ಮೂರು ದಿನ ಅಮಿತ್ ಶಾ ಮಾಡಲಿರುವ ಮ್ಯಾಜಿಕ್ ಏನು?
ಅಮಿತ್ ಶಾ ಬೆಂಗಳೂರಿಗೆ ಬರಲು ಕ್ಷಣಗಣನೆ ಆರಂಭವಾಗಿದೆ. ಭಾರತೀಯ ಜನತಾ ಪಾರ್ಟಿಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯದ ಅಷ್ಟೂ ನಾಯಕರು ಕೇಂದ್ರದ ನಾಯಕನೊಬ್ಬನ ಬರುವಿಕೆಯನ್ನು ಕಾತರದಿಂದ ಕಾಯುತ್ತಿದ್ದಾರೆ. ಒಂದು ಕಾಲದಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ಸ್ ನಾಯಕರನ್ನು ಹೈಕಮಾಂಡ್ ಸಂಸ್ಕೃತಿಯವರು ಎಂದು ಟೀಕಿಸುತ್ತಿದ್ದರು. ಹೈಕಮಾಂಡ್ ಹೇಳಿದ್ದನ್ನು ಚಾಚು ತಪ್ಪದೆ ಪಾಲಿಸುವವರು, ಇಲ್ಲಿನವರು ಬರಿ ಆಟದ ಗೊಂಬೆಗಳು ಎಂದು ಹೀಯಾಳಿಸುತ್ತಿದ್ದರು. ಅಲ್ಲಿ ಏನು ನಿರ್ಧಾರವಾಗುತ್ತದೆಯೋ ಅದೇ ಅಂತಿಮವಾಗುವುದಾದರೆ ನೀವ್ಯಾಕೆ ಇಲ್ಲಿ ಇರುವುದು ಎಂದು ಕಿಚಾಯಿಸುತ್ತಿದ್ದರು. ನಮ್ಮದೇನಿದ್ದರೂ ನಾವು ಹೇಳಿದ್ದೇ ಕೇಂದ್ರದ ನಾಯಕರು ಒಪ್ಪುತ್ತಾರೆ ಎನ್ನುವ ಧೋರಣೆ ಬಿಜೆಪಿಯವರದ್ದಾಗಿತ್ತು. ಆದರೆ ಈ ಬಾರಿ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ.
ಬಿಜೆಪಿಯ ಪರಿಸ್ಥಿತಿ ಬದಲಾಗಿದೆ. ಹೇಗೆ ಹಿಂದೆ ಕಾಂಗ್ರೆಸ್ ಎಲ್ಲಾ ನಿರ್ಧಾರಗಳಿಗೂ ಹೈಕಮಾಂಡ್ ಅತ್ತ ನೋಡುತ್ತಿತ್ತೊ ಈಗ ಆ ಪರಿಸ್ಥಿತಿ ಬಿಜೆಪಿಯಲ್ಲಿದೆ. ಅದೇ ಕಾಂಗ್ರೆಸ್ ಹೇಗೆ ಹಿಂದೆ ದೆಹಲಿ ನಾಯಕರ ಆದೇಶಗಳನ್ನು ಕಾದು ಕುಳಿತುಕೊಳ್ಳುತ್ತಿತ್ತೊ ಈಗ ದೆಹಲಿಯಲ್ಲಿ ಕೂಡ ರಾಜ್ಯ ನಾಯಕರ ಮಾತುಗಳು ನಡೆಯುವ ಪರಿಸ್ಥಿತಿ ಇದೆ. ಈ ಬದಲಾವಣೆ ಹೇಗೆ ಸಾಧ್ಯವಾಯಿತು?
ವಿಷಯ ಸಿಂಪಲ್. ಬಿಜೆಪಿಯನ್ನು ಮತ್ತೆ ಕರ್ನಾಟಕದಲ್ಲಿ ಅಧಿಕಾರಕ್ಕೆ ತರಬೇಕಾದರೆ ಯಡಿಯೂರಪ್ಪ, ಈಶ್ವರಪ್ಪ, ಸಿಟಿ ರವಿ, ಅಶೋಕ್, ಶೋಭಾ ಮುಖಗಳು ವರ್ಕೌಟ್ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಎಲ್ಲರೂ ಮೇಲ್ನೋಟಕ್ಕೆ ಒಂದೇ ವೇದಿಕೆಯಲ್ಲಿ ಅಪ್ಪಿತಪ್ಪಿ ಕಾಣಿಸುತ್ತಾರಾದರೂ ಆರು ನಾಯಕರಲ್ಲಿ ಮೂರು ಗಂಪುಗಳು ಎನ್ನುವ ವಾತಾವರಣ ಇದೆ. ಇನ್ನೊಂದೆಡೆ ಸಿದ್ಧರಾಮಯ್ಯ ಉರುಳಿಸುತ್ತಿರುವ ಲಿಂಗಾಯತ ಧರ್ಮ, ಕನ್ನಡ ಧ್ವಜ, ಮೆಟ್ರೋ ಹಿಂದಿ ವಿರೋಧಿ, ದಲಿತರ ಮತಸೆಳೆಯುವ ತಂತ್ರಗಳೆಲ್ಲಾ ಬಿಜೆಪಿಗೆ ಅರಗಿಸಲು ಕಷ್ಟಸಾಧ್ಯವಾಗುತ್ತಿದೆ. ಬಿಜೆಪಿ ಭತ್ತಳಿಕೆಯಲ್ಲಿರುವ ಕಾಂಗ್ರೆಸ್ ಹಿಂದೂ ವಿರೋಧಿ ಅಸ್ತ್ರವೊಂದೇ ಚುನಾವಣೆಯಲ್ಲಿ ದಡ ಮುಟ್ಟಿಸುತ್ತದೆ ಎನ್ನುವ ನಿರೀಕ್ಷೆ ಎಲ್ಲರಲ್ಲೂ ಇಲ್ಲ. ಈ ಹೊತ್ತಿನಲ್ಲಿ ಕಾಂಗ್ರೆಸ್ ಬಳಸುತ್ತಿರುವ ಬಾಣಗಳನ್ನು ಅವರದ್ದೇ ಅಡ್ಡೆಯಲ್ಲಿ ಹೊಸಕಿ ಹಾಕಲು ಬೇಕಾಗಿರುವುದು ಸ್ವಹಿತಾಸಕ್ತಿಗಿಂತ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಗುರಿ ಇರುವ ನಾಯಕ. ಅದು ಬಿಜೆಪಿಯಲ್ಲಿ ಯಾರೂ ಇದ್ದಂತೆ ಕಾಣುತ್ತಿಲ್ಲ. ಹೊರಗಿನ ವ್ಯಕ್ತಿಯನ್ನು ಈಗ ಪ್ರಾಜೆಕ್ಟ್ ಮಾಡಿದರೆ ಚುನಾವಣೆ ಒಳಗೆ ಬಿಜೆಪಿಯ ಒಳಗಿನವರೇ ಪರಸ್ಪರರ ಸಫಾರಿ ಹರಿದು ಚಿಂದಿ ಚಿತ್ರಾನ್ನ ಮಾಡಿಬಿಡುತ್ತಾರೆ. ಅದಕ್ಕಾಗಿ ಎಲ್ಲರನ್ನು ಚುನಾವಣೆಯ ತನಕ ಒಟ್ಟಿಗೆ ಕರೆದೊಯ್ಯುವ ನಾಯಕನಾಗಿ ಅಮಿತ್ ಶಾ ಕಾಣಿಸಿಕೊಂಡಿದ್ದಾರೆ.
ಅಮಿತಾ ಶಾ ಅವರೊಂದಿಗೆ ಸಲೀಸಾಗಿ ವ್ಯವಹರಿಸಬಲ್ಲ ಮುಖಂಡರು ನಾಳೆ ಮುಂದಿನ ಪಂಕ್ತಿಯಲ್ಲಿ ಕಾಣಿಸಲಿದ್ದಾರೆ. ಉಳಿದವರು ಕುಚ್ ಪ್ರಾಬ್ಲಂ ನಹಿ ಎಂದು ಹೇಳುವ ಮಟ್ಟಿಗೆ ತಮ್ಮ ನಡೆಯನ್ನು ಸೀಮಿತಗೊಳಿಸಲಿದ್ದಾರೆ. ಈ ನಡುವೆ ದಲಿತ ಸ್ವಾಮಿಗಳನ್ನು ಚುನಾವಣೆಗೆ ನಿಲ್ಲಿಸುವ ಪ್ರಕ್ರಿಯೆ ಅಮಿತ್ ಶಾ ಮಾಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಅದಕ್ಕೆ ಸರಿಯಾಗಿ ನಾವು ಏನು ಮಾಡುವುದು ಎಂದು ಕಾಂಗ್ರೆಸ್ಸಿಗರ ಚಿಂತನೆ ಶುರುವಾಗಿದೆ. ವಿಸ್ತಾರಕ್ ಯೋಜನೆಯನ್ನು ಕೆಲವರು ಮನಸ್ಸುಗೊಟ್ಟು ಮಾಡಿದರೆ ಮತ್ತಿಷ್ಟು ಜನ ಕಾಟಾಚಾರಕ್ಕೆ ಮುಗಿಸಿದ್ದಾರೆ. ಇಷ್ಟು ಬ್ಯಾಗೇಜ್ ಇಟ್ಟುಕೊಂಡು ಮೂರು ದಿನ ರಾಜ್ಯದಲ್ಲಿ ಸೂರ್ಯಾಸ್ತಮಾನ ನೋಡಲಿರುವ ಅಮಿತ್ ಶಾ ಕೆಸರಿನಲ್ಲಿ ಮುಳುಗಿರುವ ಕಮಲವನ್ನು ಅರಳಿಸುತ್ತಾರಾ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ
Leave A Reply