ಜೋಗಿ ಸಮಾಜದಿಂದ ಆಟಿಯ ವಿಶಿಷ್ಟ ಆಚರಣೆ!
ಈಗ ತುಳುನಾಡಿನಲ್ಲಿ ಆಟಿ ಸಂಭ್ರಮ. ತುಳುಭಾಷೆ, ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳನ್ನು ಮುಂದಿನ ತಲೆಮಾರಿಗೆ ಹೊತ್ತೊಯ್ಯುವ ಅನಿವಾರ್ಯತೆ ಮತ್ತು ಯುವ ಪೀಳಿಗೆಗೆ ಹಿಂದಿನ ಸಂಪ್ರದಾಯಗಳನ್ನು ತಿಳಿಸುವ ಕಾರ್ಯಕ್ರಮವಾಗಿ ಆಟಿಡೊಂಜಿ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲೆಡೆ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.
ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ವತಿಯಿಂದ ಸಮಾಜ ಬಾಂಧವರಿಗಾಗಿ ಆಯೋಜಿಸಿದ 7 ನೇ ವರ್ಷದ ಆಟಿದ ಕೂಟ ಕಾರ್ಯಕ್ರಮ ಕದ್ರಿ ಶ್ರೀ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ಕಿರಣ್ ಕುಮಾರ್ ಜೋಗಿಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನು ಓಲೆ ಬೆಲ್ಲ ಹಾಗೂ ಪಾನಕ ನೀಡಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಳಸಿಗೆಯಲ್ಲಿ ತೆನೆಭತ್ತ ತುಂಬಿ ತೆಂಗಿನ ಹೂ ಅರಳಿಸುವ ಹಾಗೂ ದ್ವೀಪ ಪ್ರಜ್ವಲಿಸುವ ಮೂಲಕ ನಡೆಸಲಾಯಿತು. ಮುಖ್ಯ ಅತಿಥಿ ಸಾಹಿತಿ ಮಹೇಂದ್ರ ನಾಥ್ ಸಾಲೆತ್ತೂರು ಆಟಿ ತಿಂಗಳ ಮಹತ್ವದ ಕುರಿತು ಹಾಗೂ ತತ್ಸಬಂಧಿ ವಿವಿಧ ಆಚರಣೆಗಳ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ಇಂತಹ ಕಾರ್ಯಕ್ರಮ ತುಳುನಾಡ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಮಾಡಬೇಕೆಂದು ಹೇಳಿದರು. ಇನ್ನೊರ್ವ ಅತಿಥಿ ಪುತ್ತೂರು ಜೋಗಿ ಸಂಘದ ಅಧ್ಯಕ್ಷ ಮೋನಪ್ಪ ಅವರು ಮಾತನಾಡುತ್ತಾ ಪುರುಷನಾಥ ಸಂಪ್ರದಾಯದ ಪ್ರಮುಖರಲ್ಲೋರ್ವರಾದ ಔರಂಗಿನಾಥರು ವನಸ್ಪತಿ ಔಷಧೀಯ ಜನಕ ಎಂದು ಬಣ್ಣಿಸಿದರಲ್ಲದೆ ಆಟಿ ತಿಂಗಳಲ್ಲಿ ಉಪಯೋಗಿಸುವ ಆಹಾರ ಪದಾರ್ಥಗಳ ಔಷಧೀಯ ಗುಣಗಳನ್ನು ವಿವರಿಸಿದರು. ಅತಿಥಿಗಳಾಗಿ ಅಖಿಲ ಕರ್ನಾಟಕ ನಾಥ ಪಂಥ ಜೋಗಿ ಸಮಾಜ ಸೇವಾ ಸಮಿತಿ ರಾಜ್ಯಾಧ್ಯಕ್ಷ ಡಾ| ಕೇಶವ ಕೋಟೇಶ್ವರ, ಉಡುಪಿ ಜಿಲ್ಲಾ ಜೋಗಿ ಸಮಾಜ ಸಂಘದ ಅಧ್ಯಕ್ಷ ರವೀಂದ್ರ ಜೋಗಿ, ಕುಂದಾಪುರ ತಾಲೂಕು ಸಮಾಜ ಸೇವಾ ಸಮಿತಿ ಅಧ್ಯಕ್ಷ ದಯಾನಂದ ಜೋಗಿ, ಉಡುಪಿ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ಲಕ್ಷ್ಮಿ ಟೀಚರ್ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಿ ಗಂಗಾಧರ್ ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಜೋಗಿ ಸಮಾಜಕ್ಕೆ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.
ಜಾನಪದ ನೃತ್ಯ, ಭಕ್ತಿ ಸಂಗೀತ, ಕಿರುನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪುತ್ತೂರಿನ ಕುಮಾರಿ ನಿಸರ್ಗ ಕಣ್ಣಿಗೆ ಬಟ್ಟೆ ಕಟ್ಟಿ ಓದುವ ಪ್ರಾತ್ಯಕ್ಷಿಕೆ ಮುಖೇನ ಸೇರಿದ ಜನ ಸಮೂಹವನ್ನು ನಿಬ್ಬೆರಗಾಗಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಅಮೀತಾ ಸಂಜೀವ್ ವೇದಿಕೆಯಲ್ಲಿದ್ದರು. ವಿಜಯಾನಂದ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಹೆಚ್.ಕೆ.ಪುರುಷೋತ್ತಮ್ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಡಾ| ಪಿ ಕೇಶವನಾಥ್ ವಂದಿಸಿದರು. ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಸ್ವಜಾತಿ ಭಾಂದವರು ಆಗಮಿಸಿದ್ದರು. ಸಮಾಜ ಭಾಂದವರು ಕೊಡಮಾಡಿದ ತುಳುನಾಡಿನ ಸಾಂಪ್ರದಾಯಿಕ ಭಕ್ಷ್ಯಗಳಾದ ಗಾರಿಗೆ, ಪತ್ರೊಡೆ, ತಜಂಕು ಸುಕ್ಕ, ಕಣಿಲೆ-ಹೆಸರು ಗಸಿ, ಮರುವಾಯಿ ಪುಂಡಿ, ಕೋಳಿಸುಕ್ಕ, ಬೂತಾಯಿ ಪುಳಿಮುಂಚಿ, ಸಾನರ್ೆದಡ್ಡೆ, ಸೇಮಿಗೆ ಹಾಲು, ಮೆಂತೆ ಗಂಜಿ ಮತ್ತು ವಿವಿಧ ಬಗೆಯ ಚಟ್ನಿಗಳನ್ನು ಆಸ್ವಾದಿಸುವ ಅವಕಾಶವನ್ನು ಕಾರ್ಯಕ್ರಮದಲ್ಲಿ ಊಟದೊಂದಿಗೆ ವಿತರಿಸಲಾಯಿತು.
Leave A Reply