ಹಾವು-ಮುಗುಂಸಿಯಂತಿದ್ದ ಸಹೋದರರು ಒಟ್ಟಾಗಲು ಆ ಸಿಡಿಯೇ ಕಾರಣವಾಯಿತು!!
Posted On March 20, 2021
ಜಾರಕಿಹೊಳಿ ಕುಟುಂಬದ ಒಂದು ವೈಶಿಷ್ಯ ಏನೆಂದರೆ ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ, ಅವರ ಕುಟುಂಬದ ಒಬ್ಬರಾದರೂ ಸದಸ್ಯರು ಆಡಳಿತ ಪಕ್ಷದಲ್ಲಿ ಇರುತ್ತಾರೆ ಮತ್ತು ಹೆಚ್ಚಿನ ಸಲ ಸಚಿವರೂ ಆಗಿರುತ್ತಾರೆ. ಕಾಂಗ್ರೆಸ್ ಇದ್ದಾಗ ಸತೀಶ್ ಜಾರಕಿಹೊಳಿ ಸಚಿವರಾಗಿದ್ದರು. ರಮೇಶ್ ಜಾರಕಿಹೊಳಿ ಕಾಂಗ್ರೆಸ್ಸಿನಿಂದ ಹೊರಗೆ ಬಂದದ್ದು ಮಾತ್ರವಲ್ಲ, ತಮ್ಮೊಂದಿಗೆ ಒಂದಿಷ್ಟು ಶಾಸಕರನ್ನು ಕರೆದುಕೊಂಡು ಬಂದು ಭಾರತೀಯ ಜನತಾ ಪಾರ್ಟಿಯ ಸರಕಾರ ರಚಿಸಿದರು ಮತ್ತು ತಾವು ಸಚಿವರೂ ಆದರು. ಅವರು ಬರುವ ತನಕ ಬಿಜೆಪಿಯಲ್ಲಿ ಬಾಲಚಂದ್ರ ಜಾರಕಿಹೊಳಿ ಇದ್ದರು. ಈಗ ಇಬ್ಬರು ಸಹೋದರರು ಬಿಜೆಪಿಯಲ್ಲಿ ಇದ್ದಾರೆ. ಕೊನೆಯ ಸಹೋದರ ಲಕನ್ ಜಾರಕಿಹೊಳಿ ಮತ್ತು ಸತೀಶ್ ಕಾಂಗ್ರೆಸ್ಸಿನಲ್ಲಿದ್ದಾರೆ. ಇವರಲ್ಲಿ ಸತೀಶ್ ಹಾಗೂ ರಮೇಶ್ ಮಹತ್ವಾಕಾಂಕ್ಷಿಗಳು. ಅಧಿಕಾರದಲ್ಲಿರುವ ಪಕ್ಷದಲ್ಲಿ ಸಚಿವರಾಗದೇ ಇದ್ದರೆ ಇವರಿಗೆ ಸಮಾಧಾನವೇ ಇಲ್ಲ. ಸತೀಶ್ ಈಗ ಕಾಂಗ್ರೆಸ್ಸಿನ ಕಾರ್ಯಾಧ್ಯಕ್ಷರೂ ಆಗಿದ್ದಾರೆ. ಸತೀಶ್ ಅವರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಅಧಿಕಾರದಲ್ಲಿ ಇದ್ದಾಗ ಸಚಿವರನ್ನಾಗಿ ಮಾಡಲಾಗಿತ್ತು. ಇದರಿಂದ ಬುಸುಗುಡುತ್ತಿದ್ದ ರಮೇಶ್, ತಮ್ಮ ಸತೀಶ್ ಜೊತೆ ಹಾವು-ಮುಂಗುಸಿಯಂತೆ ಕಚ್ಚಾಡುವ ವಾತಾವರಣ ಸೃಷ್ಟಿಸುತ್ತಿದ್ದರು. ಇಬ್ಬರಿಗೂ ಜನ್ಮಜನ್ಮಾಂತರದ ವೈರುತ್ವ ಇದೆಯೇನೋ ಎನ್ನುವಂತೆ ಕಾಣುತ್ತಿತ್ತು. ಆದರೆ ರಕ್ತ ನೀರಿಗಿಂತ ದಪ್ಪ ಎನ್ನುವ ಮಾತು ಇಂಗ್ಲೀಷಿನಲ್ಲಿದೆ. ಈಗ ಅದು ಮತ್ತೊಮ್ಮೆ ಸಾಬೀತಾಗಿದೆ.
ರಮೇಶ್ ಸಿಡಿ ಕೇಸಿನಲ್ಲಿ ತಗುಲಾಕಿಕೊಂಡ ನಂತರ ಬಾಲಚಂದ್ರ ಹೇಗೂ ಸಂಪೂರ್ಣವಾಗಿ ಅಣ್ಣನ ಪರವಾಗಿ ನಿಂತು ಯುದ್ಧ ಘೋಷಿಸಿಬಿಟ್ಟಿದ್ದರು. ಇದರ ಜೊತೆ ಸತೀಶ್ ಕೂಡ ಇದು ತಮ್ಮ ಮನೆತನಕ್ಕೆ ಅಂಟಿದ ಕಳಂಕ. ಇದರಲ್ಲಿ ಅಣ್ಣನನ್ನು ಸಿಲುಕಿಸಲಾಗಿದೆ. ರಮೇಶ್ ಅವರ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಹಾಗೆ ಬಿಡಲಾಗುವುದಿಲ್ಲ. ನಾವು ಅಷ್ಟೂ ತಂತ್ರ ಮಾಡಿದವರನ್ನು ಬಯಲಿಗೆ ಎಳೆಯಲು ವೈಯಕ್ತಿಕ ನೆಲೆಯಲ್ಲಿಯೂ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಇಲ್ಲಿ ಸತೀಶ್ ತಮ್ಮ ಒಡಹುಟ್ಟಿದವನ ಪರ ಕೆಲಸ ಮಾಡಿದಷ್ಟು ಅದು ಅವರದ್ದೇ ಪಕ್ಷದ ಮಹಾನ್ ನಾಯಕರ ಬುಡಕ್ಕೂ ಬಂದು ಬಿಡಬಹುದು. ಅವರದ್ದೇ ಪಕ್ಷದ ಇಮೇಜಿಗೂ ದಕ್ಕೆ ಮಾಡಬಹುದು. ಅವರಿಗೆ ಪಕ್ಷದಲ್ಲಿ ಒತ್ತಡ ಬರಬಹುದು. ಆದರೆ ಜಾರಕಿಹೊಳಿ ಕುಟುಂಬಕ್ಕೆ ಪಕ್ಷ, ಅಧಿಕಾರಕ್ಕಿಂತ ಈ ಸಂದರ್ಭದಲ್ಲಿ ಸಹೋದರ ಭಾಂದವ್ಯ ಒಟ್ಟು ಮಾಡಿದೆ. ಇದನ್ನೇ ಒಡಹುಟ್ಟಿದವರು ಅನ್ನುವುದು. ಅನಿಲ್ ಅಂಬಾನಿ ಉದ್ಯಮದಲ್ಲಿ ಸೋತಾಗ ಅವರು ಇನ್ನೇನೂ ಕಾನೂನಿನ ಕುಣಿಕೆಗೆ ಸಿಲುಕುತ್ತಾರೆ ಎಂದಾಗ ಮುಕೇಶ್ ಅಂಬಾನಿ ಬಂದು ಆ ಹೊತ್ತಿನ ಅಷ್ಟು ಸಾಲವನ್ನು ತೀರಿಸಿ ಬಂಧನವಾಗುವುದನ್ನು ತಪ್ಪಿಸಿದ್ದರು. ಇದನ್ನು ಸಿನೆಮಾದಲ್ಲಿಯೂ ನೋಡಿದ್ದೇವೆ. ಶಂಕರನಾಗ್ ಅವರನ್ನು ಇವತ್ತಿಗೂ ನೆನೆದರೆ ಅನಂತನಾಗ್ ಕಣ್ಣಲ್ಲಿ ನೀರು ಬರುತ್ತದೆ. ಆದ್ರೆ ರಾಜಕೀಯ ರಂಗ ದಪ್ಪ ಚರ್ಮದವರಿಗೆ ಮಾತ್ರ ಅಂದುಕೊಂಡಿದ್ದೇವೆ. ಇಲ್ಲಿ ಮಾನವೀಯ ಸಂಬಂಧ, ಸಹೋದರತ್ವ ಎಲ್ಲವೂ ಅಧಿಕಾರದ ಎದುರು ಗೌಣ ಎಂದು ಅಂದುಕೊಳ್ಳುವ ಹೊತ್ತಿಗೆ ಜಾರಕಿಹೊಳಿ ಕುಟುಂಬ ಅನೈತಿಕತೆ ಪರಾಕಾಷ್ಟೆಯ ಪ್ರಕರಣದಲ್ಲಿ ತಮ್ಮ ಸಹೋದರನ ಜೊತೆಗೆ ನಿಂತಿದೆ. ಒಂದು ವೇಳೆ ಭವಿಷ್ಯದಲ್ಲಿ ತಮ್ಮ ಸಹೋದರ ರಮೇಶ್ ಅವರನ್ನು ಮುರಾಮೋಸದ ಈ ಯುದ್ಧದಲ್ಲಿ ಸಿಲುಕಿ ಹಾಕಿದ್ದು ತಮ್ಮ ಪಕ್ಷದ ಒಬ್ಬ ಮಹಾನ್ ನಾಯಕ ಎಂದು ಕಾಂಗ್ರೆಸ್ಸಿನಲ್ಲಿರುವ ಸತೀಶ್ ಗೆ ಗೊತ್ತಾದರೆ ಅವರು ಆ ನಾಯಕನ ವಿರುದ್ಧ ತೊಡೆ ತಟ್ಟಿ ನಿಲ್ಲಲು ಕೂಡ ಹಿಂಜರಿಯಲಾರರು. ಹಾಗೆ ಈ ಅಣ್ಣತಮ್ಮಂದಿರು ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಒಬ್ಬಳು ಯುವತಿ ಬರಬೇಕಾಯಿತು ಎನ್ನುವುದೇ ಸದ್ಯದ ಕುತೂಹಲ. ಆ ಯುವತಿಯ ಮನೆಯ ಮಂಚದ ಕೆಳಗೆ ಒಂಭತ್ತೂವರೆ ಲಕ್ಷ ರೂಪಾಯಿ ಕ್ಯಾಶ್ ಸಿಕ್ಕಿದೆ ಎನ್ನುವ ಮಾಹಿತಿ ಇದೆ. ಆದರೆ ಅವಳು ಇನ್ನೂ ಪತ್ತೆಯಾಗಿಲ್ಲ. ಅದರೊಂದಿಗೆ ನಾವು ಸತ್ಯ ಹರಿಶ್ಚಂದ್ರನ ಚಿಕ್ಕಪ್ಪನ ಮಕ್ಕಳು, ನಾವು ಸುಳ್ಳು ಹೇಳುವುದಿಲ್ಲ ಎಂದು ವಿಡಿಯೋ ಮಾಡಿ ಕಳುಹಿಸಿರುವ ನರೇಶ್ ಗೌಡ ಕೆಲವೇ ದಿನಗಳ ಮೊದಲು ಹದಿನೆಂಟು ಲಕ್ಷ ನಗದು ಕೊಟ್ಟು ಬಂಗಾರ ಖರೀದಿಸಿದ್ದಾರೆ. 44 ಲಕ್ಷ ಕ್ಯಾಶ್ ಕೊಟ್ಟು ಕಾರ್ ಬುಕ್ ಮಾಡಲು ಹೋಗಿದ್ದಾರೆ. ಮುಂಗಡ ಹಣವನ್ನು ಈ ಪ್ರಮಾಣದಲ್ಲಿ ನಗದು ರೂಪದಲ್ಲಿ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಶೋರೂಂನವರು ಹೇಳಿದಾಗ ಅವರೊಂದಿಗೆ ಇದೇ ನರೇಶ್ ಗೌಡ ಜಗಳಕ್ಕೆ ಇಳಿದಿದ್ದಾನೆ. ಸಿಡಿಯ ಯುವತಿಯನ್ನು ಒಂದು ನ್ಯೂಸ್ ವಿಚಾರದಲ್ಲಿ ಮಾತ್ರ ಫೋನಿನಲ್ಲಿ ಸಂಪರ್ಕದಲ್ಲಿ ಇಟ್ಟುಕೊಂಡಿದ್ದೆ ಎಂದು ಹೇಳುವ ಅಸಾಮಿ ಅವಳೇ ಕರೆಯಲ್ವಾ ಎಂದದ್ದಕ್ಕೆ ಮಗಳ ಭರ್ತಡೇಗೆ ಕರೆದೆ ಎಂದು ಹೇಳುತ್ತಾನೆ. ಒಬ್ಬ ವರದಿಗಾರನ ಮಗಳ ಭರ್ತಡೇಗೆ ಕೆಪಿಸಿಸಿ ರಾಜ್ಯಾಧ್ಯಕ್ಷರೇ ಬಂದು ಹೋಗುತ್ತಾರೆ. ಆ ಯುವತಿ ಮತ್ತು ನರೇಶ್ ಗೌಡ ರಾಜ್ಯಾಧ್ಯಕ್ಷರೊಂದಿಗೆ ಒಟ್ಟಿಗೆ ಫೋಟೋ ತೆಗೆಯುತ್ತಾರೆ. ನಂತರ ವಿಡಿಯೋದಲ್ಲಿ ಈ ನರೇಶ್ ಗೌಡ ಐದು ಕೋಟಿಯಲ್ಲ, ಐದು ರೂಪಾಯಿ ಕೂಡ ಪಡೆದಿಲ್ಲ ಎನ್ನುತ್ತಾನೆ. ಇತ್ತೀಚೆಗೆ ಟಿವಿ ಧಾರಾವಾಹಿಗಳಿಗಿಂತ ಈ ನ್ಯೂಸ್ ಚಾನೆಲ್ ಗಳು ಹೆಚ್ಚು ರೋಚಕ ವಿಷಯಗಳನ್ನು ಕೊಡುತ್ತವೆಯೋ ಎಂದು ಅನಿಸುವ ಮಟ್ಟಿಗೆ ಇಂತಹ ಪ್ರಕರಣಗಳು ಬಣ್ಣ ಪಡೆದುಕೊಳ್ಳುತ್ತಿವೆ. ಈ ಸಿಡಿಯ ಹಿಂದಿರುವ ನೈಜ ತಲೆಗಳು ಸಿಕ್ಕಿದರೆ ಅವರ ಕುಟುಂಬಗಳು ಒಡೆಯುವುದು ಗ್ಯಾರಂಟಿ. ಆದ್ರೆ ಸಿಡಿಯ ವಿಷಯದಲ್ಲಿ ಒಂದು ಪ್ರಬಲ ರಾಜಕೀಯ ಕುಟುಂಬ ಒಟ್ಟಾಗಿರುವುದು ಮಾತ್ರ ನಿಜವಾದ ರೋಚಕತೆ!
- Advertisement -
Leave A Reply