ತಾಂಟ್ರೆ ಬಗ್ಗೆ ಈಗ ಗಂಭೀರವಾಗಿ ಯೋಚಿಸದಿದ್ದರೆ ಮಂಗಳೂರು ಮುಂದೆ ಗಂಭೀರವಾಗಲಿದೆ!!
ನಮ್ಮ ದೇಶ ಕೊಟ್ಟ ಅತೀ ದೊಡ್ಡ ಸ್ವಾತಂತ್ರ್ಯಗಳಲ್ಲಿ ವಾಕ್ ಸ್ವಾತಂತ್ರ್ಯವೂ ಒಂದು. ಹಾಗಂತ ದೇವರು ನಾಲಿಗೆ ಕೊಟ್ಟು ಗಂಟಲಲ್ಲಿ ಧ್ವನಿ ಪೆಟ್ಟಿಗೆ ಕೊಟ್ಟಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಏನೇನೋ ಉದ್ರೇಕಕಾರಿ ಹೇಳಿಕೆಯನ್ನು ಎತ್ತಿ ಬಿಸಾಡಿದರೆ ಅದರಿಂದ ಹಾಳಾಗುವುದು ಸಭ್ಯ ಜನರ ಊರು ನಮ್ಮ ಮಂಗಳೂರು. ಒಂದು ಸಲ ಹೇಳಿದರೆ ಅದು ಉದ್ವೇಗದಲ್ಲಿ ಹೇಳಿದ್ದು ಎಂದು ಹೇಳಬಹುದು. ಆದರೆ ಪದೇ ಪದೇ ಅದೇ ಮಾತನ್ನು ಹೇಳಿದರೆ ಅದು ಪ್ರೀ ಪ್ಲೇನ್ ಆಗುತ್ತದೆ. ಅದು ಗೊತ್ತಿದ್ದೇ ಹೇಳಿದ್ದು ಎನ್ನುವುದು ಗ್ಯಾರಂಟಿಯಾಗುತ್ತದೆ. ಇದನ್ನು ರಿಯಾಜ್ ಫರಂಗಿಪೇಟೆ ಸಾಬೀತುಪಡಿಸಿದ್ದಾರೆ.
ಅವರು ಕೆಲವು ದಿನಗಳ ಹಿಂದೆ ಎಸ್ ಡಿಪಿಐ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಿಗೆ, ಸಂಘ ಪರಿವಾರದ ಯುವಕರಿಗೆ ಬಹಿರಂಗವಾಗಿ ತಾಂಟ್ರೆ ಬಾ ತಾಂಟ್ ಎಂದು ಹೇಳಿ ಸಂಘರ್ಷಕ್ಕೆ ಆಹ್ವಾನ ನೀಡಿದ್ದರು. ಅದನ್ನು ಅನೇಕ ಕಡೆ ಟ್ರೋಲ್ ಆಗಿ ಬಳಸಲಾಯಿತು. ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲವೋ ಅಥವಾ ಮೇಲಿನಿಂದ ಅದನ್ನು ಟ್ರೋಲ್ ಮಾಡಲು ಸೂಚನೆ ಇತ್ತೋ ಒಂದು ರೀತಿಯಲ್ಲಿ ಉಡಾಫೆಯ ರೀತಿಯಲ್ಲಿ ತಾಂಟ್ರೆ ಡೈಲಾಗನ್ನು ತೆಗೆದುಕೊಳ್ಳಲಾಯಿತು. ಎಲ್ಲಾ ಕಡೆ ವಿಡಿಯೋ ಟ್ರೋಲ್ ಆಗಿ ವೈರಲ್ ಆಯಿತು. ಬಹುಶ: ರಿಯಾಜ್ ಫರಂಗಿಪೇಟೆಗೆ ಅವಮಾನ ಮಾಡುವ ಉದ್ದೇಶ ಇದ್ದಿರಬಹುದು. ಆದರೆ ಅದನ್ನು ಒಂದು ಸವಾಲಾಗಿ ಸ್ವೀಕರಿಸಿದ ರಿಯಾಜ್ ಅದನ್ನು ಮತ್ತೊಮ್ಮೆ ಉಚ್ಚರಿಸಿದ್ದಾರೆ. ತಾನು ಒಂದು ಸಲ ಹೇಳಿದರೆ ಟ್ರೋಲ್ ಮಾಡುತ್ತಿರಿ ಎಂದಾದರೆ ಅದನ್ನೇ ಹತ್ತು ಸಲ ಹೇಳುತ್ತೇನೆ ಎಂದು ಗಟ್ಟಿಯಾಗಿ ಅಬ್ಬರಿಸಿದ್ದಾರೆ. ಆದರೆ ನಮ್ಮ ಪೊಲೀಸ್ ಇಲಾಖೆ ನೋಡಿ, ಡಿಸಿಪಿಯವರು ತಾಂಟ್ರೆ ಟ್ರೋಲ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ ವಿನ: ಅಪ್ಪಿತಪ್ಪಿಯೂ ರಿಯಾಜ್ ಫರಂಗಿಪೇಟೆ ನೀಡಿದ ಪಂಥಾಹ್ವಾನವನ್ನು ಗಂಭೀರವಾಗಿ ಸ್ವೀಕರಿಸಿದಂತಿಲ್ಲ.
ನಿಜಕ್ಕೂ ರಿಯಾಜ್ ಈ ಜಿಲ್ಲೆಯ ಶಾಂತಿ, ಸುವ್ಯವಸ್ಥೆಯನ್ನು ಕದಡಿದ್ದಾರೆ. ಅವರು ಹೇಳಿಕೆ ಕೊಟ್ಟ ಕೆಲವೇ ದಿನಗಳೊಳಗೆ ಮಂಗಳೂರು ಸಹಿತ ಆಸುಪಾಸಿನ ಕೆಲವು ಕಡೆ ಯುವಕರ ಮೇಲೆ ಹಲ್ಲೆಗಳಾಗಿವೆ. ಭಾನುವಾರ ಹೃದಯಭಾಗ ಲಾಲ್ ಭಾಗ್ ನಲ್ಲಿ ಒಬ್ಬ ಯುವಕನ ಮೇಲೆ ಹಲ್ಲೆಯಾಗಿದೆ. ಅದಕ್ಕೆ ಕಾರಣ ಆತ ಬೈಕಿನ ಮೇಲೆ ಶಿವಾಜಿಯ ಸ್ಟೀಕರ್ ಅಂಟಿಸಿದ್ದಾ ಎನ್ನುವುದು. ಹೀಗೆ ಶಿವಾಜಿ ಸ್ಟೀಕರ್, ಭಾರತ ಮಾತೆಯ ಸ್ಟೀಕರ್, ನಾ ಹಿಂದೂ ಎನ್ನುವ ಸ್ಟೀಕರ್ ಇದ್ದ ವಾಹನಗಳ ಮಾಲೀಕರ ಮೇಲೆ ಹಲ್ಲೆ, ಕೊಲೆಯತ್ನ ನಡೆಯುತ್ತಾ ಹೋದರೆ ಮುಂದೆ ಏನಾಗಬಹುದು? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೋಮು ಸಂಘರ್ಷಗಳು ಶುರುವಾಗಬಹುದು. ನಾವು ಸ್ಟೀಕರ್ ಅಂಟಿಸುತ್ತೇವೆ, ಧೈರ್ಯವಿದ್ದರೆ ತಡೆಯಿರಿ ಎನ್ನುವ ಹೇಳಿಕೆ ಮುಂದಿನ ದಿನಗಳಲ್ಲಿ ಕೇಸರಿ ಪಾಳಯದಿಂದ ಬರುತ್ತದೆ. ಕ್ರಿಯೆಗೆ ಪ್ರತಿಕ್ರಿಯೆ ಬಂದೇ ಬರುತ್ತದೆ. ಆಗ ಏನಾಗುತ್ತೆ, ಎಲ್ಲಿಯಾದರೂ ರಾತ್ರಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದ ಕೇಸರಿ ಮುಂಡು ಸುತ್ತಿದ ಅಮಾಯಕನ ಹೆಣ ನೆಲಕ್ಕೆ ಬೀಳುತ್ತದೆ. ಮೃತ ವ್ಯಕ್ತಿಯ ಪರವಾಗಿ ಅದಕ್ಕೆ ಪ್ರತಿಭಟನೆಯಾಗುತ್ತದೆ. ಯಾವುದಾದರೂ ಮತೀಯವಾದಿಗಳ ಬಂಧನವಾಗುತ್ತದೆ. ಅವರನ್ನು ಸುಮ್ಮನೆ ಅನಾವಶ್ಯಕವಾಗಿ ಬಂಧಿಸಲಾಗಿದೆ ಎಂದು ಆರೋಪಿಗಳ ಪರ ಪ್ರತಿಭಟನೆಯಾಗುತ್ತದೆ. ಪೊಲೀಸರು ತಮ್ಮ ಠಾಣೆಗೆ ಮುತ್ತಿಗೆ ಹಾಕಲು ಕೈಯಲ್ಲಿ ದೊಣ್ಣೆ, ರಾಡ್, ಪೆಟ್ರೋಲ್ ಬಾಂಬ್ ಹಿಡಿದುಬರುತ್ತಿರುವ ಪುಂಡರ ಮೇಲೆ ಅನಿವಾರ್ಯವಾಗಿ ಲಾಠಿ ಬೀಸಬೇಕಾಗುತ್ತದೆ. ಲಾಠಿಗೆ ಬಗ್ಗಬಾರದು ಎಂದು ಪುಂಡರು ನಿರ್ಧರಿಸಿ ಆಗಿರುತ್ತದೆ. ಅವರು ಪೊಲೀಸರ ಮೇಲೆ ಕಲ್ಲು ತೂರುತ್ತಾರೆ. ಆಗ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರಲು ಪೊಲೀಸ್ ಅಧಿಕಾರಿಗಳು ಗೋಲಿಬಾರಿಗೆ ಆದೇಶಿಸಬಹುದು. ನಂತರ ಏನು ಆಗಲಿದೆ ಎಂದು ಗೊತ್ತಿಲ್ಲದಷ್ಟು ಮೂರ್ಖರು ಈ ಜಿಲ್ಲೆಯಲ್ಲಿ ಇಲ್ಲ. ಸತ್ತವರ ಮನೆಗಳಿಗೆ ಹೋಗಿ ಅವರಿಗೆ ಕೆಲವು ಪಕ್ಷಗಳು ಹಣ ನೀಡುತ್ತವೆ. ಕೆಲವರು ಮೊಸಳೆ ಕಣ್ಣೀರು ಸುರಿಸುತ್ತಾರೆ. ಅದರ ನಂತರ ತಮ್ಮ ಮೇಲೆ ಗೋಲಿಬಾರ್ ಮಾಡಿದ ಪೊಲೀಸರ ಮೇಲೆ ಹಲ್ಲೆ ಮಾಡಲು ಪುಂಡರ ತಂಡದಿಂದ ನಿರ್ಧಾರವಾಗುತ್ತದೆ. ಅಲ್ಲಿಂದ ನಂತರ ಕೆಲವು ಪೊಲೀಸರ ಮೇಲೆ ಹಲ್ಲೆಗಳಾಗುತ್ತವೆ. ಆದರೆ ಅಷ್ಟರಲ್ಲಿ ರಿಯಾಜ್ ಫರಂಗಿಪೇಟೆ ಇನ್ನೊಂದು ಹೇಳಿಕೆ ಕೊಟ್ಟಿರುತ್ತಾರೆ. ತಾಂಟ್ರೆ ಜಾಗದಲ್ಲಿ ಮತ್ತೊಂದು ಶಬ್ದ ಬಂದಿರುತ್ತದೆ. ಇದೆಲ್ಲವನ್ನು ತಡೆಯುವ ಸಾಮರ್ತ್ಯ ಪೊಲೀಸರ ಕೈಯಲ್ಲಿದೆ. ಅವರು ಯಾರೂ ದೂರು ಕೊಡದಿದ್ದರೂ ಸ್ವಯಂಪ್ರೇರಿತವಾಗಿ ಸುಮೋಟೋ ಕೇಸು ದಾಖಲಿಸುವ ಅಧಿಕಾರವನ್ನು ಹೊಂದಿದ್ದಾರೆ. ಇನ್ನು ಈ ತಾಂಟ್ರೆ ಹೇಳಿಕೆ ವಿರೋಧವಾಗಿ ಮಾತನಾಡಿದವರ ಚಾರಿತ್ರ್ಯಹರಣ ಮಾಡುವ ಬೆದರಿಕೆಯನ್ನು ಕೂಡ ರಿಯಾಜ್ ಫರಂಗಿಪೇಟೆ ಹಾಕಿದ್ದಾರೆ. ಅಂತಹ ಒಂದು ಆಡಿಯೋ ಕ್ಲೀಪ್ ಕೂಡ ಹರಿದಾಡುತ್ತಿದೆ. ಹೀಗೆ ಆದರೆ ಕೊರೊನಾದಿಂದ ಬಳಲಿರುವ ಮಂಗಳೂರಿನ ಮೇಲೆ ಕೋಮು ಗಲಭೆ ಎಂಬ ದುಸ್ವಪ್ನ ಖಂಡಿತವಾಗಿ ಮುಂದಿನ ದಿನಗಳಲ್ಲಿ ಕಾಡಲಿದೆ. ಇದರಿಂದ ಯಾರಿಗೆ ಲಾಭ? ಸಂಶಯವೇ ಇಲ್ಲ, ಹೀಗೆ ಹೇಳಿಕೆ ಕೊಟ್ಟವರಿಗೆ ಮಾತ್ರ. ಅವರ ವರ್ಚಸ್ಸು ಅವರ ಪಕ್ಷದಲ್ಲಿ ಜಾಸ್ತಿಯಾಗಬಹುದು. ಆದರೆ ಮಂಗಳೂರು ಇದಕ್ಕೆ ಬಲಿಯಾಗಲಿದೆ. ಇಲ್ಲಿನ ವ್ಯವಹಾರ, ವ್ಯಾಪಾರ, ಪ್ರವಾಸೋದ್ಯಮ ಎಲ್ಲವೂ ಬಲಿಯಾಗಲಿವೆ. ಹೀಗೆ ಆಗಬಾರದು ಎಂದಾದರೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ಟ್ರೋಲ್ ಮಾಡಿದವರಿಗೆ ಎಚ್ಚರಿಕೆ ಕೊಟ್ಟು ಕುಳಿತುಕೊಂಡರೆ ಪ್ರಯೋಜನವಿಲ್ಲ!!!
Leave A Reply