ಶಾಸಕರು ಮಿತ್ರರಾದರೆ ಸಮಸ್ಯೆಗಳ ಬಗ್ಗೆ ಬರೆಯಬಾರದಾ? ಮಾತನಾಡಬಾರದಾ?
Posted On May 27, 2022
ನಿಮ್ಮ ಕೈಯಲ್ಲಿಯೂ ಮೊಬೈಲ್ ಇದೆ. ಅದರಲ್ಲಿ ನಿಮ್ಮ ಫೇಸ್ ಬುಕ್ ಇರಬಹುದು. ನಿಮಗೆ ಈ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ದುರಾಡಳಿತ, ಆಡಳಿತಗಾರರ ನಿರ್ಲಕ್ಷ್ಯ, ಸ್ವಜಾತಿ ಪ್ರೇಮ, ಒಂದು ಸಮುದಾಯದ ಓಲೈಕೆ ಹೀಗೆ ಹತ್ತಾರು ವಿಷಯಗಳ ಬಗ್ಗೆ ಅಸಮಾಧಾನ ಇರಬಹುದು. ಅದನ್ನು ಸರಿಪಡಿಸುವ ತುಡಿತ ಇರಬಹುದು. ಆದರೆ ಹೇಗೆ ಎನ್ನುವ ಕುರಿತು ಗೊತ್ತಿಲ್ಲದಿರಬಹುದು. ಹಾಗೆಂದು ನಿಮಗೆ ಪಾಲಿಕೆ, ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಪರಿಹರಿಸುವ ಉಮ್ಮೇದು, ಸಮಯ, ಆರ್ಥಿಕ ಸಂಪನ್ಮೂಲ ಇಲ್ಲದೇ ಇರಬಹುದು. ಆದರೆ ದೇವರು ಕೊಟ್ಟಿರುವ ಬುದ್ಧಿ ಇದೆ. ವಿಷಯ ಸಂಗ್ರಹಿಸುವ ಜ್ಞಾನ ಇದೆ. ಅದನ್ನು ಪರಿಣಾಮಕಾರಿ ಬಳಸಿಕೊಳ್ಳಿ. ನಾನು ಕಳೆದ 12 ವರ್ಷಗಳಿಂದ ಪತ್ರಿಕೆಗಳಲ್ಲಿ ಬರೆದಿದ್ದೇನೆ. ಕಳೆದ ಏಳೆಂಟು ವರ್ಷಗಳಿಂದ ನಿತ್ಯ ನಿರಂತರ ಫೇಸ್ ಬುಕ್ಕಿನಲ್ಲಿ ಬರೆಯುತ್ತಿದ್ದೇನೆ. ನನ್ನ ಅಭಿಪ್ರಾಯಗಳನ್ನು ಟಿವಿ ಸಹಿತ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಹಳ ಓಪನ್ ಆಗಿ ದಾಖಲಿಸಿದ್ದೇನೆ. ನನ್ನ ಮಾತುಗಳನ್ನು ಸಂಬಂಧಪಟ್ಟ ರಾಜಕಾರಣಿಗಳು, ಅಧಿಕಾರಿಗಳು ಸ್ವೀಕರಿಸಿ ಅನೇಕ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಿದ್ದಾರೆ. ಕೆಲವು ಯಶಸ್ವಿ ಆಗಿ ಅನುಷ್ಟಾನಕ್ಕೂ ಬಂದಿರುತ್ತದೆ. ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ನಾನು ಸಾಮಾಜಿಕ ತಾಣಗಳೆಂಬ ಅಸ್ತ್ರಗಳನ್ನು ಸಮರ್ಥವಾಗಿ ಉಪಯೋಗಿಸಿದ್ದೇನೆ ಎಂಬ ಸಮಾಧಾನ ನನಗಿದೆ.
ಆದರೆ ಕೆಲವರು ಈ ಸಾಮಾಜಿಕ ತಾಣಗಳಲ್ಲಿ ನಾನು ಬರೆಯುವ ವಿಷಯಗಳ ಬಗ್ಗೆ ಕಮೆಂಟ್ ಮಾಡದೇ, ಅದನ್ನು ಏನು ಮಾಡಿದರೆ ಜನರಿಗೆ ಅನುಕೂಲವಾಗುವಂತೆ ಮಾಡಬಹುದು ಎನ್ನುವ ಬಗ್ಗೆ ತಮ್ಮ ಐಡಿಯಾಗಳನ್ನು ಹೇಳದೇ ಅನಾವಶ್ಯಕ ಕಮೆಂಟ್ ಗಳನ್ನು ಮಾಡುವುದನ್ನು ಹಲವು ಬಾರಿ ಗಮನಿಸಿದ್ದೇನೆ. ಪಾಲಿಕೆಯಲ್ಲಿ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಬರೆದರೆ, ಜಿಲ್ಲೆಯಲ್ಲಿ ಆದ ಸಮಸ್ಯೆಗಳ ಬಗ್ಗೆ ಬರೆದರೆ “ಶಾಸಕ ವೇದವ್ಯಾಸ ಕಾಮತ್ ಅವರು ನಿಮ್ಮ ಮಿತ್ರರಲ್ವಾ? ಅವರ ಬಳಿ ನೇರವಾಗಿ ಹೇಳಿ ಸರಿ ಮಾಡಬಹುದಲ್ವಾ?” ಎಂದು ಬರೆಯುತ್ತಾರೆ. ನಾನು ವೇದವ್ಯಾಸ ಕಾಮತ್ ಅವರು ಶಾಸಕರಾಗುವ ದಶಕಗಳ ಮೊದಲಿನಿಂಲೂ ಬಲ್ಲೆ. ಅವರಿಗೆ ನಾನು ಅವರ ಕ್ಷೇತ್ರದಲ್ಲಿ ಆಗುವ ಸಮಸ್ಯೆಗಳ ಬಗ್ಗೆ, ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಹೇಳಿದ್ದೇನಾ, ಇಲ್ವಾ ಎಂದು ನನಗೆ ಹಾಗೆ ಕಮೆಂಟ್ ಮಾಡುವವರಿಗೆ ಹೇಳಬೇಕಾ? ಅಥವಾ ಅವರಿಗೆ ಗೊತ್ತಾ? ಇನ್ನು ನಾನು ಶಾಸಕರಿಗೆ ಹೇಳಲೇ ಇಲ್ಲ ಅಂದುಕೊಳ್ಳಿ, ನೇರವಾಗಿ ಫೇಸ್ ಬುಕ್ಕಿನಲ್ಲಿ ಬರೆದೇ ಎಂದೇ ಇಟ್ಟುಕೊಳ್ಳಿ. ನೀವು ಶಾಸಕರ ಗಮನಕ್ಕೆ ತರಬಹುದಲ್ಲ. ಅವರ ಅಥವಾ ಅವರ ಆಪ್ತ ಸಹಾಯಕರ ಫೋನ್ ನಂಬರ್ ನಿಮಗೆ ಸಿಗಲು ಬ್ರಹ್ಮವಿದ್ಯೆ ಬೇಕಾಗಿಲ್ಲ. ಅದನ್ನು ನೀವು ಕೂಡ ಮಾಡಬಹುದಲ್ಲ. ಕ್ಷೇತ್ರದ ನಾಗರಿಕರು ಹೇಳಿದಾಗ ಪರಿಹರಿಸದ ಶಾಸಕರು ಇರುತ್ತಾರೆಯೇ? ಆ ಕ್ರೆಡಿಟ್ ನೀವೆ ಪಡೆದುಕೊಳ್ಳಿ. ಇನ್ನು ಎಲ್ಲಾ ಸಮಸ್ಯೆಗಳಿಗೆ ಶಾಸಕರೊಬ್ಬರೇ ಕಾರಣರಾಗುವುದಿಲ್ಲ ಮತ್ತು ಎಲ್ಲಾ ಸಮಸ್ಯೆಗಳನ್ನು ಶಾಸಕರೊಬ್ಬರೇ ಚಿಟುಕಿ ಹೊಡೆದಷ್ಟು ಸುಲಭದಲ್ಲಿ ಕೂಡಲೇ ಪರಿಹಾರವಾಗುವುದಿಲ್ಲ. ಆದ್ದರಿಂದ ನಾನು ಬರೆದ ವಿಷಯಗಳನ್ನು ತಾವು ನೋಡಿ ವಿಷಯಾಧರಿತವಾಗಿ ಕಮೆಂಟ್ ಮಾಡಿದರೆ ಅದರಿಂದ ನಾಲ್ಕು ಜನರಿಗೆ ಉಪಯೋಗ ಆದರೂ ಆಗಬಹುದು. ಅದು ಬಿಟ್ಟು ಏನೇನೋ ಬರೆದು ನನ್ನನ್ನು ಮಾನಸಿಕವಾಗಿ ಕುಗ್ಗಿಸಿ ನನ್ನ ಬರೆಯುವ ಉತ್ಸಾಹವನ್ನು ಕುಂದಿಸುವ ಕೆಲಸ ಮಾಡೋಣ ಎಂದು ಗುಂಪುಕಟ್ಟಿ ಷಡ್ಯಂತ್ರಕ್ಕೆ ಇಳಿದರೆ ಮುಂದಿನ ದಿನಗಳಲ್ಲಿ ನೀವೆ ಪ್ರಾಯಶ್ಚಿತ ಪಡಬೇಕಾದೀತು.
ನಾನು ನಿತ್ಯ ಜಾಗೃತ ಅಂಕಣ ಬರೆದ ಕಾರಣ ಅದರಿಂದ ಸಾಕಷ್ಟು ಮಾಹಿತಿ ಮತ್ತು ಜ್ಞಾನ ದೊರೆಯಿತು ಎಂದು ಹೇಳುವವರೂ ಇದ್ದಾರೆ. ಯಾರಿಗೂ ಬಕೆಟ್ ಹಿಡಿಯದೇ ಕಾಂಗ್ರೆಸ್, ಭಾರತೀಯ ಜನತಾ ಪಾರ್ಟಿ ಎರಡೂ ಪಕ್ಷಗಳು ತಪ್ಪು ಮಾಡಿದಾಗಲೂ ಧೈರ್ಯವಾಗಿ ಬರೆಯುತ್ತಿರಲ್ಲ, ಒಳ್ಳೆಯ ಕೆಲಸ ಮಾಡುತ್ತೀರಿ ಎಂದು ಹೇಳುವವರು ಇದ್ದಾರೆ. ಇಂತಹ ವಿಷಯಗಳನ್ನು ಬರೆಯಿರಿ ಎಂದು ಸಲಹೆ ಕೊಡುವವರು ಇದ್ದಾರೆ. ಸಮಸ್ಯೆಗಳನ್ನು ಗಮನಕ್ಕೆ ತಂದು ಬರೆಯಲು ಪ್ರೇರೆಪಿಸುವ ಓದುಗ ಮಿತ್ರರು ಇದ್ದಾರೆ. ನೀವು ಬರೆದ ಕಾರಣ ತುಂಬಾ ಜನರು ಓದುತ್ತಾರೆ ಎಂದು ಹೇಳಿ ಪ್ರೋತ್ಸಾಹಿಸುವವರೂ ಇದ್ದಾರೆ. ನಿಮಗೆ ತಿಳಿದಿರುವ ಮಾಹಿತಿಯನ್ನು ಜನರಿಗೆ ಹಂಚಲು ಸಮಯ ಮೀಸಲಿಡುತ್ತಿರಲ್ಲ, ನಿಮಗೆ ಧನ್ಯವಾದಗಳು ಎಂದವರೂ ಇದ್ದಾರೆ. ನಾನು ಯಾವುದೇ ಒಂದು ಪಕ್ಷದ ಓಲೈಕೆಗಾಗಿ ಬರೆದವನಲ್ಲ. ತಪ್ಪು ಯಾರೇ ಮಾಡಿದಾಗಲೂ ಬರೆದಿದ್ದೇನೆ. ಬಕೆಟ್ ಹಿಡಿದು ನನಗೆ ಆಗಬೇಕಾಗಿರುವುದು ಏನಿಲ್ಲ. ಹಾಗಂತ ಒಬ್ಬರು ಕಂಡರೆ ಆಗಲ್ಲ ಎನ್ನುವ ಕಾರಣಕ್ಕೆ ವೈಯಕ್ತಿಕ ನಿಂದನೆ ಮಾಡುವಲ್ಲಿ ಸಮಯ ಪೋಲು ಮಾಡಿದವನಲ್ಲ. ನನ್ನ ಬರಹ ನಿಮ್ಮ ಪಕ್ಷದ ಪರವಾಗಿಲ್ಲ ಎನ್ನುವ ಕಾರಣಕ್ಕೆ ನಾನು ಬೇರೆ ಪಕ್ಷದವನು ಆಗುವುದಿಲ್ಲ. ನನ್ನ ಲೇಖನ ವಾಸ್ತವಕ್ಕೆ ಕನ್ನಡಿ ಹಿಡಿದ ತಕ್ಷಣ ನಾನು ನೀವು ಹೇಳುವ ಧರ್ಮದವನಾಗುವುದಿಲ್ಲ. ಕೆಲವರು ತಮ್ಮ ವಿರೋಧ ಪಕ್ಷದವರನ್ನು ಸಭ್ಯ ಓದುಗರು ಓದಲಾಗದ ಅಸಹ್ಯ ಭಾಷೆಯಲ್ಲಿ ಹಂಗಿಸುತ್ತಾರೆ. ನಾನು ಹಾಗೆ ಮಾಡುವುದಿಲ್ಲ. ನಿಷ್ಠುರತೆ ಇರಬಹುದು ಆದರೆ ಅಶ್ಲೀಲವಾಗಿರುವುದಿಲ್ಲ. ನಾನು ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತನಲ್ಲ. ಆದ್ದರಿಂದ ಹೇಳುವುದೇನೆಂದರೆ ನಾನು ಬರೆಯುವ ವಿಷಯವನ್ನು ಅರ್ಥಗರ್ಭಿತ ರೀತಿಯಲ್ಲಿ ಚಿಂತಿಸಿ. ವಿಷಯದ ಮೇಲೆ ಚರ್ಚೆಯಾಗಲಿ. ಯಾಕೆಂದರೆ ಸಮಯ ಇಬ್ಬರಿಗೂ ಅಮೂಲ್ಯ. ನಿಮ್ಮ ಬಳಿ ಕಾಲಹರಣಕ್ಕೆ ಸಮಯ ಇರಬಹುದು. ಅದನ್ನು ಸದುಪಯೋಗಪಡಿಸಿಕೊಳ್ಳಿ, ಜನ ಗೌರವ ಕೊಟ್ಟಾರು!!
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply