ರಥಬೀದಿಯಲ್ಲಿ ನೀರು ನಿಂತದ್ದಕ್ಕೆ ಅಪಪ್ರಚಾರ ಮಾಡುವವರು ಇದನ್ನು ಓದಿ!!
ಕರಾವಳಿಯಲ್ಲಿ ವಿಪರೀತ ಎನ್ನುವಂತಹ ಮಳೆ ಬಂದು ಸಮುದ್ರ ತೀರದಲ್ಲಿ ಆದ ಅವಾಂತರ ನಮಗೆಲ್ಲಾ ಗೊತ್ತೆ ಇದೆ. ಅಂತಹ ರಣಭೀಕರ ಮಳೆಯ ಕಾರಣದಿಂದ ಮಂಗಳೂರಿನ ರಥಬೀದಿಯಲ್ಲಿ ಕೂಡ ಅರ್ಧ ಗಂಟೆಯಷ್ಟು ಸಮಯ ಸ್ವಲ್ಪ ನೀರು ನಿಂತಿತು. ಅಷ್ಟಕ್ಕೆ ಕಾಂಗ್ರೆಸ್ಸಿಗರು ತಮ್ಮ ಅಸ್ತಿತ್ವವನ್ನು ತೋರಿಸುವ ಭರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿ ಟೀಕೆ ಮಾಡಿದರು. ಕೆಲವರು ಸಿಕ್ಕಿದ್ದೇ ಚಾನ್ಸ್ ಎನ್ನುವಂತೆ ತಮ್ಮ ತೆವಲು ತೀರಿಸಿಕೊಂಡುಬಿಟ್ಟರು. ಇವತ್ತು ನಾನು ಅಲ್ಲಿ ನೈಜವಾಗಿ ಆದ ಘಟನೆಯ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದೇನೆ. ಬೇಕಾದರೆ ಹಂತಹಂತವಾಗಿ ಬರೋಣ. ಮೊದಲನೇಯದಾಗಿ ಫೋಟೋಗಳೇ ಉತ್ತರ ನೀಡುತ್ತವೆ. ಯಾಕೆಂದರೆ ಒಂದು ಫೋಟೋ ಸಾವಿರ ಶಬ್ದಗಳಿಗೆ ಸಮ ಎನ್ನುತ್ತಾರೆ. ರಥಬೀದಿ ರಸ್ತೆಯಲ್ಲಿ ನೀರು ಹರಿದುಹೋಗಲು ಹಾಕಿರುವ ಜಾಲಿಗಳನ್ನು ಗಮನಿಸಿ. ಅದರಲ್ಲಿ ಸಿಲುಕಿರುವ ಮರಗಳ ಎಲೆಗಳನ್ನು ಗಮನಿಸಿ. ಅದನ್ನು ತೆಗೆದು ಪಕ್ಕದಲ್ಲಿ ಹಾಕಿದ ನಂತರವೇ ನೀರು ಸರಾಗವಾಗಿ ಹೋಗಲು ಸಾಧ್ಯವಾಗಿರುವುದು. ಇನ್ನು ಈ ಪ್ರದೇಶದಲ್ಲಿ ಕಾಮಗಾರಿಗಳು ಸಂಪೂರ್ಣ ಮುಗಿದಿಲ್ಲ. ಅಗೆದು ಹಾಕಿದ ಮಣ್ಣು, ಕಲ್ಲು ಹಾಗೆ ಇದೆ. ಇನ್ನು ಸೂಚನಾ ಫಲಕ ಹಾಕಲು ಅಗೆದ ಹೊಂಡ ಹಾಗೆ ಇತ್ತು. ಇನ್ನು ಮೂರು ರಸ್ತೆಗಳ ನೀರು ಬಂದು ಇಲ್ಲಿ ಸೇರುತ್ತದೆ. ಒಂದು ಗಣಪತಿ ಹೈಸ್ಕೂಲ್ ರಸ್ತೆಯ ನೀರು, ರಾಮಮಂದಿರ ರಸ್ತೆಯ ಮಳೆಯ ನೀರು, ದೇವಸ್ಥಾನದ ಎದುರಿನ ನೀರು ಎಲ್ಲವೂ ಇಲ್ಲಿ ಬರುತ್ತದೆ. ಯಾಕೆಂದರೆ ಅಕ್ಕಪಕ್ಕದ ರಸ್ತೆಗಳಲ್ಲಿ ಇನ್ನು ಕೂಡ ಚರಂಡಿಯ ಕೆಲಸ ಆಗಿಲ್ಲ. ಆ ರಸ್ತೆಗಳ ಮಣ್ಣು, ಅಕ್ಕಪಕ್ಕದ ವಿಶಾಲ ಮರಗಳ ಎಲೆಗಳು ಸೇರಿ ನೀರಿನ ದಾರಿಯನ್ನು ಬಂದ್ ಮಾಡಿದರೆ ಸ್ವಲ್ಪ ಹೊತ್ತು ಯಾವುದೇ ರಸ್ತೆಯಾಗಲಿ ನೀರು ಬ್ಲಾಕ್ ಆಗಲೇಬೇಕು. ಇದಕ್ಕೆ ಕಾರಣ ಯಾರು?
ಸಂಶಯವೇ ಇಲ್ಲ, ಮಂಗಳೂರು ಮಹಾನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡುತ್ತಿರುವ ವಿವಿಧ ಇಲಾಖೆಗಳ ನಡುವೆ ಪರಸ್ಪರ ಸಂವಹನ ಇಲ್ಲದೆ ಇರುವುದು. ಮೊದಲಿಗೆ ಈ ಕೆಲಸ ಯಾವತ್ತೇ ಆರಂಭವಾಗಬೇಕಿತ್ತು. ನರೇಂದ್ರ ಮೋದಿಯವರ ಕನಸಿನ ಕೂಸು ಸ್ಮಾರ್ಟ್ ಸಿಟಿ ಯೋಜನೆಯ ಅನುದಾನ ಮಂಗಳೂರಿಗೆ ಬಂದಾಗ ಪಾಲಿಕೆಯಲ್ಲಿ ಕಾಂಗ್ರೆಸ್ ಸರಕಾರ ಇತ್ತು. ಇಲ್ಲಿ ಕಾಂಗ್ರೆಸ್ ಶಾಸಕರು ಇದ್ದರು. ಆಗಲೇ ಈ ಅನುದಾನಕ್ಕೆ ಸೂಕ್ತ ಕಾಯಕಲ್ಪ ಕಲ್ಪಿಸಿ ಕಾಮಗಾರಿ ಶುರುಮಾಡಿಕೊಂಡಿದ್ದರೆ ಕೆಲಸವನ್ನು ಯೋಜನೆಯ ಪ್ರಕಾರ ಕ್ರಮಬದ್ಧವಾಗಿ ನಿರ್ಮಿಸಿದ್ದರೆ ಈಗ ಮುಗಿದಿರುತ್ತಿತ್ತು. ಆದ್ರೆ ಹಣ ಬಂದಾಗ ಎಲ್ಲರೂ ಮಲಗಿದ್ದರು. ಯಾವುದೇ ಕಾಮಗಾರಿ ಅನುದಾನ ಬಂದ ಇಂತಿಷ್ಟು ದಿನಗಳ ಒಳಗೆ ಆರಂಭವಾಗಬೇಕು ಮತ್ತು ಇಂತಿಷ್ಟೇ ಸಮಯದ ಒಳಗೆ ಮುಗಿಯಬೇಕು ಎಂದು ಇರುತ್ತದೆ. ಆದರೆ ಸ್ಮಾರ್ಟ್ ಸಿಟಿಯ ಕಾಮಗಾರಿ ಆರಂಭವಾಗದೇ ಹೋದಾಗ ಅದರ ಅನುದಾನ ಹಿಂದಕ್ಕೆ ಹೋಗುವ ಸಾಧ್ಯತೆ ಹತ್ತಿರ ಬರುವಾಗ ಕಾಮಗಾರಿಗಳನ್ನು ತರಾತುರಿಯಲ್ಲಿ ಆರಂಭಿಸಲಾಗಿದೆ. ಅದಕ್ಕೆ ಬಂದರು ಪ್ರದೇಶ ಜ್ವಲಂತ ಉದಾಹರಣೆ. ಇನ್ನು ಸ್ಮಾರ್ಟ್ ಸಿಟಿ ಮಂಡಳಿಯವರು ಕೂಡ ತಮಗೆ ಬೇಕಾದ ಹಾಗೆ ಬೇಕಾಬಿಟ್ಟಿ ಕಾಮಗಾರಿ ಮಾಡುವ ಮೊದಲು ಪಾಲಿಕೆ ಮತ್ತು ಪೊಲೀಸ್ ಇಲಾಖೆಗೆ ಪತ್ರದ ಮೂಲಕ ಮಾಹಿತಿ ನೀಡಬೇಕು.
ಅದರಲ್ಲಿ ಕಾಮಗಾರಿಯ ಸ್ಥಳ, ಆರಂಭ ಮತ್ತು ಮುಕ್ತಾಯದ ದಿನವನ್ನು ದಾಖಲಿಸಬೇಕು. ಈಗ ತಕ್ಷಣಕ್ಕೆ ಮಂಗಳೂರು ಮಹಾನಗರದ ಇಬ್ಬರು ಶಾಸಕರು ಹಾಗೂ ಮೇಯರ್ ಅವರು ಏನು ಮಾಡಬೇಕು ಎಂದರೆ ಈ ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ಕರೆದು ಸಭೆ ಮಾಡಬೇಕು. ಎಲ್ಲೆಲ್ಲಿ ಕಾಮಗಾರಿ ಆಗುತ್ತಿದೆಯೋ ಅದು ಯಾವಾಗ ನಿಖರವಾಗಿ ಮುಗಿಯುತ್ತೆ. ಮಳೆಗಾಲ ಆರಂಭವಾದ ಬಳಿಕ ಅರ್ಧದಲ್ಲಿ ಇರುವ ಕಾಮಗಾರಿಯಿಂದ ಕೃತಕ ನೆರೆ ಸೃಷ್ಟಿಯಾಗಿ ಜನರಿಗೆ ತೊಂದರೆಯಾಗದಂತೆ ಏನು ಕ್ರಮ ಕೈಗೊಳ್ಳಬಹುದು ಎನ್ನುವುದನ್ನು ಪರಿಶೀಲಿಸಬೇಕು. ಇನ್ನು ಯಾವ ಗುತ್ತಿಗೆದಾರ ಕೆಲಸವನ್ನು ನಿಗದಿತ ದಿನದೊಳಗೆ ಮುಗಿಸದೇ ಅದರಿಂದ ಕೃತಕ ನೆರೆ ಸೃಷ್ಟಿಯಾಗಿ ಜನರಿಗೆ ತೊಂದರೆ ಆದರೆ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆ ನೀಡಬೇಕು. ಇನ್ನು ಈ ಕೃತಕ ನೆರೆ ಸೃಷ್ಟಿಯಾಗಲು ಕಾರಣವಾಗಿರುವ ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿನವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು. ಅವರು ರಸ್ತೆ ಹಾಗೂ ಫುಟ್ ಪಾತ್ ನಡುವೆ ಇದ್ದ ಮಣ್ಣು, ಮರಳು, ಎಲೆಗಳು, ಕಸಕಡ್ಡಿಗಳನ್ನು ತೆಗೆಯದೇ ಇದ್ದ ಕಾರಣ ಈ ಸಮಸ್ಯೆ ಉಂಟಾಗಿದೆ. ಇನ್ನು ರಸ್ತೆ ಡಿವೈಡರ್ ಕೆಳಗೆ ಕೂಡ ಸ್ವಚ್ಚ ಮಾಡದೇ ಇದ್ದ ಕಾರಣ ಈ ಮಳೆಯ ನೀರು ಸರಾಗವಾಗಿ ಹೋಗಲು ಅಡ್ಡಿಯಾಗುತ್ತದೆ. ಒಂದು ಮೀಟರ್ ಅಗಲದ ಚರಂಡಿಯ ಕಥೆಯನ್ನು ಕೇಳುವುದೇ ಬೇಡಾ. ಆ ಬಗ್ಗೆ ಆಂಟೋನಿ ವೇಸ್ಟ್ ನವರು ಮಾಡಿದ ಕರ್ಮವನ್ನು ಜನರು ಅನುಭವಿಸಬೇಕು. ಇಂತಹ ಗುತ್ತಿಗೆದಾರರು ಏನು ತಪ್ಪು ಮಾಡಿದರೂ ಅಧಿಕಾರಿಗಳು ಮಾತನಾಡುವುದಿಲ್ಲ. ಯಾಕೆಂದರೆ ಅಧಿಕಾರಿಗಳಿಗೆ ಕಾಲಕಾಲಕ್ಕೆ ಕಪ್ಪ ಹೋಗುತ್ತಿರುತ್ತದೆ. ಆದ್ದರಿಂದ ಅವರು ಮಾಡಿದ ತಪ್ಪಿಗೆ ಮುಂದೆ ಉತ್ತರ ಕೊಡಬೇಕಾದವರು ಶಾಸಕರು ಮತ್ತು ಮೇಯರ್. ಆದ್ದರಿಂದ ಜನಪ್ರತಿನಿಧಿಗಳು ಖಡಕ್ಕಾಗಿ ಎಚ್ಚರಿಕೆ ಕೊಟ್ಟು ಗುತ್ತಿಗೆದಾರರಿಂದ ಕೆಲಸ ಮಾಡಿಸಬೇಕು. ಇನ್ನು ಮಳೆಗಾಲ ಬರುತ್ತಿದೆ. ಅನೇಕ ಕಡೆ ಸ್ಮಾರ್ಟ್ ಸಿಟಿ ಕಾಮಗಾರಿ ಕೊರೊನಾ ಕಾರಣದಿಂದ ನಿಧಾನವಾಗಿದೆ. ಆದ್ದರಿಂದ ಮುಂದೆ ಹಲವು ಕಡೆ ಕೃತಕ ನೆರೆ ಬಂದರೂ ಬರಬಹುದು. ಫೋಟೋ, ವಿಡಿಯೋ ತೆಗೆಯುವವರಿಗೆ ಅಪಪ್ರಚಾರ ಮಾಡಲು ಹಬ್ಬ!
Leave A Reply