ಮಾಣಿಪ್ಪಾಡಿ ವರದಿ ಯಾವ ಡಸ್ಟಬಿನ್ನಲ್ಲಿ ಹಾಕಿದ್ದೀರಿ ಯಡ್ಡಿ?!
ಮುಸ್ಲಿಮರ ವೋಟುಗಳು ಭಾರತೀಯ ಜನತಾ ಪಾರ್ಟಿಗೆ ಬೀಳುತ್ತೋ ಇಲ್ವೋ, ಆದರೆ ಸಿದ್ಧರಾಮಯ್ಯನವರ ಸರಕಾರವನ್ನು ಕಟಕಟೆಯಲ್ಲಿ ನಿಲ್ಲಿಸಲು 2018 ರ ಚುನಾವಣೆಯ ಮೊದಲು ಬಿಜೆಪಿ ಮುಖಂಡರು ದೊಡ್ಡ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದರು. ಇದ್ದ ವಿಷಯ ವಕ್ಫ್ ಬೋರ್ಡ್ ಆಸ್ತಿಗಳನ್ನು ಕಾಂಗ್ರೆಸ್ ಮುಖಂಡರು ನುಂಗಿ ನೀರು ಕುಡಿದಿದ್ದಾರೆ, ಅದನ್ನು ಅವರಿಂದ ಕಿತ್ತುಕೊಂಡು ಅದನ್ನು ವಕ್ಫ್ ಬೋರ್ಡ್ ಗೆ ಹಿಂತಿರುಗಿಸಬೇಕು ಎನ್ನುವುದೇ ಇವರ ಆಗ್ರಹವಾಗಿತ್ತು. ಈ ವಿಚಾರ ಹಿಡಿದುಕೊಂಡು ಯಡ್ಡಿ ಆದಿಯಾಗಿ ಬಿಜೆಪಿಯ ಅಷ್ಟೂ ಮುಖಂಡರು ವೀರಾವೇಶದಿಂದ ಭಾಷಣ ಮಾಡಿದ್ದೇ ಮಾಡಿದ್ದು. ಅಧಿಕಾರಕ್ಕೆ ಬಂದ ಕೂಡಲೇ ವಕ್ಫ್ ಆಸ್ತಿಗಳನ್ನು ಒಳಗೆ ಹಾಕಿರುವ ಎಲ್ಲಾ ಕಾಂಗ್ರೆಸ್ ಮುಖಂಡರನ್ನು ಬಂಧಿಸಿ ಜೈಲಿಗೆ ಅಟ್ಟುತ್ತೇವೆ ಮತ್ತು ಅವರು ಅತಿಕ್ರಮಣ ಮಾಡಿರುವ ಭೂಮಿಯನ್ನು ವಕ್ಫ್ ಬೋರ್ಡಿಗೆ ಮರಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಮುಸ್ಲಿಮರು ಎಷ್ಟು ನಂಬಿದರೋ, ಬಿಟ್ಟರೋ ದೇವರೇ ಬಲ್ಲ. ಒಂದಂತೂ ನಿಜ, ಜನರ ಕಣ್ಣಿನಲ್ಲಿ ಕಾಂಗ್ರೆಸ್ ಮುಖಂಡರು ಮಸೀದಿಗಳ ಭೂಮಿಯನ್ನು ಹೊಡೆದ ಭ್ರಷ್ಟರೆನಿಸಿಕೊಂಡಿದ್ದರು. ಬಿಜೆಪಿಗರ ಪ್ಲಾನ್ ಕೆಲಸ ಮಾಡಿತ್ತು. ಜನಸಾಮಾನ್ಯರು ಸತ್ಯ ಹರಿಶ್ಚಂದ್ರನ ಸ್ವಂತ ಮೊಮ್ಮೊಕ್ಕಳಾದ ಬಿಜೆಪಿಗರನ್ನು ನಂಬಿ ವೋಟ್ ಹಾಕಿಬಿಟ್ಟರು. ಪಕ್ಷ ಅಧಿಕಾರಕ್ಕೆ ಬಂತು. ವಕ್ಫ್ ಬೋರ್ಡ್ ನ 22 ಸಾವಿರ ಎಕರೆ ಅತಿಕ್ರಮಣವಾಗಿರುವ ಭೂಮಿಯ ಇಂಚಿಂಚು ವರದಿಯನ್ನು ಸಿದ್ಧಪಡಿಸಿ ಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತೇನೆ, ನಮ್ಮ ಸರಕಾರ ಬಂತು ಎಂದು ಎದೆಯುಬ್ಬಿಸಿ ವಿಧಾನಸೌಧದ ಕಾರಿಡಾರಿನಲ್ಲಿ ಹೆಮ್ಮೆಯಿಂದ ಹೇಳಿಕೊಂಡವರು ಅನ್ವರ್ ಮಾಣಿಪ್ಪಾಡಿ.
ಅವರಿಗೆ ಧೈರ್ಯ ಇತ್ತು. ತಾವು ತಿಂಗಳುಗಟ್ಟಲೆ ಹಗಲು ರಾತ್ರಿ ಸಂಶೋಧನೆ ಮಾಡಿ, ಬಲಾಢ್ಯರನ್ನು, ಪ್ರಭಾವಿಗಳನ್ನು ಎದುರು ಹಾಕಿ ಸಿದ್ಧಪಡಿಸಿದ ನಾಲ್ಕು ಲಕ್ಷ ಕೋಟಿ ಮೊತ್ತದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ತಮ್ಮ ಸರಕಾರ ವಿಧಾನಸಭೆಯಲ್ಲಿ ಮಂಡಿಸಿ ಕಾಂಗ್ರೆಸ್ಸಿಗರಿಗೆ ಹಣ್ಣುಗಾಯಿ ನೀರುಗಾಯಿ ಮಾಡುತ್ತದೆ ಎಂದು ಅವರು ನಿತ್ಯ ಕಾಯುತ್ತಿದ್ದರು. ಅವರು ಕಾದದ್ದೇ ಬಂತು. ಇವತ್ತಿಗೆ ಬಿಜೆಪಿ ಸರಕಾರದಲ್ಲಿ ಯಡ್ಡಿ ಸಿಎಂ ಆಗಿ ಭರ್ತಿ ಎರಡು ವರ್ಷ. ಮಾಣಿಪ್ಪಾಡಿ ವರದಿಯ ಬಗ್ಗೆ ಒಂದು ಫೈಲು ಕೂಡ ಅಲುಗಾಡಲಿಲ್ಲ. ಚಾತಕ ಪಕ್ಷಿಯಂತೆ ಕಾದ ಅನ್ವರ್ ಮಾಣಿಪ್ಪಾಡಿ ಮೋದಿಯಿಂದ ಹಿಡಿದು ರಾಜ್ಯಪಾಲರ ತನಕ ಎಲ್ಲರಿಗೂ ಪತ್ರ ಬರೆದು ತನಿಖೆಗೆ ಆದೇಶ ಮಾಡಿ ಎಂದು ಒತ್ತಾಯ ಮಾಡಿದ್ರು. ಆದರೆ ಏನೂ ಆಗಲಿಲ್ಲ. ಮಾಣಿಪ್ಪಾಡಿ ಯಡ್ಡಿಯನ್ನು ಕೇಳಿದ್ರೆ ನಿಮಗೆ ಆಯೋಗದ ಚೇರ್ ಮೆನ್ ಮಾಡುತ್ತೇವೆ, ಸುಮ್ಮನೆ ಇರಿ ಎಂದು ಯಡ್ಡಿ ತಾಕೀತು ಬೇರೆ. ಅದು ಬೇಡಾ ಎಂದದ್ದಕ್ಕೆ ಯಡ್ಡಿ ಮಗ ವಿಜ್ಜು ಬಾಯಿ ಮುಚ್ಚಲು ಎಷ್ಟು ಕೋಟಿ ಬೇಕು ಎಂದು ಕೇಳಿದ್ದರು ಎಂದು ಮಾಣಿಪ್ಪಾಡಿ ಇತ್ತೀಚೆಗೆ ಟಿವಿ ಸಂದರ್ಶನದಲ್ಲಿ ಹೇಳಿದ್ದರು. ನನಗೆ ಹಣ ಬೇಡಾ, ಭ್ರಷ್ಟರಿಗೆ ಶಿಕ್ಷಿಸಿ ಎಂದು ಹೇಳಿದ್ದೆ ಎನ್ನುತ್ತಾರೆ ಮಾಣಿಪ್ಪಾಡಿ. ಅಷ್ಟಕ್ಕೂ ಸದಾನಂದ ಗೌಡರು ಸಿಎಂ ಆಗಿದ್ದಾಗಲೇ ಈ ವರದಿ ಅವರ ಕೈ ಸೇರಿತ್ತು. ಆದರೆ ಕಾಂಗ್ರೆಸ್ ಕಚೇರಿ ಕಟ್ಟಲು ಸಹಾಯ ಮಾಡುವ ಗಡಿಬಿಡಿಯಲ್ಲಿದ್ದ ಸದ್ದುವಿಗೆ ವಕ್ಫ್ ಜಾಗದ ಬಗ್ಗೆ ಆಸಕ್ತಿ ಇರಲಿಲ್ಲ. ನಂತರ ಶೆಟ್ಟರ್ ಸಿಎಂ ಆದರು. ಸರಕಾರ ಆಕ್ಸಿಜನ್ ಪೈಪ್ ನಲ್ಲಿ ಇದ್ದ ಕಾರಣ ಅಧಿಕಾರ ಉಳಿಸುವುದೇ ಕಷ್ಟವಾಗಿತ್ತು. ಅದರ ನಂತರ ಸಿದ್ಧು ಬಂದರು. ಅವರಿಂದ ನ್ಯಾಯ ಸಿಗುವ ಚಾನ್ಸೇ ಇರಲಿಲ್ಲ. ಯಾಕೆಂದರೆ ಅವರದ್ದೇ ಪಕ್ಷದ ಘಟಾನುಘಟಿ ನಾಯಕರ ಕಟ್ಟಡಗಳೇ ಮಸೀದಿ ಜಾಗಗಳಲ್ಲಿ ಎದ್ದು ನಿಂತಿರುವಾಗ ಜಮೀರು, ಸಿಎಂ ಇಬ್ರಾಹಿಂ ಅಂತವರನ್ನು ಅಕ್ಕಪಕ್ಕದಲ್ಲಿ ಕೂರಿಸಿಕೊಂಡು ಅವರು ನ್ಯಾಯ ಕೊಡಿಸುತ್ತಾರೆ ಎನ್ನುವುದೇ ಭ್ರಮೆ. ಅದರ ನಂತರ ಕುಮಾರ ಸಿಎಂ ಆಗಿ ಆ ಬಳಿಕ ಯಡ್ಡಿ ಬಂದಾಗಲೇ ಈ ವರದಿಗೆ ಜೀವ ಬರುತ್ತೆ ಎಂದು ಮಾಣಿಪ್ಪಾಡಿಗೆ ಭರವಸೆ ಬಂದಿತ್ತು. ಆದರೆ ಯಡ್ಡಿ ಅದನ್ನು ಯಾವ ಡಸ್ಟಬಿನ್ ಗೆ ಹಾಕಿದರೋ ಯಾರಿಗೆ ಗೊತ್ತು. ಸದ್ಯ ಮಾನ್ಯ ಉಚ್ಚ ನ್ಯಾಯಾಲಯ ಈ ವರದಿಯ ಮೇಲೆ ತೆಗೆದುಕೊಂಡ ಕ್ರಮಗಳೇನು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳನ್ನು ಪ್ರಶ್ನಿಸಿದೆ. ಈಗ ಇದು ಕುತೂಹಲಕಾರಿ ಘಟ್ಟಕ್ಕೆ ಬಂದು ನಿಲ್ಲಿಸಿದೆ. ಇತ್ತೀಚೆಗೆ ಅನಾರೋಗ್ಯದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಗೆದ್ದು ಬಂದಿರುವ ಅನ್ವರ್ ಮಾಣಿಪ್ಪಾಡಿ ತಾವು ಬದುಕಿ ಬಂದದ್ದೇ ಅಲ್ಲಾನ ಕೃಪೆಯಿಂದ. ಗೆಲುವು ನಿಶ್ಚಿತ. ತಮ್ಮ ವರದಿಗೆ ಒಂದು ತಾರ್ಕಿಕ ಅಂತ್ಯ ಸಿಗುತ್ತೆ ಎಂದು ಆಶಾಭಾವ ಇಟ್ಟುಕೊಂಡಿದ್ದಾರೆ.
ಇದು ಕೇವಲ ಮಸೀದಿಗಳ ಜಾಗ ಒಳಗೆ ಹಾಕಿದ ವಿಷಯ ಅಲ್ಲ. ಎಷ್ಟೋ ದೇವಸ್ಥಾನಗಳ ಸಾವಿರಾರು ಎಕರೆ ಜಾಗ ಕೂಡ ಪ್ರಭಾವಿಗಳ ಕಪಿಮುಷ್ಟಿಯಲ್ಲಿದೆ. ಎಷ್ಟೋ ರಾಜಕಾರಣಿಗಳು ಮತ್ತು ಅವರ ಚೇಲಾಗಳು ಮಸೀದಿ ಮತ್ತು ದೇವಾಲಯಗಳ ಭೂಮಿಯನ್ನು ಸ್ವಾಧೀನಪಡಿಸಿ ಅದರಲ್ಲಿಯೇ ವರ್ಷದಿಂದ ವರ್ಷಕ್ಕೆ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾರೆ. ಈ ಒಂದು ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಒಂದೇ. ಇವರು ಚುನಾವಣೆಗೆ ಐದಾರು ತಿಂಗಳು ಇರುವಾಗ ಮಾತ್ರ ವಿರೋಧಿಗಳು. ಚುನಾವಣೆಗಳು ಮುಗಿದ ಬಳಿಕ ದೋಚುವ ವಿಚಾರದಲ್ಲಿ ಅಪ್ಪಟ ರಕ್ತಸಂಬಂಧಿಗಳು. ಇನ್ನು ವಕ್ಫ್ ಬೋರ್ಡಿನ ಆಸ್ತಿಯನ್ನು ಅತಿಕ್ರಮಣ ಮಾಡಿರುವವರಲ್ಲಿ ಕೇವಲ ಕಾಂಗ್ರೆಸ್, ಜೆಡಿಎಸ್ ನಾಯಕರು ಮಾತ್ರ ಇದ್ದಾರೆ ಎಂದು ಯಾರೂ ಅಂದುಕೊಳ್ಳಬೇಕಂತಿಲ್ಲ. ಇದರಲ್ಲಿ ಸಮಾನವಾಗಿ ಬಿಜೆಪಿಗರು ಇದ್ದಾರೆ. ಅಯೋಧ್ಯೆಯ ರಾಮಜನ್ಮಭೂಮಿಯ ವಿವಾದದಲ್ಲಿ ಅದು ಬಾಬರನ ಜಾಗ ಎಂದು ವಾದಿಸುತ್ತಿದ್ದ ಮುಸ್ಲಿಮ್ ಮುಖಂಡರೇ ಅಲ್ಲಿ ನೀವು ಕೇಳುತ್ತಿದ್ದದ್ದು ಬರೇ 7 ಏಕರೆ ಜಾಗ. ಇಲ್ಲಿ ನೀವು ಕಳೆದುಕೊಂಡಿರುವುದು 22 ಸಾವಿರ ಎಕರೆ ಜಾಗ. ಉಳಿದದ್ದು ನಿಮಗೆ ಬಿಟ್ಟಿದ್ದು!
Leave A Reply