ಹುದ್ದೆ ಸಿಗಲಿಲ್ಲ, ವರದಿ ಅನುಷ್ಟಾನವಾಗಿಲ್ಲ, ಮಾಣಿಪ್ಪಾಡಿ ಫುಲ್ ಗರಂ!!
ಭಾರತೀಯ ಜನತಾ ಪಾರ್ಟಿಯ ಮುಖಂಡ, ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಯವರು ಮೊದಲ ಬಾರಿಗೆ ತಮ್ಮದೇ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಮಾತನಾಡಿದ್ದಾರೆ. ವಕ್ಫ್ ಆಸ್ತಿಯನ್ನು ಕಾಂಗ್ರೆಸ್ಸಿನ ಪ್ರಭಾವಿ ಮುಖಂಡರು, ಜನಪ್ರತಿನಿಧಿಗಳು ಅತಿಕ್ರಮಣ ಮಾಡಿದ್ದಾರೆ ಮತ್ತು ಈ ಮೂಲಕ ಕೋಟ್ಯಾಂತರ ರೂಪಾಯಿ ಹಣವನ್ನು ಸಂಪಾದಿಸಿದ್ದಾರೆ ಎಂದು ಉಳ್ಳಾಲದಿಂದ ಬೀದರ್ ತನಕ ಇಡೀ ರಾಜ್ಯದ ವಕ್ಫ್ ಆಸ್ತಿಯ ಬಗ್ಗೆ ಅಧ್ಯಯನ ಮಾಡಿ ಮಾಣಿಪ್ಪಾಡಿ ವರದಿಯನ್ನು ತಯಾರಿಸಿದ್ದರು. ಅದು ನಂತರ ಏನಾಯಿತು? ಯಾಕೆ ಅನುಷ್ಟಾನ ಆಗಲಿಲ್ಲ ಎನ್ನುವುದನ್ನು ಈ ಜಾಗೃತ ಅಂಕಣದಲ್ಲಿ ಈಗಾಗಲೇ ಬರೆದಿದ್ದೇನೆ. ರಾಜ್ಯದಲ್ಲಿ ಮುಸ್ಲಿಮರಿಗೆ ಅವರ ವಕ್ಫ್ ಆಸ್ತಿಗಳನ್ನು ಪ್ರಭಾವಿಗಳಿಂದ ವಸೂಲಿ ಮಾಡಿ ಇಡೀ ಸಮುದಾಯದ ಅಭಿವೃದ್ಧಿಗೆ ಹಿಂತಿರುಗಿಸುತ್ತೇವೆ ಎಂದು ಚುನಾವಣೆಯ ಮೊದಲು ಬಿಜೆಪಿ ಹೇಳಿ ಬಂದಿತ್ತಲ್ಲ, ಅದನ್ನು ಮುಸ್ಲಿಮರು ಎಷ್ಟು ನಂಬಿದ್ದರೋ, ಇಲ್ವೋ, ಆದರೆ ಬಿಜೆಪಿ ವಿವಿಧ ಕಾರಣಗಳಿಂದ ನಂತರ ಅಧಿಕಾರಕ್ಕೆ ಬಂದದ್ದು ನಿಜ. ಆದರೆ ಏನಾಯಿತು? ವಕ್ಫ್ ಹಗರಣದ ಫೈಲ್ ದವಳಗಿರಿಯ ಅಟ್ಟ ಸೇರಿತ್ತು. ಮಾಣಿಪ್ಪಾಡಿ ಯಾರದೆಲ್ಲ ಬೆದರಿಕೆ ಎದುರಿಸಿ, ಅವರಿಗೆ ಚಾಲೆಂಜ್ ಮಾಡಿ ನಮ್ಮ ಸರಕಾರ ಬಂದ ಕೂಡಲೇ ನೋಡುತ್ತೀರಿ, ಏನು ಆಗುತ್ತೆ, ನಿಮ್ಮನ್ನು ಒಳಗೆ ಹಾಕುತ್ತೇವೆ ಎಂದು ಹೇಳಿದ್ದರೋ ಅದು ಈಡೇರಲೇ ಇಲ್ಲ.
ಇವರು ಆ ವರದಿಯಲ್ಲಿ ಯಾರದೆಲ್ಲ ಹೆಸರು ಬರೆದು ಕೊಟ್ಟಿದ್ದರೋ ಅವರೆಲ್ಲ ಈಗ ಮಾಣಿಪ್ಪಾಡಿಯವರನ್ನು ನೋಡಿ ಮುಸಿಮುಸಿ ನಗುತ್ತಿದ್ದಾರೆ. ರಾಜಕೀಯ ಅಂದ್ರೆ ಇಷ್ಟೇನೆ ಎನ್ನುತ್ತಿದ್ದಾರೆ. ಅದು ಒಂದು ಕಡೆ ಆದರೆ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರನ್ನಾಗಿ ಬಿಜೆಪಿಗೆ ಸಂಬಂಧವೇ ಇಲ್ಲದವರನ್ನು ರಾಜ್ಯ ಸರಕಾರ ನೇಮಿಸಿದೆ. ಅದರೊಂದಿಗೆ ಮಾಣಿಪ್ಪಾಡಿ ಯಾವ ಭ್ರಷ್ಟ ಅಧಿಕಾರಿಗಳನ್ನು ಎದುರು ಹಾಕಿ ವರದಿ ತಯಾರಿಸಿದ್ದರೋ ಅವರನ್ನೇ ನೇಮಿಸಿ ಬೆಂಬಲಿಸಿದೆ. ಇದು ಸಹಜವಾಗಿ ಅನ್ವರ್ ಮಾಣಿಪ್ಪಾಡಿಯವರನ್ನು ಕೆರಳಿಸಿದೆ. ಕೊನೆಗೆ ಬೇರೆ ದಾರಿ ಕಾಣದೆ ಅವರು ಮೋದಿ ವಿರುದ್ಧ ಗುಟುರು ಹಾಕಿದ್ದಾರೆ. ಇಲ್ಲಿ ಅನ್ವರ್ ಯಾಕೆ ಹಾಗೆ ಮಾಡಿದರು ಎನ್ನುವುದು ಅವರಿಗೆ ಗೊತ್ತು. ಆದರೆ ಮೇಲ್ನೋಟಕ್ಕೆ ಇವರು ಪಕ್ಷದ ಸಿದ್ಧಾಂತವನ್ನು ವಿರೋಧಿಸಿ ಹೇಳಿಕೆ ಕೊಟ್ಟಿರುವುದು ಸಹಜ. ಮೋದಿಯವರಿಂದ ಸಾಮಾಜಿಕ ನ್ಯಾಯ ಪರಿಪಾಲನೆ ಆಗಿಲ್ಲ ಎಂದು ಹೇಳುವಷ್ಟು ಅನ್ವರ್ ಬೆಳೆದಿಲ್ಲ. ಒಂದು ಬಾವಿಯ ಕಪ್ಪೆಯಂತೆ ಇರುವವರು ಸಮುದ್ರದ ತಿಮಿಂಗಿಲವನ್ನು ಟೀಕಿಸಲು ಹೋಗಲೇಬಾರದು. ರಾಜಕಾರಣದಲ್ಲಿ ತಾಳ್ಮೆ ಸಹಜ. ಒಂದು ವೇಳೆ ಅನ್ವರ್ ಅವರಿಗೆ ಯಾವುದೇ ಪ್ರಭಾವಿ ಹುದ್ದೆ ಸಿಗಲಿಲ್ಲ ಎಂದಾದರೆ ಅವರು ಕಾಂಗ್ರೆಸ್ಸಿಗೆ ಹೋಗಬಹುದು.
ಅಲ್ಲಿ ಇವರಂತಹ ಅಸಂಖ್ಯಾತ ಅಲ್ಪಸಂಖ್ಯಾತ ಮುಖಂಡರು ಪೋಸ್ಟಿಗಾಗಿ ಕಾಯುತ್ತಾ ಇರುತ್ತಾರೆ. ಅವರೊಂದಿಗೆ ಇವರು ಕೂಡ ಸ್ಪರ್ಧೆಗೆ ಇಳಿಯಬಹುದು. ಸಿಕ್ಕಿದ್ದರೆ ಅದೃಷ್ಟ ಎನ್ನಬಹುದು. ಹಾಗಂತ ಬಿಜೆಪಿಯ ಒಳಗೆ ಇದ್ದು ಪಕ್ಷವನ್ನು ಬೈಯುವುದು ಅವರ ಉನ್ನತ ವೆವೆಲ್ಲಿಗೆ ಸರಿಯಾಗುವುದಿಲ್ಲ. ಅವರಿಗೆ ಬಿಜೆಪಿ ಒಂದು ಕಾಲದಲ್ಲಿ ಎಲ್ಲವೂ ಕೊಟ್ಟಿದೆ. ಹುದ್ದೆ, ಗೌರವ, ಸ್ಥಾನಮಾನ ಸಿಕ್ಕಿದೆ. ಅಷ್ಟಾಗಿಯೂ ಬಿಜೆಪಿಗೆ ಮುಸ್ಲಿಮರ ಎಷ್ಟು ಮತ ಬೀಳುತ್ತೇ ಎನ್ನುವುದು ದೇವರಿಗೆ ಮಾತ್ರ ಗೊತ್ತು. ಈಗ ಬಿಜೆಪಿಯಲ್ಲಿ ಸ್ಥಾನಮಾನ ಹೊಂದಿರುವ ಎಷ್ಟು ಮುಸ್ಲಿಂ ನಾಯಕರಿಗೆ ಕನಿಷ್ಟ ತಮ್ಮ ಸಮುದಾಯದ ಹತ್ತು ಸಾವಿರ ಮತ ತಿರುಗಿಸುವ ಸಾಮರ್ತ್ಯ ಇದೆ. ಅದು ಸಾಧ್ಯವಾಗುತ್ತದೆಯಾ?. ಇಲ್ಲ, ಆಗುವುದಿಲ್ಲ. ಆದರೂ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಇರುವ ಬೆರೆಳೆಣಿಕೆಯ ನಾಯಕರಿಗೆ ಪ್ರತಿ ಬಾರಿ ಅವಕಾಶ ಸಿಕ್ಕಿದೆ. ಹಾಗಂತ ಅವರ ಅಸ್ತಿತ್ವವನ್ನು ನಾವು ಕಡೆಗಣಿಸುತ್ತಿಲ್ಲ. ತಮ್ಮ ಇಡೀ ಸಮುದಾಯವನ್ನು ಎದುರು ಹಾಕಿ ಅವರು ಬಿಜೆಪಿಯಲ್ಲಿ ಇರುವುದು ಚಿಕ್ಕ ವಿಷಯವೇನಲ್ಲ. ಅವರಿಗೆ ಬಿಜೆಪಿಯಲ್ಲಿ ಸಿಗುವ ಗೌರವಕ್ಕಿಂತ ತಮ್ಮ ಸಮುದಾಯದಿಂದ ಎದುರಾಗುವ ಉಪಟಳ ಅಥವಾ ನಿರ್ಲಕ್ಷ್ಯ ಚಿಕ್ಕದಲ್ಲ. ಆದರೂ ಕೆಲವು ಇರುತ್ತಾರೆ.
ಆದರೆ ಒಂದು ಅವಕಾಶ ಸಿಗಲಿಲಲ್ಲ ಎಂದ ಕೂಡಲೇ ಇಷ್ಟು ವರ್ಷ ಅವಕಾಶ ಪಕ್ಷವನ್ನು ಮರೆಯಲು ಸಾಧ್ಯವೇ? ಸರಿಯಾಗಿ ನೋಡಿದರೆ ಬಿಜೆಪಿಯಲ್ಲಿ ಈ ಸಂಪ್ರದಾಯ ಇತ್ತೀಚಿನ ವರ್ಷಗಳಲ್ಲಿ ಶುರುವಾಗಿರುವುದು. ತಮ್ಮದೇ ಪಕ್ಷದ ನಾಯಕರನ್ನು ಬಹಿರಂಗ ವೇದಿಕೆಯಲ್ಲಿ ಮಾತನಾಡುವುದು, ಪ್ರಧಾನಿಗೆ, ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ ಪತ್ರ ಬರೆಯುವುದು, ತಾನು ಪತ್ರ ಬರೆದಿರುವುದು ಮಾಧ್ಯಮಗಳಿಗೆ ಲೀಕ್ ಮಾಡುವುದು, ನಂತರ ತಮ್ಮ ಉದ್ದೇಶ ಈಡೇರಿರುವುದಕ್ಕೆ ತೃಪ್ತಿ ಪಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಒಂದು ವೇಳೆ ಇವರು ಪಕ್ಷದಲ್ಲಿ ಸುಧಾರಣೆ ಆಗಲೇಬೇಕು ಎಂದಿದ್ದರೆ ಪತ್ರ ಬರೆದು ಲೀಕ್ ಮಾಡಲು ಹೋಗುವುದಿಲ್ಲ. ಅದನ್ನು ಸಂಬಂಖಧಪಟ್ಟವರಿಗೆ ತಲುಪಿಸಿ ಮೌನವಾಗಿರುತ್ತಾರೆ. ಕ್ರಮ ತೆಗೆದುಕೊಳ್ಳಲು ಬಿಜೆಪಿ ಉನ್ನತ ಮುಖಂಡರು ಮುಂದಾಗದಿದ್ದರೆ ಕನಿಷ್ಟ ತಾನು ಪ್ರಯತ್ನಪಟ್ಟೆನಲ್ಲ ಎನ್ನುವ ಸಮಾಧಾನವಾದರೂ ಇರುತ್ತದೆ. ಆದರೆ ಮೀಡಿಯಾಗಳಿಗೆ ಕಳುಹಿಸಿಕೊಟ್ಟರೆ ಏನು ಪ್ರಯೋಜನ? ತಾಯಿ ಸಮಾನ ಪಕ್ಷಕ್ಕೆ ದ್ರೋಹ ಆಗಲ್ವಾ, ರಾಜಕಾರಣದಲ್ಲಿ ತಾಳ್ಮೆ ಬೇಕು. ಇಲ್ಲದಿದ್ದರೆ ಯಾವುದು ಇದ್ದರೂ ಅಷ್ಟೇ!!
Leave A Reply