ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸಲು ನಾಲಾಯಕ್ ಅನಿಸಿತಾ ಅರುಣ್ ಸಿಂಗ್?
ಭಾರತೀಯ ಜನತಾ ಪಾರ್ಟಿಯವರು ತಾವು ಕರ್ನಾಟಕ ರಾಜ್ಯದಲ್ಲಿ ಆಡಳಿತ ಮಾಡಲು ನಾಲಾಯಕ್ ಗಳು ಎಂದು ತಾವೇ ಸಾಬೀತುಪಡಿಸಿದ್ದಾರೆ. ತಾವು ವಿಪಕ್ಷದಲ್ಲಿರಲು ಯೋಗ್ಯರು ಎಂದು ನಿರೂಪಿಸಿಬಿಟ್ಟಿದ್ದಾರೆ. ಇಲ್ಲದಿದ್ದರೆ ವಿಧಾನಸಭಾ ಚುನಾವಣೆಗೆ ಹೆಚ್ಚು ಕಡಿಮೆ ಒಂದು ಮುಕ್ಕಾಲು ವರ್ಷಗಳಿರುವಾಗ ಶಿಸ್ತಿನ ಪಕ್ಷದವರು ಹೀಗೆ ಹುಚ್ಚು ನಾಯಿ ಕಡಿದವರಂತೆ ವರ್ತಿಸುತ್ತಿರಲಿಲ್ಲ. ಒಂದು ಕಡೆ ರಾಜ್ಯದ ಜನತೆ ಕೋವಿಡ್ 19 ವೈರಸ್ ನಿಂದ ಪಾರಾಗುವುದರ ಬಗ್ಗೆ ಒದ್ದಾಡುತ್ತಿದ್ದರೆ ಇತ್ತ ಕೆಲವು ಬಿಜೆಪಿ ಶಾಸಕರುಗಳು ಮತ್ತು ಕೆಲವು ಸಚಿವರು ಕಾಲಿಗೆ ಗೆಜ್ಜೆ ಕಟ್ಟಿ ವಿಧಾನಸಭೆಯ ಮುಂದೆ ಕುಣಿಯುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಹೇಳುತ್ತಿರುವ ಪ್ರತಿಯೊಬ್ಬ ಬಿಜೆಪಿ ನಾಯಕನ ಕಣ್ಣುಗಳೇ ಬದಲಾವಣೆ ಆಗಬೇಕು ಎಂದು ಸೂಚ್ಯವಾಗಿ ಹೇಳುತ್ತಿವೆ. ಇನ್ನೊಂದೆಡೆ ಯಡ್ಡಿ ಆಪ್ತರು ಯಡ್ಡಿ ವಿರೋಧಿಗಳ ಎದುರು ಕರಗ ನ್ಯತ್ಯ ಮಾಡುತ್ತಾ ನಮ್ಮ ಬಾಸ್ ಅನ್ನು ಮುಟ್ಟಿದರೆ ಹುಶಾರ್ ಎಂದು ಬೊಬ್ಬಿರಿಯುತ್ತಿದ್ದಾರೆ. ಇದನ್ನೆಲ್ಲ ನೋಡುವ ಹಣೆಬರಹ ಕರ್ನಾಟಕದ ಘನವೆತ್ತ ಪ್ರಜೆಗಳದ್ದು.
ಈ ನಡುವೆ ದೆಹಲಿಯಿಂದ ಬಂದಿರುವ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಹುತೇಕ ಬಿಜೆಪಿ ಶಾಸಕರ ಜೊತೆ ಮುಖಾಮುಖಿ ಮಾತನಾಡಿದ್ದಾರೆ. ಆದರೆ ಮಾಧ್ಯಮಗೋಷ್ಟಿಯಲ್ಲಿ “ಸಿಎಂ ಬದಲಾವಣೆ ಬಗ್ಗೆ ವಿಷಯವೇ ಬರಲಿಲ್ಲ. ನಾವು ಸಚಿವರ, ಶಾಸಕರ ಕಾರ್ಯಚಟುವಟಿಕೆ ಬಗ್ಗೆ ಮಾತನಾಡಿದ್ದು” ಎಂದು ಜನರ ಕಿವಿ ಮೇಲೆ ಕಬ್ಬನ್ ಪಾರ್ಕ್ ಇಡುವ ಪ್ರಯತ್ನ ಮಾಡಿದ್ದಾರೆ. ದೆಹಲಿಯಿಂದ ಬಂದು ಒಬ್ಬೊಬ್ಬ ಶಾಸಕನನ್ನು ಕುಳ್ಳಿರಿಸಿ ನಿಮ್ಮ ಕ್ಷೇತ್ರದಲ್ಲಿ ಎಷ್ಟು ಕಿಟ್ ಕೊಟ್ಟೆ, ಎಷ್ಟು ವೆಂಟಿಲೇಟರ್ ಬೇಕಾಯಿತು, ಎಷ್ಟು ಆಕ್ಸಿಜನ್ ಪ್ಲಾಂಟ್ ಹಾಕಿಸಿದ್ರಿ ಎಂದು ಕೇಳಿ ಲೆಕ್ಕ ಬರೆದು ದೆಹಲಿಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಸ್ವತ: ಅರುಣ್ ಸಿಂಗ್ ಒಮ್ಮೆ ಹೇಳಿಬಿಟ್ಟರೂ ಅದನ್ನು ಕೇಳಲು ಕರ್ನಾಟಕದ ಜನ ಪೆದ್ದರಲ್ಲ. ಆದ್ದರಿಂದ ಅರುಣ್ ಸಿಂಗ್ ಒಂದು ವಿಷಯ ಸ್ಪಷ್ಟಪಡಿಸಬೇಕು. ಯಡ್ಡಿ ಇನ್ನೆಷ್ಟು ದಿನ ಸಿಎಂ ಆಗಿ ಇರುತ್ತಾರೆ? ಒಂದು ವೇಳೆ ಅವರನ್ನು ಬದಲಾಯಿಸಲು ಸಾಧ್ಯವಿಲ್ಲವಾದರೆ ಆ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ತಮ್ಮ ಪಕ್ಷದವರಿಗೆ ಈ ವಿಷಯದಲ್ಲಿ ಹೇಳಿಕೆ ಕೊಟ್ಟರೆ ಪಕ್ಷದಿಂದ ಗೇಟ್ ಪಾಸ್ ಕೊಡುತ್ತೇವೆ ಎಂದು ಹೇಳಬೇಕು ಮತ್ತು ಲಕ್ಷ್ಮಣ ರೇಖೆ ದಾಟುವ ಒಬ್ಬಿಬ್ಬರಿಗೆ ತಕ್ಕ ಶಾಸ್ತ್ರಿ ಮಾಡಬೇಕು. ಬಿಜೆಪಿ ಹೈಕಮಾಂಡ್ ಹೀಗೆ ಮಾಡಲಿಲ್ಲ ಎಂದರೆ ಮುಂದಿನ ಒಂದೂವರೆ ವರ್ಷ ಹೀಗೆ ಯಡ್ಡಿ ಮೇಲೆ ಕೆಸರು ಎರೆಚುವ ಕಸರತ್ತು ನಡೆಯುತ್ತಲೇ ಇರುತ್ತದೆ. ಇನ್ನೊಂದೆಡೆ ಇದರಿಂದ ಬೇಸತ್ತ ನಾಗರಿಕ ಬಿಜೆಪಿಗೆ ಗೇಟ್ ಪಾಸ್ ನೀಡಲು ತಯಾರಾಗಿಬಿಡುತ್ತಾನೆ.
2013 ರಿಂದ 2018 ರ ತನಕ ಕಾಂಗ್ರೆಸ್ ಸರಕಾರ ಇತ್ತು. ಸಿದ್ಧು ಸಿಎಂ ಆಗಿದ್ದರು. ಅವರ ಪಕ್ಷದಲ್ಲಿ ಸಿದ್ಧುಗೆ ವಿರೋಧಿಗಳಿರಲಿಲ್ಲ ಎಂದೇನಿಲ್ಲ. ತುಂಬಾ ಜನ ಇದ್ದಾರೆ. ಡಿಕೆಶಿ, ಎಚ್ ಕೆ ಪಾಟೀಲ್, ದೇಶಪಾಂಡೆ, ಪರಮೇಶ್ವರ್, ದಿನೇಶ್ ಗುಂಡೂರಾವ್ ರಾಜ್ಯದಲ್ಲಿ ಸುತ್ತುವರೆದಿದ್ದರೆ ಮೇಲೆ ಖರ್ಗೆ, ಆಸ್ಕರ್ ಕಡೆಗೆ ಆಗ ಜೀವಂತ ಇದ್ದ ಅಹ್ಮದ್ ಪಟೇಲ್ ಕೂಡ ಆಟವಾಡಿದ್ರು. ಆದರೆ 5 ವರ್ಷಗಳಲ್ಲಿ ಒಮ್ಮೆ ಕೂಡ ಸಿಎಂ ಬದಲಾವಣೆ ಎನ್ನುವ ಶಬ್ದ ಯಾರ ಬಾಯಿಯಲ್ಲಿಯೂ ಬರಲಿಲ್ಲ. ಸರಿಯಾಗಿ ನೋಡಿದರೆ ಬಿಜೆಪಿ ಹೈಕಮಾಂಡ್ ಗಿಂತ ಕಾಂಗ್ರೆಸ್ ಹೈಕಮಾಂಡ್ ತುಂಬಾ ವೀಕ್ ಎಂದು ದೇಶಕ್ಕೆ ಗೊತ್ತಿದೆ. ಆದರೆ ಸಿದ್ಧು ಎದುರು ಯಾವ ಗೂಳಿಯೂ ಕೊಂಬು ಎತ್ತಲಿಲ್ಲ. ಆದರೆ ಇಲ್ಲಿ ಯಡ್ಡಿ ಸಿಎಂ ಆಗಿದಾಗಿನಿಂದಲೂ ನಿತ್ಯ ಇವತ್ತು ಇಳಿಯುತ್ತಾರೆ, ನಾಳೆ ಹೋಗುತ್ತಾರೆ, ಒಂದು ವರ್ಷ ಮಾತ್ರ ಸಿಎಂ ಅಂತೆ ಎನ್ನುವುದರಿಂದ ಹಿಡಿದು ಅನೇಕ ಬಿಜೆಪಿ ಸಚಿವರ, ಶಾಸಕರ ದೆಹಲಿ ಯಾತ್ರೆಗಳು ಮಾಮೂಲಿಯಾಗಿ ಬಿಟ್ಟಿದ್ದವು. ಇನ್ನು ಕೂಡ ಮಂತ್ರಿಮಂಡಲದ ಸಭೆ ನಡೆಯುವ ಸಭಾಂಗಣವನ್ನು ನೋಡದವರು ಕೂಡ ಸಿಎಂ ಅನ್ನು ಇಳಿಸುತ್ತೇನೆ ಎಂದು ಬಬ್ರುವಾಹನ ಗೆಟ್ಟಪಿನಲ್ಲಿ ದೆಹಲಿಗೆ ವಿಮಾನ ಏರಿದ್ದರು. ಎಲ್ಲಿಯ ತನಕ ಎಂದರೆ ಸರಕಾರ ಬರಲು ಕಾರಣರಾದ 17 ಮಂದಿ ವಲಸಿಗರಿಂದಲೇ ಎಲ್ಲ ಅಧ್ವಾನ ಎಂದು ಈಶು ಹೇಳಿದ್ದು ಬಿಜೆಪಿ ಪರ್ಯಾವಸನದ ಮೊದಲ ಮೊಳೆಯಾಗದಿದ್ದರೆ ಇವರು ಬಚಾವ್. ಸರಿಯಾಗಿ ನೋಡಿದರೆ ವಲಸಿಗರಲ್ಲಿ ವಿಶ್ವ ಬಿಟ್ಟು ಬೇರೆ ಎಲ್ಲರೂ ತಕ್ಕಮಟ್ಟಿಗೆ ಸಮಾಧಾನಗೊಂಡಿದ್ದಾರೆ. ಅವರಿಗೆ ಈಗ ಸಚಿವಗಿರಿ ಎಂಜಾಯ್ ಮಾಡುವ ಹನಿಮೂನ್ ಪಿರೇಡ್ ಬಿಟ್ಟರೆ ಸಿಎಂ ಆಗುವ ಹಪಾಹಪಿ ಈಗಲೇ ಇಲ್ಲ. ಆದರೆ ಈಗಲೇ ಸಿಎಂ ಆಗುತ್ತೇನೆ ಎಂದು ಮುಂಡಾಸು ಕಟ್ಟುತ್ತಿರುವವರಲ್ಲಿ ಹಲವರಿಗೆ ಯಡ್ಡಿಯ ಮಗ ವಿಜ್ಜುಗೆ ಇರುವಷ್ಟು ರಾಜಕೀಯ ಜ್ಞಾನ ಕೂಡ ಇಲ್ಲದಿರುವುದೇ ಮೈನಸ್. ಹಾಗಾದರೆ ಯಡ್ಡಿಯನ್ನು ಇಳಿಸುವುದು ಅಷ್ಟು ಸುಲಭನಾ? ಹಿಂದಿನ ಬಾರಿಯ ಅನುಭವ ಗೊತ್ತಿರುವವರಿಗೆ ಇದು ಕುದಿಯುತ್ತಿರುವ ಹಾಲನ್ನು ಬರಿಗೈಯಿಂದ ಗ್ಲಾಸಿಗೆ ಬಗ್ಗಿಸುವಷ್ಟು ರಿಸ್ಕ್ ಎನ್ನುವುದು ಗೊತ್ತಿದೆ. ಯಾಕೆಂದರೆ ಹತ್ತು ವರ್ಷಗಳ ಹಿಂದೆ ಯಡ್ಡಿ ಮಕ್ಕಳು ಅಮಾಯಕರಾಗಿದ್ದಾಗ ಯಡ್ಡಿಯನ್ನು ಬಗ್ಗಿಸಿ ಡಿವಿ ಹಾಗೂ ಶೆಟ್ಟರ್ ಅನ್ನು ಸಿಎಂ ಮಾಡಿ ನಂತರ ಇಕ್ಕಿಸಿಕೊಂಡದ್ದು ಹೈಕಮಾಂಡ್ ಗೆ ಮರೆತಿರುವ ಸಂಗತಿ ಅಲ್ಲ. ಆದ್ದರಿಂದ ಯಡ್ಡಿ ಶಾಂತಚಿತ್ತರಾಗಿ, ಪ್ರಸನ್ನವದನರಾಗಿ, ಹೆಬ್ಬೆರಳು ತೋರಿಸುತ್ತಾ ಪದವಿಯಿಂದ ಇಳಿಯಬೇಕು ಮತ್ತು ಮುಂದಿನ ಬಾರಿ ಮತ್ತೆ ಅಧಿಕಾರಕ್ಕೆ ಮರಳುವ ಸಿಎಂ ಫೇಸ್ ಪಕ್ಷಕ್ಕೆ ಬೇಕು ಎಂದಾದರೆ ಅರುಣ್ ಸಿಂಗ್ ಕೆಂಡದ ಮೇಲೆ ಮೆಲ್ಲಗೆ ನಡೆಯಬೇಕು. ಒಂದಿಂಚು ಮಿಸ್ ಆದರೆ ಮುಂದಿನ ಬಾರಿ ಅಧಿಕಾರ ಬಿಡಿ, ವಿಧಾನಸೌಧದ ಮುಂದೆ ಆಮ್ಲೆಟ್ ಗಾಡಿ ಹಾಕಲು ಕೂಡ ಸಾಧ್ಯವಿಲ್ಲದ ಪರಿಸ್ಥಿತಿ ಬಂದಿತು!
Leave A Reply