ಬಹುಶ; ಮಿಥುನ್ ರೈ ಸುದ್ದಿಗೋಷ್ಟಿಯಲ್ಲಿ ಒಂದೋ ಪೊಳ್ಳು ಬೆದರಿಕೆ ನೀಡಿರಬೇಕು ಅಥವಾ ಅವರು ತಾವು ಹೇಳಿದಂತೆ ಪಾಲಿಕೆಯ ಸದಸ್ಯರು ನಡೆಯುತ್ತಾರೆ ಎನ್ನುವ ಅತೀ ವಿಶ್ವಾಸ ಇರಬೇಕು. ಎರಡೂ ಅಲ್ಲದಿದ್ದರೆ ಮುಂದಿನ ಕೌನ್ಸಿಲ್ ಶುರುವಾಗುವ ಹೊತ್ತಿಗೆ ಪಾಲಿಕೆಯ 14 ಜನ ಕಾರ್ಪೋರೇಟರ್ ಗಳು ತಮ್ಮ ರಾಜೀನಾಮೆ ಪತ್ರ ಬಿಸಾಡಿ ಹೋಗಬೇಕು. ಆಗುತ್ತಾ, ಸಾಧ್ಯವೇ ಇಲ್ಲ. ಹಾಗಾದರೆ ತಮ್ಮ ರಾಜಕೀಯ ಕಾನೂನು ಸಲಹೆಗಾರ ಎಸಿ ವಿನಯರಾಜ್ ಗಾಗಿ ಮಿಥುನ್ ರೈ ಎಂತಹ ಅಸಂಬದ್ಧ ಹೇಳಿಕೆ ನೀಡಬೇಕಾಯಿತಲ್ಲ ಎನ್ನುವುದೇ ಸದ್ಯದ ಸೋಜಿಗ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಕಾಂಗ್ರೆಸ್ಸಿನಿಂದ 14 ಜನ ಮಾತ್ರ ಆಯ್ಕೆಯಾಗಿದ್ದಾರೆ. ಒಟ್ಟು 60 ಮನಪಾ ಸದಸ್ಯರ ಪೈಕಿ ಬಿಜೆಪಿ 44 ಸೀಟುಗಳನ್ನು ಗೆದ್ದಿದೆ. ಎರಡನೇ ಅವಧಿಗೆ ಮೇಯರ್ ಆಗಿ ಬಿಜೆಪಿಯ ಪಾಲಿಕೆಯ ಅತ್ಯಂತ ಹಿರಿಯ ಸದಸ್ಯರಾದ ಪ್ರೇಮಾನಂದ ಶೆಟ್ಟಿ ಆಯ್ಕೆಯಾಗಿದ್ದಾರೆ. ಒಂದು ಸದನದಲ್ಲಿ ಆಡಳಿತ ಪಕ್ಷ ಹೇಗೋ ಹಾಗೆ ವಿಪಕ್ಷ ಕೂಡ ಇರಬೇಕಾಗುತ್ತದೆ. ಆ ವಿಪಕ್ಷ ಒಟ್ಟು ಸದನದ ಮೂರನೇ ಒಂದರಷ್ಟು ಸದಸ್ಯತ್ವವನ್ನು ಹೊಂದಿರಬೇಕು. ಆದರೆ ಕಾಂಗ್ರೆಸ್ಸಿಗೆ ಅಷ್ಟು ಸದಸ್ಯರು ಇಲ್ಲ. ಹಾಗಾದರೆ ಅವರಿಗೆ ವಿಪಕ್ಷ ಸ್ಥಾನ ಇಲ್ವಾ? ಅದು ಮೇಯರ್ ಅವರ ವಿವೇಚನೆಗೆ ಬಿಟ್ಟಿದ್ದು. ಕೇಂದ್ರದಲ್ಲಿ ಹೇಗೆ ನರೇಂದ್ರ ಮೋದಿಯವರು ಅಧಿಕೃತ ವಿಪಕ್ಷ ಎಂದು ಯಾವುದೂ ಇಲ್ಲವಾದರೂ ಕಾಂಗ್ರೆಸ್ಸಿಗೆ ಅವಕಾಶ ಕೊಟ್ಟಿದ್ದಾರಲ್ಲವೇ, ಹಾಗೆ? ಇಲ್ಲಿ ಕೂಡ ಮೊದಲನೇ ಅವಧಿಗೆ ಕಾಂಗ್ರೆಸ್ಸಿನಿಂದ ರವೂಫ್ ಅವರು ಪಾಲಿಕೆಯ ವಿಪಕ್ಷ ನಾಯಕರಾಗಿದ್ದರು. ಆಗ ಇಲ್ಲದ ವಿವಾದ ಈಗ ಯಾಕೆ ಎಂದು ನಿಮಗೆ ಅನಿಸಬಹುದು. ವಿಚಾರ ಏನೆಂದರೆ ಒಬ್ಬ ವಿಪಕ್ಷ ನಾಯಕ ಆಗಬೇಕಾದರೆ ಆತನ ಪಕ್ಷದ ಎಲ್ಲಾ ಸದಸ್ಯರು ತಮ್ಮ ನಾಯಕನನ್ನಾಗಿ ಇವರನ್ನು ಆಯ್ಕೆ ಮಾಡಿದ್ದೇವೆ ಎಂದು ಮೇಯರ್ ಅವರಿಗೆ ಲಿಖಿತ ಮನವಿ ಮಾಡಬೇಕು. ಆದರೆ ಇಲ್ಲಿ ಆಶ್ಚರ್ಯ ಎಂದರೆ 14 ರಲ್ಲಿ 9 ಜನ ಕಾಂಗ್ರೆಸ್ಸ್ ಸದಸ್ಯರು ವಿನಯರಾಜ್ ಅವರನ್ನು ತಮ್ಮ ನಾಯಕನನ್ನಾಗಿ ಒಪ್ಪಲು ಸಿದ್ಧರಿಲ್ಲ. ರವೂಫ್ ಮೊದಲನೇ ಅವಧಿಗೆ ವಿಪಕ್ಷ ನಾಯಕರಾದಾಗ ಅಂತಹ ವಿವಾದವೇ ಆಗಲಿಲ್ಲ. ಈಗ ಹಾಗೆ ಅಲ್ಲ. ಆದ್ದರಿಂದ ಅವರು ಮೇಯರ್ ಅವರಿಗೆ ಮನವಿ ಮಾಡಲು ಮುಂದೆ ಬರಲು ಸಾಧ್ಯವೇ ಇರಲಿಲ್ಲ. ಯಾವಾಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಅವರಿಗೆ ಇದು ಕಗ್ಗಂಟಾಗಿ ಹೋಗಲಿದೆ ಎಂದು ಅನಿಸಿತೋ ಅವರು ತಮ್ಮ ಕಡೆಯಿಂದ ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದು ವಿನಯರಾಜ್ ಅವರಿಗೆ ವಿಪಕ್ಷ ಸ್ಥಾನ ನೀಡಿ ಎಂದು ವಿನಂತಿಸಿದರು. ಅಲ್ಲಿಗೆ ವಿನಯರಾಜ್ ತಾವು ವಿಪಕ್ಷ ನಾಯಕ ಆದೆ ಎಂದು ಸಂಭ್ರಮಿಸಲು ಶುರು ಮಾಡಿದರು. ವಿಪಕ್ಷ ನಾಯಕನ ಚೇಂಬರಿಗೆ ಹೋಗಿ ಆ ಕುರ್ಚಿಯಲ್ಲಿ ಕುಳಿತು ತಮ್ಮದೇ ಒರಗೆಯ ಕೆಲವರಿಂದ ಬೊಕ್ಕೆ ತೆಗೆದುಕೊಂಡು ಫೋಟೋ ತೆಗೆದು ಮಾಧ್ಯಮಕ್ಕೆ ಕಳುಹಿಸಿಕೊಟ್ಟರು. ಆದರೆ ವಿನಯರಾಜ್ ಅವರಿಗೆ ಗೊತ್ತಿಲ್ಲದೆ ಇದ್ದ ವಿಷಯ ಏನೆಂದರೆ ಮೇಯರ್ ಅವರಿಗೆ ಇರುವ ವಿವೇಚನಾಧಿಕಾರ ಪಾಲಿಕೆಯ ಆಯುಕ್ತರಿಗೆ ಇರುವುದಿಲ್ಲ. ಪ್ರೇಮಾನಂದ ಶೆಟ್ಟಿಯವರಿಗೆ ಕೊಟ್ಟರೆ ಕನಿಷ್ಟ ವಿವಾದ ಆಗದೇ ವಿಪಕ್ಷ ನಾಯಕರಾಗುತ್ತಿದ್ದರೋ ಏನೋ ಆದರೆ ಅತೀ ಬುದ್ಧಿವಂತಿಕೆ ಪ್ರದರ್ಶಿಸಿ ಆಯುಕ್ತರಿಗೆ ಕೊಟ್ಟ ಕಾರಣ ವಿವಾದ ತಾನೇ ತಾನಾಗಿ ಜನ್ಮವೆತ್ತಿತ್ತು. ಆಯುಕ್ತರು ಕಾನೂನಿನ ಆಯಾಮದಲ್ಲಿ ನೋಡಿದರು. ಆದ್ದರಿಂದ ಈಗ ವಿಪಕ್ಷ ಸ್ಥಾನ ಇನ್ನು ಅಧಿಕೃತವಾಗಿಲ್ಲ. ಆದರೆ ಎಸಿ ವಿನಯರಾಜ್ ಹೇಳುವ ಪ್ರಕಾರ ನಾನು ಕಳೆದ ಬಾರಿ ಸ್ಮಾರ್ಟ್ ಸಿಟಿ ಮಂಡಳಿಯಲ್ಲಿ ಸೇರಿಸಿಕೊಳ್ಳಿ ಎಂದು ಮೇಯರ್ ಅವರಲ್ಲಿ ಕೇಳಿಕೊಂಡಾಗ ಇವರು ಒಪ್ಪಿರಲಿಲ್ಲ. ಆದ್ದರಿಂದ ಈ ಬಾರಿ ಮೇಯರ್ ಅವರಿಗೆ ಕೇಳುವ ಬದಲಿಗೆ ಆಯುಕ್ತರನ್ನೇ ಕೇಳಿದ್ದೇವೆ ಎನ್ನುತ್ತಾರೆ. ಇಲ್ಲಿ ಅವರು ಸ್ಮಾರ್ಟ್ ಸಿಟಿ ಮಂಡಳಿಯ ವಿಷಯ ಎತ್ತಿರುವುದರಿಂದ ನಮ್ಮ ಜಾಗೃತ ಓದುಗರಿಗೆ ಒಂದು ವಿಷಯ ಹೇಳಲೇಬೇಕು. ಸ್ಮಾರ್ಟ್ ಸಿಟಿ ಮಂಡಳಿಯಲ್ಲಿ ಸೇರಿಸಿಕೊಳ್ಳಿ ಎಂದು ವಿನಂತಿಸಿಕೊಂಡರೂ ಕಾನೂನು ಪ್ರಕಾರ ಇಂತವರನ್ನೇ ಸೇರಿಸಿಕೊಳ್ಳಲೇಬೇಕು ಎಂದು ಯಾವುದೇ ಬೈಲಾ ಇಲ್ಲ. ಇವರಿಗಿಂತ ಹೆಚ್ಚು ಹಿರಿಯ ಸದಸ್ಯರಾದ ಭಾಸ್ಕರ್ ಮೊಯಿಲಿ ಅವರನ್ನು ಕಳೆದ ಬಾರಿ ಸೇರಿಸಿಕೊಳ್ಳಲಾಗಿತ್ತು. ಅದನ್ನು ಇಟ್ಟು ವಿನಯರಾಜ್ ಈ ಬಾರಿ ಬೇರೆ ಆಟ ಆಡಲು ಹೊರಟ್ಟಿದ್ದರು. ಆದರೆ ಅದು ಸಫಲವಾಗಲಿಲ್ಲ ಎಂದು ಮೊದಲನೇ ಕೌನ್ಸಿಲ್ ನಲ್ಲಿ ಗೊತ್ತಾಗಿದೆ. ಆದರೆ ತಮಗಾದ ಅವಮಾನವನ್ನು ಅವರು ಹಾಗೆ ಬಿಡಲು ತಯಾರಿಲ್ಲ. ಯಾಕೆಂದರೆ ಇದು ಪಾಲಿಕೆಯ ವಿಪಕ್ಷ ನಾಯಕ ಸ್ಥಾನ ಆದರೂ ಅವರು ಆಗಲೇ ವಿಧಾನಸಭಾ ವಿಪಕ್ಷ ನಾಯಕನ ಮೈಲೇಜ್ ಪಡೆದುಕೊಂಡಾಗಿತ್ತು. ತಮ್ಮ ಚರ್ಚಿನ ಧರ್ಮಗುರುಗಳೊಂದಿಗೆ ನಿಂತು ಪೋಸ್ ಕೊಟ್ಟಾಗಿತ್ತು. ಇದೆಲ್ಲ ಆದ ನಂತರ ಅವರಿಗೆ ನೀವು ವಿಪಕ್ಷ ನಾಯಕನೇ ಅಲ್ಲ ಎಂದು ಹೇಳಿದರೆ ಬಾಕಿ ಉಳಿದಿರುವ 13 ಸದಸ್ಯರ ಎದುರು ಮರ್ಯಾದೆ ಉಳಿಯುತ್ತದೆಯಾ? ಮೊದಲೇ ಎಸಿ ವಿನಯರಾಜ್ ಬೇಡಾ ಎಂದೇ 9 ಜನ ಅಪಸ್ವರ ಎತ್ತಿದ್ದಾರೆ. ಕಾಡಿಬೇಡಿ ಪಡೆದ ಸ್ಥಾನ ಮತ್ತು ಮಾನ ಉಳಿಯುತ್ತಾ? ಅದರೊಂದಿಗೆ ಇನ್ನೊಂದು ದೊಡ್ಡ ಹೊಡೆತ ಏನೆಂದರೆ ಮುಂದಿನ ಕೌನ್ಸಿಲ್ ಒಳಗೆ ಎಸಿ ವಿನಯರಾಜ್ ಅವರಿಗೆ ವಿಪಕ್ಷ ಸ್ಥಾನ ಕೊಡದಿದ್ದರೆ ಉಳಿದವರು ರಾಜೀನಾಮೆ ಕೊಡುತ್ತಾರೆ ಎಂದು ಇನ್ನು ಯಾವುದೇ ಚುನಾವಣೆ ಗೆಲ್ಲದ ಮಿಥುನ್ ರೈ ಹೇಳಿರುವುದು. ಇದನ್ನು ಹೇಳುವ ಮೊದಲು ಮಿಥುನ್ ರೈ ಅವರದ್ದೇ ಕಾರ್ಪೋರೇಟರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತಲ್ಲವೇ? ಪಾಪ, ಅವರಲ್ಲಿ ಹೆಚ್ಚಿನ ಕಾಂಗ್ರೆಸ್ ಕಾರ್ಪೋರೇಟರ್ ಗಳಿಗೆ ಅದೇ ಉದ್ಯೋಗ. ಅದನ್ನು ಮಿಥುನ್ ರೈ ಕೊಡ್ತಾರಾ? ಪಾಲಿಕೆ ಅಂಗಣ ಸಣ್ಣಗೆ ನಗುತ್ತಿದೆ!
Leave A Reply