ಮುದುಕಿಗೆ ಮೇಕಪ್ ಮಾಡಲು ಸಚಿವರೇ ಹೋಗಬೇಕಾ?
Posted On May 31, 2022
ಆಯಾ ಜಿಲ್ಲೆಯವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ತಮ್ಮ ವಿಧಾನಸಭಾ ಕ್ಷೇತ್ರ ಬಿಟ್ಟು ಬೇರೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಲ್ಲಿ ಎಷ್ಟು ಆಸಕ್ತಿ ತೆಗೆದುಕೊಳ್ಳುತ್ತಾರೆ ಎನ್ನುವುದು ಅಧಿಕಾರಿಗಳಿಗೆ ಗೊತ್ತು. ಅದರಲ್ಲಿಯೂ ಪಕ್ಕದ ಜಿಲ್ಲೆಯ ಶಾಸಕರೊಬ್ಬರು ಬೇರೊಂದು ಜಿಲ್ಲಾ ಉಸ್ತುವಾರಿ ಸಚಿವರಾದರೆ ಇನ್ನೆಷ್ಟು ಆಸಕ್ತಿ ತೆಗೆದುಕೊಳ್ಳುತ್ತಾರೆ ಎನ್ನುವುದು ರಾಜಕೀಯವನ್ನು ತಿಳಿದವರಿಗೆ ಗೊತ್ತು. ಮುಖ್ಯಮಂತ್ರಿಗಳು, ರಾಜ್ಯ ಭಾರತೀಯ ಜನತಾ ಪಾರ್ಟಿಯ ಮುಖಂಡರು ಯಾವುದೋ ಜಿಲ್ಲೆಯವರನ್ನು ಇನ್ಯಾವುದೋ ಜಿಲ್ಲೆಗೆ ಉಸ್ತುವಾರಿಯನ್ನಾಗಿ ಹಾಕಿ ಪ್ರಯೋಗ ಮಾಡಿದ್ದು ಎಷ್ಟರಮಟ್ಟಿಗೆ ಫಲಪ್ರದವಾಗಿದೆ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂತಹ ಕಾಲಘಟ್ಟದಲ್ಲಿಯೇ, ಚುನಾವಣೆಗೆ ವರ್ಷಕ್ಕಿಂತ ಕಡಿಮೆ ಅವಧಿ ಇರುವಾಗ ಸುನೀಲ್ ಕುಮಾರ್ ಅವರು ಮಂಗಳೂರು ನಗರ ದಕ್ಷಿಣದಲ್ಲಿ ಒಂದು ರೌಂಡ್ ಹಾಕಿ ಬರೋಣ ಎಂದು ಹೊರಟ್ಟಿದ್ದಾರೆ. ಈ ನಡುವೆ ಯಾವುದೋ ಪುಟ್ಟ ಹೋಟೇಲಿನಲ್ಲಿ ಚಾ ಕುಡಿದು ಅದರಲ್ಲಿಯೂ ಜನಸಾಮಾನ್ಯರ ಜೊತೆ ಬೆರೆಯುವ “ಅವಕಾಶ”ವನ್ನು ಅವರು ಮರೆತಿಲ್ಲ. ಅದು ಕೂಡ ಸುದ್ದಿಯಾಗಿದೆ.
ಹೀಗೆ ಉಸ್ತುವಾರಿ ಸಚಿವರು ಏನೂ ಕಾರ್ಯಕ್ರಮಗಳು ಇಲ್ಲದೇ ಇರುವಾಗ ರೌಂಡ್ ಹಾಕುವುದು ಹೊಸದಲ್ಲ. ತಪ್ಪು ಕೂಡ ಅಲ್ಲ. ಆದರೆ ಇವರ ರೌಂಡಿನಿಂದ ಮರುದಿನ ಪತ್ರಿಕೆಗಳಲ್ಲಿ ಹಾಗೂ ರಾತ್ರಿ ಟಿವಿಗಳಲ್ಲಿ ಸುದ್ದಿ ಬರುತ್ತದೆ ಬಿಟ್ಟರೆ ಒಂದು ಇಟ್ಟಿಗೆಯಷ್ಟು ಹೆಚ್ಚು ಕೆಲಸ ಆಗುತ್ತದೆ ಎಂದು ಯಾರೂ ನಂಬುವುದಿಲ್ಲ. ಅದರಲ್ಲಿಯೂ ಇವರು ಸ್ಟೇಟ್ ಬ್ಯಾಂಕಿನಲ್ಲಿರುವ ಮಂಗಳೂರು ಸರ್ವೀಸ್ ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟು ಕೆಲಸ ಕಾರ್ಯ ತಿಂಗಳೊಳಗೆ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದೇ ದೊಡ್ಡ ಕಾಮಿಡಿ. ಸುನೀಲ್ ಕುಮಾರ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೊದಲೇ ಈ ಬಸ್ ನಿಲ್ದಾಣವನ್ನು ತಾತ್ಕಾಲಿಕ ಎಂಬ ನೆಲೆಯಲ್ಲಿ ಆರಂಭಿಸಲಾಗಿತ್ತು. ಹೊಸ ಬಸ್ ನಿಲ್ದಾಣಕ್ಕಾಗಿ ಪಂಪವೆಲ್ ನಲ್ಲಿ ಎಕರೆಗಟ್ಟಲೆ ಜಾಗವನ್ನು ಗುರುತಿಸಿಯಾಗಿದೆ. ಅದಕ್ಕಾಗಿ ಕೆಲವು ಕೋಟಿ ರೂಪಾಯಿಗಳನ್ನು ವ್ಯಯಿಸಿಯೂ ಆಗಿದೆ. ಅಂತರಾಷ್ಟ್ರೀಯ ಮಟ್ಟದ ಬಸ್ ನಿಲ್ದಾಣದ ಕನಸು ನಮಗೆ ತೋರಿಸುತ್ತಾ, ಇವರು ಕಾಣುತ್ತಾ ಇವರೀಗ ಮತ್ತೆ ಅದೇ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣವನ್ನು ರಿಪೇರಿ ಮಾಡಲು ಹೊರಟಿದ್ದಾರೆ. ಅದಕ್ಕೆ ಸಚಿವರ ಭೇಟಿ ಬೇರೆ, ಹಿಂದೆ ಮುಂದೆ ವಿಡಿಯೋದವರು, ಫೋಟೋಗ್ರಾಫರ್ಸ್ ಬೇರೆ. ಹಾಗಾದರೆ ಪಂಪವೆಲ್ ಬಸ್ ನಿಲ್ದಾಣದ ಯೋಜನೆಗೆ ನಾವು ಎಳ್ಳು ನೀರು ಬಿಟ್ಟಿದ್ದೇವೆ ಎಂದು ಇವರು ಹೇಳಿಬಿಡಲಿ. ಇನ್ನು ಅಲ್ಲಿ ಗುದ್ದಲಿಪೂಜೆಯ ನಾಟಕ ಮಾಡುವುದು ಬೇಡಾ. ತಾತ್ಕಾಲಿಕ ಬಸ್ ನಿಲ್ದಾಣ ಮಳೆಗಾಲದಲ್ಲಿ ಸೋರುತ್ತದೆ, ಪ್ರಯಾಣಿಕರಿಗೆ ನಿಲ್ಲಲು ಸರಿಯಾದ ಸೌಕರ್ಯ ಇಲ್ಲ ಎಲ್ಲವೂ ಸರಿ. ಅದನ್ನು ಆಗಾಗ ತೇಪೆ ಹಚ್ಚಬೇಕು ಎನ್ನುವುದು ಅನಿವಾರ್ಯ. ಹಾಗಾದರೆ ಕಾಂಗ್ರೆಸ್ ಸರಕಾರ ಇದ್ದಾಗ “ನಮ್ಮ ಮಂಗಳೂರಿಗೆ ಸುಸಜ್ಜಿತ ಬಸ್ ನಿಲ್ದಾಣ ಇಲ್ವಾ” ಎಂದು ಬೊಬ್ಬೆ ಹೊಡೆದವರು ಈಗ ಮತ್ತೆ ಹಳೇ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಮಾಡುವುದಾದರೂ ಏನು? ಇದು ಒಂದು ರೀತಿಯಲ್ಲಿ ಮುದುಕಿಗೆ ಮೇಕಪ್ ಮಾಡಿದ ಹಾಗೆ. ಅದಕ್ಕೆ ಸಚಿವರೇ ಬಂದು ನೋಡಬೇಕಾಯಿತು ಎನ್ನುವುದು ಸದ್ಯದ ಜೋಕ್.
ಇವರು ಹೀಗೆ ನೋಡಿ ಹೋದರಲ್ಲ, ಇದರ ಫಾಲೋ ಅಪ್ ಯಾವಾಗಲಾದರೂ ನಡೆಯುತ್ತೆ ಎನ್ನುವ ಆಶಾವಾದ ಯಾರಿಗಾದರೂ ಇದ್ದರೆ ಅವರು ಭ್ರಮೆಯಲ್ಲಿ ಇದ್ದಾರೆ ಎಂದೇ ಅರ್ಥ. ಇವರು ಇತ್ತ ಬಂದು ಅತ್ತ ಹೋದ ಹಾಗೆ ಎಲ್ಲರೂ ಇದನ್ನು ಮರೆಯುತ್ತಾರೆ. ಕೆಲವರಿಗೆ ಸಚಿವರು ತಮ್ಮ ಕ್ಷೇತ್ರಕ್ಕೆ ಬಂದರು ಎನ್ನುವ ಸಮಾಧಾನ, ಇನ್ನು ಕೆಲವರಿಗೆ ಅವರೊಂದಿಗೆ ಇಡೀ ದಿನ ಇದ್ದದ್ದಕ್ಕೆ ಆತ್ಮತೃಪ್ತಿ, ಇನ್ನು ಕೆಲವರಿಗೆ ಫೇಸ್ ಬುಕ್ಕಿನಲ್ಲಿ ಸಚಿವರೊಂದಿಗೆ ಇರುವ ಫೋಟೋ ಹಾಕುವ ಉಮ್ಮೇದಿ ಹಾಗೂ ಉಳಿದವರಿಗೆ ಸಚಿವರು ಬಂದಾಗ ಇರದೇ ಹೋದರೆ ಮೇಸೆಜ್ ರಾಂಗ್ ಆಗಿ ಹೋಗುತ್ತದೆ ಎನ್ನುವ ಆತಂಕ. ಹೀಗೆ ಅವರೊಂದಿಗೆ ಇದ್ದವರಿಗೆ ತಮ್ಮದೇ ಸ್ವಂತ ಕಾರಣಗಳು ಇರುತ್ತವೆ. ಬಸ್ ಸ್ಟಾಂಡ್ ಇವರು ನೋಡಿದರು ಎಂದು ಕನಿಷ್ಟ ಸುದ್ದಿಯಾದರೂ ಆಗುತ್ತೆ, ಆದರೆ ಎಷ್ಟೋ ಕಾಮಗಾರಿಗಳು ಇವರು ನೋಡಿದರೂ ಅಷ್ಟೇ, ನೋಡದಿದ್ದರೂ ಅಷ್ಟೇ, ಅದು ನಿನ್ನೆ ಕೂಡ ಅರ್ಧಬರ್ಧ ಇರುತ್ತದೆ, ಇವರು ನೋಡುವಾಗ ಕೂಡ ಹಾಗೆ ಇರುತ್ತವೆ, ಇವರು ಹೋಗಿ ಮೂರು ತಿಂಗಳ ಬಳಿಕವೂ ಅರ್ಧಬರ್ಧವಾಗಿಯೇ ಇರುತ್ತದೆ. ಯಾಕೆಂದರೆ ಎಷ್ಟೋ ಕಾಮಗಾರಿಗಳಿಗೆ ಪ್ಲಾನಿಂಗ್ ಎನ್ನುವುದೇ ಇಲ್ಲ. ಉದಾಹರಣೆಗೆ ಕೊಡಿಯಾಲ್ ಬೈಲಿನ ಶಾರದಾ ವಿದ್ಯಾಸಂಸ್ಥೆ ಇರುವ ರಸ್ತೆಯಾಗಿರಬಹುದು, ಮಹಾಮಾಯಾ ದೇವಸ್ಥಾನದ ರಸ್ತೆಯಾಗಿರಬಹುದು ಎಷ್ಟೋ ರಸ್ತೆಗಳ ಕಾಮಗಾರಿಗಳು ಆಮೆಗಿಂತಲೂ ನಿಧಾನವಾಗಿ ನಡೆಯುತ್ತಿವೆ. ನಗರದ ಎಷ್ಟೋ ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿಯವರು ಹಾಕಿರುವ ಇಂಟರ್ ಲಾಕ್ ಸಿಂಕ್ ಆಗಿದೆ, ಗಲ್ಲಿ ಟ್ರಾಪ್ ಅಳವಡಿಸಲು ಹಾಕಿದ ಲೈನ್ ಕಾಂಕ್ರೀಟ್ ಕಟ್ ಮಾಡಿ ಅರ್ಧಕ್ಕೆ ನಿಂತಿದೆ. ಒಂದು ಚರಂಡಿಯಿಂದ ಮತ್ತೊಂದು ಚರಂಡಿಗೆ ಕನೆಕ್ಟಿವಿಟಿಯೇ ಇಲ್ಲ. ಇದನ್ನು ಮೇಯರ್ ಕೂಡ ನೋಡುವುದಿಲ್ಲ, ಸ್ಥಳೀಯ ಕಾರ್ಪೋರೇಟರ್ ಕೂಡ ನೋಡುವುದಿಲ್ಲ. ಒಂದು ಕೆಲಸ ಸಂಪೂರ್ಣ ಆದ ನಂತರ ಇವರು ಇನ್ನೊಂದು ಕೆಲಸ ಆರಂಭಿಸುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸ್ಮಾರ್ಟ್ ಸಿಟಿ ಕೆಲಸದ ರೇಟ್ ಜಾಸ್ತಿ. ಒಂದಂತೂ ಗ್ಯಾರಂಟಿ. ಸುನೀಲ್ ಕುಮಾರ್ ಇನ್ನಾರು ತಿಂಗಳ ಬಳಿಕ ಮತ್ತೊಂದು ರೌಂಡ್ ಹಾಕಿದರೂ ಫಲಿತಾಂಶ ಅಷ್ಟೇ!
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply