ಬೆಂಗಳೂರು – ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂ ಕುಸಿತ

ಬೆಂಗಳೂರು – ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂ ಕುಸಿತ ಉಂಟಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಲ್ ಎಂಬಲ್ಲಿ ನಡೆದ ಭೂ ಕುಸಿತಕ್ಕೆ ರಸ್ತೆಯೇ ಕುಸಿದಿದ್ದು, ವಾಹನ ಸಂಚಾರ ವ್ಯತ್ಯಯವಾಗಿದೆ.ಕಳೆದೊಂದು ವಾರದಿಂದಲೂ ಸಕಲೇಶಪುರ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಭೂ ಕುಸಿತ ಉಂಟಾಗುತ್ತಿದ್ದು, ಇದೀಗ ರಾಷ್ಟ್ರೀಯ ಹೆದ್ದಾರಿ ಕುಸಿತವಾಗಿದೆ. ಅರ್ಧ ದಷ್ಟು ರಸ್ತೆ ಕುಸಿದಿದ್ದು, ಉಳಿದಿರುವ ರಸ್ತೆಯೂ ಕುಸಿಯುವ ಭೀತಿಯಲ್ಲಿದೆ. ಭೂ ಕುಸಿತದ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು, ಹಾಸನ, ಉಡುಪಿ ಜಿಲ್ಲೆಗಳಿಗೆ ಸಂಚರಿಸುವ ವಾಹನ ಸವಾರರಿಗೆ ತೊಡಕಾಗಿದೆ. ರಸ್ತೆ ಕುಸಿದ ಹಿನ್ನೆಲೆಯಲ್ಲಿ ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ಸರತಿ ಸಾಲಿನಲ್ಲಿ ನಿಂತಿವೆ.ಉಳಿದ ಹೆದ್ದಾರಿ ರಸ್ತೆಯೂ ಕುಸಿಯುವ ಆತಂಕ ಎದುರಾಗಿದ್ದು, ಬದಲಿ ಮಾರ್ಗದಲ್ಲಿ ಸಂಚಾರ ಮಾಡುವಂತೆ ಅಧಿಕಾರಿಗಳು ಮನವಿ ಮಾಡುತ್ತಿದ್ದಾರೆ. ಭಾರೀ ಮಳೆಯ ಹಿನ್ನೆಲೆ ಯಲ್ಲಿ ರಸ್ತೆಯ ಕಾಮಗಾರಿಯನ್ನು ಮಾಡುವುದಕ್ಕೂ ಕೂಡ ತಡೆಯಾಗುತ್ತಿದ್ದು, ಸ್ಥಳದಲ್ಲಿ ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
Leave A Reply