದೆ. ವಾಹನದಿಂದ ಕೆಲಸದವರು ಕೆಳಗೆ ಇಳಿಯುತ್ತಾರೆ. ಅವರು ಕಂಪೌಂಡ್ ಹೊರಗೆ ಇಟ್ಟಿರುವ ತೊಟ್ಟೆಗಳನ್ನು ಒಟ್ಟು ಮಾಡಿ ತಮ್ಮ ಗಾಡಿಗೆ ತುಂಬುತ್ತಾರೆ. ನಾಯಿಗಳು ಮಾಡಿದ ರಂಗೋಲಿ ಹಾಗೆ ಉಳಿಯುತ್ತದೆ. ಅಲ್ಲಿಗೆ ಸ್ವಚ್ಚತೆಯ ಹೆಸರಿನಲ್ಲಿ ಪ್ರಾರಂಭವಾಗಿರುವ ಪ್ರಯತ್ನವೊಂದು ಹೇಳಹೆಸರಿಲ್ಲದೆ ನಿಮ್ಮ ಮನೆಯ ಹೊರಗೆನೆ ಮಕಾಡೆ ಮಲಗಿ ಬಿಡುತ್ತದೆ.
ಮರುದಿನ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್, ಪಾಲಿಕೆ ಕಮೀಷನರ್ ಪತ್ರಿಕಾಗೋಷ್ಟಿ ಕರೆಯುತ್ತಾರೆ. ನಮ್ಮ ಮಂಗಳೂರು ಸ್ವಚ್ಚತೆಯಲ್ಲಿ ಇಡೀ ದೇಶದಲ್ಲಿ ನಂಬರ್ ಮೂರನೇ ಸ್ಥಾನದಲ್ಲಿ ಇದೆ. ಅದನ್ನು ನಾವು ನಂಬರ್ ಸ್ಥಾನಕ್ಕೆ ತರಬೇಕು. ಅದಕ್ಕಾಗಿ ಎಲ್ಲಾ ನಾಗರಿಕರು ಕೈ ಜೋಡಿಸಬೇಕು ಎನ್ನುತ್ತಾರೆ. ಹಾಗೆ ಹೇಳಿ ಪಕ್ಕದ ಹೋಟೇಲಿನಿಂದ ತಂದಿರುವ ಅಂಬಂಡೆ, ಶೀರಾ ತಿಂದು, ಕೈ ತೊಳೆದು ತಮ್ಮ ಚೇಂಬರಿಗೆ ಹೊರಟು ಹೋಗುತ್ತಾರೆ. ಅವರು ಚೇಂಬರಿನ ಕರ್ಟನ್ ತೆರೆದರೆ ಅಲ್ಲಿ ಪಕ್ಕದ ರಸ್ತೆಯಲ್ಲಿ ನಾಯಿಯೊಂದು ಮತ್ತೆ ಯಥಾಪ್ರಕಾರ ಯಾರೋ ಇಟ್ಟಿರುವ ಮೀನಿನ ಅಳಿದುಳಿದ ಸಿಪ್ಪೆ, ಮೂಳೆ ಹಾಕಿದ ತೊಟ್ಟೆಯೊಂದಿಗೆ ಗುದ್ದಾಟಕ್ಕೆ ನಿಂತಿರುತ್ತದೆ. ಮರುದಿನ ಪತ್ರಿಕೆಯಲ್ಲಿ ಮೇಯರ್ ಹಾಗೂ ಪಾಲಿಕೆ ಆಯುಕ್ತರಿಂದ ಮಂಗಳೂರನ್ನು ಸ್ವಚ್ಚತೆಯಲ್ಲಿ ದೇಶದಲ್ಲಿಯೇ ನಂಬರ್ ಒಂದನೇ ಸ್ಥಾನಕ್ಕೆ ತರಲು ಪ್ರಯತ್ನ ಎನ್ನುವ ಹೆಡ್ಡಿಂಗ್ ಬಂದಿರುತ್ತದೆ. ಕೇಂದ್ರ ಸರಕಾರ ನಗರಗಳಿಗೆ ಸ್ವಚ್ಚತೆ ಬಗ್ಗೆ ರ್ಯಾಂಕ್ ಕೊಡುತ್ತದೆ ಬನ್ನಿ ಪಾಲ್ಗೊಲಿ ಪಾಲಿಕೆಯ ಎಂತಹ ಗ್ರೇಟ್ ಪ್ರಯತ್ನ ಎಂದು ನಾವು ಖುಷಿಯಿಂದ ಓದಿ ಮರುದಿನ ಅದೇ ಪತ್ರಿಕೆಯ ಮೇಲೆ ಕರಿದ ಮೀನನ್ನು ಹಾಕಿ ಎಣ್ಣೆ ಇಂಗಿ ಹೋಗುವಂತೆ ನೋಡಿಕೊಳ್ಳುತ್ತೇವೆ. ಯಥಾಪ್ರಕಾರ ಆ ಪತ್ರಿಕೆ ನಮ್ಮ ತೊಟ್ಟೆ ಸೇರುತ್ತದೆ. ಕಂಪೌಂಡ್ ಹೊರಗೆ ಇಡುತ್ತೇವೆ. ಮತ್ತೇ ನಾಯಿ ಬರುತ್ತದೆ. ತೂತು ಮಾಡುತ್ತದೆ. ಯಥಾಪ್ರಕಾರ ಹಿಸ್ಟರಿ ರಿಪೀಟ್ ಆಗುತ್ತದೆ.
ಪಾಪ, ನಾಯಿಗಳಿಗೆ ಏನು ಗೊತ್ತು. ಆಯುಕ್ತರು ನಿನ್ನೆ ಪ್ರೆಸ್ ಮೀಟ್ ಮಾಡಿ ಸ್ವಚ್ಚತೆಯಲ್ಲಿ ಮಂಗಳೂರನ್ನು ನಂಬರ್ ಒನ್ ಮಾಡಬೇಕೆಂದು ಹೇಳಿಕೆ ಕೊಟ್ಟು ಮಿಂಚಿದ್ದಾರೆ ಅಂತ. ಅದೇನು ಪೇಪರ್ ಓದುತ್ತದಾ? ನಾಯಿಗಳಿಗೆ ಏನು ತಿಳಿದಿದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಟಿವಿಗಳಲ್ಲಿ ಸ್ವಚ್ಚತೆಯ ಬಗ್ಗೆ ಜಾಹೀರಾತು ಕೊಟ್ಟು ಗಾಂಧಿ ಮಾರ್ಗ ಅನುಸರಿಸುತ್ತಿದ್ದಾರೆ ಅಂತ. ನಾಯಿಗಳಿಗೆ ಏನೂ ಗೊತ್ತಾಗುವುದಿಲ್ಲ. ಅದಕ್ಕೆ ಅವುಗಳಿಗೆ ನಾಯಿಗಳು ಎನ್ನುವುದು. ಆದರೆ ಎಲ್ಲವೂ ಗೊತ್ತಿರುವ ನಾವು ಅಂದರೆ ಮನುಷ್ಯರು, ಅದರಲ್ಲೂ ಮಂಗಳೂರಿನವರು, ಬುದ್ಧಿವಂತರು ಏನು ಮಾಡಬೇಕು? ಅದು ಪ್ರಶ್ನೆ? ಅದಕ್ಕೆ ನಿಮ್ಮ ಬಳಿ ಉತ್ತರ ಸಿಗುತ್ತದಾ ಎನ್ನುವುದನ್ನು ಕಾಯುತ್ತಿದ್ದೇನೆ.ನಾನು ಇಷ್ಟೆಲ್ಲಾ ಬರಿಯಲು ಕಾರಣ ಶುಕ್ರವಾರ Only ಒಣ ಕಸ No ಹಸಿ ಕಸ ಶುಕ್ರವಾರ ದ ಹಸಿ ಕಸ ಕೊಂಡು ಹೋಗದೆ ಇದರೆ ಏನಾಗ ಬಹುದು ಎಂದು ಪಾಲಿಕೆ ಅಲೋಚಿಸಲಿ.ಇದಕ್ಕೆ ನಮ್ಮ Dynamic ಮೇಯರ್ ಅದಷ್ಟು ಬೇಗ ಒಂದು ದಾರಿ ಹುಡುಕಲಿ.
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply