
ಒಂದು ವಿಮಾನ ನಿಲ್ದಾಣಕ್ಕೆ ಅಥವಾ ರೈಲ್ವೆ ನಿಲ್ದಾಣಕ್ಕೆ ಹೆಸರು ಇಡುವುದು ಎಂದರೆ ಮಗುವಿನ ನಾಮಕರಣ ಮಾಡಿದಷ್ಟು ಸುಲಭ ಅಲ್ಲ. ಮಗುವಿನ ಹೆಸರು ಇಡುವ ಶಾಸ್ತ್ರ ಆದರೆ ಮಗುವಿನ ಅಪ್ಪ, ಅಮ್ಮ ಒಪ್ಪಿದರೆ ಸಾಕು, ಹೆಚ್ಚೆಂದರೆ ಮಗುವಿನ ಅಜ್ಜಿಯೋ, ಅಜ್ಜನಿಗೋ ಫೋನ್ ಮಾಡಿ ಕೇಳಿ ಅಭಿಪ್ರಾಯ ಹೇಳಿ ಅಂದರೆ ಹೆಚ್ಚೆಂದರೆ ಐದು ನಿಮಿಷಗಳ ಕೆಲಸ. ನಂತರ ನೀವು ಎಷ್ಟು ಆಡಂಬರದಲ್ಲಿ ಮಾಡುತ್ತೀರಿ ಎನ್ನುವುದು ನಿಮಗೆ ಬಿಟ್ಟಿದ್ದು. ಆದರೆ ಒಂದು ಜೀವಕ್ಕೆ ಹೆಸರು ಇಡುವಷ್ಟು ಸುಲಭವಾಗಿ ಒಂದು ಕಟ್ಟಡಕ್ಕೆ ಹೆಸರು ಇಡುವುದು ನೀರು ಕುಡಿದಷ್ಟು ಸುಲಭ ಅಲ್ಲ. ಈಗ ಮಂಗಳೂರಿನಲ್ಲಿ ಹೆಸರು ಇಡುವ ಪ್ರಕ್ರಿಯೆ ಶುರುವಾಗಿದೆ. ಈ ಐಡಿಯಾ ಮೊದಲಿಗೆ ಯಾರಿಗೆ ಬಂತು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಇಂತಹುದೊಂದು ಅವಕಾಶವನ್ನು ಮಾಡಿಕೊಟ್ಟಿದ್ದು ಕಾಂಗ್ರೆಸ್. ಇದರ ಲಾಭ ಸಿಕ್ಕಿದ್ದು ಭಾರತೀಯ ಜನತಾ ಪಾರ್ಟಿಗೆ. ಅದು ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಯ ವಿವಾದ. ಜ್ಯೋತಿ ಥಿಯೇಟರ್ ನಿಂದ ಅತ್ತ ಜೋಸ್ ಅಲ್ಯುಕಾಸ್ ತನಕದ ರಸ್ತೆಗೆ ಸುಂದರರಾಮ ಶೆಟ್ಟಿಯವರ ಹೆಸರು ಇಡಲು ವಿಜಯಾ ಬ್ಯಾಂಕಿನ ನಿವೃತ್ತ ಸಿಬ್ಬಂದಿಗಳು ಹೊರಟಾಗ ಆಗಿನ ಕಾಂಗ್ರೆಸ್ ಶಾಸಕರೊಬ್ಬರು ತಮ್ಮ ಮನೆ ಮೇಲೆ ಅಣುಬಾಂಬ್ ಹಾಕಲಾಗುತ್ತಿದೆ ಎನ್ನುವ ಧಾಟಿಯಲ್ಲಿ ವರ್ತಿಸಿಬಿಟ್ಟರು. ಬೆಂಗಳೂರಿಗೆ ತಡೆಯಾಜ್ಞೆ ತರಲು ಅವರು ಹೋಗಿರದೇ ಇದ್ದರೆ ಅದು ಒಂದು ವಿವಾದವೇ ಆಗುತ್ತಿರಲಿಲ್ಲ. ಆದರೆ ಆಗಿನ ಶಾಸಕರು ರಸ್ತೆಯ ಹೆಸರು ಬದಲಾದರೆ ತಮ್ಮ ಮತಬ್ಯಾಂಕ್ ಅಲ್ಲಾಡುತ್ತದೆ ಎಂದು ಹೆದರಿ ಎಲೋಶಿಯಸ್ ಹೆಸರೇ ಇರಲಿ ಎಂದು ಹೂಡಿದ ಆಟ ಕಡಿಮೆಯೇನಲ್ಲ. ಅದರಿಂದ ಏನಾಯಿತು? ಬಂಟರು ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದರು. ಕಾಂಗ್ರೆಸ್ ಹದಿನೈದು ಸಾವಿರಕ್ಕೂ ಹೆಚ್ಚಿನ ಅಂತರದಲ್ಲಿ ಸೋಲು ಒಪ್ಪಿಕೊಂಡಿತ್ತು. ಈಗಲೂ ಬಂಟ ಸಮುದಾಯ ಬಿಜೆಪಿಯೊಂದಿಗೆ ಇದೆ. ಯಾಕೆಂದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸುಂದರರಾಮ ಶೆಟ್ಟಿಯವರ ಹೆಸರು ರಸ್ತೆಗೆ ಇಡಲಾಗಿದೆ. ಇವತ್ತಿಗೂ ಮಂಗಳೂರು ದಕ್ಷಿಣದ ಕಾಂಗ್ರೆಸ್ಸಿಗರು ತಮ್ಮ ಸೋಲಿಗೆ ಅದೇ ರಸ್ತೆ ವಿವಾದವೇ ದೊಡ್ಡದಾದದ್ದು ಎಂದು ಅಂದುಕೊಂಡಿದ್ದಾರೆ. ಒಂದು ಹೆಸರು ಒಬ್ಬ ಶಾಸಕನ ಅಳಿವು ಉಳಿವಿನ ಪ್ರಶ್ನೆ ಆಗುತ್ತೆ ಎನ್ನುವ ಲಾಜಿಕ್ ಕಾಂಗ್ರೆಸ್ಸಿಗರು ಪತ್ತೆಹಚ್ಚಿದಂತೆ ತೋರುತ್ತಿದ್ದಾರೆ. ಅದನ್ನೇ ಇಟ್ಟುಕೊಂಡು ಈಗ ಕಾಂಗ್ರೆಸ್ ಹೊಸ ಆಟಕ್ಕೆ ಮುಂದಾಗಿದೆ. ಅದೇನೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಹೆಸರು ಇಡಬೇಕು ಎಂದು ಕಾಂಗ್ರೆಸ್ಸಿಗರು ಒತ್ತಡ ಹಾಕುತ್ತಿದ್ದಾರೆ. ಆದರೆ ಕಾಂಗ್ರೆಸ್ ಮರೆತುಹೋಗಿರುವ ವಿಷಯವೇನೆಂದರೆ ಇದನ್ನು ಒಂದು ಇಶ್ಯೂವಾಗಿ ತಾವು ತೆಗೆದುಕೊಳ್ಳುವ ಮೊದಲೇ ವರ್ಷದ ಹಿಂದೆ ಇದನ್ನು ಸಂಸದ ನಳಿನ್ ಕುಮಾರ್ ಕಟೀಲ್ ಯಾವುದೋ ವೇದಿಕೆಯಲ್ಲಿ ಘೋಷಿಸಿಯಾಗಿತ್ತು. ಆದರೆ ಘೋಷಿಸಿದ ಮರುದಿನ ವಿಷಯ ಪತ್ರಿಕೆಯಲ್ಲಿ ಬರಬಹುದು. ಆದರೆ ಕೇಂದ್ರ ಸರಕಾರ ಮಂಗಳೂರಿನಲ್ಲಿ ಇಲ್ಲವಲ್ಲ. ಇನ್ನು ದೆಹಲಿ ನಮ್ಮ ಕೈಯೊಳಗೆ ಇಲ್ಲ. ಅದಕ್ಕೆ ಪ್ರಕ್ರಿಯೆ ಇದೆ. ಸಂಸದರು ರಾಜ್ಯ ಸರಕಾರಕ್ಕೆ ಈ ಬಗ್ಗೆ ಪ್ರಪೋಸಲ್ ಕಳುಹಿಸಬೇಕು. ರಾಜ್ಯ ಸರಕಾರ ಕೇಂದ್ರಕ್ಕೆ ಕಳುಹಿಸಬೇಕು. ಅಲ್ಲಿಂದ ನೋಟಿಫಿಕೇಶನ್ ಆಗಿ ಅದು ಪತ್ರಿಕೆಯಲ್ಲಿ ಬಂದು ಯಾರ ವಿರೋಧವೂ ಆ ಭಾಗದಲ್ಲಿ ಇಲ್ಲ ಎಂದು ಗೊತ್ತಾದ ಬಳಿಕ ಅದು ಕೇಂದ್ರದ ಕ್ಯಾಬಿನೆಟ್ ನಲ್ಲಿ ಒಪ್ಪಿಗೆಯಾಗಿ ಹೊರಗೆ ಬರುತ್ತದೆ. ಅದು ಆಗುವಾಗ ಎಷ್ಟೋ ಕಾಲವಾಗುತ್ತದೆ. ಅದು ಸುಂದರರಾಮ ಶೆಟ್ಟಿ ರಸ್ತೆ ವಿಷಯದಲ್ಲಿಯೂ ಆಗಿದೆ. ಆದರೆ ಈಗಲೇ ವಿಷಯ ಎತ್ತಿದರೆ ಮುಂದೆ ಇದು ರಾಜಕೀಯವಾಗಿ ತಮಗೆ ಲಾಭ ಆಗುತ್ತೆ ಎಂದು ಕಾಂಗ್ರೆಸ್ ಅಂದುಕೊಂಡಾಗಿದೆ. ಯಾಕೆಂದರೆ ಕೋಟಿ ಚೆನ್ನಯ್ಯರು ಈ ಯುಗದ ದೈವಿಕ ಶಕ್ತಿಗಳು. ಅವರನ್ನು ಎಲ್ಲಾ ಜಾತಿ, ಪಂಗಡದವರು ಆರಾಧಿಸುತ್ತಾರಾದರೂ ಬಿಲ್ಲವ ಸಮುದಾಯದಲ್ಲಿ ವಿಶೇಷವಾದ ನಂಬಿಕೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರು ನಿರ್ಣಾಯಕ ಸಂಖ್ಯೆಯಲ್ಲಿ ಇದ್ದಾರೆ. ಜನಾರ್ಧನ ಪೂಜಾರಿಯವರು ರಾಜಕೀಯವಾಗಿ ನೇಪಥ್ಯಕ್ಕೆ ಸರಿದಿರುವುದರಿಂದ ಆ ಸ್ಥಾನವನ್ನು ತುಂಬಲು ಅಷ್ಟೇ ಪ್ರಬಲ ರಾಜಕೀಯ ನಾಯಕ ಆ ಸಮಾಜಕ್ಕೆ ಬೇಕಾಗಿದ್ದಾರೆ. ಕೋಟಾ ಶ್ರೀನಿವಾಸ ಪೂಜಾರಿಯವರು ಆ ಸ್ಥಾನ ತುಂಬಬೇಕು ಎಂದು ಸ್ವತ: ಜನಾರ್ಧನ ಪೂಜಾರಿಯವರು ಹೇಳಿದರೂ ಎಷ್ಟೆಂದರೂ ಕೋಟಾ ಈ ಜಿಲ್ಲೆಯವರಲ್ಲ. ಆದ್ದರಿಂದ ಬಿಲ್ಲವ ಸಮುದಾಯ ಮುಂದಿನ ಚುನಾವಣೆಯಲ್ಲಿ ಸಾರಾಸಗಟಾಗಿ ಒಂದೇ ಪಕ್ಷಕ್ಕೆ ಮತ ಹಾಕಬೇಕಾದರೆ ಅವರನ್ನು ಒಲೈಸಲೇಬೇಕು ಎನ್ನುವ ನಿರ್ಧಾರಕ್ಕೆ ಕಾಂಗ್ರೆಸ್ ಮತ್ತು ಅವರ ಸಮಾನ ಮನಸ್ಕ ಸಂಘಟನೆಗಳು ಬಂದಿವೆ. ಈ ನಡುವೆ ಕನ್ಯಾಡಿ ಶ್ರೀಗಳ ನೇತೃತ್ವದಲ್ಲಿ ಬಿಲ್ಲವ ಮುಖಂಡರು ಸಂಸದರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅವರಿಗೆ ಈ ಬಗ್ಗೆ ಸಂಸದರು ಭರವಸೆ ನೀಡಿದ್ದಾರೆ. ಆದರೆ ಈ ನಡುವೆ ಅಲ್ಲೊಂದು ಇಲ್ಲೊಂದು ಕಡೆ ತುಳುನಾಡು ವಿಮಾನ ನಿಲ್ದಾಣ ಎಂದು ಹೆಸರು ಇಡಬೇಕು. ರಾಣಿ ಅಬ್ಬಕ್ಕ, ಯು.ಎಸ್.ಮಲ್ಯ ಹೀಗೆ ಬೇರೆ ಬೇರೆ ವಿಷಯಗಳು ಮುನ್ನಲೆಗೆ ಬರುತ್ತಿದೆ. ಈ ವಿಮಾನ ನಿಲ್ದಾಣವನ್ನು ಮಂಗಳೂರಿಗೆ ತಂದವರು ಯುಎಸ್ ಮಲ್ಯ. ಅವರ ಪ್ರಬಲ ಇಚ್ಚಾಶಕ್ತಿಯಿಂದ ಅದು ಸಾಧ್ಯವಾಗತ್ತು. ಇನ್ನು ವೀರರಾಣಿ ಅಬ್ಬಕ್ಕ ಈ ಮಣ್ಣಿನ ಧೀರ ಮಹಿಳೆ. ಪೋರ್ಚುಗೀಸರ ವಿರುದ್ಧ ಏಕಾಂಗಿಯಾಗಿ ಹೋರಾಡಿದವರು. ಇನ್ನು ತುಳುನಾಡು ಎಂದು ಹೆಸರಿಟ್ಟರೆ ಅದು ತುಳುಭಾಷೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಹೊಸ ಆಯಾಮ ನೀಡುತ್ತದೆ. ಆದರೆ ಸದ್ಯ ಯಾವ ಹೆಸರು ಸೂಕ್ತ ಎನ್ನುವುದಕ್ಕಿಂತ ಯಾವ ಹೆಸರು ಇಟ್ಟರೆ ಮತಬ್ಯಾಂಕ್ ಗಟ್ಟಿಯಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಕೆಲವರು ಇದ್ದಾರೆ!
- Advertisement -
Leave A Reply