ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
ಇಂತಹ ಒಂದು ವ್ಯಾಪಾರ-ವ್ಯವಹಾರ ಕೂಡ ಇದೆಯಾ ಎಂದು ಗೊತ್ತಾಗುವಾಗ ನಿಮಗೂ ಆಶ್ಚರ್ಯವಾಗಬಹುದು. ನೀವು ಮಂಗಳೂರು, ಉಡುಪಿ ಕಡೆ ಸಿಇಟಿ ಕೋಚಿಂಗ್, ನೀಟ್ ಟ್ರೇನಿಂಗ್ ತರಹದ್ದು ಕೇಳಿರುತ್ತೀರಿ. ಅದು ಕೂಡ ಒಂದು ಉದ್ಯಮ. ಮಕ್ಕಳಿಗೆ ಉತ್ತಮ ಅಂಕಗಳನ್ನು ಪಡೆಯಲು ನೀಡುವ ತರಬೇತಿ. ಆದರೆ ಈ ಕಡೆ ಮಿಲಿಟರಿಗೆ ಸೇರಿಸ್ತೇವೆ ಎಂದು ಕೋಚಿಂಗ್ ಕೊಡುವ ಕ್ರಮ ಇಲ್ಲ. ಇಲ್ಲಿ ಮಿಲಿಟರಿಗೆ ಸೇರಲು ಬಯಸುವವರು ಮಾಜಿ ಯೋಧರಿಂದ ಅಥವಾ ಆ ಬಗ್ಗೆ ತಿಳಿದವರಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ಸೇನೆಗೆ ಸೇರುವ ಶಿಬಿರದಲ್ಲಿ ಭಾಗವಹಿಸುತ್ತಾರೆ. ಅಲ್ಲಿ ವಿವಿಧ ರೀತಿಯ ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆಯಲ್ಲಿ ಪಾಸಾದರೆ ನಂತರ ಸೇನೆಗೆ ಸೇರುವ ಹಾದಿ ಸುಗಮವಾಗುತ್ತದೆ. ಕರಾವಳಿಯಲ್ಲಿ ಸೇನೆಗೆ ಸೇರುವ ಟ್ರೆಂಡ್ ಕಡಿಮೆ ಇರುವುದರಿಂದ ಇಲ್ಲಿ ಕೋಚಿಂಗ್ ಸೆಂಟರ್ ಉದ್ಯಮ ಬೆಳೆದಿಲ್ಲ. ಸೈನ್ಯಕ್ಕೆ ಸೇರುವ ಟ್ರೆಂಡ್ ಉತ್ತರ ಭಾರತದಲ್ಲಿ ಜಾಸ್ತಿ ಇದೆ. ಅಲ್ಲಿ ಮಿಲಿಟರಿ ತರಬೇತಿ ಸೆಂಟರಿಗೆ ಸೇರುವವರು ಒಂದು ಲಕ್ಷದಿಂದ ಎರಡು ಲಕ್ಷದ ತನಕ ಫೀಸ್ ಕಟ್ಟಬೇಕಾಗುತ್ತದೆ. ನಿಮಗೆ ಮಿಲಿಟರಿಗೆ ಸೇರಿಸ್ತೇವೆ ಎನ್ನುವ ಆಶ್ವಾಸನೆ ಮಾತ್ರವಲ್ಲ ಗ್ಯಾರಂಟಿಯೂ ಕೊಟ್ಟಿರುತ್ತಾರೆ. ಅದನ್ನು ನಂಬಿ ಈ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಈ ಕೋಚಿಂಗ್ ಸೆಂಟರಿಗೆ ಸೇರಿರುತ್ತಾರೆ. ಅಂತಹ ಮಿಲಿಟರಿ ಕೋಚಿಂಗ್ ಸೆಂಟರ್ ಗಳು ಹೈದ್ರಾಬಾದ್, ತೆಲಂಗಾಣದಲ್ಲಿಯೂ ಸಾಕಷ್ಟಿವೆ. ಹಿಂದುಳಿದ ಗ್ರಾಮಗಳಿಂದ ಹೊಟ್ಟೆಬಟ್ಟೆ ಕಟ್ಟಿ ಕೂಡಿಟ್ಟ ಹಣವನ್ನು ತಂದು ಈ ಸೆಂಟರ್ ಗಳ ಧಣಿಗೆ ನೀಡಿ ಭವಿಷ್ಯದಲ್ಲಿ ಸೈನಿಕರಾಗುವ ಆಸೆಯಿಂದ ಹೆಚ್ಚಿನವರು ಸೇರಿರುತ್ತಾರೆ. ಅವರಲ್ಲಿ ಸೇನೆಗೆ ಸೇರುವ ಹಂಬಲ ಇರುತ್ತದೆ. ಆದರೆ ಹೇಗೆ ಎಂದು ಗೊತ್ತಿರುವುದಿಲ್ಲ. ಕೆಲವರು ಅಲ್ಲಿ ಪರೀಕ್ಷೆಯಲ್ಲಿ ಪಾಸಾಗದೇ ಇಲ್ಲಿ ಬಂದಿರುತ್ತಾರೆ. ಕೆಲವು ಕಡೆ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದವರಿಗೆ ಸೇನೆಗೆ ದಾಖಲಾತಿ ಸುಲಭವಾಗುತ್ತದೆ ಎಂದು ಪ್ರಚಾರ ಕೂಡ ಮಾಡಲಾಗಿರುತ್ತದೆ. ಈ ಆಸೆಯಿಂದ ಇನ್ನೊಂದಿಷ್ಟು ಜನ ಸೇರಲು ಬಂದಿರುತ್ತಾರೆ. ಕೆಲವರು ಲಕ್ಷಗಟ್ಟಲೆ ಫೀಸ್ ಒಟ್ಟು ಮಾಡಲು ತುಂಬಾ ಕಷ್ಟಪಟ್ಟಿರುತ್ತಾರೆ.
ಹೀಗಿರುವಾಗ ಕೊರೊನಾ ಅವಧಿಯಲ್ಲಿ ಎರಡು ವರ್ಷ ಸೇನೆಗೆ ಯಾವುದೇ ದಾಖಲಾತಿಯನ್ನು ಸರಕಾರ ಮಾಡಿರಲಿಲ್ಲ. ಆದ್ದರಿಂದ ಬಹಳಷ್ಟು ಯುವಕರು ನೊಂದಿದ್ದರು. ಅವರು ತಾವು ಲಕ್ಷಗಟ್ಟಲೆ ಫೀಸ್ ಕೊಟ್ಟು ತರಬೇತಿ ಪಡೆದುಕೊಂಡ ಸೆಂಟರ್ ಮಾಲೀಕರಿಗೆ ಪದೇ ಪದೇ ಫೋನ್ ಮಾಡಿ ಕೇಳುತ್ತಿದ್ದರು. ಅದು ಹೀಗೆ ಮುಂದುವರೆಯುತ್ತಿರಬೇಕಾದರೆ ಅಗ್ನಿಪಥ್ ಯೋಜನೆಯನ್ನು ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಘೋಷಿಸಿಬಿಟ್ಟರು. ಅದರ ಸರಿಯಾದ ರೂಪುರೇಶೆಯನ್ನು ಹೇಳಿರಲಿಲ್ಲ. ನಾಲ್ಕು ವರ್ಷಗಳ ಸೇವೆ ಮತ್ತು ಪ್ಯಾಕೇಜು ವಿಷಯ ಬಗ್ಗೆ ಚಿಕ್ಕದಾಗಿ ಹೇಳಿದ್ದರು. ಆಗ ಈ ಸೆಂಟರ್ ಗಳ ಮಾಲೀಕರು ಏನು ಮಾಡಿದರು ಎಂದರೆ ತಮ್ಮ ವಿದ್ಯಾರ್ಥಿಗಳನ್ನು ಸರಕಾರದ ವಿರುದ್ಧ ಎತ್ತಿ ಕಟ್ಟಿದರು. ನೀವು ಇಷ್ಟು ಕಷ್ಟಪಟ್ಟು ಕಲಿಯುತ್ತಿದ್ದೀರಿ. ಆದರೆ ಸರಕಾರಕ್ಕೆ ನಿಮ್ಮ ಬಗ್ಗೆ ಕಾಳಜಿಯಿಲ್ಲ. ಕೇವಲ ನಾಲ್ಕು ವರ್ಷಗಳಿಗೆ ಮಾತ್ರ ಕೆಲಸ ಎಂದು ಹೇಳುತ್ತಿದ್ದಾರೆ. ಹೋರಾಟ ಮಾಡಿ, ಪ್ರತಿಭಟನೆ ಮಾಡಿ, ಆಕ್ರೋಶ ಹೊರಹಾಕಿ. ಇದರಿಂದ ಮಾತ್ರ ಸರಕಾರ ಬಗ್ಗುತ್ತದೆ ಎಂದು ಕಿವಿ ಊದಿದ್ದಾರೆ. ತಾವು ಹೋರಾಟ ಶಾಂತಚಿತ್ತತೆಯಿಂದ ಮಾಡಿದರೆ ಏನೂ ಪ್ರಯೋಜನವಿಲ್ಲ, ಸರಕಾರಿ ಸ್ವತ್ತುಗಳಿಗೆ ಬೆಂಕಿ ಕೊಡಿ, ಕಲ್ಲು ಬಿಸಾಡಿ ನಾಶ ಮಾಡಿ ಎಂದು ಫಿಟಿಂಗ್ ಇಡಲಾಗಿದೆ. ನಾವು ಈಗ ಹೋರಾಡದಿದ್ದರೆ ಮುಂದಿನ ದಿನಗಳಲ್ಲಿ ಸೇನೆಗೆ ಸೇರಲು ಆಗುವುದಿಲ್ಲ ಎಂದು ಭಾವಿಸಿಕೊಂಡ ಆ ಹುಡುಗರು ತಮ್ಮ ಹತ್ತಿರದಲ್ಲಿರುವ ರೈಲ್ವೆ ನಿಲ್ದಾಣಗಳಿಗೆ ತೆರಳಿ ರೈಲಿಗೆ ಬೆಂಕಿ ಇಟ್ಟಿದ್ದಾರೆ. ಬಸ್ ಸ್ಟ್ಯಾಂಡ್ ಗಳಿಗೆ ಹೋಗಿ ಬಸ್ ಗಳಿಗೆ ಕಲ್ಲು ಬಿಸಾಡಿದ್ದಾರೆ. ಇದರಿಂದ ಒಂದು ದಿನ ಇಡೀ ಭಾರತ ಅಗ್ನಿಪಥ್ ಯೋಜನೆಗೆ ವಿರೋಧ ಎನ್ನುವಂತಹ ಭಾವನೆ ಮೂಡುವಂತಾಗಿತ್ತು.
ಈಗ ತೆಲಂಗಾಣ, ಆಂಧ್ರದಲ್ಲಿ ಈ ಮಿಲಿಟರಿ ಕೋಚಿಂಗ್ ಸೆಂಟರ್ ನಡೆಸುತ್ತಾ, ಮೊನ್ನೆ ಸಿಕಂದರಾಬಾದ್ ನಲ್ಲಿ ದೊಂಬಿ, ಗಲಭೆಗೆ ಕಾರಣನಾದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಹೆಸರು ಅವುಲ ಸುಬ್ಬರಾವ್. ಈ ಮನುಷ್ಯ ಸಾಯಿ ಡಿಫೆನ್ಸ್ ಅಕಾಡೆಮಿ ಎನ್ನುವಂತಹ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ. ಈ ಅಗ್ನಿಪಥ್ ಯೋಜನೆಯ ವಿರುದ್ಧ ಬಂಡಾಯ ಏಳುವಂತೆ ಹಕೀಂಪೇಟೆ ಆರ್ಮಿ ಗ್ರೂಪ್ ನಲ್ಲಿ ಪ್ರಚೋದನಕಾರಿ ವಿಷಯ ಛೂ ಬಿಟ್ಟಿದ್ದ. ಅದರ ನಂತರ ಆ ಭಾಗದಲ್ಲಿ ವ್ಯಾಪಕ ಗಲಭೆಗಳಾದವು. ಇತನ ಬಳಿ ಸುಮಾರು ಇಂತಹ 9 ಕೋಚಿಂಗ್ ಸೆಂಟರ್ ಗಳಿವೆ ಎನ್ನುವುದು ಪತ್ತೆಯಾಗಿದೆ. ಇವರ ಬಳಿ ಸೇರುವ ಗ್ರಾಮೀಣ ಭಾಗದ ಯುವಕರು ಸ್ವಭಾವತ: ಮುಗ್ಧರಾಗಿರುತ್ತಾರೆ. ಅವರನ್ನು ದಾರಿ ತಪ್ಪಿಸುವುದು ಸುಲಭ. ನಿಮಗೆ ಇನ್ನು ಸೇನೆಗೆ ಸೇರುವ ಅವಕಾಶ ಇಲ್ಲ, ಕೇಂದ್ರ ಸರಕಾರ ನಿಮ್ಮ ಆಸೆಗೆ ಎಳ್ಳು ನೀರು ಬಿಟ್ಟಿದೆ ಎಂದು ಹೇಳಿದ್ದನ್ನು ಅವರು ನಂಬಿಬಿಟ್ಟಿದ್ದಾರೆ. ಈಗ ಆ ಕೋಚಿಂಗ್ ಸೆಂಟರ್ ಮಾಲೀಕನನ್ನು ಬಂಧಿಸಲಾಗಿದೆ. ಇಂತವರಿಂದಲೇ ದೇಶದ ಭದ್ರತೆಗೆ ಅಪಾಯ. ಇವರು ತಮ್ಮ ವೈಯಕ್ತಿಕ ಸ್ವಾರ್ಥಕ್ಕೆ ದೇಶದ ಹಿತಾಸಕ್ತಿಯನ್ನು ಬಲಿಕೊಡುತ್ತಾರೆ. ನಿಜಕ್ಕೂ ಅಗ್ನಿಪಥ್ ಯೋಜನೆಯಿಂದ ದೇಶದ ಸುರಕ್ಷತೆಯ ದೃಷ್ಟಿಯಿಂದ ದೂರಗಾಮಿ ಪರಿಣಾಮ ಇದೆ. ಆದರೆ ಅದನ್ನು ಹೇಳಬೇಕಾದವರು ಹೇಳುವಂತಹ ಸಮಯದಲ್ಲಿ ಹೇಳಿಲ್ಲ. ಯಾವಾಗ ಈ ಗಲಾಟೆ ಆಯಿತೋ ನಂತರ ಸೇನಾ ಮುಖ್ಯಸ್ಥರುಗಳು ಜಂಟಿ ಸುದ್ದಿಗೋಷ್ಟಿ ನಡೆಸಿ ವಿವರವಾಗಿ ಹೇಳಿದರು. ಈ ಹೊಸ ಯೋಜನೆ ಸರಿ ಇಲ್ಲದಿದ್ದರೆ ಮಹೀಂದ್ರಾ ಗ್ರೂಪಿನ ಮುಖಂಡರು ಇದಕ್ಕೆ ಬೆಂಬಲವಾಗಿ ಮಾತನಾಡುತ್ತಿರಲಿಲ್ಲ. ಖ್ಯಾತ ಉದ್ಯಮಿಗಳು ಮಾತನಾಡುತ್ತಾರೆ ಎಂದರೆ ಈ ಯೋಜನೆ ಅವರ ಮನಸ್ಸಿಗೆ ಮುಟ್ಟಿದೆ ಎಂದೇ ಅರ್ಥ.!!
Leave A Reply