ಮಂಗಳೂರು ವಿಧಾನಸಭಾ ಕ್ಷೇತ್ರ ಅಂದರೆ ಹಿಂದಿನ ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಯು ಟಿ ಖಾದರ್ ಅವರ ಜೀವಕ್ಕೆ ಅಪಾಯ ಇದೆ ಎಂದು ಅಂದುಕೊಂಡು ರಾಜ್ಯ ಸರಕಾರ ಅವರಿಗೆ ಪೊಲೀಸ್ ಎಸ್ಕಾಟ್ ನೀಡಿದೆ. ಪೊಲೀಸರ ಜೀಪು ಇವರ ಕಾರಿನ ಹಿಂದೆ ಹೋಗುತ್ತಾ ಇವರಿಗೆ ರಕ್ಷಣೆ ನೀಡುತ್ತಾ ಬರುತ್ತದೆ. ಅಷ್ಟಕ್ಕೂ ಖಾದರ್ ಅವರಿಗೆ ಯಾರಿಂದ ಜೀವ ಭಯ ಎನ್ನುವುದನ್ನು ನೋಡುತ್ತಾ ಹೋದರೆ ಕೇಳಿ ಬರುವ ಮೊದಲ ಹೆಸರು ಪಿಎಫ್ ಐ ಮತ್ತು ಎಸ್ ಡಿಪಿಐ. ಯಾಕೆಂದರೆ ಖಾದರ್ ಅವರಿಗೆ ಚುನಾವಣೆ ಎಂದಾಗ ತಲೆ ನೋವು ತರುವುದೇ ಈ ಪಿಎಫ್ ಐ. ಅವರಿಗೆ ಇಂತಿಷ್ಟು ಕೊಟ್ಟು ಚುನಾವಣೆಗೆ ಕೊನೆ ಹಂತದಲ್ಲಿ ಸೈಲೆಂಟ್ ಮಾಡುವುದು ಖಾದರ್ ಅವರಿಗೆ ಕರಗತವಾಗಿದೆ. ಅನೇಕ ಕಡೆ ಹೊಡೆದಾಡಿಕೊಳ್ಳುವುದು ಇವರದ್ದೇ ಕಾಂಗ್ರೆಸ್ ಹಾಗೂ ಎಸ್ ಡಿಪಿಐ ಎನ್ನುವುದು ಜಗಜ್ಜಾಹೀರಾಗಿದೆ. ಆದ್ದರಿಂದ ಎಸ್ ಡಿಪಿಐ ಬೆಳೆದಷ್ಟು ಟೆನ್ಷನ್ ಖಾದರ್ ಅವರಿಗೆ ಇದ್ದದ್ದೇ. ಆದ್ದರಿಂದ ಅವಕಾಶ ಸಿಕ್ಕಾಗ ಖಾದರ್ ಪಿಎಫ್ ಐಯವರನ್ನು ಟೀಕಿಸುತ್ತಾ ಇರುತ್ತಾರೆ. ಪಿಎಫ್ ಐ ಬೆಳೆದರೆ ಅದರಿಂದ ಬಿಜೆಪಿಗೆ ಲಾಭ ಎನ್ನುವುದು ಖಾದರ್ ಗೆ ಗೊತ್ತಿರುವುದರಿಂದ ಅವರು ಕದನ ವಿರಾಮ ಸಮಯದಲ್ಲಿಯೂ ಮೈಯೆಲ್ಲ ಎಚ್ಚರವಾಗಿಯೇ ಇರುತ್ತಾರೆ. ಇಂತಹ ಖಾದರ್ ಅವರನ್ನು ಕೊಲ್ಲುವಷ್ಟು ದ್ವೇಷ ಯಾರಿಗೂ ಇಲ್ಲ. ಆದರೆ ಖಾದರ್ ಗೆ ತಾವು ರಾಷ್ಟ್ರೀಯ ಮಟ್ಟದ ನಾಯಕನಾಗಬೇಕು ಎನ್ನುವ ಹಪಾಹಪಿ ಇದೆ. ಅದರಲ್ಲಿಯೂ ಮುಸ್ಲಿಂ ಸಮುದಾಯದ ಅನಭಿಷೇಕ್ತ ದೊರೆ ಆಗಬೇಕು ಎನ್ನುವುದು ಅವರ ಹಳೆ ಗುರಿ. ರೋಷನ್ ಬೇಗ್ ಕಾಂಗ್ರೆಸ್ಸಿನಿಂದ ಹೊರಗೆ ಬಂದ ಮೇಲೆ ಕಾಂಗ್ರೆಸ್ಸಿನಲ್ಲಿ ಪ್ರಬಲ ಮುಸ್ಲಿಂ ನಾಯಕನ ಕೊರತೆ ಇದೆ. ಜಮೀರ್ ಮೇಲೆ ಜನಸಾಮಾನ್ಯರಿಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಎಂಎನ್ ಹ್ಯಾರಿಸ್ ತಮ್ಮ ಶಾಂತಿನಗರ ಕ್ಷೇತ್ರದಿಂದ ಆಚೆ ಬೆಳೆದಿಲ್ಲ. ಇನ್ನು ಸಿಎಂ ಇಬ್ರಾಹಿಂ ನಂತವರನ್ನು ಜನರು ಸಮಾರಂಭಗಳಲ್ಲಿ ನಗಿಸಲು ಫಿಟ್ ಎಂದು ಅಂದುಕೊಂಡಿದ್ದಾರೆ ವಿನ: ಅವರು ನಾಯಕರಾಗಲು ಇನ್ನೂ ಸೂಟ್ ಆಗಿಲ್ಲ. ಇಂತಹ ಸಂದರ್ಭದಲ್ಲಿಯೇ ಖಾದರ್ ಆಗಾಗ ರಾಜ್ಯ ಮಟ್ಟದ ಮಾಧ್ಯಮಗಳಲ್ಲಿ ಏನಾದರೂ ಹೇಳಿಕೆ ಕೊಟ್ಟು ಮಿಂಚಲು ತಯಾರಾಗಿಯೇ ಇರುತ್ತಾರೆ. ಖಾದರ್ ಅವರ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಬಳಗ ತುಂಬಾ ಚೆನ್ನಾಗಿದೆ. ಅವರು ಖಾದರ್ ಒಂದು ಬೊಂಡ ಕುಡಿದರೂ ಅದನ್ನು ಪತ್ರಿಕೆಗಳಿಗೆ ತಲುಪಿಸುತ್ತಾರೆ. ಘಾಟಿ ರಸ್ತೆಯಲ್ಲಿ ಕುಳಿತು ಚಾ ಕುಡಿದರೂ ಪಬ್ಲಿಸಿಟಿ ಒದಗಿಸುತ್ತಾರೆ. ಖಾದರ್ ಗೆ ಯಾವುದಕ್ಕೆ ಖರ್ಚು ಮಾಡಬೇಕು ಮತ್ತು ಯಾವುದಕ್ಕೆ ಖರ್ಚು ಮಾಡಿದರೆ ಬೆಳೆಯುತ್ತೇನೆ ಎನ್ನುವ ನಿಖರ ಜ್ಞಾನವಿದೆ. ಅಂತಹುದರಲ್ಲಿ ಖಾದರ್ ಅವರಿಗೆ ಮೊನ್ನೆ ಸಕತ್ ಮಿಂಚುವ ಅವಕಾಶ ಒದಗಿ ಬಂತು. ಇವರು ದೇರಳಕಟ್ಟೆಯ ಕಾರ್ಯಕ್ರಮದಿಂದ ವಿಮಾನ ನಿಲ್ದಾಣಕ್ಕೆ ಹೋಗುವಾಗ ಇವರ ಹಿಂದೆಯೇ ಒಬ್ಬ ಬೈಕ್ ಸವಾರ ಬರುತ್ತಿದ್ದ. ಇವರು ಮಾಜಿ ಸಚಿವರೂ ಆಗಿರುವುದರಿಂದ ಒಂದಷ್ಟು ವೇಗದಲ್ಲಿ ಎಲ್ಲ ಟ್ರಾಫಿಕ್ ಕ್ಲಿಯರ್ ಮಾಡುತ್ತಾ ಹೋಗುವ ಅವಕಾಶ ಸಿಗುತ್ತದೆ. ಇವರ ಹಿಂದೆಯೇ ಹೋದರೆ ತಾವು ಕೂಡ ಸೂಕ್ತ ಸಮಯದಲ್ಲಿ ನಿರ್ದಿಷ್ಟ ಜಾಗಕ್ಕೆ ತಲುಪಬಹುದು ಎಂದು ಅಂದುಕೊಂಡ ಬೈಕ್ ಸವಾರ ಇವರ ಗಾಡಿಯ ಹಿಂದೆಯೇ ಅದೇ ಸ್ಪೀಡ್ ನಲ್ಲಿ ಬರುತ್ತಿದ್ದ. ಇದರಿಂದ ಸಂಶಯಗೊಂಡ ಎಸ್ಕಾಟ್ ಪೊಲೀಸರು ಆ ಯುವಕನಿಗೆ ಏನ್ ಆವಾಜ್ ಹಾಕಿದರೂ ಯುವಕ ಕೇಳುವ ಸ್ಥಿತಿಯಲ್ಲಿರಲಿಲ್ಲ. ಯಾಕೆಂದರೆ ಅವನ ಕಿವಿಗೆ ಹಿಯರ್ ಫೋನ್ ಇತ್ತು. ಆದರೆ ಪೊಲೀಸರಿಗೆ ಅದೆಲ್ಲ ಗೊತ್ತಾಗುತ್ತಾ, ಅವರು ಮುಂದಿನ ವೃತ್ತದಲ್ಲಿ ಪೊಲೀಸರಿಗೆ ಮಾಹಿತಿ ಕೊಟ್ಟರು. ಅವರು ಈ ಬೈಕಿನವನನ್ನು ಅಡ್ಡ ಹಾಕಿದ್ದಾರೆ. ಇವನಿಗೆ ತಾನು ಏನು ತಪ್ಪು ಮಾಡಿದ್ದೇನೆ ಎಂದೇ ಗೊತ್ತಾಗಿಲ್ಲ. ಅವನ ಬಳಿ ಬೈಕಿನ ದಾಖಲೆಗಳು ಇತ್ತಾ, ಇಲ್ವಾ ಅವನು ಹೆದರಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಆದದ್ದು ಇಷ್ಟೇ. ಈ ಅವಕಾಶವನ್ನು ಕಳೆದುಕೊಳ್ಳಲು ಖಾದರ್ ಸಾಹೇಬ್ರು ತಯಾರಿರಲಿಲ್ಲ. ಈ ವಿಷಯವನ್ನು ಅವರ ಪಿಆರ್ ಟೀಮ್ ಎಷ್ಟು ವ್ಯವಸ್ಥಿತವಾಗಿ ಪಬ್ಲಿಸಿಟಿ ಮಾಡಿತು ಎಂದರೆ ರಾತ್ರಿ ರಾಜ್ಯ ವಾಹಿನಿಗಳ ಹೆಡ್ ಲೈನ್ಸ್ ನಲ್ಲಿ ಖಾದರ್ ಅವರಿಗೆ ಏನೋ ಆಗಲಿತ್ತು ಎನ್ನುವ ಸುದ್ದಿಯೇ ಲೀಡ್ ಪಡೆದುಕೊಂಡಿತ್ತು. ಈಗಿನ ಕಾಲದಲ್ಲಿ ನಟ್ಟ ನಡು ಅರಣ್ಯದಲ್ಲಿ ಒಂದು ಹುಲ್ಲು ಕಡ್ಡಿ ಅಲುಗಾಡಿದರೂ ಗೊತ್ತಾಗುವಂತಹ ಟೆಕ್ನಾಲಜಿ ಇರುವಾಗ ಖಾದರ್ ಗಾಡಿ ಹಿಂದೆ ಬರುತ್ತಿದ್ದ ಯುವಕ ಯಾರು ಎಂದು ತಿಳಿಯುವುದು ಕಷ್ಟವಾಗಿರಲಿಲ್ಲ. ಅಂತಿಮವಾಗಿ ಆ ಯುವಕನನ್ನು ಪತ್ತೆ ಹಚ್ಚಲಾಯಿತು. ಆದರೆ ಅಷ್ಟರಲ್ಲಿ ತಮ್ಮ ನಾಯಕನನ್ನು ರಾಷ್ಟ್ರವ್ಯಾಪಿ ಫೇಮಸ್ ಮಾಡುವ ಕಾಯಕಕ್ಕೆ ಅವರ ಪಟಾಲಾಂ ತಯಾರಾಗಿಬಿಟ್ಟಿತ್ತು. ಸುದ್ದಿಗೋಷ್ಟಿಗಳು ನಡೆದವು. ಖಾದರ್ ಅವರ ಮೇಲೆ ಹಲ್ಲೆ ಮಾಡಲು ಬಂದ ಯುವಕ ಯಾವ ಸಂಘಟನೆಯವನು, ಅವನಿಗೆ ಏನು ಉದ್ದೇಶ ಇತ್ತು ಎಲ್ಲಾ ಚರ್ಚೆಯಾಯಿತು. ಅಂತಿಮವಾಗಿ ಪೊಲೀಸರು ಆ ಯುವಕ ಯಾರೆಂದು ನೋಡುವಾಗ ಆತ ಕಾಂಗ್ರೆಸ್ ಪದಾಧಿಕಾರಿ ಮಹಿಳೆಯೊಬ್ಬರ ಮಗ ಎಂದು ಗೊತ್ತಾಗಿದೆ. ಪೊಲೀಸರು ಒಂದು ದಿನ ತಡ ಮಾಡಿದಿದ್ದರೆ ಉಳ್ಳಾಲದಲ್ಲಿ ಬೃಹತ್ ಪ್ರತಿಭಟನೆ ಮಾಡಿ ರಾಜ್ಯಮಟ್ಟದ ವಾಹಿನಿಗಳಲ್ಲಿ ಫುಲ್ ಟೈಮ್ ಮಿಂಚಲು ಖಾದರ್ ತಯಾರಾಗಿದ್ದರು. ಆದರೆ ಪೊಲೀಸರ ಸಕಾಲಿಕ ಕ್ರಮದಿಂದ ಖಾದರ್ ಗೆ ನಿರಾಸೆಯಾಗಿದೆ. ಆದರೆ ಕಾಂಗ್ರೆಸ್ ಮುಖಂಡರು ಸುಮ್ಮನಿಲ್ಲ. ಪೊಲೀಸರು ಅನೀಶ್ ಪೂಜಾರಿ ಎನ್ನುವ ಆ ಯುವಕನ ಮೇಲೆ ಯಾವುದೋ ಸಣ್ಣ ಕೇಸ್ ಹಾಕಿ ಬಿಟ್ಟಿದ್ದಾರೆ ಎಂದು ಗೊತ್ತಾದ ಕಾರಣ ಆ ಯುವಕ ಗಾಂಜಾ ವ್ಯಸನಿ, ಬೇರೆ ಬೇರೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ, ಕಠಿಣ ತನಿಖೆ ಮಾಡಬೇಕು ಎಂದು ಒತ್ತಾಯಿಸಿ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಒಟ್ಟಿನಲ್ಲಿ ಅಡಿಗೆ ಬಿದ್ದರೂ ಮೀಸೆಗೆ ಮಣ್ಣಾಗಲಿಲ್ಲ ಎನ್ನುವ ಗಾದೆಯಂತೆ ಆ ಯುವಕನ ಮೇಲೆ ತನಿಖೆ ಮಾಡುವಂತೆ ಪೊಲೀಸ್ ಇಲಾಖೆಗೆ ಒತ್ತಡ ತಂದಿದ್ದಾರೆ. ಈ ಮೂಲಕ ಪೊಲೀಸ್ ಇಲಾಖೆ ಖಾದರ್ ಗಾಡಿಯನ್ನು ಫಾಲೋ ಮಾಡಿದ ಯುವಕನನ್ನು ಹೇಗೆ ಶಿಕ್ಷೆಗೆ ಒಳಪಡಿಸುವುದು ಎಂದು ತಲೆಬಿಸಿ ಮಾಡಿ ಕುಳಿತಿದೆ. ಇದು ಖಾದರ್ ಮಿಂಚಲು ಹೋಗಿ ಟುಸ್ ಆದ ಕತೆ!!
- Advertisement -
Leave A Reply