ತನಿಖೆ ಮುಗಿಯುವ ತನಕ ಭ್ರಷ್ಟರು ಹುದ್ದೆಗೆ ಮರಳುವಂತಿಲ್ಲ ಕಾನೂನು ಮಾಡಿ ಬಿಜೆಪಿ!!
ನಮ್ಮ ರಾಜ್ಯದ ಎಸಿಬಿ ಎನ್ನುವ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಆಕ್ಟಿವ್ ಆಗಿದೆ. ಮೊನ್ನೆ ಆರು ಜನ ಸರಕಾರಿ ಅಧಿಕಾರಿಗಳ ಮೇಲೆ ರೇಡ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನಾ ಅಧಿಕಾರಿಯನ್ನು ಸೇರಿಸಿ ಒಂಭತ್ತು ಜನ ರಾಜ್ಯದ ವಿವಿಧ ಅಧಿಕಾರಿಗಳ ಮೇಲೆ ರೇಡ್ ಆಗಿದೆ. ಅವರ ಮನೆಗಳಿಂದ, ಲಾಕರ್ ಗಳಿಂದ ಲೆಕ್ಕವಿಲ್ಲದಷ್ಟು ಹಣ, ಭೂದಾಖಲೆಗಳು, ಬಂಗ್ಲೆಗಳ ದಾಖಲೆಗಳು, ಚಿನ್ನ, ಬೆಳ್ಳಿ ಸಹಿತ ಅಮೂಲ್ಯ ವಸ್ತುಗಳು ಹೇರಳವಾಗಿ ಸಿಕ್ಕಿವೆ. ಯಾವಾಗೆಲ್ಲ ಇಂತಹ ರೇಡ್ ಆಗುತ್ತೋ ಆವಾಗೆಲ್ಲ ಹೀಗೆ ಭ್ರಷ್ಟ ಅಧಿಕಾರಿಗಳ ವಿವಿಧ ಬಂಗ್ಲೆಗಳಿಂದ ಇಂತಹ ದಾಖಲೆಗಳು ಸಿಕ್ಕಿವೆ ಎಂದು ಪತ್ರಿಕೆಗಳು ವರದಿ ಮಾಡುತ್ತವೆ. ಆ ದಿನವೀಡಿ ಮಾಧ್ಯಮಗಳಲ್ಲಿ ಅವರ ಫೋಟೋ ಹಾಕಿ, ರೇಡ್ ಗಳ ದೃಶ್ಯಗಳನ್ನು ಹಾಕಿ ಅದಕ್ಕೆ ಗ್ರಾಫಿಕ್ಸ್ ನಲ್ಲಿ ಆಕರ್ಷಕ ಟೈಟಲ್ ಮಾಡಿ ಮ್ಯೂಸಿಕ್ ಕೊಟ್ಟು ಕಳ್ಳರಂತೆ ಅವರನ್ನು ಬಿಂಬಿಸುತ್ತವೆ.
ಹಿಂದೆ ಲೋಕಾಯುಕ್ತ ಬಲಿಷ್ಟವಾಗಿದ್ದಾಗ ಮಾನ್ಯ ಸಂತೋಷ್ ಹೆಗ್ಡೆ ಹಾಗೂ ವೆಂಕಟಾಚಲಯ್ಯ ಅವರ ಅವಧಿಯಲ್ಲಿ ಅವರು ಬೇಟೆಯಾಡಿದ ಭ್ರಷ್ಟರ ಕುರಿತು ಮಾಡುವ ಸುದ್ದಿಗೋಷ್ಟಿಗಳದ್ದೇ ಒಂದು ಬೇರೆ ತೂಕ. ಆಗ ಮಾನ್ಯ ನಿವೃತ್ತ ನ್ಯಾಯಮೂರ್ತಿಗಳ ಮುಖಗಳಲ್ಲಿ ಒಂದು ವಿಭಿನ್ನ ವಿಜಯದ ಕಳೆ ಇರುತ್ತಿತ್ತು. ಎದುರಿಗೆ ಭ್ರಷ್ಟರಿಂದ ವಶಪಡಿಸಿಕೊಂಡ ದಾಖಲೆಗಳು ಇರುತ್ತಿದ್ದವು. ಆ ಬಳಿಕ ಕಾಂಗ್ರೆಸ್ ಸರಕಾರ ಇದ್ದಾಗ ಲೋಕಾಯುಕ್ತವನ್ನು ಹಲ್ಲಿಲ್ಲದ ಹಾವಿನಂತೆ ಮಾಡಿಬಿಟ್ಟರು. ಆ ಬಳಿಕ ಎಸಿಬಿ ಸ್ಥಾಪನೆಯಾಯಿತು. ಅದು ಕೂಡ ಅಷ್ಟೇ. ರೇಡ್ ಆಗುತ್ತೆ ನಂತರ ಬೆರಳೆಣಿಕೆಯ ದಿನಗಳ ಬಳಿಕ ಆ ಭ್ರಷ್ಟ ಅಧಿಕಾರಿ ಮತ್ತೆ ತಮ್ಮ ಸ್ಥಾನಕ್ಕೆ ಬಂದು ಕೂರುತ್ತಾರೆ. ಕೆಲವು ದಿನಗಳ ಬಳಿಕ ಆತ ಒಂದಿಷ್ಟು ಎಚ್ಚರಿಕೆಯಿಂದ ಲಂಚವನ್ನು ತೆಗೆದುಕೊಳ್ಳುತ್ತಾನೆ ಬಿಟ್ಟರೆ ಅದರಿಂದ ಅವನಿಗೆ ಏನೂ ನಷ್ಟ ಆಗುವುದಿಲ್ಲ. ಯಾಕೆಂದರೆ ಆತ ಯಾರಿಗೋ ಎಷ್ಟೆಷ್ಟೋ ಕೊಟ್ಟೆ ಬಂದಿರುತ್ತಾನೆ. ಅವರಿಗೆ ಕೊಡಲು ಲೇಟ್ ಆಗಿತ್ತಾ ಅಥವಾ ಲೆಕ್ಕದಷ್ಟು ಕೊಟ್ಟಿಲ್ಲವಾ ಏನೋ ರೇಡ್ ಮಾಡಲಾಗಿರುತ್ತದೆ. ಆದ್ದರಿಂದ ಅವನಿಗೆ ತನ್ನ ಮೇಲೆ ರೇಡ್ ಆಗಿ ಅದು ಮಾಧ್ಯಮಗಳಲ್ಲಿ ಸುದ್ದಿಯಾದಾಗ ತನ್ನ ಮನೆಯವರು ಬೇಸರಪಡಬಹುದು ಎಂದು ಕೂಡ ಅನಿಸುವುದಿಲ್ಲ. ಯಾಕೆಂದರೆ ಅವನ ಹೆಂಡತಿ, ಮಕ್ಕಳಿಗೂ ಐಶಾರಾಮದ ಜೀವನ ಒಗ್ಗಿರುತ್ತದೆ. ತನ್ನ ಅಪ್ಪನ ಮೂವತ್ತೈದು ಸಾವಿರ ರೂಪಾಯಿಯಲ್ಲಿ ಇಷ್ಟೆಲ್ಲಾ ಸಾಧ್ಯವಿಲ್ಲ ಎಂದು ಅವರಿಗೂ ಗೊತ್ತಿರುತ್ತದೆ. ಇಷ್ಟು ವೈಭೋಗ ಜೀವನ ಮಾಡಬೇಕಾದರೆ ಅಪ್ಪ ಎಲ್ಲೆಲ್ಲಿಯೋ ಮೇಯುತ್ತಾ ಬಂದಿರಬಹುದು ಎಂದು ಅವರಿಗೆ ಗ್ಯಾರಂಟಿ ಇರುತ್ತದೆ. ಆದ್ದರಿಂದ ಆ ಅಧಿಕಾರಿಗೆ ಈ ರೇಡ್ ನಿಂದ ಏನೂ ಆಗುವುದೇ ಇಲ್ಲ.
ನಾನು ನಾಲ್ಕು ವರ್ಷಗಳ ಹಿಂದೆ ಕಾರ್ಖಾನೆ ಹಾಗೂ ಬಾಯ್ಲರ್ ಇಲಾಖೆಯಲ್ಲಿದ್ದ ಒಬ್ಬ ಅಧಿಕಾರಿ ವಿಪರೀತ ಭ್ರಷ್ಟಾಚಾರ ಮಾಡುತ್ತಿದ್ದ. ಅವನ ಮಂಗಳೂರಿನ ಕೊನೆಯ ದಿನ ನಾನು ಎಸಿಬಿ ಅಧಿಕಾರಿಗಳ ಮೂಲಕ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿಸಿದ್ದೆ. ಇಲಾಖೆಯಲ್ಲಿ ಉಪನಿರ್ದೇಶಕ ಹುದ್ದೆಯಲ್ಲಿದ್ದ ಆಸಾಮಿ ಆತ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಕೇಸ್ ರಿ-ಒಪನ್ ಆಗಿದೆ. ಆ ಮನುಷ್ಯ ಯಾವತ್ತೋ ಮಂಗಳೂರಿನಿಂದ ಬೆಂಗಳೂರಿಗೆ ಕಡೆಗೆ ವರ್ಗಾವಣೆ ಆಗಿ ಹೊಸ ಸ್ಥಾನ ಗಿಟ್ಟಿಸಿ ಆಗಿದೆ. ಹೀಗೆ ಆದರೆ ಭ್ರಷ್ಟಾಚಾರವನ್ನು ಹೋಗಲಾಡಿಸುವುದು ಹೇಗೆ? ತಮ್ಮ ಮೇಲೆ ರೇಡ್ ಅಲ್ಲ ಆಕಾಶವೇ ಕಳಚಿ ಬಿದ್ದರೂ ವಾರದೊಳಗೆ ಮತ್ತೆ ಯಥಾಪ್ರಕಾರ ಉದ್ಯೋಗಕ್ಕೆ ಮರಳುತ್ತೇವೆ ಎನ್ನುವ ಧೈರ್ಯ ಇದ್ದರೆ ಯಾವ ಅಧಿಕಾರಿ ತಾನೆ ಲಂಚಕ್ಕೆ ಕೈ ಹಾಕಲು ಹೆದರುತ್ತಾನೆ. ಕೆಲವರು ರೇಡ್ ಆದ ನಂತರ ಇಂತಿಂತವರಿಗೆ ಇಷ್ಟಿಷ್ಟು ಕೊಟ್ಟು ಮತ್ತೆ ತಮ್ಮ ಹುದ್ದೆಗೆ ಮರಳುತ್ತಾರೆ. ಈ ಮೂಲಕ ಎಸಿಬಿ ಎನ್ನುವುದು ಅಧಿಕಾರದಲ್ಲಿದ್ದವರು ಹಣ ಮಾಡಲು ಭ್ರಷ್ಟ ಅಧಿಕಾರಿಗಳ ಮೇಲೆ ರೇಡ್ ಮಾಡಿಸಿ ತಮ್ಮ ಪಾಲಿನ ಮೊತ್ತವನ್ನು ಹೆಚ್ಚು ವಸೂಲಿ ಮಾಡಲು ಬಳಸುವ ಯಂತ್ರವಾಗಿದೆ ವಿನ: ಬೇರೆ ಏನೂ ಅಲ್ಲ. ಈಗ ಪಾರ್ಟಿ ವಿದ್ ಡಿಫರೆನ್ಸ್ ಸರಕಾರ ಅಧಿಕಾರದಲ್ಲಿ ಇರುವುದರಿಂದ ಮಾನ್ಯ ಯಡ್ಡಿಜಿಯವರು ಒಂದು ನಿಯಮ ಮಾಡಬೇಕು. ಯಾವ ಭ್ರಷ್ಟ ಅಧಿಕಾರಿ ಎಸಿಬಿ ಅಥವಾ ಲೋಕಾಯುಕ್ತದಿಂದ ರೇಡ್ ಗೆ ಒಳಗಾಗಿದ್ದರೆ ಆ ಪ್ರಕರಣ ಮುಗಿದು ಅಧಿಕಾರಿ ತಪ್ಪಿತಸ್ಥ ಅಲ್ಲ ಎಂದು ಮನವರಿಕೆ ಆದ ನಂತರವೇ ಅಧಿಕಾರಕ್ಕೆ ಮರಳಬೇಕು. ಇಲ್ಲದಿದ್ದರೆ ಅಮಾನತಿನಲ್ಲಿಯೇ ಇರಬೇಕು ಎಂದು ನಿಯಮ ತರಬೇಕು. ಯಾವಾಗ ಭ್ರಷ್ಟ ಅಧಿಕಾರಿಗೆ ಅಂತಹ ಹೆದರಿಕೆ ಬರುತ್ತೋ ಅಂತವರು ಎಂಜಿಲೆಲೆಗೆ ಕೈ ಹಾಕಲು ಹೋಗುವುದೇ ಇಲ್ಲ. ಇನ್ನು ಇಂತಹ ಪ್ರಕರಣಗಳು ಒಂದು ನಿರ್ದಿಷ್ಟ ಕಾಲಮಿತಿಯೊಳಗೆ ತೀರ್ಪು ಬಂದು ಮುಕ್ತಾಯ ಕಾಣಬೇಕು. ವರ್ಷಗಟ್ಟಲೆ ಎಳೆದರೆ ಆಗ ಭ್ರಷ್ಟ ಎಲ್ಲಿಯಾದರೂ ಹೊಂದಾಣಿಕೆ ಮಾಡಿಕೊಂಡು ಕಾನೂನಿನ ಬಲೆಯಿಂದ ಹೊರಗೆ ನೆಗೆದುಬಿಡುತ್ತಾರೆ. ಆದ್ದರಿಂದ ಒಂದು ತಿಂಗಳೊಳಗೆ ಇಂತಹ ವ್ಯಕ್ತಿ ಭ್ರಷ್ಟಾಚಾರದಿಂದ ಅಕ್ರಮ ಸಂಪತ್ತನ್ನು ಮಾಡಿದ್ದು ಸಾಬೀತು ಮಾಡುವುದು ದೊಡ್ಡ ಕಷ್ಟದ ವಿಷಯ ಅಲ್ಲ. ಇಂತಿಂತವರ ಸಂಬಳ ಇಷ್ಟಿರುವಾಗ ಇಷ್ಟು ಆದಾಯ ಹೇಗೆ ಎಂದು ಲೆಕ್ಕ ಹಾಕಲು ಒಬ್ಬ ಲೆಕ್ಕ ಪರಿಶೋಧಕ ಸಾಕು. ಆದರೆ ಯಾರಿಗೂ ಇಚ್ಚಾಶಕ್ತಿ ಇಲ್ಲ. ಈಗ ಯಡ್ಡಿ “ಸಿಡಿಯಿಂದ ಮಾನ ಹರಾಜಾಕುವಂತಿಲ್ಲ” ಎನ್ನುವ ನಿಯಮ ತರಲು ಹೊರಟಿದ್ದಾರೆ ಎನ್ನುವ ಸುದ್ದಿ ಇದೆ. ಇವರದ್ದೇನಿದ್ದರೂ ಇಂತಹುದೇ ಕಾನೂನು. ಭ್ರಷ್ಟಾಚಾರಿ ಅಧಿಕಾರಿಗಳು ತಾವು ದುಂಡಗಾಗುತ್ತಾರೆ, ಯಾರ ಮಗ ಯಾರು ಎಂದು ಗೊತ್ತಿರುವುದರಿಂದ ಏನೂ ತೊಂದರೆಯೂ ಇಲ್ಲ!
Leave A Reply