ಕುದ್ರೋಳಿಯ ಮಸೀದಿಯಲ್ಲಿ ಧ್ವನಿವರ್ಧಕಗಳಿಗೆ ತಿಲಾಂಜಲಿ!
ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್ ಮೊಹಮ್ಮದ್ ಮಸೂದ್ ಉತ್ತಮ ಮಾದರಿ ಕಾರ್ಯ ನಡೆಸಿದ್ದಾರೆ. ಧ್ವನಿವರ್ಧಕಗಳ ಬಳಕೆಯ ಬಗ್ಗೆ ರಾಜ್ಯ ಸರಕಾರ ಹೊರಡಿಸಿರುವ ಆದೇಶಗಳನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಪಾಲಿಸಿ ಎಂದು ಕರೆ ನೀಡಿದ್ದಾರೆ. ಇಂತಹ ಹೇಳಿಕೆ ಹಿರಿಯ ಮುಸ್ಲಿಂ ಮುಖಂಡರ ಬಾಯಲ್ಲಿ ಬಂದಿರುವುದು ನಿಜಕ್ಕೂ ಸಮಾಧಾನಕರ ವಿಷಯ. ಮಸೂದ್ ಇಷ್ಟು ಹೇಳಿದ್ದು ಮಾತ್ರವಲ್ಲ, ಒಂದು ಹೆಜ್ಜೆ ಮುಂದೆ ಹೋಗಿ ತಾವು ಅಧ್ಯಕ್ಷರಾಗಿರುವ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಯನ್ನೇ ತೆಗೆದುಹಾಕಿದ್ದೇನೆ ಎಂದು ಹೇಳಿದ್ದಾರೆ. ಇದು ಅವರ ಬಗ್ಗೆ ಇನ್ನು ಹೆಚ್ಚಿನ ಗೌರವವನ್ನು ನಮ್ಮಲ್ಲಿ ಮೂಡಿಸುತ್ತದೆ. ಒಬ್ಬ ನಾಯಕರಾದವರು ಮಾಡಬೇಕಾದದ್ದು ಇದೇ ಕೆಲಸ. ಸಮಾಜ ಶಾಂತಿಯಿಂದ ಇರಬೇಕಾದವರೇ ತಮ್ಮ ಕೊಡುಗೆ ಏನು ಎಂದು ಅವರು ತಿಳಿದಿರಬೇಕು. ಈ ಮಾತು ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರಿಗೂ ಅನ್ವಯಿಸುತ್ತದೆ. ವ್ಯರ್ಥ ಗಲಾಟೆ, ಆರೋಪ, ಪ್ರತ್ಯಾರೋಪ ಯಾರಿಗೂ ಬೇಡವಾಗಿದೆ. ಎಲ್ಲರಿಗೂ ಬದುಕು ಕಟ್ಟಿಕೊಳ್ಳಬೇಕಾದ ಅವಶ್ಯಕತೆ ಇದೆ. ಶ್ರೀಮಂತ ಹಿಂದೂಗಳು, ಕ್ರೈಸ್ತರು, ಮುಸ್ಲಿಮರು ಹೇಗೂ ಬದುಕುತ್ತಾರೆ. ಆದರೆ ಗಲಾಟೆಗಳು ನಡೆದರೆ ಎಲ್ಲಾ ಧರ್ಮದ ಬಡವರು ಅದಕ್ಕೆ ಆರ್ಥಿಕವಾಗಿ ಬಲಿಯಾಗುತ್ತಾರೆ. ಅದನ್ನು ತಪ್ಪಿಸಲು ಸರಕಾರ ಕೊಟ್ಟ ಸೂಚನೆಯನ್ನು ಪಾಲಿಸುವುದರಲ್ಲಿ ತಪ್ಪಿಲ್ಲ. ಮುಂದೆ ಯಾವತ್ತಾದರೂ ಮಸೂದ್ ಅವರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಅಪ್ಪಿತಪ್ಪಿ ಬಂದರೆ ಆಗ ಅವರಿಗೆ ಅನಿಸಿದ್ದನ್ನು ಅವರು ಮಾಡುತ್ತಾರೆ.
ಯಾಕೆಂದರೆ ಇದು ಬಸವರಾಜ್ ಬೊಮ್ಮಾಯ್ ಅವರು ಹೊಸದಾಗಿ ಮಾಡಿದ ನಿಯಮ ಏನಲ್ಲ. 2005 ರಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಕೊಟ್ಟಿರುವ ಆದೇಶ. ಅದನ್ನು ಆಯಾ ರಾಜ್ಯ ಸರಕಾರಗಳು ಕಟ್ಟುನಿಟ್ಟಾಗಿ ಪಾಲಿಸಿರಲಿಲ್ಲ. ಅದರಲ್ಲಿಯೂ ಈ ಸೂಚನೆ ಬಂದಾಗ ರಾಜ್ಯದಲ್ಲಿ ಚೌಚೌ ಸರಕಾರ ಇದ್ದ ಕಾರಣ ಅದು ಇವರಿಗೆ ನೆನಪೇ ಆಗಲಿಲ್ಲ. ಆದರೆ ಯಾವಾಗ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರದ್ದು ದ್ವಿತೀಯ ಇನ್ಸಿಂಗ್ಸ್ ಆರಂಭವಾಯಿತೋ ಅದಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಭಾರತೀಯ ಜನತಾ ಪಾರ್ಟಿ ನೇತೃತ್ವದ ಬೇರೆ ರಾಜ್ಯದ ಸರಕಾರಗಳಿಗೆ ಬೆನ್ನ ಮೂಳೆಯಲ್ಲಿ ಬಲ ಬಂದಿತ್ತು. ಅಲ್ಲಿ ಹೇಗೆ ಆಡಳಿತ ವಿರೋಧಿ ಅಲೆಯ ನಡುವೆಯೂ ಸರಕಾರ ಮರುಕಳಿಸಿದೆ ಎಂದು ಪರಿಶೀಲಿಸಿದಾಗ ಏನೇ ಆಗಲಿ ಅಭಿವೃದ್ಧಿಯ ಜೊತೆ ಹಿಂದೂತ್ವ ಬಿಡುವ ಪ್ರಶ್ನೆಯೇ ಇಲ್ಲ ಎನ್ನುವುದು ಉಳಿದವರಿಗೆ ಪಾಠವಾಯಿತು. ಯಾವಾಗ ಯೋಗಿ ತರಹದ ಸರಕಾರ ಬೇಕು ಎಂದು ಕರ್ನಾಟಕದಲ್ಲಿಯೂ ಯುವಕರು ಕೂಗು ಎಬ್ಬಿಸಿದರೋ ಜನತಾ ಬಸ್ಸಿನ ಬೊಮ್ಮಾಯಿಯವರಿಗೆ ಕೇಸರಿ ಹಡಗಿಗೆ ಹಸಿರು ಬಾವುಟ ತೋರಿಸುವುದು ಅನಿವಾರ್ಯವಾಯಿತು. ಅದರ ಪರಿಣಾಮವಾಗಿ ಎಚ್ಚರಿಕೆಯ ಸಂದೇಶ ಹೋಗಿದೆ. ಅದನ್ನು ಮಸೂದ್ ಅವರು ಪಾಲಿಸುವ ಭರವಸೆ ನೀಡಿದ್ದಾರೆ. ಈಗ ಮಾಜಿ ಮೇಯರ್ ಅಶ್ರಫ್ ನಂತವರು ಇದು ಮಸೂದ್ ಅವರ ವೈಯಕ್ತಿಕ ನಿರ್ಧಾರ ಎಂದು ಹೇಳಿರಬಹುದು. ಆದರೆ ಇದನ್ನು ಒಬ್ಬ ಹಿರಿಯ ಕಾಂಗ್ರೆಸ್ಸಿಗ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ವಿವಿಧ ಜವಾಬ್ದಾರಿ ವಹಿಸಿಕೊಂಡಿದ್ದ ವ್ಯಕ್ತಿಯ ನಿರ್ಧಾರವನ್ನು ಸ್ವಾಗತಿಸಬೇಕಾಗಿರುವುದು ಪ್ರತಿಯೊಬ್ಬ ಇಸ್ಲಾಂ ಅನುಯಾಯಿಯ ಕರ್ತವ್ಯ.
ಆದರೆ ಏಕಾಏಕಿ ಅಷ್ಟೇ ಹೇಳಿದರೆ ತಮ್ಮ ಸಮುದಾಯದವರು ದೂಷಿಸಬಹುದು ಎಂದು ಅರಿತಿರುವ ಮಸೂದ್ ಅವರು ಅದೇ ಸುದ್ದಿಗೋಷ್ಟಿಯಲ್ಲಿ ಪ್ರಮೋದ್ ಮುತಾಲಿಕ್ ಅವರನ್ನು ಭಯೋತ್ಪಾದಕ, ಅವರನ್ನು ಈ ದೇಶದಿಂದಲೇ ಓಡಿಸಬೇಕು ಎಂದು ಕೂಡ ಹೇಳಿದ್ದಾರೆ. ಅದು ರಾಮ ಸೇನೆ ಅಲ್ಲ, ರಾವಣ ಸೇನೆ ಅಂದಿದ್ದಾರೆ. ಇದೆಲ್ಲ ಒಬ್ಬ ಮುತ್ಸದ್ದಿಯಾಗಿ ಅವರು ಹೇಳುವುದು ಸಹಜವೇ ಆಗಿದೆ. ಇಲ್ಲದಿದ್ದರೆ ಅವರ ಸಮುದಾಯದವರು ಅವರನ್ನು ಪ್ರಶ್ನೆ ಮಾಡುತ್ತಾರೆ. ಮುತಾಲಿಕ್ ಗೆ ಹೆದರಿ ಹೀಗೆ ಮಾಡಿದ್ದೀರಾ ಎನ್ನುತ್ತಾರೆ. ಅದಕ್ಕಾಗಿ ಮುತಾಲಿಕ್ ವಿರುದ್ಧ ಮಾತನಾಡುವುದು ಅವರಿಗೆ ಅನಿವಾರ್ಯವಾಗಿತ್ತು. ಮಾತನಾಡಿದ್ದಾರೆ. ಇಲ್ಲಿ ಪ್ರಮೋದ್ ಮುತಾಲಿಕ್ ಅವರನ್ನು ಯಾರು ಏನು ಬೇಕಾದರೂ ಹೇಳಲಿ, ಬಿಜೆಪಿ ಸರಕಾರವೇ ಅವರನ್ನು ಬೇಕಾದರೆ ದೂಷಿಸಲಿ. ಮುತಾಲಿಕ್ ಅವರ ಹಿಂದೂತ್ವದ ಮೇಲಿನ ಶ್ರದ್ಧೆ ಇದೆಯಲ್ಲ, ಅದು ಮಾತ್ರ ಪ್ರಶ್ನಿಸಲು ಆಗುವುದಿಲ್ಲ. ಈ ವಯಸ್ಸಿನಲ್ಲಿಯೂ ಅವರು ಹಿಂದೂತ್ವದ ಬಗ್ಗೆ ಹೋರಾಡಲು ರಾಜ್ಯ ತಿರುಗುತ್ತಾರಲ್ಲ, ಅದು ಯಾರಿಗೂ ಅಷ್ಟು ಸುಲಭವಾಗಿ ಕಷ್ಟಸಾಧ್ಯ. ಎಲ್ಲ ಇದ್ದು, ಅಧಿಕಾರ ಅನುಭವಿಸಿ, ಸಾಕಷ್ಟು ಕೂಡಿಷ್ಟು ತಿರುಗುವುದು ಬೇರೆ, ಆದರೆ ಯಾವುದೇ ರಿಟರ್ನ್ ಇಲ್ಲದೇ ಹಿಂದೂ ಧರ್ಮದ ವಿಚಾರ ಬಂದಾಗ ಬಿಜೆಪಿಯವರು ಆಲಸ್ಯ ಮಾಡಿದರೂ ತಾವು ಮಾತ್ರ ಸರಕಾರಕ್ಕೆ ಬಿಸಿ ಮುಟ್ಟಿಸಲು ಹೊರಡುತ್ತಾರಲ್ಲ, ಅವರ ಹಿಂದೂತ್ವದ ಪ್ರೀತಿಗೆ ಹೇಗೆ ಬೆಲೆ ಕಟ್ಟಲು ಆಗುತ್ತೆ. ಅವರನ್ನು ಯಾವುದೇ ಷರತ್ತು ಇಲ್ಲದೇ ಬಿಜೆಪಿ ನೇರವಾಗಿ ರಾಜ್ಯಸಭೆಗೆ ಕಳುಹಿಸಿಕೊಡಬೇಕು. ಅದು ಇವರ ಕರ್ತವ್ಯ. ಆದರೆ ಹಾಗೆ ಬಿಜೆಪಿ ಮಾಡಲ್ಲ. ಯಾಕೆಂದರೆ ಕೆಲವು ವಿಷಯಗಳು ಬಂದಾಗ ಮುತಾಲಿಕ್ ಅಂತವರು ಹೊರಗಿದ್ದೇ ಸರಕಾರವನ್ನು ಬೈಯುತ್ತಾ ಚಾಟಿ ಬೀಸುತ್ತಾ ಇರಬೇಕು. ಇಲ್ಲದಿದ್ದರೆ ಸರಕಾರದ ಮೇಲೆ ಒತ್ತಡ ಹೇಗೆ ಬೀಳುವುದು. ಒಟ್ಟಿನಲ್ಲಿ ಒಂದು ಗುಡ್ಡದಂತಹ ಸಮಸ್ಯೆ ಹಿಮದಂತೆ ಕರಗಿದೆ. ಯಾರೋ ಬೇರೆ ವಿಷಯ ಹುಡುಕುತ್ತಿರುತ್ತಾರೆ!!
Leave A Reply