ಇಬ್ರಾಹಿಂಗೆ ಆದ ನಷ್ಟ, ಖಾದರಿಗೆ ಲಾಭ!!
ರಾಜಕೀಯವೇ ಹಾಗೆ. ಅಲ್ಲಿ ಯಾವಾಗ ಯಾರ ಅದೃಷ್ಟದ ಬಾಗಿಲು ತೆರೆಯುತ್ತೆ ಎಂದು ಹೇಳಲು ಆಗುವುದಿಲ್ಲ. ನಿನ್ನೆ ತನಕ ಕನಸೇ ಕಾಣದಿದ್ದವರಿಗೆ ಅಚಾನಕ್ ಆಗಿ ಸಿಂಹಾಸನ ಒಲಿದು ಬರಬಹುದು. ಒಬ್ಬರ ಗಡಿಬಿಡಿ ಇನ್ನೊಬ್ಬರ ಸುಖದ ಸೋಫಾನ ಆಗಬಹುದು. ಒಬ್ಬರ ಅಧಿಕ ಪ್ರಸಂಗ ಇನ್ನೊಬ್ಬರ ಸುಖ ಪ್ರಸಂಗ ಆಗಬಹುದು. ಒಬ್ಬರ ದುರಾಸೆ ಇನ್ನೊಬ್ಬರ ಸಿಹಿ ಆಗಬಹುದು. ಆದ್ದರಿಂದ ರಾಜಕೀಯದಲ್ಲಿ ತಾಳ್ಮೆ ಮತ್ತು ಅದೃಷ್ಟ ಎರಡೂ ಮುಖ್ಯ. ಹಾಗೆ ತಾಳ್ಮೆ ಕಳೆದುಕೊಂಡು, ದುರಾಸೆಗೆ ಬಿದ್ದು, ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದು ವಿಧಾನಪರಿಷತ್ ನಿಂದ ಹೊರಗೆ ಕಾಲಿಟ್ಟಿರುವ ಸಿಎಂ ಇಬ್ರಾಹಿಂ ಅವರಿಗೆ ಆಗಿರುವ ನಷ್ಟ ಮಂಗಳೂರು ಅಂದರೆ ಹಿಂದಿನ ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕ ಯುಟಿ ಖಾದರ್ ಅವರಿಗೆ ಲಾಭವಾಗಿದೆ. ಕಾಂಗ್ರೆಸ್ ನಲ್ಲಿ ಒಂದು ವಿಶೇಷತೆ ಏನೆಂದರೆ ಅವರು ಯಾರಿಗಾದರೂ ಸ್ಥಾನಮಾನ ಸೃಷ್ಟಿಸಬೇಕೆಂದರೆ ಏನು ಬೇಕಾದರೂ ಮಾಡಬಲ್ಲರು. ಉಪಮುಖ್ಯಮಂತ್ರಿ ಎನ್ನುವ ಸ್ಥಾನವೇ ಇಲ್ಲದಿದ್ದಾಗ ಅದನ್ನು ಕ್ರಿಯೇಟ್ ಮಾಡಿ ಎಸ್ ಎಂ ಕೃಷ್ಣನವರಿಗೆ ನೀಡಿದರು. ನಂತರ ಕೃಷ್ಣ ಕಾಂಗ್ರೆಸ್ಸಿನಿಂದಲೇ ಸಿಎಂ ಆದದ್ದು ಅದು ಬೇರೆ ವಿಷಯ. ಆದರೆ ಆವತ್ತು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸದೇ ಹೋದರೆ ಭವಿಷ್ಯದಲ್ಲಿ ತಮ್ಮನ್ನು ಒಕ್ಕಲಿಗ ಮತಗಳು ಬಿಟ್ಟು ಹೋದಾವು ಎಂದು ಕಾಂಗ್ರೆಸ್ಸಿಗೆ ಹೆದರಿಕೆ ಇತ್ತು. ಇನ್ನು ಪಕ್ಷದಲ್ಲಿಯೂ ಅಧ್ಯಕ್ಷರ ಕೈಕೆಳಗೆ ಮೂರು ಕಾರ್ಯಾಧ್ಯಕ್ಷ ಸ್ಥಾನಗಳನ್ನು ಸೃಷ್ಟಿಸಿ ಅದನ್ನು ಮೂರು ಜಾತಿ, ಧರ್ಮದವರಿಗೆ ಹಂಚಿದರು. ಈಗಂತೂ ಚುನಾವಣೆಗೆ ಒಂದು ವರ್ಷ ಎರಡು ತಿಂಗಳು ಇರುವಾಗಲೇ ಲಿಂಗಾಯಿತರಿಗೆ ಭರವಸೆ ಕೊಡಿಸುವ ನಿಟ್ಟಿನಲ್ಲಿ ಎಂಬಿ ಪಾಟೀಲ್ ಅವರಿಗೆ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದರ ನಡುವೆನೆ ಯುಟಿ ಖಾದರ್ ವಿಧಾನಸಭೆಯ ಉಪನಾಯಕನ ಸ್ಥಾನಕ್ಕೆ ಭಾಜನರಾಗಿದ್ದಾರೆ. ಅದು ಕೂಡ ಕಾಂಗ್ರೆಸ್ಸಿನ ಸೃಷ್ಟಿ. ಯಾವಾಗ ಇಬ್ರಾಹಿಂ ಕಾಂಗ್ರೆಸ್ಸಿನಲ್ಲಿ ಮುಸ್ಲಿಮರಿಗೆ ಸೂಕ್ತಸ್ಥಾನ ಸಿಗುವುದಿಲ್ಲ ಎಂದು ಬಾಯಿಗೆ ಮೈಕು ಹಿಡಿದ ಮಾಧ್ಯಮದವರ ಮುಂದೆ ವದರಿದರೋ ಈ ಬಾರಿ ಕಾಂಗ್ರೆಸ್ ತಡಮಾಡಲಿಲ್ಲ. ಅವರು ಹೇಗೂ ಹೋಗುವವರು, ತಡೆಯಲು ಆಗುವುದಿಲ್ಲ, ಅದರ ಬದಲು ಇನ್ನೊಬ್ಬ ಅದೇ ಸಮುದಾಯದ ಶಾಸಕನಿಗೆ ಏನಾದರೂ ಸ್ಥಾನಮಾನ ನೀಡೋಣ, ಆಗ ಬ್ಯಾಲೆನ್ಸ್ ಆಗುತ್ತದೆ ಎಂದು ಯಾವಾಗ ಸಿದ್ಧರಾಮಯ್ಯ, ಹರಿಪ್ರಸಾದ್ ಅಂತವರಿಗೆ ಅನಿಸಿತೋ ಅವರು ನಂಬಿಕಸ್ಥ ಮತ್ತೊಬ್ಬ ಮುಸ್ಲಿಂ ಸಿಪಾಯಿಗೆ ಹುಡುಕಲಾರಂಭಿಸಿದರು. ಆರಂಭದಲ್ಲಿ ಇದ್ದದ್ದೇ ಜಮೀರ್ ಅಹ್ಮದ್ ಹೆಸರು. ಆಗಿಬಿಡಪ್ಪಾ ಎಂದು ಸಿದ್ದು ಹೇಳಿದರೆ ಜಮೀರು ಬೇಡವೇ ಬೇಡಾ ಎಂದುಬಿಟ್ಟರು. ಸರ್, ಅಲ್ಲಿ ವಿಧಾನಸಭೆಯಲ್ಲಿ ನೋಡಿದ್ರೆ ಅವರು ಬಿಜೆಪಿಯವರು ಮೈಮೇಲೆ ಬಂದವರಂತೆ ಆಡ್ತಾರೆ. ಅವರನ್ನು ಮೇಲೆ ಕೆಳಗೆ ಮಾಡುವ ತುರಾತುರಿಯಲ್ಲಿ ನಾನು ಏನಾದರೂ ತಪ್ಪು ಮಾತನಾಡಿಬಿಟ್ಟರೆ ಅದರಿಂದ ಕೊನೆಯ ವರ್ಷ ಪಕ್ಷಕ್ಕೆ ತೊಂದರೆ ಆಗುತ್ತದೆ. ನನಗೆ ಈ ಸ್ಟಡಿಗಿಡಿ ಮಾಡಿ ಮಾತನಾಡಲು ಬರಲ್ಲ ಸಾಹೇಬ್ರೆ ಎಂದು ಲೈಟಾಗಿ ಸ್ಲೈಲ್ ಕೊಡುತ್ತಾ ಹೇಳುತ್ತಿದ್ದರೆ ” ಛೀ, ಥೂ, ನಿನಗೆ ಯಾವನಲೇ ಎಂಎಲ್ ಎ ಮಾಡಿದ್ದು, ಮಾತನಾಡೋಕೆ ಹೆದರಿಕೆ ಆಗುತಂತೆ” ಎಂದು ಸಿದ್ದು ಗರಂ ಆಗಿಬಿಟ್ಟಿದ್ದರು. ವಿಧಾನಸಭೆಯಲ್ಲಿ ಅಧ್ಯಯನ ಮಾಡಿ ಮಾತನಾಡಬಲ್ಲ, ಯಾವುದೇ ವಿವಾದ ಇಲ್ಲದ, ಜಾತ್ಯಾತೀತ ಮುಖವಾಡ ಹೊಂದಿದ, ವಿದ್ಯಾವಂತ ಮುಸ್ಲಿಂ ಶಾಸಕ ಯಾರಿದ್ದಾರೆ ಎಂದು ನೋಡುತ್ತಿದ್ದರೆ ಅವರ ಕಣ್ಣ ಎದುರಿಗೆ ನಗುತ್ತಾ ಕಾಣಿಸಿಕೊಂಡದ್ದು ಇದೇ ಯುಟಿ ಖಾದರ್.
ಖಾದರ್ ಪ್ಲಸ್ ಏನೆಂದರೆ ಅವರು ಯಾವುದೇ ಗುಂಪಿಗೆ ಸೇರಿಕೊಂಡವರಲ್ಲ. ವಿವಾದಗಳಿಂದ ಸುತ್ತುವರಿದವರಲ್ಲ. ಮೇಲಾಗಿ ಕಾನೂನು ಪದವೀಧರ. ಎಲ್ಲಕ್ಕಿಂತ ಹೆಚ್ಚಾಗಿ ಒಂದಿಷ್ಟು ಹೋಂವರ್ಕ್ ಮಾಡಿಕೊಂಡು ಮಾತನಾಡಬೇಕಯ್ಯ ಎಂದರೆ ಪಟ್ಟಾಗಿ ಕುಳಿತು ಅಷ್ಟೂ ನೋಟ್ಸ್ ರೆಡಿ ಮಾಡಿಕೊಂಡು ಅಪ್ಪಟ ಅಮಾಯಕರಂತೆ, ಶುದ್ಧ ಜನಸಾಮಾನ್ಯರಂತೆ ಮುಖ ಮಾಡಿ ವಿಧಾನಸಭೆಯಲ್ಲಿ ಮಾತನಾಡುವುದು ಖಾದರ್ ಸಾಹೇಬ್ರಿಗೆ ಒಲಿದ ವರ. ಈ ಮನುಷ್ಯ ಮಾತನಾಡಲು ನಿಂತರೆ ಅದರಲ್ಲಿ ಆಡಳಿತ ಪಕ್ಷದ ವಿರುದ್ಧ ಏಕಾಏಕಿ ವಾಕ್ ಬಾಣವಿರುವುದಿಲ್ಲ. ಕಲ್ಲನ್ನು ಬಟ್ಟೆಯಲ್ಲಿ ಸುತ್ತಿ ಬೀಸುವುದು ಖಾದರ್ ಭತ್ತಲಿಕೆಯ ಅಸ್ತ್ರ. ಖಾದರ್ ಕೋಪಗೊಳ್ಳುವುದು ಕಡಿಮೆ. ಮುಖದಲ್ಲಿ ಸಿಡುಕು ನೋಡಿದವರು ಇಲ್ಲ. ಬೆಣ್ಣೆಯಲ್ಲಿ ಕಾಲಿಟ್ಟರು ಅದರ ಅಚ್ಚ ಬೀಳದಂತೆ ಕೆಲಸ ಮಾಡಿಸಿಕೊಳ್ಳುವುದು ಖಾದರ್ ಕಲಿತ ಹಳೆ ವಿದ್ಯೆ. ಹಾಗಂತ ಈ ಉಪನಾಯಕನ ಸ್ಥಾನ ಸಿಕ್ಕಿದ ಕೂಡಲೇ ಖಾದರ್ ಲಕ್ಕೆ ಚೇಂಜಾಗುತ್ತಾ? ನೋ ಚಾನ್ಸ್. ಆದರೆ ಒಂದು ವೇಳೆ ಅಪ್ಪಿತಪ್ಪಿ ಕಾಂಗ್ರೆಸ್ ಸರಕಾರ ಬಂದುಬಿಟ್ಟರೆ ಮುಸ್ಲಿಮರಿಗೆ ಗೃಹ ಖಾತೆ ಕೊಡುವ ಚಿಂತನೆ ಆದರೆ ಮೊದಲ ಆಯ್ಕೆ ಖಾದರ್ ಆಗಿರುತ್ತಾರೆ. ಅದರೊಂದಿಗೆ ಒಬ್ಬ ನಂಬಿಕಸ್ಥ ಸಹೋದರ ಬೆನ್ನಿಗೆ ನಿಂತು ಅಷ್ಟು ತೆರೆಯ ಹಿಂದಿನ ಆಟ ಆಡುತ್ತಿದ್ದರೆ ಖಾದರ್ ನಿಶ್ಚಿಂತೆಯಿಂದ ಬ್ಯಾಟ್ ಬೀಸುವುದು ಮಾತ್ರ ಬಾಕಿ. ಯಾರು ಸೋತರೂ ಇವನೊಬ್ಬ ಸೋಲುವುದಿಲ್ಲವಲ್ಲ ಎನ್ನುವುದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಮಾಜಿ ಶಾಸಕರ ಹಳೆಯ ಅಂಬೋಣ. ಆದರೆ ಅರ್ಜೆಂಟಿಗೆ ಬೀಳುವ, ದುರಂಹಕಾರದಿಂದ ಏನೇನೋ ಒದರುವ, ವಿವಾದಗಳನ್ನೇ ಬೆಡ್ ಶೀಟ್ ನಂತೆ ಹೊದ್ದು ಮಲಗುವ, ಭ್ರಷ್ಟಾಚಾರದಲ್ಲಿ ಮುಳುಗಿ ಮಲಗಿರುವ ಕಾಂಗ್ರೆಸ್ಸಿನ ಮುಸ್ಲಿಂ ಶಾಸಕರ ನಡುವೆ ಸ್ಪಲ್ಪ ಕೈಕಾಲು ಹೊಡೆದರೆ ತಾನು ಎಲ್ಲಿ ತಲುಪಬಹುದು ಎಂದು ಖಾದರಿಗೆ ಗೊತ್ತಿದೆ. ಇನ್ನು ಅಣ್ಣನನ್ನು ಎಲ್ಲಿ ತಲುಪಿಸಿದರೆ ತನಗೆ ಒಳ್ಳೆಯದು ಎಂದು ಅವರ ತಮ್ಮನಿಗೆ ತಿಳಿದಿದೆ. ಆದ್ದರಿಂದ ಖಾದರ್ ನಿಶ್ಚಿಂತೆಯಿಂದ ದೆಹಲಿ ತಲುಪಿ ಸೋನಿಯಾ ಮನೆಯ ಅಂಗಳದಲ್ಲಿ ನಿಂತಿದ್ದಾರೆ!
Leave A Reply