ಕೋಟಾ ಪೊಲೀಸರು ಮದುಮಗನನ್ನು ಪಕ್ಕಕ್ಕೆ ಕೂರಿಸಿ ಕ್ಷಮೆ ಕೇಳಲಿ!!
ಪೊಲೀಸರು ದಲ್ಲಿ ಡ್ಯೂಟಿ ಮಾಡ್ತಾ ಇದ್ದೇವೆ ಎಂದರೆ ಅದೇನು ಅಂಡಮಾನ್ ದ್ವೀಪದಲ್ಲಿ 1920 ರಲ್ಲಿ ಸರ್ವೀಸ್ ಮಾಡ್ತಾ ಇರೋ ಹಾಗೆ ಅಂದುಕೊಳ್ಳಬಾರದು. ಇವತ್ತಿನ ಕಾಲದಲ್ಲಿ ಕಟ್ಟಕಡೆಯ ಗ್ರಾಮದ ಕೊನೆಯ ಬೀದಿಯಲ್ಲಿ ವಾಸಿಸುವವನ ಬಳಿ ಕೂಡ ಯಾವುದೋ ಟಿವಿ ಚಾನೆಲ್ ನವರ ನಂಬರ್ ಇದ್ದೇ ಇರುತ್ತದೆ. ಇವತ್ತಿನ ದಿನಗಳಲ್ಲಿ ಪಕ್ಕದ ಕಟ್ಟಡಕ್ಕೆ ಬೆಂಕಿ ಬಿದ್ದರೆ ಫೈರ್ ಇಂಜಿನ್ ನವರಿಗೆ ಮತ್ತೆ ಕಾಲ್ ಮಾಡೋದು, ಮೊದಲು ಟಿವಿ9, ಸುವರ್ಣ ಅಥವಾ ಪಬ್ಲಿಕ್ ಟಿವಿಯವರ ನಂಬರ್ ಇದೆಯಾ ಎಂದು ನೋಡುವವರೇ ಹೆಚ್ಚು. ಇಷ್ಟೆಲ್ಲಾ ಗೊತ್ತಿದ್ರೂ ಈ ಪೊಲೀಸಿನವರು ತಾವಿನ್ನೂ ಸ್ವಾತಂತ್ರ್ಯಪೂರ್ವದ ಬ್ರಿಟಿಷರ ಕಾಲದಲ್ಲಿ ಇದ್ದೇವೆ ಎನ್ನುವ ರೀತಿಯಲ್ಲಿ ವರ್ತಿಸುತ್ತಾರಲ್ಲ, ಇವರೇನು ಪೆದ್ರಾ ಅಥವಾ ದುರಂಹಕಾರನಾ ಎಂದು ಅಲ್ಲಿನ ಸಜ್ಜನ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರೇ ಕೇಳಬೇಕು. ಯಾಕೆಂದರೆ ಇದು ಅವರದ್ದೇ ಊರಿನಲ್ಲಿ ಆದ ವಿಷಯ ಮತ್ತು ಅವರು ಈಗ ಸಮಾಜ ಕಲ್ಯಾಣ ಸಚಿವರು ಬೇರೆ.
ಈಗಿನ ಕಾಲದಲ್ಲಿ ಕೊರಗರು ಎಂದರೆ ಒಂದು ಸಮಯದಲ್ಲಿ ಇದ್ದಂತಹ ಮನಸ್ಥಿತಿ ಇಲ್ಲ. ಅವರಲ್ಲಿ ಕೂಡ ತುಂಬಾ ಕಲಿತವರು ಇದ್ದಾರೆ. ಉತ್ತಮ ಉದ್ಯೋಗದಲ್ಲಿ ಇರುವವರು ಇದ್ದಾರೆ. ಅವರಿಗೂ ಲೋಕಜ್ಞಾನ ಇದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಕಾನೂನಿನ ಪರಿಜ್ಞಾನ ಬೆಳೆದಿದೆ. ಆದ್ದರಿಂದ ಒಂದೋ ಕೋಟಾ ಎಸ್ ಐ ಸಂತೋಷ್ ಮತ್ತು ಅವರ ಸಿಬ್ಬಂದಿಗಳು ತಮ್ಮನ್ನು ತಾವು ಸಿಂಗಂ ಸಿನೆಮಾದ ಅಜಯ್ ದೇವಗನ್ ಮತ್ತು ಪಟಾಲಾಂ ಅಂತ ಅಂದುಕೊಂಡು ಅಲ್ಲಿ ರೇಡ್ ಮಾಡಿರಬೇಕು ಅಥವಾ ದೂರು ಕೊಟ್ಟ ಮೇಲ್ಜಾಜಿಯವರು ಅನಿಸಿಕೊಂಡವ ಋಣ ಇವರ ಮೇಲಿರಬೇಕು. ಇಲ್ಲದೇ ಹೋದರೆ ಕೊರಗರ ಕಾಲೋನಿಗೆ ಹೋದಾಗ ಈ ವಿಷಯ ರಾಜ್ಯಮಟ್ಟದಲ್ಲಿ ಸುದ್ದಿಯಾಗಿ ತಮ್ಮ ಸಮವಸ್ತ್ರಕ್ಕೆ ಕಲೆಯಾಗಬಹುದು ಎನ್ನುವ ದೂರದೃಷ್ಟಿ ಅವರಿಗೆ ಇದ್ದಂತಿಲ್ಲ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ಗೊತ್ತಾಗಲ್ಲ ಎಂದು ಅಂದುಕೊಳ್ಳುವಂತೆ ತಾವು ರಾತ್ರಿ ಕತ್ತಲಲ್ಲಿ ಕೊರಗರ ಮನೆಗೆ ಹೋಗಿ ಅವರಿಗೆ ನಾಲ್ಕು ಬಾರಿಸಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಕೋಟಾ ಪೊಲೀಸರು ಅಂದುಕೊಂಡಿರಬಹುದು. ಯಾವುದೇ ಒಬ್ಬ ವ್ಯಕ್ತಿ ಸಾಮಾಜಿಕ ಸ್ವಾಸ್ಥಕ್ಕೆ ದಕ್ಕೆ ತರುವಂತೆ ಮ್ಯೂಸಿಕ್ ಹಾಕಿ ನಲಿಯುತ್ತಿದ್ದಾನೆ ಎಂದರೆ ಸಹಜವಾಗಿ ಪೊಲೀಸ್ ಠಾಣೆಗೆ ದೂರು ಹೋಗಿಯೇ ಹೋಗುತ್ತದೆ. ಆಗ ಪೊಲೀಸರು ಕೂಡ ಒಳ್ಳೆಯ ಬಾಲಿವುಡ್ ಸಿನೆಮಾದಲ್ಲಿ ದಬಾಂಗ್ ಎಂಟ್ರಿ ಕೊಟ್ಟಂತೆ ಕೊಡಲು ಇದೇನು ಸಿನೆಮಾ ಅಲ್ಲ. ಅಲ್ಲಿ ಹೋಗಿ ಅಲ್ಲಿನ ಹಿರಿಯರನ್ನು ಕರೆಸಿ ನಿಮ್ಮ ಡಿಜೆಯನ್ನು ಸ್ವಲ್ಪ ಕಡಿಮೆ ಮಾಡಿ ಅಥವಾ ನಿಮಗೆ ಮಾತ್ರ ಕೇಳಿಸುವಂತೆ ಇಟ್ಟರೆ ಸಾಕು, ಪಕ್ಕದ ಮನೆಯವರಿಗೆ ತೊಂದರೆ ಆಗುತ್ತದೆಯಂತೆ ಎಂದು ಹೇಳಿದರೆ ಆಗುತ್ತಿತ್ತು. ಅದು ಬಿಟ್ಟು ಬೋ…..ಮ… ಎಂದು ಬೈದು ನಿಮಗೆ ಯಾಕೋ ಡಿಜೆ ಎಂದು ಜೋರು ಮಾಡಲು ಹೋಗುವುದು ಗೂಂಡಾಗಿರಿಯ ಪರೋಕ್ಷ ರೂಪವಲ್ಲದೆ ಮತ್ತೇನು? ಇನ್ನು ಕೊರಗರಿಗೆ ಡಿಜೆ ಹಾಕುವ ಸ್ವಾತಂತ್ರ್ಯ ಈ ಭಾರತದಲ್ಲಿ ಇಲ್ಲವೇ ಇಲ್ಲ ಎಂದು ನಿಯಮ ಇಲ್ಲ. ಅವರು ಕೂಡ ಮದುವೆ ಎಂದ ಮೇಲೆ ಒಂದಿಷ್ಟು ಸಂತೋಷ, ಸಂಭ್ರಮ ಪಡದೇ ಇರಬಾರದು ಎನ್ನಲು ಸಾಧ್ಯನಾ? ಅದೇ ಒಂದು ವೇಳೆ ಕೊರಗರ ಸ್ಥಾನದಲ್ಲಿ ಆ ಊರಿನ ಗ್ರಾಮ ಪಂಚಾಯತ್ ಅಧ್ಯಕ್ಷರೋ, ಊರಿನ ಮಿಲ್ಲಿನ ಯಜಮಾನನೋ ಇದ್ದರೆ ಇದೇ ರೀತಿಯಲ್ಲಿ ಪೊಲೀಸರು ದಾಳಿ ಮಾಡುತ್ತಿದ್ದರಾ? ಇನ್ನು ಮದುಮಗನನ್ನು ಸ್ಟೇಶನ್ನಿಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಿಸಿ ಹೊಡೆಯಲು ಅವನು ಏನು ಕಾಶ್ಮೀರಿ ಭಯೋತ್ಪಾದಕನಾ? ಇನ್ನು ಮನೆಯವರನ್ನು ಸ್ಟೇಶನ್ನಿಗೆ ಕರೆಸಿ ಕೂಡಿ ಹಾಕಲು ಅವರೇನು ಊರಿಗೆ ಬಾಂಬ್ ಇಡಲು ಬಂದು ಸಿಕ್ಕಿಹಾಕಿಕೊಂಡವರಾ? ಒಂದು ಪೊಲೀಸ್ ಠಾಣೆಯ ಅಧಿಕಾರಿಗಳಾಗಿ ಇಂತಹ ಸಂದರ್ಭದಲ್ಲಿ ಬುದ್ಧಿ ಲದ್ದಿ ತಿನ್ನಲು ಹೋಗಿತ್ತಾ ಎನ್ನುವುದು ಪ್ರಶ್ನೆ. ಇನ್ನು ಲಾಠಿಚಾರ್ಜ್ ಮಾಡಲು ಅವರೇನು ಕೈಯಲ್ಲಿ ಪೆಟ್ರೋಲ್ ಬಾಂಬ್ ಹಿಡಿದು ನಿಂತಿದ್ರಾ ಪೊಲೀಸರೇ?
ಆದರೆ ಈಗ ಆ ಸಂತ್ರಸ್ತ ಕುಟುಂಬಗಳಿಗೆ ಯಾವುದೇ ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರೂ ಬೆಂಬಲಕ್ಕೆ ನಿಂತಿದ್ದಾರೆ ಎಂದು ಗೊತ್ತಾದ ನಂತರ ಆ ತಪ್ಪಿತಸ್ಥ ಅಧಿಕಾರಿಗಳಲ್ಲಿ ಕೆಲವರನ್ನು ಅಮಾನತು, ಎತ್ತಂಗಡಿ ಎಲ್ಲ ಮಾಡಿ ಪ್ರಕರಣವನ್ನು ರಾಜಿ ಪಂಚಾಯತಿಯಲ್ಲಿ ಮುಗಿಸಲು ಆಡಳಿತ ಪಕ್ಷದ ಶಾಸಕರು ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಇಲ್ಲಿ ಆ ಶೋಷಿತ ಕುಟುಂಬಕ್ಕೆ ನ್ಯಾಯ ಸಿಗಬೇಕು. ಯಾವ ಅಧಿಕಾರಿ ಇಲ್ಲಿ ಅಮಾನುಷವಾಗಿ ನಡೆದುಕೊಂಡಿದ್ದಾರೋ ಅವರು ಸುದ್ದಿಗೋಷ್ಟಿ ಕರೆದು ಪಕ್ಕದಲ್ಲಿ ತಾವೇ ಹೊಡೆದ ಮದುಮಗನನ್ನು ಕೂರಿಸಿ ಕ್ಷಮಾಪಣೆ ಕೇಳಬೇಕು. ಅದರಿಂದಲಾದರೂ ಆ ಸಮುದಾಯದ ಮೇಲಾದ ಘಾಸಿ ಕಡಿಮೆಯಾಗಬಹುದು. ಈಗ ಏನೆಂದರೆ ಎಲ್ಲಾ ಮುಗಿದ ನಂತರ ಪೊಲೀಸರು ಬರುವಂತೆ ಆ ಕುಟುಂಬದ ಮದುವೆಗೆ ಸಚಿವರು ಹೋಗಿ ನಮಸ್ಕಾರ ಮಾಡಿ ಮದುಮಗನ ಕುಟುಂಬದ ಬೆನ್ನುತಟ್ಟಿ ಬಂದಿದ್ದಾರೆ. ಆದರೆ ಅದರೊಂದಿಗೆ ಆ ಕುಟುಂಬದ ಮೇಲೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಎನ್ನುವ ಕೇಸು ಹಾಕಲಾಗಿದೆ ಎನ್ನುವ ಸುದ್ದಿ ಇದೆ. ಆ ಕೇಸನ್ನು ಕೂಡಲೇ ಹಿಂದಕ್ಕೆ ಪಡೆದುಕೊಳ್ಳುವಂತೆ ಸಚಿವರು ಪೊಲೀಸರಿಗೆ ಸೂಚನೆ ನೀಡಬೇಕು. ಇನ್ನು ಮುಂದೆ ಇಂತಹ ಘಟನೆ ಆಗದಂತೆ ನೋಡಿಕೊಳ್ಳುವಂತೆ ಗೃಹ ಸಚಿವರು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚನೆ ನೀಡಬೇಕು. ಯಾಕೋ ಈಗಿನ ಭಾರತೀಯ ಜನತಾ ಪಾರ್ಟಿಯ ಸರಕಾರಕ್ಕೆ ಅಧಿಕಾರಿಗಳೇ ವಿಲನ್ ತರಹ ಆಗಿಬಿಟ್ಟಿದ್ದಾರೆ!
Leave A Reply