ಬಿಜೆಪಿ ಸರಕಾರ ಇದ್ದೇ ಕಬಕದ ಪ್ರಕರಣ ಹೀಗಾದರೆ ಹೇಗೆ?

ಕಳೆದ ಭಾನುವಾರ ಪುತ್ತೂರಿನ ಕಬಕದಲ್ಲಿ ಭಾರತೀಯ ಜನತಾ ಪಾರ್ಟಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಸೇರಿ ಸ್ವಾತಂತ್ರ್ಯ ರಥವನ್ನು ಎಳೆಯಲು ಆರಂಭಿಸಿದಾಗ ಸ್ಥಳೀಯ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ತಡೆದರಲ್ಲ, ಅವರ ಮುಖ್ಯ ಉದ್ದೇಶ ಇದ್ದದ್ದೇ ಸಾವರ್ಕರ್ ಫೋಟೋವನ್ನು ತೆಗೆಯಬೇಕು ಎನ್ನುವುದು. ಅದನ್ನು ಬಿಜೆಪಿಯವರು ಕೇಳುವ ಸಾಧ್ಯತೆ ಇರಲಿಲ್ಲ. ಸಹಜವಾಗಿ ಗಲಾಟೆಯಾಗಿದೆ. ಆ ವಿಷಯವನ್ನು ಇಟ್ಟುಕೊಂಡು ಗ್ರಾಮ ಪಂಚಾಯತ್ ಮಟ್ಟದಿಂದ ಹಿಡಿದು ಜಿಲ್ಲೆಯ ತನಕ ಪ್ರತಿಭಟನೆ ಆದವು. ಶಾಸಕರುಗಳು ಸುದ್ದಿಗೋಷ್ಟಿ ಮಾತನಾಡಿದರು. ಕೇಸರಿ ಪಡೆಯ ಯುವಕರು ಬೊಬ್ಬಿರಿದು ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು. ಇವರೆಲ್ಲರ ವೀರಾವೇಶ ನೋಡಿದಾಗ ಒಂದು ವಾರದ ಒಳಗೆ ಪಿಎಫ್ ಐ ಅಥವಾ ಅದರ ರಾಜಕೀಯ ಪಕ್ಷ ಎಸ್ ಡಿಪಿಐ ಬ್ಯಾನ್ ಆಗುತ್ತೋ ಎಂದು ಅನಿಸುತ್ತಿತ್ತು. ದೇಶದ್ರೋಹಿಗಳನ್ನು ಬಿಡುವ ಪ್ರಶ್ನೆನೇ ಇಲ್ಲ ಎಂದು ಇವರದ್ದೇ ಆಡಳಿತದ ಜನಪ್ರತಿನಿಧಿಗಳು ಹೇಳಿದಾಗ ಎಸ್ ಡಿಪಿಐ ನಿಷೇಧ ಆಗುವುದು ಬಿಡಿ, ರಥವನ್ನು ತಡೆದು ಬಂಧಿತರಾಗಿರುವ ಮೂರು ಜನ ಮಿನಿಮಮ್ ಒಂದು ವರ್ಷವಾದರೂ ಜೈಲಿನ ಒಳಗೆ ಇರಬಹುದು ಎಂದು ಅನಿಸುತ್ತಿತ್ತು. ಇವರೆಲ್ಲರ ಸುದ್ದಿಗೋಷ್ಟಿಗಳು ಟಿವಿಯಲ್ಲಿ, ಪೇಪರ್ ನಲ್ಲಿ ಬರುವುದರೊಳಗೆ ಅಲ್ಲಿ ಬಂಧಿತರಾದವರು ಬಿಡುಗಡೆಗೊಂಡು ಮನೆಗೆ ಹೋಗಿ ಅರ್ಧ ಕೆಜಿ ಜಾಸ್ತಿ ಚಿಕನ್, ಮಟನ್ ತಂದು ಊಟ ಮಾಡುತ್ತಾ ಇದೇ ಬಿಜೆಪಿಯವರ ಭಾಷಣಗಳು, ಟಿವಿಯಲ್ಲಿ ಪ್ರತಿಭಟನೆಗಳನ್ನು, ಹೇಳಿಕೆಗಳನ್ನು ನೋಡಿ ನಗುವ ವಾತಾವರಣ ಬಂದಿದೆ.
ಯಾವಾಗ ಆ ಎಸ್ ಡಿಪಿಐ ಕಾರ್ಯಕರ್ತರ ಬಿಡುಗಡೆಯಾಯಿತೋ ಮೊದಲು ಕೇಸರಿ ಯುವಕರಿಗೆ ಡೌಟ್ ಬಂದದ್ದು ನಾವು ಬಿಜೆಪಿ ಆಡಳಿತದಲ್ಲಿ ಇದ್ದೇವೋ ಅಥವಾ ನಮ್ಮದು ಕೂಡ ತಾಲಿಬಾನ್ ಆಡಳಿತವಾಯಿತೋ ಎನ್ನುವುದು. ಅನೇಕ ಬಿಜೆಪಿ ಕಾರ್ಯಕರ್ತರು, ಕೇಸರಿ ಪಡೆಯ ಯುವಕರು ತಮ್ಮ ಆಕ್ರೋಶವನ್ನು ಸಂಗಡಿಗರ ಎದುರು ಹೊರಗೆ ಹಾಕಿದ್ದಾರೆ. ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಕೋಪ ಹೊರಗೆ ಹಾಕಿದ್ದಾರೆ. ನಮ್ಮದೇ ಸರಕಾರ ಇದ್ದು ಕೂಡ ಈ ದೇಶದ್ರೋಹಿಗಳು ಅಷ್ಟು ಸುಲಭವಾಗಿ ಹೊರಗೆ ಬರುತ್ತಾರಲ್ಲ, ಅದೇ ನಮ್ಮ ಸರಕಾರ ಇದ್ದು ನಾವೇನಾದರೂ ಲವ್ ಜಿಹಾದ್, ಅಕ್ರಮ ಗೋ ಸಾಗಾಟ ತಡೆ ಹಿಡಿದ ಪ್ರಕರಣ, ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಓಡಿದ ಪ್ರಕರಣದಲ್ಲಿ ಗಲಾಟೆ ಮಾಡಲು ಹೋದಾಗ ನಮ್ಮನ್ನು ಪೊಲೀಸರು ಹಿಡಿದರೂ ನಮ್ಮ ಸರಕಾರವೇ ಇದ್ದರೂ ಹೊರಗೆ ಬರಲು ವಾರಗಟ್ಟಲೆ ಹಿಡಿಯುತ್ತದೆ. ಹೀಗಿರುವಾಗ ನಾವು ದೇಶದ್ರೋಹಿಗಳು ಎನ್ನುವವರು ಎರಡು ದಿನದಲ್ಲಿ ಹೊರಗೆ ಬಂದರಲ್ಲ ಎಂದು ಕೇಸರಿ ಪಾಳಯದಲ್ಲಿ ಕೋಪ ಬುಸುಗುಡುತ್ತಿದೆ. ಯಾರ ವಿರುದ್ಧ ತೆಗೆಯುವುದು ಗೊತ್ತಾಗುತ್ತಿಲ್ಲ. ಒಂದು ವೇಳೆ ಕಾಂಗ್ರೆಸ್ ಸರಕಾರ ಇದ್ದರೆ ಸಮಾವೇಶ ಮಾಡಬಹುದಿತ್ತು. ಉಗ್ರ ಭಾಷಣ ಮಾಡಬಹುದಿತ್ತು. ಬಂದ್ ಕರೆ ಕೊಡಬಹುದಿತ್ತು. ಆದರೆ ಈಗ ಏನೂ ಮಾಡುವಂತಿಲ್ಲ. ಯಾಕೆಂದರೆ ಮೇಲಿನಿಂದ ಕೆಳಗಿನ ತನಕ ನಮ್ಮದೇ ಸರಕಾರ.
ಒಂದು ವಿಷಯ ನಿಮಗೆ ಕನ್ಫರ್ಮ್ ಮಾಡಲೇಬೇಕು. ಅದೇನೆಂದರೆ ಯಾವುದೇ ಒಬ್ಬ ಆರೋಪಿ ಜಾಮೀನು ಪಡೆದುಕೊಂಡು ಜೈಲಿನಿಂದ ಸುಲಭವಾಗಿ ಹೊರಗೆ ಬರುವುದಕ್ಕೂ, ಆ ರಾಜ್ಯದ ಸರಕಾರಕ್ಕೂ ನೇರಾನೇರ ಯಾವುದೇ ಸಂಬಂಧ ಇರುವುದಿಲ್ಲ. ಸಂಬಂಧ ಇರುವುದು ಪೊಲೀಸರು ಪ್ರಥಮ ಮಾಹಿತಿ ವರದಿ ಅಂದರೆ ಎಫ್ ಐಆರ್ ದಾಖಲಿಸುವಾಗ ಅದರಲ್ಲಿ ಯಾವ ಸೆಕ್ಷನ್ ಹಾಕಿದ್ದಾರೆ ಎನ್ನುವುದರ ಮೇಲೆ ಇಡೀ ಕೇಸ್ ನಿಂತಿರುತ್ತದೆ. ಪೊಲೀಸರು ಮನಸ್ಸು ಮಾಡಿದರೆ ಎಂತಹ ಪ್ರಕರಣದಲ್ಲಿಯೂ ಯಾವ ಸೆಕ್ಷನ್ ಬೇಕಾದರೂ ಹಾಕಿ ಎರಡು ದಿನಗಳೊಳಗೆ ಹೊರಗೆ ಬರುವಂತೆಯೂ ಮಾಡಬಹುದು. ವರ್ಷದ ತನಕ ಒಳಗೆ ಕೊಳೆಯುವಂತೆಯೂ ಮಾಡಬಹುದು. ಆದ್ದರಿಂದ ಕಬಕದ ಘಟನೆಯಲ್ಲಿ ಯಾವುದೋ ಟುಸ್ ಪಟಾಕಿ ಸೆಕ್ಷನ್ ಹಾಕಿರಬಹುದು. ಈಗ ಇರುವ ಪ್ರಶ್ನೆ ಒಂದು ವೇಳೆ ಈಗ ಕಾಂಗ್ರೆಸ್ ಸರಕಾರ ಇದ್ದು ಇದೇ ಎಸ್ ಡಿಪಿಐನವರು ಎರಡು ದಿನಗಳ ಒಳಗೆ ಬಿಡುಗಡೆಯಾದರೆ ನಂಬಬಹುದಿತ್ತು. ಆದರೆ ಈಗ ಇರುವುದು ಬಿಜೆಪಿ ಸರಕಾರ. ಸಾಲದಕ್ಕೆ ಎಂಟರಲ್ಲಿ ಏಳು ಜನ ಬಿಜೆಪಿಯದ್ದೇ ಶಾಸಕರು. ಅದರ ಜೊತೆ ಸುನೀಲ್ ಕುಮಾರ್ ನಂತವರು ಮಂತ್ರಿ ಬೇರೆ. ಹೀಗಿದ್ದರೂ ಮುಸ್ಲಿಮರು ಆರಾಮವಾಗಿ ಹೊರಗೆ ಬರುತ್ತಾರೆ ಎಂದಾದರೆ ನಾವು ಇರುವುದು ಬಾವುಟ ಹಿಡಿಯಲು ಮಾತ್ರವೇ? ಇಲ್ಲಿ ಎರಡು ವಿಷಯಗಳಿವೆ. ಅದೇನೆಂದರೆ ಒಂದೋ ಪೊಲೀಸ್ ಇಲಾಖೆಯ ಮೇಲೆ ಬಿಜೆಪಿ ಶಾಸಕರಿಗೆ ನಿಯಂತ್ರಣ ಇಲ್ಲ. “ಏಯ್, ಸ್ವಲ್ಪ ಸ್ಟ್ರಾಂಗ್ ಕೇಸ್ ಹಾಕ್ರೀ, ದೇಶದ್ರೋಹಿಗಳು ಆರು ತಿಂಗಳು ಹೊರಗೆ ಬರಬಾರದು” ಎಂದು ಯಾರ ಫೋನ್ ಹೋಗಬೇಕಿತ್ತೋ ಅವರದ್ದು ಹೋಗಿದಿದ್ದರೆ ಪೊಲೀಸರು ಧೈರ್ಯದಿಂದ ಏನಾದರೂ ಮಾಡಬಹುದಿತ್ತು. ಇಲ್ಲದಿದ್ದರೆ ಪೊಲೀಸರು ಯಾರ ಆಡಳಿತವೇ ಇರಲಿ, ತಮಗೆ ಸರಿ ಎನಿಸಿದ್ದನ್ನೇ ಮಾಡುತ್ತಾರೆ ಎಂದಾದರೆ ಕೇಸರಿ ಯುವಕರು ಪ್ರತಿಭಟನೆ ಮಾಡಿ ಗಂಟಲು ಹರಿದುಕೊಳ್ಳುವುದೇ ವೇಸ್ಟ್. ಅವರು ಕೂಡ ಯಾವುದಾದರೂ ಹೋಟೇಲಿನ ಎಸಿ ಕೋಣೆಯಲ್ಲಿ ಕುಳಿತು ಸುದ್ದಿಗೋಷ್ಟಿ ಮಾಡಿ ಅಲ್ಲಿಯೇ ಊಟ ಮಾಡಿ ಕೈ ತೊಳೆದುಕೊಂಡು ಹೋಗುವುದೇ ಬೇಸ್ಟ್!!
Leave A Reply