ಬೆಂಕಿ ಬಿದ್ದಾಗ ಬಾವಿ ತೋಡುವ ಪಾಲಿಕೆಗೆ ಆಂಟೋನಿ ಡೀಲ್ ನಲ್ಲಿ ಸಿಕ್ಕಿದ ಎಂಜಿಲು ಎಷ್ಟು?
ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿನವರಿಗೆ ತಿಂಗಳಿಗೆ ಎರಡೂಕಾಲು ಕೋಟಿ ರೂಪಾಯಿಗಳನ್ನು ಕೊಡುವ ಕಾರ್ಯಕ್ರಮಕ್ಕೆ ಹೆಚ್ಚುವರಿಯಾಗಿ ಒಂದು ವರ್ಷ ಸೇರ್ಪಡೆಯಾಗಿದೆ. ಅದರ ಅರ್ಥ ಇನ್ನು ಒಂದು ವರ್ಷ ತಿಂಗಳಿಗೆ ಎರಡು ಕೋಟಿ ಹಿಡಿದರೂ 24 ಕೋಟಿ ರೂಪಾಯಿ ನಮ್ಮ ನಿಮ್ಮ ತೆರಿಗೆಯ ಹಣ ಪೋಲಾಗಲಿದೆ. ಆಂಟೋನಿಗೆ ಒಂದು ವರ್ಷ ಹೆಚ್ಚುವರಿಯಾಗಿ ಗುತ್ತಿಗೆಯನ್ನು ಕೊಡುವುದಕ್ಕೆ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ 60 ಕಾರ್ಪೋರೇಟರ್ ಗಳಲ್ಲಿ ಒಬ್ಬರೂ ಕೂಡ ವಿರುದ್ಧ ಧ್ವನಿ ಎತ್ತಿಲ್ಲ.
ಯಾಕೆಂದರೆ ಆಂಟೋನಿಯವರ ಜನ ಯಾರಾದರೂ ಪಾಲಿಕೆಯ ಪರಿಷತ್ ಸಭೆಯಲ್ಲಿ ಒಂದು ಕಣ್ಣು ಇಟ್ಟೇ ಇಟ್ಟಿರುತ್ತಾರೆ. ಯಾರಾದರೂ ಒಬ್ಬ ಸದಸ್ಯ ವಿರುದ್ಧ ಮಾತನಾಡಿದರೂ ಮುಂದಿನ ತಿಂಗಳು ಅವನ ಅಥವಾ ಅವಳ ಮನೆಗೆ ಕವರಿನಲ್ಲಿ ಹೋಗುವ ತ್ಯಾಜ್ಯದ ಎಂಜಿಲು ಹಣ ಹೋಗಲಿಕ್ಕಿಲ್ಲ. ಆದ್ದರಿಂದ ಯಾವ ಬುದ್ಧಿವಂತ ಕೂಡ ಆಂಟೋನಿ ವಿರುದ್ಧ ಮಾತನಾಡಲು ಹೋಗುವುದಿಲ್ಲ. ಹೋದರೆ ಅವನ ತಟ್ಟೆಗೆ ಅವನೇ ಕಲ್ಲು ಎತ್ತಿ ಹಾಕಿದ ಹಾಗೆ ಎಂದು ಅವನಿಗೆ ಅಥವಾ ಅವಳಿಗೆ ಗೊತ್ತಿದೆ. ಹಾಗಾದರೆ ಪ್ರತಿ ವಾರ್ಡಿನಲ್ಲಿ ಸರಿಯಾಗಿ ತ್ಯಾಜ್ಯ ಸಂಗ್ರಹ ಆಗುತ್ತದೆಯಾ ಎಂದು ನೋಡಿದರೆ ಒಬ್ಬನೇ ಒಬ್ಬ ಮನಪಾ ಸದಸ್ಯ/ಸ್ಯೆ ಹೌದು ಎಂದು ಎದೆ ತಟ್ಟಿ ಹೇಳುವ ಸ್ಥಿತಿಯಲ್ಲಿಲ್ಲ. ನೀವು ಕುಡಿದು ಮುಗಿಸಿದ ಎರಡು ಸೀಯಾಳಗಳನ್ನು ಹೊರಗೆ ಇಟ್ಟು ಅದನ್ನು ಈ ತ್ಯಾಜ್ಯದ ಗಾಡಿಯವರು ತೆಗೆದುಕೊಂಡು ಹೋಗುತ್ತಾರಾ ಎಂದು ಚೆಕ್ ಮಾಡಿ ನೋಡಿ. ಇಲ್ಲ, ಇಲ್ಲವೇ ಇಲ್ಲ. ಅದು ಶುಕ್ರವಾರ ತೆಗೆದುಕೊಂಡು ಹೋಗಲಾಗುವುದು ಎನ್ನುವ ಕುಹಕದ ನೋಟ ನಮ್ಮತ್ತ ಬೀರಲಾಗುತ್ತದೆ. ಅದೇ ಈ ರಸ್ತೆ ಬದಿ ಬೊಂಡ ಅಂಗಡಿಯವರು ನಿತ್ಯ ನೂರಾರು ಖಾಲಿ ಬೊಂಡವನ್ನು ಗೋಣಿಯಲ್ಲಿ ತುಂಬಿಸಿ ಇಟ್ಟರೂ ಅದನ್ನು ಆರಾಮವಾಗಿ ಇದೇ ಆಂಟೋನಿ ವೇಸ್ಟ್ ನವರು ತೆಗೆದುಕೊಂಡು ಹೋಗುತ್ತಾರೆ. ಹಾಗಾದ್ರೆ ಗಾಡಿಯವರದ್ದು ತೆಗೆದುಕೊಂಡು ಹೋಗುತ್ತೀರಿ, ಅವರು ಪಾಲಿಕೆಗೆ ಒಂದು ರೂಪಾಯಿ ಕೂಡ ಟ್ಯಾಕ್ಸ್ ಕಟ್ಟುತ್ತಿಲ್ಲ. ಅದೇ ನಾವು ತ್ಯಾಜ್ಯ ಅಥವಾ ಕಸ ತೆರಿಗೆ ಎಂದು ಪಾಲಿಕೆಗೆ ವರ್ಷಂಪ್ರತಿ ಹಣ ಕಟ್ಟಲೇಬೇಕಾಗುತ್ತದೆ. ಏನು ಕಥೆ ಎಂದು ಆಂಟೋನಿಯವರಿಗೆ ಕೇಳಿದರೆ ಅವರ ಬಳಿ ಉತ್ತರ ಇಲ್ಲ. ಆದರೆ ನಮ್ಮ ಎರಡು ಖಾಲಿ ಸೀಯಾಳವನ್ನು ತೆಗೆದುಕೊಂಡು ಹೋಗಲು ಇವರಿಗೆ ಶುಕ್ರವಾರವೇ ಬೇಕು. ಅಷ್ಟರಲ್ಲಿ ಆ ಬೊಂಡದ ಒಳಗೆ ಮಳೆಯ ನೀರು ಬಿದ್ದು ಅಲ್ಲಿ ಮಲೇರಿಯಾ ಸೊಳ್ಳೆಗಳು ಮರಿ ಇಟ್ಟು ಯಾರಿಗಾದರೂ ಮಲೇರಿಯಾ ಅಥವಾ ಡೆಂಗ್ಯೂ ಶುರುವಾದರೆ ಆಗ ನೋಡಿಕೊಳ್ಳಲು ಯಾರು ಆಂಟೋನಿಯವರು ಬರುತ್ತಾರಾ? ಹೋಗಲಿ ಈಗ ಬಾಯಿ ಸತ್ತು ಹೋದಂತೆ ಆಡುತ್ತಿರುವ ಯಾವನಾದರೂ ಒಬ್ಬ ಕಾರ್ಪೋರೇಟರ್ ಬರುತ್ತಾರಾ?
ಇನ್ನು ಆಂಟೋನಿಯವರ ವಿಷಯಕ್ಕೆ ಬರೋಣ. ಒಂದು ವರ್ಷ ಹೆಚ್ಚಿಗೆ ಸಿಕ್ಕಿತು, ಚೆನ್ನಾಗಿ ಕೆಲಸ ಮಾಡೋಣ ಎಂದು ಆಂಟೋನಿ ವೇಸ್ಟ್ ನವರು ಅಂದುಕೊಳ್ಳುವುದಿಲ್ಲ. ಅವರಿಗೆ ಚೆನ್ನಾಗಿ ಗೊತ್ತಿದೆ. ಪಾಲಿಕೆಗೆ ಏನೂ ಗತಿಯಿಲ್ಲದೆ ನಮ್ಮನ್ನು ಮುಂದುವರೆಸಿದ್ದಾರೆ. ಆದ್ದರಿಂದ ಅವರು ಈಗ ಎಷ್ಟು ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತಾರೋ ಅಷ್ಟೇ ಉದಾಸೀನತೆಯಿಂದ ಕೆಲಸ ಮುಂದುವರೆಸಿಕೊಂಡು ಹೋಗಲಿದ್ದಾರೆ. ಹಾಗಾದರೆ ಪಾಲಿಕೆ ಏನು ಮಾಡಬಹುದಿತ್ತು? ಆಂಟೋನಿ ವೇಸ್ಟ್ ನವರೊಂದಿಗೆ ಒಂದು ವರ್ಷದ ಗುತ್ತಿಗೆಯನ್ನು ನವೀಕರಿಸುವ ಮೊದಲು ಅವರು ಏನೇನು ಮಾಡಬೇಕು ಮತ್ತು ಮಾಡದೇ ಹೋದರೆ ಪಾಲಿಕೆ ಏನು ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ವಿವರಿಸಬೇಕಿತ್ತು. ಡಿವೈಡರ್ ಬಳಿ ಬಿದ್ದಿರುವ ಧೂಳು ತೆಗೆಯಲಾದರೂ ಹೇಳಿದ್ದಾರಾ? ಅದು ಕೂಡ ಇಲ್ಲ. ನಾವು ಒಂದು ಸಾವಿರ ರೂಪಾಯಿಯ ಒಂದು ಸೀರೆಯನ್ನು ಖರೀದಿಸುವ ಮೊದಲು ಅಂಗಡಿಯಲ್ಲಿ ನೂರು ಸಲ ಯೋಚಿಸುವುದಿಲ್ಲವೇ? ಒಂದು ಸಾವಿರ ರೂಪಾಯಿಗೆ ಅದು ಯೋಗ್ಯವಾದ ವಸ್ತುವೇ ಎಂದು ಪರಿಶೀಲಿಸುವುದಿಲ್ಲವೇ? ಹಾಗಿರುವಾಗ ಎರಡುಕಾಲು ಕೋಟಿ ರೂಪಾಯಿ ಕೊಡುವ ಮೊದಲು ಅದನ್ನು ತೆಗೆದುಕೊಳ್ಳುವವರು ಅದಕ್ಕೆ ಯೋಗ್ಯವಾದ ಕೆಲಸ ಮಾಡುತ್ತಿದ್ದಾರಾ ಎಂದು ನೋಡಬೇಕಲ್ಲವೇ? ಇಲ್ಲ. ಇವರಿಗೆ ಅದು ಬಿದ್ದು ಹೋಗಿಲ್ಲ. ಯಾಕೆಂದರೆ ಅದು ಜನರ ತೆರಿಗೆಯ ಹಣ ಅಲ್ಲವೇ? ಇನ್ನು ನನಗೆ ಇವರ ಬಗ್ಗೆ ಅಸಹ್ಯ ಎನಿಸುವುದು ಇನ್ನೊಂದು ಕಾರಣಕ್ಕೆ. ಬೆಂಕಿ ಬಿದ್ದ ನಂತರ ಇವರು ಬಾವಿ ತೊಡಲು ಹೊರಡುವುದು. ಪಾಲಿಕೆಗೆ ಆಂಟೋನಿ ವೇಸ್ಟಿನವರ ಗುತ್ತಿಗೆ ಅವಧಿ ಯಾವಾಗ ಮುಗಿಯುತ್ತೆ ಎಂದು ಗೊತ್ತಿದೆ. ಇಂತಹ ಒಂದು ಬೃಹತ್ ಗುತ್ತಿಗೆ ಮುಗಿದ ನಂತರ ಮರುದಿನ ಕುಳಿತು ನಾಳೆಯಿಂದ ಕಸ ಎತ್ತುವವರು ಯಾರು ಎಂದು ಯೋಚಿಸುವುದಲ್ಲ. ಒಂದು ವರ್ಷದ ಮೊದಲೇ ಈ ಬಗ್ಗೆ ಚಿಂತನೆ ಶುರು ಮಾಡಬೇಕು. ಐದು ಸಲ ಗೆದ್ದವರಿಗೆ ಇದು ಗೊತ್ತಾಗುತ್ತಿಲ್ಲ ಎಂದ ಮೇಲೆ ಮೂರುವರೆ ವರ್ಷದ ಹಿಂದೆ ಪಾಲಿಕೆಯ ಒಳಗೆ ಕಾಲಿಟ್ಟವರಿಗೆ ಹೇಗೆ ತಾನೆ ಗೊತ್ತಾಗುತ್ತೆ. ಈಗ ಇವರು ಮೀಟಿಂಗ್ ಕರೆದು ಯೋಚಿಸಲು ಕುಳಿತರೆ ಆಗುತ್ತಾ? ಈ ನಡುವೆ ಕೋಟ್ಯಾಂತರ ರೂಪಾಯಿ ನೀಡಿ ಗಾಡಿಗಳನ್ನು ಖರೀದಿಸುವುದು ನಂತರ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡು ಕಸ ಎತ್ತುವುದು ಎಂದೆಲ್ಲ ರೂಪುರೇಶೆ ಸಿದ್ಧವಾಗಿತ್ತು. ಯಾಕೋ ಮೊದಲ ಬಾರಿಗೆ ಅಪರೂಪವೆಂಬಂತೆ ಕಾಂಗ್ರೆಸ್ ಈ ವಿಷಯದಲ್ಲಿ ಸುದ್ದಿಗೋಷ್ಟಿ ಮಾಡಿ ಗುಟುರು ಹಾಕುತ್ತಿದ್ದಂತೆ ಆ ಯೋಜನೆ ಕೈಬಿಡಲಾಗಿದೆ. ಮತ್ತೆ ಆಂಟೋನಿಗೆ ಮಣೆ ಹಾಕಲಾಗಿದೆ. ಅಲ್ಲಿಗೆ ಆಡಳಿತ ಮತ್ತು ವಿಪಕ್ಷ ಎಲ್ಲವೂ ಜೊತೆಯಾಗಿದೆ. ಯಾಕೋ, ಆಂಟೋನಿಯವರ ಎಂಜಿಲಿನಲ್ಲಿ ಸಿಕ್ಕಾಪಟ್ಟೆ ರುಚಿ ಇದ್ದ ಹಾಗೆ ಇದೆ!
Leave A Reply