ಮನೆಯಲ್ಲಿ ಪುದೀನಾ ,ಪ್ರತಿದಿನವೂ ಸುದಿನ
ಪುದೀನಾ ಸುವಾಸನೆಯುಳ್ಳ ಸ್ವಲ್ಪ ಕಟು ರುಚಿಯುಳ್ಳ ಗಿಡ .ಪಲಾವ್ ಮಾಡುವವರಿಗೆ ಇದರ ಪರಿಚಯ ಇದ್ಡೇ ಇರುತ್ತದೆ .ಇದರ ಎಲೆಯೇ ಈ ಗಿಡದ ಆಕರ್ಷಣೆ .ಕಡು ಹಸಿರು ಬಣ್ಣವುಳ್ಳ ಈ ಎಲೆಯ ಸುಗಂಧ ಅಪರಿಮಿತ .ಚಿಕ್ಕವರಿದ್ದಾಗ ಸವಿದ ಮಿಂಟ್ ಚಾಕಲೇಟುಗಳು ಎಲ್ಲರಿಗೂ ನೆನಪಲ್ಲಿರುತ್ತದೆ .ಚಾಕಲೇಟನ್ನು ಬಾಯಲ್ಲಿ ಇರಿಸಿ ಗಾಳಿಯನ್ನು ಒಳಗೆಳೆದುಕೊಳ್ಳುವಾಗ …ಆಹಾ…..ತಂಪು ತಂಪಾದ ಅನುಭವ .ಇದಷ್ಟೇ ಅಲ್ಲ ಪುದೀನಾದ ಉಪಯೋಗ ಬಹಳಷ್ಟಿದೆ .ಆರೋಗ್ಯದ ವಿಚಾರಕ್ಕೆ ಬಂದರಂತೂ ಇದು ಔಷಧವಾಗಿ ಪರಿಗಣಿಸಲ್ಪಡುತ್ತದೆ .ಇದರ ಬಗ್ಗೆ ಇವತ್ತಿನ ಸಂಚಿಕೆಯಲ್ಲಿ ಓದೋಣ .
ಟಿಬಿ ಕಾಯಿಲೆಗೆ ಪುದೀನಾದ ಮದ್ದು
ಪುದೀನಾ ಸೊಪ್ಪಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶಗಳಿವೆ .ಇದರಿಂದಾಗಿ ಲೋಳೆಯನ್ನು ಕರಗಿಸಿ ಶ್ವಾಸಕೋಶಕ್ಕೆ ಪೌಷ್ಟಿಕತೆಯನ್ನು ನೀಡುವ ಕೆಲಸವನ್ನು ಈ ಗುಣವು ಮಾಡುತ್ತದೆ .ಔಷಧಗಳ ಪ್ರತಿಕೂಲ ಪರಿಣಾಮವನ್ನು ಇದು ತಡೆಯುವುದಲ್ಲದೆ ದೇಹಕ್ಕೆ ಬೇಡವಾದ ವಿಷಕಾರಿ ಅಂಶವನ್ನು ಇದು ಹೊರ ಹಾಕುವಲ್ಲಿ ಸಫಲವಾಗುತ್ತದೆ.
ಉತ್ತಮ ಜೀರ್ಣಕಾರಿ
ಪುದೀನಾವು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.ಹೊಟ್ಟೆ ಉಬ್ಬರಿಸಿದಂತಾದಾಗ ,ಹಸಿವು ಇಲ್ಲದಾಗ ,ಅಜೀರ್ಣವಾದಾಗ ಇದರ ಬಳಕೆ ಆರಾಮದಾಯಕವಾಗಿದೆ .ಪುದೀನಾದ ಕೆಲವು ಎಲೆಗಳನ್ನು ಸ್ವಲ್ಪ ನಿಂಬೆ ರಸ ಹಿಂಡಿ ರುಚಿಗೆ ತಕ್ಕಷ್ಟು ಸಕ್ಕರೆ ಇಲ್ಲವೇ ಜೇನುತುಪ್ಪ ಸೇರಿಸಿ ಮಿಕ್ಸಿಯಲ್ಲಿ ತಿರುಗಿಸಿ ಸೋಸಿ ಕುಡಿದರೆ ರುಚಿಯೋ ರುಚಿ ಹಾಗೆಯೆ ಕೆಲ ನಿಮಿಷಗಳಲ್ಲೇ ನಿಶ್ಚಿತ ಪರಿಣಾಮ.ಇದರ ಸುವಾಸನೆಯು ಬಾಯಿಯಲ್ಲಿ ಜೊಲ್ಲಿನ ಗ್ರಂಥಿಗಳನ್ನು ಪ್ರಚೋದಿಸುತ್ತದೆ ಮತ್ತು ಜಠರದ ಕಿಣ್ವಗಳನ್ನು ಸಹ ಇದರಿಂದ ಅಜೀರ್ಣವಾಗುವುದಿಲ್ಲ ಮತ್ತು ಜೀರ್ಣಕ್ರಿಯೆಗೆ ಸಹಕಾರಿ .
ತಲೆನೋವಿಗೆ ಪರಿಹಾರ
ಕೆಲಸದ ಒತ್ತಡದಿಂದ ಇಲ್ಲವೇ ತುಂಬಾ ತಿರುಗಾಟದಿಂದ ,ಬಿಡುವಿಲ್ಲದೆಯೇ ದುಡಿದಾಗ ತಲೆನೋವು ಹೆಚ್ಚಿನವರಿಗೆ ಬರುತ್ತದೆ .ಇದಕ್ಕಾಗಿ ಪುದೀನಾ ಚಹಾವನ್ನು ಕುಡಿಯಬಹುದು .ಒಂದು ಲೋಟ ನೀರಿಗೆ ಸ್ವಲ್ಪ ಚಹಾ ಪುಡಿ ಹಾಕಿ ,ಸಕ್ಕರೆ ಸೇರಿಸಿ ಕೆಲವು ಪುದೀನಾ ಎಲೆಗಳನ್ನು ಹಾಕಿ ಕುದಿಸಿ.ನಂತರ ಗುಟುಕು ಗುಟುಕಾಗಿ ಚಪ್ಪರಿಸಿ .ನಿಧಾನವಾಗಿ ಮನಸ್ಸು ಆಹ್ಲಾದಗೊಳ್ಳುತ್ತದೆ .ತಲೆನೋವು ದೂರವಾಗುತ್ತದೆ ,ಇಷ್ಟ ಇದ್ದಲ್ಲಿ ಸ್ವಲ್ಪ ನಿಂಬೆ ರಸ ಕೂಡ ಇದಕ್ಕೆ ಸೇರಿಸಿಕೊಳ್ಳಬಹುದು .
ಮೊಡವೆಗಳ ನಿವಾರಣೆ
ಮುಖದ ಸೌಂದರ್ಯ ಯಾರಿಗೆ ಬೇಡ ?ಇದಕ್ಕಾಗಿ ಕ್ರೀಮು ಜೆಲ್ಲು ಪೌಡರುಗಳನ್ನು ಸುರಿದುಕೊಳ್ಳುತ್ತಾರೆ ,ಪಾರ್ಲರಿಗೆ ಸಾವಿರಾರು ರೂಪಾಯಿಗಳನ್ನು ಸುರಿಯುತ್ತಾರೆ,ಅದರಲ್ಲೂ ಒಂದು ಮೊಡವೆ ಕಾಣಿಸಿದರೆ ಸಾಕು ಆಕಾಶವೇ ತಲೆಮೇಲೆ ಬಿದ್ದಂತೆ ಗೋಳಾಡಿ ಇದ್ದ ಬದ್ದ ಪ್ರಯೋಗಗಳನ್ನು ಮಾಡಿ ,ಏನೂ ಆಗದಿದ್ದರೆ ವೈದ್ಯರ ಹತ್ತಿರ ಹೋಗಿ ನಿರಾಳರಾಗುತ್ತಾರೆ.ಇದಕ್ಕಾಗಿ ಸಲಹೆ ಕೊಡುವ ಹಲವರ ನಾಲಿಗೆಗೆ ಇವರು ಕಿವಿಯಾಗುತ್ತಾರೆ .ಈ ಮೊಡವೆಯ ಗೊಡವೆಯನ್ನು ಹೋಗಿಸಲು ಒಂದು ಪರಿಹಾರ ಪುದೀನಾ ಸೊಪ್ಪು .ಇದನ್ನು ಚೆನ್ನಾಗಿ ನುಣ್ಣಗೆ ಅರೆದು ಮೊಡವೆಯ ಮೇಲೆ ಹಚ್ಚಬೇಕು.ಕೆಲ ದಿನಗಳವರೆಗೆ ಈ ಪ್ರಕ್ರಿಯೆಯನ್ನು ಮಾಡಿದರೆ ಮೊಡವೆಯು ಮಾಯುತ್ತದೆ .
ಪುದೀನಾವನ್ನು ಹಲ್ಲುಜ್ಜುವ ಪೇಸ್ಟ್ ಗಳಲ್ಲಿ, ಚ್ಯುಯಿಂಗ್ ಗಮ್ ಗಳಲ್ಲಿ ,ಚಾಕಲೇಟುಗಳ ತಯಾರಿಕೆಯಲ್ಲಿ ಬಳಸುತ್ತಾರೆ .ಇದು ಬಾಯಿ ವಾಸನೆಯನ್ನು ಸಹ ಹೋಗಲಾಡಿಸುತ್ತದೆ .ಆದ್ದರಿಂದ ಇದನ್ನು ಮೌತ್ ಫ್ರೆಶ್ನರ್ ಗಳಲ್ಲಿ ಬಳಕೆ ಮಾಡುತ್ತಾರೆ .ಸದಾ ಒಂದು ಕಟ್ಟು ಪುದೀನಾ ಸೊಪ್ಪು ನಿಮ್ಮ ಮನೆಯಲ್ಲಿರಲಿ .
Leave A Reply