ಕದ್ರಿ ವಲಯ ಕಚೇರಿಗೆ ಐಸಿಐಸಿಐ ಬ್ಯಾಂಕಿನಿಂದ ಬ್ಲ್ಯಾಕ್ ಮೇಲ್!!
Posted On June 11, 2022
ಖಾಸಗಿ ಬ್ಯಾಂಕಿನ ಯಕಶ್ಚಿತ್ ಶಾಖೆಯೊಂದರ ಮ್ಯಾನೇಜರ್ ಮಂಗಳೂರು ಮಹಾನಗರ ಪಾಲಿಕೆಯ ವಲಯ ಕಚೇರಿಯನ್ನೇ ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದರೆ ಪಾಲಿಕೆಯ ಮೇಯರ್, ಆಯುಕ್ತರು, ವಲಯ ಆಯುಕ್ತರು ಮತ್ತು ಆ ವಲಯ ಕಚೇರಿಯ ವ್ಯಾಪ್ತಿಯ 20 ಜನ ಪಾಲಿಕೆ ಸದಸ್ಯರು ಏನು ಸೇಮಿಗೆ ಹಿಂಡುತ್ತಾ ಮನೆಯಲ್ಲಿ ಕುಳಿತುಕೊಂಡಿದ್ದಾರಾ ಎಂದು ನಾಗರಿಕರು ಕೇಳುತ್ತಿದ್ದಾರೆ. ಒಂದು ಕಡೆ ಕದ್ರಿಯಲ್ಲಿರುವ ಪಾಲಿಕೆಯ ವಲಯ ಕಚೇರಿಯಲ್ಲಿ ವಿದ್ಯುತ್ ಇಲ್ಲವಾದರೆ ಜನರ ಯಾವುದೇ ಕೆಲಸವಾಗುವುದಿಲ್ಲ. ಯಾಕೆಂದರೆ ಅಲ್ಲಿ ಯಾವುದೇ ಜನರೇಟರ್ ವ್ಯವಸ್ಥೆ ಇಲ್ಲ. ವಾರದಲ್ಲಿ ಒಂದು ದಿನ ನಿರ್ವಹಣಾ ಕಾರಣದಿಂದ ಮೆಸ್ಕಾಂನವರು ಕರೆಂಟ್ ತೆಗೆದರೆ ಅಥವಾ ಲೋಡ್ ಶೆಡ್ಡಿಂಗ್ ಎಂದು ಮಾಡಿದರೆ ಆ ದಿನ ಸುಮ್ಮನೆ ಕುಳಿತು ಹರಟೆ ಮಾಡಬೇಕು ಬಿಟ್ಟರೆ ಬೇರೆ ಏನೂ ಪ್ರಯೋಜನವಿಲ್ಲ. ಇನ್ನು ಸರ್ವರ್ ಸಮಸ್ಯೆ ಎನ್ನುವುದು ಪಾಲಿಕೆಯ ಈ ಜನ್ಮದಲ್ಲಿ ಸರಿಯಾಗುವಂತದ್ದು ಅಲ್ಲ. ಇದನ್ನೆಲ್ಲ ನೋಡಿಕೊಳ್ಳಬೇಕಾದ ಪಾಲಿಕೆಯ ವಲಯ ಆಯಕ್ತೆಯನ್ನು ಯಾರೂ ಕೇರ್ ಮಾಡುವುದಿಲ್ಲ. ಅವರು ಹೇಳಿದ್ದು ಯಾವುದೂ ನಡೆಯುವುದಿಲ್ಲ. ಇಲ್ಲದೇ ಹೋದರೆ ಒಂದು ಬ್ಯಾಂಕಿನ ಮ್ಯಾನೇಜರ್ ಇವರ ತಲೆಯ ಮೇಲೆ ಹತ್ತಿ ಕುಳಿತುಕೊಂಡರೂ ಇವರಿಗೆ ಏನೂ ಮಾಡಲು ಆಗುವುದಿಲ್ಲ ಎಂದರೆ ಜನಸಾಮಾನ್ಯರ ಪರಿಸ್ಥಿತಿ ಹೇಗಿರಬೇಡಾ. ಅಷ್ಟಕ್ಕೂ ಬ್ಯಾಂಕ್ ಮಾಡುತ್ತಿರುವುದೇನು? ಅದೇ ಇವತ್ತಿನ ಜಾಗೃತ ಅಂಕಣದ ವಿಷಯ.
ಪಾಲಿಕೆಯ ವ್ಯಾಪ್ತಿಯ ನಾಗರಿಕರ ಅನುಕೂಲತೆಗಾಗಿ 60 ವಾರ್ಡುಗಳನ್ನು ಮೂರು ವಲಯಗಳನ್ನಾಗಿ ವಿಭಾಗಿಸಲಾಗಿದೆ. ಪ್ರತಿ ವಲಯ ಕಚೇರಿಗೆ 20 ವಾರ್ಡುಗಳು ಬರುತ್ತದೆ. ಸಾರ್ವಜನಿಕರು ಈ-ಖಾತಾ, ಉದ್ದಿಮೆ ಪರವಾನಿಗೆಗೆ ಸಂಬಂಧಪಟ್ಟ ಏನೇ ಕೆಲಸಗಳಿದ್ದರೂ ತಮ್ಮ ವ್ಯಾಪ್ತಿಯ ವಲಯ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಬೇಕು. ಪಾಲಿಕೆಯಲ್ಲಿ ಏನಾದರೂ ತೆರಿಗೆ, ಶುಲ್ಕ ಕಟ್ಟಲು ಇದ್ದಾಗ ನೇರವಾಗಿ ನಗದನ್ನು ಸ್ವೀಕರಿಸುವ ಕ್ರಮ ಇಲ್ಲದೇ ಇರುವುದರಿಂದ ಪಾಲಿಕೆಯಲ್ಲಿ ಕೊಟ್ಟಿರುವ ಚಲನ್ ನಲ್ಲಿ ನಮೂದಿಸಿದ ಹಣವನ್ನು ಅಲ್ಲಿಯೇ ಹತ್ತಿರವಿರುವ ಬ್ಯಾಂಕಿನ ಶಾಖೆಯಲ್ಲಿ ಕಟ್ಟಿ ಸ್ಲಿಪ್ ತಂದು ಪಾಲಿಕೆಗೆ ಸಂದಾಯ ಮಾಡಿದರೆ ಕೆಲಸ ಒಂದು ಹಂತಕ್ಕೆ ಮುಗಿಯುತ್ತದೆ. ಹಾಗಂತ ನೀವು ನಿಮಗೆ ಮನಸ್ಸಿರುವ ಬ್ಯಾಂಕಿನಲ್ಲಿ ಚಲನ್ ಕಟ್ಟುವಂತಿಲ್ಲ. ಅದಕ್ಕಾಗಿ ಸರಕಾರ ಐದು ಬ್ಯಾಂಕುಗಳನ್ನು ಗುರುತಿಸಿದೆ. ಅದರಲ್ಲಿ ಐಸಿಐಸಿಐ ಬ್ಯಾಂಕ್ ಕೂಡ ಒಂದು. ಒಬ್ಬ ನಾಗರಿಕ ಕದ್ರಿ ವಲಯ ಕಚೇರಿಯಲ್ಲಿ ಚಲನ್ ತೆಗೆದುಕೊಂಡು ಅಲ್ಲಿಯೇ ಸನಿಹದಲ್ಲಿರುವ ಆಗ್ನೇಸ್ ಶಾಲೆಯ ಎದುರಿನ ಐಸಿಐಸಿಐ ಬ್ಯಾಂಕಿಯ ಬ್ರಾಂಚಿಗೆ ಹೋಗಿ ಹಣ ಕಟ್ಟಬೇಕಾಗುತ್ತದೆ. ಆದರೆ ಐಸಿಐಸಿಐ ಬ್ಯಾಂಕಿನವರು ಏನು ಮಾಡಿದ್ದಾರೆ ಎಂದರೆ ನಮಗೆ ಕದ್ರಿ ವಲಯ ಕಚೇರಿಯಲ್ಲಿಯೇ ಒಂದು ವಿಸ್ತರಣಾ ಶಾಖೆಯನ್ನು ನೀಡಿ ಎಂದು ಪಾಲಿಕೆಯಲ್ಲಿ ಹಟ ಮಾಡುತ್ತಿದ್ದಾರೆ. ಹಾಗೆ ಒಂದು ಬ್ಯಾಂಕ್ ಹೇಳಿದ ಕೂಡಲೇ ವಿಸ್ತರಣಾ ಶಾಖೆಯನ್ನು ಮಂಜೂರು ಮಾಡಲು ಯಾರಿಗೂ ಸಾಧ್ಯವಿಲ್ಲ. ಲಾಲ್ ಭಾಗ್ ನಲ್ಲಿರುವ ಪಾಲಿಕೆಯ ಕಟ್ಟಡದ ಕೆಳಗೆ ಕೆನರಾ ಬ್ಯಾಂಕಿನ ವಿಸ್ತರಣಾ ಶಾಖೆ ಇದೆ ಎಂದ ಮಾತ್ರಕ್ಕೆ ಅದನ್ನೇ ಮುಂದಿಟ್ಟು ನಮಗೂ ಕದ್ರಿ ಪಾಲಿಕೆ ಉಪಕಚೇರಿಯಲ್ಲಿ ಶಾಖೆ ಕೊಡಿ ಎಂದು ಬೇಡಿಕೆ ಇಡಲು ಆಗುವುದಿಲ್ಲ. ಒಂದು ವೇಳೆ ಬೇಡಿಕೆ ಇಟ್ಟರೂ ಅದು ಆಗುವ ತನಕ ಕಾಯುವುದನ್ನು ಬಿಟ್ಟು ಆಗ್ನೇಸ್ ಎದುರಿನ ಐಸಿಐಸಿಐ ಬ್ಯಾಂಕಿನವರು ಏನು ಮಾಡಿದ್ದಾರೆ ಎಂದರೆ ಅಲ್ಲಿ ಪಾಲಿಕೆಯ ಚಲನ್ ಕಟ್ಟಲು ಬರುವ ನಾಗರಿಕರಿಗೆ ನಾವು ಇದನ್ನು ಇಲ್ಲಿ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಸಬೂಬು ಹೇಳುತ್ತಾರೆ. ಚಲನ್ ನಲ್ಲಿ ಅದೇ ಬ್ರಾಂಚಿನಲ್ಲಿ ಕಟ್ಟಿ ಎಂದು ನಮೂದಿಸಲಾಗಿದ್ದರೂ ಇವರು ಪಾಲಿಕೆಯ ಮೇಲೆ ಒತ್ತಡ ಹೇರುವ ತಂತ್ರವಾಗಿ ಜನರಿಗೆ ತೊಂದರೆ ಕೊಡಲು ಶುರು ಮಾಡಿದ್ದಾರೆ. ಸ್ಕೂಟರ್, ಕಾರು ಇದ್ದವರು ವೇಲ್ಸೆನಿಯಾ ತನಕ ಹೋಗಿ ಏನೋ ಗೊಣಗುತ್ತಾ ತಮ್ಮ ಕೆಲಸ ಮಾಡಿಬರಬಹುದು. ಆದರೆ ಸ್ವಂತ ವಾಹನ ಇಲ್ಲದವರು ಪುನ: ರಿಕ್ಷಾ ಮಾಡಿ ಅಲ್ಲಿ ಹೋಗಿ ಹಣ ಕಟ್ಟಿ ಬರಬೇಕು. ಹೋಗಿ ಬರುವ ರಿಕ್ಷಾ ಬಾಡಿಗೆ ಹೆಚ್ಚುವರಿ ಖರ್ಚು, ಅದರೊಂದಿಗೆ ಸ್ವಲ್ಪ ಲೇಟ್ ಆಗಿ ಬ್ಯಾಂಕ್ ಬಂದ್ ಆದರೆ ಆ ದಿನ ವೇಸ್ಟ್. ಮತ್ತೆ ಮರುದಿನ ಬರುವ ತಾಪತ್ರಯ.
ಮೂರು ತಿಂಗಳಿನಿಂದ ಇಂತಹ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದರೂ ಆ ವ್ಯಾಪ್ತಿಯ ಪಾಲಿಕೆ ಸದಸ್ಯರು ಕತ್ತೆ ಕಾಯಲು ಹೋಗಿರುವುದು ಮಾತ್ರ ದುರಂತ. ಕೇವಲ ಕಾಮಗಾರಿ ಮಾಡಿಸೋದು ಮತ್ತು ಅದರಿಂದ ನುಂಗಲು ಎಷ್ಟು ಸಿಗುತ್ತೆ ಎಂದು ಲೆಕ್ಕ ಹಾಕಿ ಕುಳಿತುಕೊಂಡರೆ ಅವರನ್ನು ಪಾಲಿಕೆ ಸದಸ್ಯರು ಎನ್ನಲ್ಲ. ಪಾಲಿಕೆಯ ಅಧಿಕೃತ ಬ್ರೋಕರ್ಸ್ ಎಂದು ಕರೆಯಬೇಕಾಗುತ್ತದೆ. ಜನರಿಗೆ ತೊಂದರೆ ಆಗುತ್ತಿದ್ದರೂ ಸುಮ್ಮನಿರುವ ಪಾಲಿಕೆ ಸದಸ್ಯರು ಕಮೀಷನ್ ತಿನ್ನುವುದೇ ಕಾಯಕ ಎಂದುಕೊಂಡಿದ್ದರೆ ಅವರನ್ನು ಮುಂದಿನ ಸಲ ಮತ ಕೇಳಲು ಬಂದಾಗ ಭಿಕ್ಷೆ ಕೊಟ್ಟು ಕಳುಹಿಸುವುದು ಉತ್ತಮ. ಉಪಕಚೇರಿಗೆ ನಿಯುಕ್ತಿಗೊಂಡಿರುವ ಅಧಿಕಾರಿಗಳು ಮಧ್ಯಾಹ್ನ ಮೂರು ಗಂಟೆಯ ನಂತರ ಕಡ್ಡಾಯವಾಗಿ ಅಲ್ಲಿ ಹಾಜರಾಗಿರಬೇಕು ಎಂದು ನಿಯಮ ಇದ್ದರೂ ಅವರು ಅಲ್ಲಿ ಬರಲ್ಲ ಎಂದರೆ ಜನರ ಪಾಡೇನು? ಇದನ್ನೆಲ್ಲ ಗಮನಿಸಬೇಕಾಗಿರುವ ಮೇಯರ್ ಎಷ್ಟೇ ಅನುಭವಿ ಆದರೂ ಅದು ಮಣ್ಣಂಗಟ್ಟಿಗೆ ಸಮ. ನಮಗೆ ಏನು ಪ್ರಯೋಜನವಿಲ್ಲ. ಐಎಎಸ್ ಅಧಿಕಾರಿ ಎಂದು ಲೇಬಲ್ ಇದ್ದ ಮಾತ್ರಕ್ಕೆ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿ ಇಡಲಾಗದ ಆಯುಕ್ತರು ಎಷ್ಟು ಯಂಗ್ ಇದ್ದರೂ ಉಪ್ಪಿನಕಾಯಿಗೆ ಸಮ!
- Advertisement -
Leave A Reply